ರಾಂಚಿ: ಇಂಗ್ಲೆಂಡ್ ವಿರುದ್ಧದ 4 ಟೆಸ್ಟ್ ಪಂದ್ಯಕ್ಕೆ ವೇಗಿ ಜಸ್‌ಪ್ರೀತ್ ಬೂಮ್ರಾ ಹಾಗೂ ಕೆ.ಎಲ್.ರಾಹುಲ್ ಗೈರಾಗಲಿದ್ದಾರೆ. ಬೂಮ್ರಾಗೆ ಈ ಪಂದ್ಯಕ್ಕೆ ವಿಶ್ರಾಂತಿ ನೀಡಲಾಗಿದ್ದರೆ, ಕೆ.ಎಲ್.ರಾಹುಲ್ ಗಾಯದಿಂದ ಇನ್ನೂ ಚೇತರಿಸಿಕೊಳ್ಳದ ಕಾರಣ ಪಂದ್ಯದಿಂದ ಹೊರಬಿದ್ದಿದ್ದಾರೆ.
ಮಂಗಳವಾರ ಬಿಸಿಸಿಐ 4ನೇ ಪಂದ್ಯಕ್ಕೆ ತಂಡವನ್ನು ಪ್ರಕಟಿಸಿತು. ಸರಣಿಯಲ್ಲಿ 80.5 ಓವರ್ ಬೌಲಿಂಗ್ ಮಾಡಿರುವ ಬೂಮ್ರಾಗೆ ಬಿಸಿಸಿಐ ಅಗತ್ಯ ವಿಶ್ರಾಂತಿ ನೀಡಿದ್ದು, ಅವರ ಬದಲು ಯುವ ವೇಗಿ ಮುಕೇಶ್ ಕುಮಾರ್‌ರನ್ನು ತಂಡಕ್ಕೆ ಸೇರಿಸಿಕೊಳ್ಳಲಾಗಿದೆ.
ಮುಕೇಶ್ 2ನೇ ಪಂದ್ಯದಲ್ಲಿ ಸಿರಾಜ್ ಬದಲು ಆಡುವ 11ರ ಬಳಗದಲ್ಲಿ ಅವಕಾಶ ಪಡೆದಿದ್ದರು. ಇನ್ನು, ಮೊದಲ ಪಂದ್ಯದ ವೇಳೆ ತೊಡೆಯ ಗಾಯಕ್ಕೆ ತುತ್ತಾಗಿದ್ದ ರಾಹುಲ್ ಇನ್ನೂ ಚೇತರಿಸಿಕೊಂಡಿಲ್ಲ.
ಅವರು ಫಿಟ್ನೆಸ್ ಸಾಬೀತು ಪಡಿಸಿದರಷ್ಟೇ 5ನೇ ಟೆಸ್ಟ್‌ಗೆ ಆಯ್ಕೆಯಾಗಲಿದ್ದಾರೆ ಎಂದು ಬಿಸಿಸಿಐ ತಿಳಿಸಿದೆ.-
4ನೇ ಟೆಸ್ಟ್‌ನಲ್ಲಿ ಬೌಲ್‌ಮಾಡ್ತಾರಾ ಸ್ಟೋಕ್ಸ್?
4ನೇ ಟೆಸ್ಟ್‌ನಲ್ಲಿ ಅನುಭವಿ ಬೌಲರ್‌ಗಳ ಕೊರತೆ ತುಂಬುವ ನಿಟ್ಟಿನಲ್ಲಿ ಇಂಗ್ಲೆಂಡ್ ನಾಯಕ ಬೆನ್ ಸ್ಟೋಕ್ಸ್ ಬೌಲಿಂಗ್ ಮಾಡಲಿದ್ದಾರೆ ಎನ್ನಲಾಗುತ್ತಿದೆ. ಈ ಬಗ್ಗೆ ಇಂಗ್ಲೆಂಡ್ ಕೋಚ್ ಬ್ರೆಂಡಾನ್ ಮೆಕಲಂ ಮುನ್ಸೂಚನೆ ನೀಡಿದ್ದಾರೆ.
ಮೊಣಕಾಲು ಗಾಯದಿಂದ ಚೇತರಿಸಿಕೊಳ್ಳುತ್ತಿರುವ ಸ್ಟೋಕ್ಸ್, ಕಳೆದ ವರ್ಷ ಜೂನ್‌ನಲ್ಲಿ ಆಸ್ಟ್ರೇಲಿಯಾ ವಿರುದ್ಧ 2ನೇ ಟೆಸ್ಟ್ ನಂತರ ಬೌಲ್ ಮಾಡಿಲ್ಲ.
‘ಅಭ್ಯಾಸದ ವೇಳೆ ಶೇ.100ರಷ್ಟು ಸರಿಯಾಗಿ ಬೌಲಿಂಗ್ ಮಾಡಿದ್ದೇನೆ. ಆದರೆ ಪಂದ್ಯದಲ್ಲೂ ಅದೇ ರೀತಿ ಬೌಲಿಂಗ್ ಮಾಡುತ್ತೇನೆಂದು ಹೇಳಲು ಸಾಧ್ಯವಿಲ್ಲ’ ಎಂದು ಸ್ಟೋಕ್ಸ್ ಪ್ರತಿಕ್ರಿಯಿಸಿದ್ದಾರೆ.