ಯುಎಸ್‌ ಓಪನ್‌ ಕಿರೀಟ ಗೆದ್ದ ಕಿಂಗ್‌ ಕಾರ್ಲೋಸ್

KannadaprabhaNewsNetwork |  
Published : Sep 09, 2025, 01:00 AM IST
ಆಲ್ಕರಜ್ | Kannada Prabha

ಸಾರಾಂಶ

ಫೈನಲ್‌ನಲ್ಲಿ ವಿಶ್ವ ನಂ.1 ಯಾನಿಕ್‌ ಸಿನ್ನರ್‌ ವಿರುದ್ಧ ಆಲ್ಕರಜ್‌ ವಿನ್ನರ್‌. 22ನೇ ವಯಸ್ಸಿಗೇ 6ನೇ ಗ್ರ್ಯಾನ್‌ಸ್ಲಾಂ ಗೆದ್ದ ಸ್ಪೇನ್‌ನ ಸೂಪರ್‌ ಸ್ಟಾರ್‌. 2ನೇ ಬಾರಿ ಆಲ್ಕರಜ್‌ ಯುಎಸ್ ಟೆನಿಸ್‌ ಚಾಂಪಿಯನ್

ನ್ಯೂಯಾರ್ಕ್‌: ಟೆನಿಸ್‌ ಲೋಕದ ಯುವ ಸೂಪರ್‌ಸ್ಟಾರ್‌ ಎಂದೇ ಕರೆಸಿಕೊಳ್ಳುತ್ತಿರುವ ಕಾರ್ಲೋಸ್‌ ಆಲ್ಕರಜ್‌, 6ನೇ ಬಾರಿ ಗ್ರ್ಯಾನ್‌ಸ್ಲಾಂ ಕಿರೀಟ ಮುಡಿಗೇರಿಸಿಕೊಂಡಿದ್ದಾರೆ. 

ಭಾನುವಾರ ಮಧ್ಯರಾತ್ರಿ ನಡೆದ ಯುಎಸ್‌ ಓಪನ್‌ ಗ್ರ್ಯಾನ್‌ಸ್ಲಾಂ ಟೆನಿಸ್‌ ಟೂರ್ನಿಯ ಫೈನಲ್‌ನಲ್ಲಿ ಆಲ್ಕರಜ್‌, ಕಳೆದ ಬಾರಿ ಚಾಂಪಿಯನ್‌ ಹಾಗೂ ವಿಶ್ವ ನಂ.1 ಆಟಗಾರ ಯಾನಿಕ್‌ ಸಿನ್ನರ್‌ ವಿರುದ್ಧ ಗೆದ್ದು ಚಾಂಪಿಯನ್‌ ಎನಿಸಿಕೊಂಡರು.2 ಗಂಟೆ 42 ನಿಮಿಷಗಳ ನಡೆದ ಪುರುಷರ ಸಿಂಗಲ್ಸ್‌ ಫೈನಲ್‌ ಕಾದಾಟದಲ್ಲಿ 22 ವರ್ಷದ ಆಲ್ಕರಜ್‌ 6-2, 3-6, 6-1, 6-4 ಸೆಟ್‌ಗಳಲ್ಲಿ ಜಯಭೇರಿ ಬಾರಿಸಿದರು. 

ಮೊದಲ ಸೆಟ್‌ನಲ್ಲಿ ಆಕ್ರಮಣಕಾರಿ ಆಟವಾಡಿದ ಆಲ್ಕರಜ್‌, ಸುಲಭದಲ್ಲಿ ಸೆಟ್‌ ತಮ್ಮದಾಗಿಸಿಕೊಂಡರು. 2ನೇ ಸೆಟ್‌ನಲ್ಲಿ ಆಲ್ಕರಜ್‌ ಎಸಗಿದ ಕೆಲ ತಪ್ಪುಗಳನ್ನು ಸಮರ್ಥವಾಗಿ ಉಪಯೋಗಿಸಿಕೊಂಡ ಇಟಲಿಯ 24 ವರ್ಷದ ಸಿನ್ನರ್‌, ಪಂದ್ಯ ಸಮಬಲಗೊಳಿಸಿದರು. ಆದರೆ 3 ಮತ್ತು 4ನೇ ಸೆಟ್‌ನಲ್ಲಿ ಮತ್ತಷ್ಟು ಆಕ್ರಮಣಕಾರಿಯಾಗಿ ಆಡಿದ ಆಲ್ಕರಜ್‌, ಸಿನ್ನರ್‌ಗೆ ಪುಟಿದೇಳಲು ಅವಕಾಶ ನೀಡದೆ ಚಾಂಪಿಯನ್‌ ಎನಿಸಿಕೊಂಡರು. 

ಅಂಕಣದಲ್ಲಿ ಆಲ್ಕರಜ್‌ರ ಓಟ, ಪ್ರಬಲ ಸರ್ವ್‌, ಬಲವಾದ ರಿಟರ್ನ್‌ ಶಾಟ್‌ಗಳು ಸಿನ್ನರ್‌ರ ಸತತ 2ನೇ ಯುಎಸ್‌ ಓಪನ್‌ ಗೆಲ್ಲುವ ಕನಸನ್ನು ಭಗ್ನಗೊಳಿಸಿತು.ಈ ಇಬ್ಬರು ಆಟಗಾರರು 2025ರಲ್ಲಿ ಸತತ 3ನೇ ಗ್ರ್ಯಾನ್‌ಸ್ಲಾಂ ಫೈನಲ್‌ನಲ್ಲಿ ಮುಖಾಮುಖಿಯಾದರು. ಫ್ರೆಂಚ್‌ ಓಪನ್‌ನಲ್ಲಿ ಆಲ್ಕರಜ್‌ ಗೆದ್ದಿದ್ದರೆ, ವಿಂಬಲ್ಡನ್‌ನಲ್ಲಿ ಸಿನ್ನರ್‌ ಚಾಂಪಿಯನ್‌ ಆಗಿದ್ದರು. ಈಗ ಯುಎಸ್‌ ಓಪನ್‌ನಲ್ಲಿ ಮತ್ತೆ ಆಲ್ಕರಜ್‌ ಮೇಲುಗೈ ಸಾಧಿಸಿದ್ದಾರೆ. ಈ ಮೂಲಕ ಸಿನ್ನರ್‌ ವಿರುದ್ಧ ಗೆಲುವಿನ ದಾಖಲೆಯನ್ನು ಆಲ್ಕರಜ್‌ 10-5ಕ್ಕೆ ಹೆಚ್ಚಿಸಿದರು.

2 ವರ್ಷದಲ್ಲಿ ತಲಾ 4 ಗ್ರ್ಯಾನ್‌ಸ್ಲಾಂ ಕಿರೀಟ ಗೆದ್ದ ಸೂಪರ್‌ಸ್ಟಾರ್ಸ್‌

ಟೆನಿಸ್‌ನಲ್ಲಿ ಬಿಗ್‌ 3(ಫೆಡರರ್‌, ನಡಾಲ್‌, ಜೋಕೋವಿಚ್‌) ಬಳಿಕ ಅಬ್ಬರಿಸುತ್ತಿರುವ ಇಬ್ಬರು ಯುವ ಸೂಪರ್‌ಸ್ಟಾರ್‌ಗಳಾದ ಆಲ್ಕರಜ್‌ ಹಾಗೂ ಸಿನ್ನರ್‌ ಕಳೆದೆರಡು ವರ್ಷಗಳಲ್ಲಿ ತಲಾ 4 ಗ್ರ್ಯಾನ್‌ಸ್ಲಾಂ ಕಿರೀಟ ಗೆದ್ದಿದ್ದಾರೆ. 2024ರಲ್ಲಿ ಫ್ರೆಂಚ್‌ ಓಪನ್‌, ವಿಂಬಲ್ಡನ್‌ ಗೆದ್ದಿದ್ದ ಆಲ್ಕರಜ್‌, 2025ರಲ್ಲಿ ಫ್ರೆಂಚ್‌, ಯುಎಸ್‌ ಓಪನ್‌ ಜಯಿಸಿದ್ದಾರೆ. ಸಿನ್ನರ್‌ 2024ರಲ್ಲಿ ಆಸ್ಟ್ರೇಲಿಯನ್‌, ಯುಎಸ್‌ ಓಪನ್, 2025ರಲ್ಲಿ ಆಸ್ಟ್ರೇಲಿಯನ್‌, ವಿಂಬಲ್ಡನ್‌ ಟ್ರೋಫಿ ಗೆದ್ದಿದ್ದಾರೆ. 

19 ಗ್ರ್ಯಾನ್‌ಸ್ಲಾಂ, 7 ಫೈನಲ್‌, 6 ಟ್ರೋಫಿ

ಆಲ್ಕರಜ್‌ 2021ರಿಂದ ಗ್ರ್ಯಾನ್‌ಸ್ಲಾಂ ಟೆನಿಸ್‌ ಆಡುತ್ತಿದ್ದು, ಈವರೆಗೂ 19 ಟೂರ್ನಿಗಳಲ್ಲಿ ಕಣಕ್ಕಿಳಿದಿದ್ದಾರೆ. ಈ ಪೈಕಿ 7ರಲ್ಲಿ ಫೈನಲ್‌ಗೇರಿದ್ದು, 6ರಲ್ಲಿ ಟ್ರೋಫಿ ಗೆದ್ದಿದ್ದಾರೆ. ತಲಾ 2 ಬಾರಿ ಫ್ರೆಂಚ್‌ ಓಪನ್‌, ವಿಂಬಲ್ಡನ್‌, ಯುಎಸ್‌ ಓಪನ್‌ ಚಾಂಪಿಯನ್‌ ಆಗಿದ್ದಾರೆ. ಆಸ್ಟ್ರೇಲಿಯನ್‌ ಓಪನ್‌ನಲ್ಲಿ ಒಮ್ಮೆಯೂ ಗೆದ್ದಿಲ್ಲ.

6 ಗ್ರ್ಯಾನ್‌ಸ್ಲಾಂ ಗೆದ್ದಎರಡನೇ ಅತಿ ಕಿರಿಯ

ಆಲ್ಕರಜ್‌ 6 ಗ್ರ್ಯಾನ್‌ಸ್ಲಾಂ ಕಿರೀಟ ಗೆದ್ದ ವಿಶ್ವದ 2ನೇ ಅತಿ ಕಿರಿಯ ಟೆನಿಸಿಗ. ಅವರಿಗೆ ಈಗ 22 ವರ್ಷ, 125 ದಿನ ವಯಸ್ಸು. ಸ್ವೀಡನ್‌ನ ಬೋರ್ನ್‌ ಬೋರ್ಗ್‌ ತಮಗೆ 22 ವರ್ಷ, 19 ದಿನಗಳಾಗಿದ್ದಾಗ 6ನೇ ಗ್ರ್ಯಾನ್‌ಸ್ಲಾಂ ಗೆದ್ದಿದ್ದರು. ಇನ್ನು, ಆಲ್ಕರಜ್‌ ಗ್ರ್ಯಾನ್‌ಸ್ಲಾಂನ ಎಲ್ಲಾ 3 ಮೂರು ಮಾದರಿ ಅಂಕಣದಲ್ಲೂ 1ಕ್ಕಿಂತ ಹೆಚ್ಚು ಬಾರಿ ಚಾಂಪಿಯನ್‌ ಆದ ವಿಶ್ವದ ಅತಿ ಕಿರಿಯ ಆಟಗಾರ ಎನಿಸಿಕೊಂಡಿದ್ದಾರೆ.

14 ತಿಂಗಳ ಬಳಿಕ ನಂ.1 ಸ್ಥಾನ ಬಿಟ್ಟುಕೊಟ್ಟ ಸಿನ್ನರ್‌

ಇಟಲಿಯ ಸಿನ್ನರ್‌ ಕಳೆದ 14 ತಿಂಗಳುಗಳಿಂದಲೂ ನಂ.1 ಸ್ಥಾನದಲ್ಲಿದ್ದರು. ಯುಎಸ್‌ ಓಪನ್‌ ಫೈನಲ್‌ನಲ್ಲಿ ಸೋಲುವುದರೊಂದಿಗೆ ನಂ.1 ಸ್ಥಾನವನ್ನು ಆಲ್ಕರಜ್‌ಗೆ ಬಿಟ್ಟುಕೊಟ್ಟಿದ್ದಾರೆ. 2022ರಲ್ಲೇ ನಂ.1 ಸ್ಥಾನಿಯಾಗಿದ್ದ ಆಲ್ಕರಜ್‌ ಈಗ ಮತ್ತೆ ಅಗ್ರಸ್ಥಾನಕ್ಕೇರಿದ್ದಾರೆ. ಸಿನ್ನರ್ 2ನೇ ಸ್ಥಾನಕ್ಕೆ ಕುಸಿದಿದ್ದಾರೆ. ಸರ್ಬಿಯಾದ ದಿಗ್ಗಜ ನೋವಾಕ್‌ ಜೋಕೋವಿಚ್‌ 3 ಸ್ಥಾನ ಮೇಲೇರಿ 4ನೇ ಸ್ಥಾನ ಪಡೆದುಕೊಂಡಿದ್ದಾರೆ. ಮಹಿಳಾ ಸಿಂಗಲ್ಸ್‌ನಲ್ಲಿ ಚಾಂಪಿಯನ್‌ ಅರೈನಾ ಸಬಲೆಂಕಾ ನಂ.1 ಸ್ಥಾನ ಕಾಯ್ದುಕೊಂಡಿದ್ದು, ಇಗಾ ಸ್ವಿಯಾಟೆಕ್‌ 2, ಕೊಕೊ ಗಾಫ್‌ 3, ಅಮಾಂಡ ಅನಿಸಿಮೋವಾ 4ನೇ ಸ್ಥಾನಗಳಲ್ಲಿದ್ದಾರೆ.

PREV
Read more Articles on

Recommended Stories

ಇಂದಿನಿಂದ ಏಷ್ಯಾಕಪ್‌ ಟಿ20 : ಹಾಲಿ ಚಾಂಪಿಯನ್‌ ಭಾರತಕ್ಕೆ 9ನೇ ಟ್ರೋಫಿ ಗುರಿ
ಬೆಲಾರಸ್‌ ಟೆನಿಸ್‌ ತಾರೆ ಸಬಲೆಂಕಾಗೆ ಸತತ 2ನೇ ಯುಎಸ್‌ ಕಿರೀಟ