ಜೈಸ್ವಾಲ್‌ ದ್ವಿಶತಕ, ಬೂಮ್ರಾ ಅಬ್ಬರ: ಇಂಗ್ಲೆಂಡ್‌ ವಿರುದ್ಧ ಟೀಂ ಇಂಡಿಯಾ ಬಿಗಿಹಿಡಿತ

KannadaprabhaNewsNetwork |  
Published : Feb 04, 2024, 01:30 AM ISTUpdated : Feb 04, 2024, 01:50 PM IST
ಬೂಮ್ರಾ | Kannada Prabha

ಸಾರಾಂಶ

ಯುವ ತಾರೆ ಯಶಸ್ವಿ ಜೈಸ್ವಾಲ್‌ರ ಸ್ಫೋಟಕ ಬ್ಯಾಟಿಂಗ್‌ ಶೋ ಬಳಿಕ ವೇಗಿ ಜಸ್‌ಪ್ರೀತ್‌ ಬೂಮ್ರಾರ ಮಾರಕ ದಾಳಿ ಇಂಗ್ಲೆಂಡ್‌ ವಿರುದ್ಧದ 2ನೇ ಟೆಸ್ಟ್‌ ಪಂದ್ಯದಲ್ಲಿ ಭಾರತ ಬಿಗಿ ಹಿಡಿತ ಸಾಧಿಸುವಂತೆ ಮಾಡಿದೆ.

ವಿಶಾಖಪಟ್ಟಣಂ: ಯುವ ತಾರೆ ಯಶಸ್ವಿ ಜೈಸ್ವಾಲ್‌ರ ಸ್ಫೋಟಕ ಬ್ಯಾಟಿಂಗ್‌ ಶೋ ಬಳಿಕ ವೇಗಿ ಜಸ್‌ಪ್ರೀತ್‌ ಬೂಮ್ರಾರ ಮಾರಕ ದಾಳಿ ಇಂಗ್ಲೆಂಡ್‌ ವಿರುದ್ಧದ 2ನೇ ಟೆಸ್ಟ್‌ ಪಂದ್ಯದಲ್ಲಿ ಭಾರತ ಬಿಗಿ ಹಿಡಿತ ಸಾಧಿಸುವಂತೆ ಮಾಡಿದೆ. 

ಜೈಸ್ವಾಲ್‌ರ ಡಬಲ್‌ ಸೆಂಚುರಿಯಿಂದಾಗಿ ಮೊದಲ ಇನ್ನಿಂಗ್ಸ್‌ನಲ್ಲಿ ಭಾರತ 396ಕ್ಕೆ ಆಲೌಟ್‌ ಆದ ಬಳಿಕ, ಇಂಗ್ಲೆಂಡನ್ನು 253 ರನ್‌ಗೆ ನಿಯಂತ್ರಿಸಿ ಇನ್ನಿಂಗ್ಸ್‌ ಮುನ್ನಡೆ ಪಡೆಯಿತು. 

ನಂತರ 2ನೇ ಇನ್ನಿಂಗ್ಸ್‌ ಆರಂಭಿಸಿರುವ ಟೀಂ ಇಂಡಿಯಾ 2ನೇ ದಿನದಂತ್ಯಕ್ಕೆ ವಿಕೆಟ್‌ ನಷ್ಟವಿಲ್ಲದೇ 28 ರನ್‌ ಗಳಿಸಿದ್ದು, ಒಟ್ಟಾರೆ 171 ರನ್‌ ಮುನ್ನಡೆಯಲ್ಲಿದೆ.

ಮೊದಲ ದಿನದಂತ್ಯಕ್ಕೆ 6 ವಿಕೆಟ್‌ಗೆ 336 ರನ್‌ ಕಲೆಹಾಕಿದ್ದ ಭಾರತಕ್ಕೆ ಶನಿವಾರವೂ ನೆರವಾಗಿದ್ದ ಜೈಸ್ವಾಲ್‌ ಮಾತ್ರ. 179 ರನ್‌ಗಳಿಸಿ ಕ್ರೀಸ್‌ ಕಾಯ್ದುಕೊಂಡಿದ್ದ 22ರ ಬ್ಯಾಟರ್‌, ಭರ್ಜರಿ ಬೌಂಡರಿ, ಸಿಕ್ಸರ್‌ ಮೂಲಕ ಚೊಚ್ಚಲ ದ್ವಿಶತಕ ಪೂರ್ತಿಗೊಳಿಸಿದರು. 

290 ಎಸೆತಗಳಲ್ಲಿ 19 ಬೌಂಡರಿ, 7 ಸಿಕ್ಸರ್‌ನೊಂದಿಗೆ 209 ರನ್ ಸಿಡಿಸಿ ಜೇಮ್ಸ್‌ ಆ್ಯಂಡರ್‌ಸನ್‌ಗೆ ವಿಕೆಟ್‌ ಒಪ್ಪಿಸಿದರು. ಅಶ್ವಿನ್‌ ಕೊಡುಗೆ 20 ರನ್‌ ಮಾತ್ರ. ಆ್ಯಂಡರ್‌ಸನ್‌, ಬಶೀರ್‌, ರೆಹಾನ್‌ ತಲಾ 3 ವಿಕೆಟ್‌ ಕಿತ್ತರು.

ಬಾಜ್‌ಬಾಲ್‌ ಆಟ: ಬಳಿಕ ಇನ್ನಿಂಗ್ಸ್‌ ಆರಂಭಿಸಿದ ಇಂಗ್ಲೆಂಡ್‌ ಬ್ಯಾಟರ್‌ಗಳು ಆಕ್ರಮಣಕಾರಿ ಆಟಕ್ಕೆ ಒತ್ತುಕೊಟ್ಟರು. ಜ್ಯಾಕ್‌ ಕ್ರಾವ್ಲಿ(78 ಎಸೆತದಲ್ಲಿ 76) ಅಬ್ಬರದಿಂದಾಗಿ ಮೊದಲ 10 ಓವರಲ್ಲೇ ತಂಡ 59 ರನ್‌ ಗಳಿಸಿತು. ಆದರೆ ವಿಕೆಟ್‌ಗಳು ಉರುಳಲು ಆರಂಭಿಸಿದಾಗ ರನ್‌ ವೇಗಕ್ಕೂ ಕಡಿವಾಣ ಬಿತ್ತು. 

ಕ್ರಾವ್ಲಿ ಬಳಿಕ ಬೂಮ್ರಾ ಹಾಗೂ ಕುಲ್ದೀಪ್‌ ಯಾದವ್‌ರ ದಾಳಿಯನ್ನು ಅಲ್ಪಮಟ್ಟಿಗೆ ಪ್ರತಿರೋಧಿಸಿದ್ದು ನಾಯಕ ಬೆನ್‌ ಸ್ಟೋಕ್ಸ್‌ ಮಾತ್ರ. ಆದರೆ 47 ರನ್‌ ಗಳಿಸಿದ್ದ ಸ್ಟೋಕ್ಸ್‌, ಮತ್ತೊಮ್ಮೆ ಬೂಮ್ರಾರ ಉರಿ ಚೆಂಡನ್ನು ಎದುರಿಸಲಾಗದೆ ಬೌಲ್ಡ್‌ ಆದರು. 

ಬೇರೆ ಯಾರೂ 30ರ ಗಡಿ ದಾಟಲಿಲ್ಲ. ತಮ್ಮ ನಿಖರ ಯಾರ್ಕರ್‌, ಬೌನ್ಸರ್‌ ಮೂಲಕವೇ ಇಂಗ್ಲೆಂಡ್‌ ಬ್ಯಾಟರ್‌ಗಳನ್ನು ಇನ್ನಿಲ್ಲದಂತೆ ಕಾಡಿದ ಬೂಮ್ರಾ 45 ರನ್‌ಗೆ 6 ವಿಕೆಟ್‌ ಪಡೆದರು. ಕುಲ್ದೀಪ್‌ ಗಳಿಕೆ 71 ರನ್‌ಗೆ 3 ವಿಕೆಟ್‌.

ಉತ್ತಮ ಆರಂಭ: ಮೊದಲ ಇನ್ನಿಂಗ್ಸ್‌ನಲ್ಲಿ 143 ರನ್‌ಗಳ ದೊಡ್ಡ ಮುನ್ನಡೆ ಪಡೆದ ಟೀಂ ಇಂಡಿಯಾ, 2ನೇ ಇನ್ನಿಂಗ್ಸ್‌ನಲ್ಲಿ ಅಬ್ಬರದ ಆರಂಭ ಪಡೆಯಿತು.

 ರೋಹಿತ್‌ 13 ಎಸೆತಗಳಲ್ಲಿ ಔಟಾಗದೆ 13, ಜೈಸ್ವಾಲ್‌ 17 ಎಸೆತಗಳಲ್ಲಿ ಔಟಾಗದೆ 15 ರನ್‌ ಸಿಡಿಸಿದ್ದು, 3ನೇ ದಿನಕ್ಕೆ ಕ್ರೀಸ್‌ ಕಾಯ್ದುಕೊಂಡಿದ್ದಾರೆ. ಇಂಗ್ಲೆಂಡ್‌ಗೆ ದೊಡ್ಡ ಗುರಿ ನೀಡಿ ಪಂದ್ಯ ಗೆದ್ದು ಸರಣಿ ಸಮಬಲಗೊಳಿಸಲು ಭಾರತ ಕಾಯುತ್ತಿದೆ.

ಸ್ಕೋರ್‌: ಭಾರತ 396/10(ಜೈಸ್ವಾಲ್‌ 209, ಆ್ಯಂಡರ್‌ಸನ್‌ 3-47) ಮತ್ತು 28/0(2ನೇ ದಿನದಂತ್ಯಕ್ಕೆ)(ಜೈಸ್ವಾಲ್‌ 15*, ರೋಹಿತ್‌ 13*), ಇಂಗ್ಲೆಂಡ್‌ 253/10(ಕ್ರಾವ್ಲಿ 76, ಸ್ಟೋಕ್ಸ್‌ 47, ಬೂಮ್ರಾ 6-45, ಕುಲ್ದೀಪ್‌ 3-71)

ದ್ವಿಶತಕ ಬಾರಿಸಿದ ಭಾರತದ 3ನೇ ಅತಿ ಕಿರಿಯ ಆಟಗಾರ
ಯಶಸ್ವಿ ಜೈಸ್ವಾಲ್‌ ಟೆಸ್ಟ್‌ನಲ್ಲಿ ಚೊಚ್ಚಲ ದ್ವಿಶತಕ ಬಾರಿಸಿ ಸಂಭ್ರಮಿಸಿದರು. ಮೊದಲ ದಿನದಂತ್ಯಕ್ಕೆ ಔಟಾಗದೆ 179 ರನ್‌ ಗಳಿಸಿದ್ದ ಜೈಸ್ವಾಲ್‌, 2ನೇ ದಿನವಾದ ಶನಿವಾರ ತಮ್ಮ ಆಕರ್ಷಕ ಆಟ ಮುಂದುವರಿಸಿ ದ್ವಿಶತಕ ಪೂರೈಸಿದರು. 

ಈ ಮೂಲಕ ದ್ವಿಶತಕ ಬಾರಿಸಿದ ಭಾರತದ 3ನೇ ಅತಿಕಿರಿಯ ಆಟಗಾರ ಎನ್ನುವ ಹಿರಿಮೆಗೆ 22 ವರ್ಷದ ಜೈಸ್ವಾಲ್‌ ಪಾತ್ರರಾದರು. ವಿನೋದ್‌ ಕಾಂಬ್ಳಿ 21ನೇ ವಯಸ್ಸಿನಲ್ಲಿ ದ್ವಿಶತಕ ಸಿಡಿಸಿದ್ದರು. ಕಾಂಬ್ಳಿಗೂ ಮುನ್ನ ಈ ದಾಖಲೆ ಸುನಿಲ್‌ ಗವಾಸ್ಕರ್‌ ಹೆಸರಿನಲ್ಲಿತ್ತು.

ಬೂಮ್ರಾ ಅತಿವೇಗದ 150 ವಿಕೆಟ್‌ ದಾಖಲೆ
ಬೂಮ್ರಾ ಟೆಸ್ಟ್‌ನಲ್ಲಿ ಭಾರತೀಯ ವೇಗಿಗಳ ಪೈಕಿ ಅತಿ ವೇಗವಾಗಿ 150 ವಿಕೆಟ್‌ ಕಿತ್ತ ಸಾಧನೆ ಮಾಡಿದರು. ಬೂಮ್ರಾ 34 ಪಂದ್ಯಗಳನ್ನಾಡಿದ್ದು, 6781 ಎಸೆತಗಲ್ಲಿ ಈ ಮೈಲಿಗಲ್ಲು ತಲುಪಿದರು. 

ಉಮೇಶ್‌ ಯಾದವ್‌ 7661 ಎಸೆತಗಳಲ್ಲಿ 150 ವಿಕೆಟ್‌ ಕಿತ್ತಿದ್ದು ಈ ವರೆಗಿನ ದಾಖಲೆಯಾಗಿತ್ತು. ಶಮಿ(7755 ಎಸೆತ), ಕಪಿಲ್‌ ದೇವ್‌(8378) ಕ್ರಮವಾಗಿ 3, 4ನೇ ಸ್ಥಾನಗಳಲ್ಲಿದ್ದಾರೆ.

01ನೇ ಬ್ಯಾಟರ್‌: ಅಂತಾರಾಷ್ಟ್ರೀಯ ಏಕದಿನ ಪಂದ್ಯವಾಡುವ ಮೊದಲೇ ಟೆಸ್ಟ್‌ನಲ್ಲಿ ದ್ವಿಶತಕ, ಟಿ20ಯಲ್ಲಿ ಶತಕ ಬಾರಿಸಿದ ವಿಶ್ವದ ಮೊದಲ ಕ್ರಿಕೆಟಿಗ ಜೈಸ್ವಾಲ್‌.

PREV

Recommended Stories

ಸದ್ಯಕ್ಕೆ ನಿಲ್ಲಲ್ಲ ‘ನೋ ಶೇಕ್‌ ಹ್ಯಾಂಡ್‌’ ವಾರ್‌! ಪಾಕಿಸ್ತಾನ ಆಕ್ಷೇಪ
ಕ್ರಿಕೆಟ್‌ ವಾರ್‌ನಲ್ಲೂ ಭಾರತಕ್ಕೆ ಶರಣಾದ ಪಾಕ್‌