ಚಿನ್ನಸ್ವಾಮಿ ಸ್ಟೇಡಿಯಂ : ಒಂದು ದುರಂತ ಅಧ್ಯಾಯ!

KannadaprabhaNewsNetwork |  
Published : Aug 08, 2025, 01:00 AM ISTUpdated : Aug 08, 2025, 09:56 AM IST
ಚಿನ್ನಸ್ವಾಮಿ ಕ್ರೀಡಾಂಗಣ | Kannada Prabha

ಸಾರಾಂಶ

ಕರ್ನಾಟಕ ಕ್ರಿಕೆಟ್‌ನ ಪುಣ್ಯಭೂಮಿ ಈಗ ಸೂತಕದ ಮನೆ. ಐಕಾನಿಕ್‌ ಕ್ರೀಡಾಂಗಣದಲ್ಲಿ ಕ್ರಿಕೆಟ್‌ ಇಲ್ಲ, ಪ್ರೇಕ್ಷಕರಿಲ್ಲ, ಸಂಭ್ರಮವಿಲ್ಲ. ಹಲವು ಟೂರ್ನಿ, ಸರಣಿ ಎತ್ತಂಗಡಿ. ಮಹಿಳಾ ವಿಶ್ವಕಪ್‌, ಐಪಿಎಲ್‌ ನಡೆಯುವುದೇ ಅನುಮಾನ. ಸ್ಟೇಡಿಯಂ ಭವಿಷ್ಯವೇ ಅತಂತ್ರ

ನಾಸಿರ್‌ ಸಜಿಪ

 ಬೆಂಗಳೂರು :  ವಿಶ್ವದಲ್ಲೇ ಅತ್ಯುತ್ತಮ, ಐತಿಹಾಸಿಕ ಕ್ರೀಡಾಂಗಣಗಳಲ್ಲಿ ಒಂದಾಗಿರುವ, ಕರ್ನಾಟಕ ಕ್ರಿಕೆಟ್‌ ಪಾಲಿನ ‘ಪುಣ್ಯಭೂಮಿ’ ಎಂ.ಚಿನ್ನಸ್ವಾಮಿ ಕ್ರೀಡಾಂಗಣ ಈಗ ಮೊದಲಿನಂತಿಲ್ಲ. ರಣರೋಚಕ ಪಂದ್ಯ, ಪ್ರೇಕ್ಷಕರು, ಸಿಕ್ಸರ್ ಸುರಿಮಳೆ, ಜೈಕಾರ, ಸಂಭ್ರಮಾಚರಣೆ, ವಿರಾಟ್‌ ಕೊಹ್ಲಿ, ಆರ್‌ಸಿಬಿ ರೂಪದಲ್ಲಿ ನೆನಪಿಗೆ ಬರುತ್ತಿದ್ದ ಚಿನ್ನಸ್ವಾಮಿ ಸ್ಟೇಡಿಯಂ, ಈಗ ಸಹಸ್ರಾರು ಅಭಿಮಾನಿಗಳ ಕಣ್ಣ ಮುಂದೆ ಒಂದು ಕರಾಳ ಅಧ್ಯಾಯವಾಗಿ, ಸೂತಕದ ಮನೆಯಾಗಿ ಕಾಣಿಸುತ್ತಿದೆ.ಕಳೆದ ಜೂನ್‌ನಲ್ಲಿ ಆರ್‌ಸಿಬಿ ಸಂಭ್ರಮಾಚರಣೆ ವೇಳೆ ಉಂಟಾದ ಅತಿ ಭೀಕರ ಕಾಲ್ತುಳಿತ 11 ಜೀವಗಳನ್ನು ಬಲಿ ತೆಗೆದುಕೊಳ್ಳುವುದರ ಜೊತೆಗೆ, ಕ್ರೀಡಾಂಗಣದ ಹಣೆಬರಹವನ್ನೇ ಬದಲಿಸಿಬಿಟ್ಟಿದೆ. ಇಲ್ಲೀಗ ಪಂದ್ಯಗಳು ನಡೆಯುತ್ತಿಲ್ಲ. ಮಹತ್ವದ ಸರಣಿ, ಟೂರ್ನಿಗಳು ಬೇರೆಡೆಗೆ ಸ್ಥಳಾಂತರಗೊಳ್ಳುತ್ತಿವೆ. ಮಹಿಳಾ ವಿಶ್ವಕಪ್‌, ಐಪಿಎಲ್‌, ಭಾರತದ ಪಂದ್ಯಗಳು ಚಿನ್ನಸ್ವಾಮಿಯಲ್ಲಿ ನಡೆಯುವ ಸಾಧ್ಯತೆ ಬಗ್ಗೆ ಅನುಮಾನಗಳು ವ್ಯಕ್ತವಾಗುತ್ತಿವೆ. ಕ್ರೀಡಾಂಗಣದ ಮೂಲಗಳು ಹೇಳುವ ಪ್ರಕಾರ, ಸದ್ಯಕ್ಕೆ ಅಥವಾ ಕನಿಷ್ಠ ಮುಂದಿನ ಒಂದೆರಡು ವರ್ಷಗಳ ವರೆಗಂತೂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಐಪಿಎಲ್‌ ಸೇರಿ ಮಹತ್ವದ ಪಂದ್ಯಗಳು ನಡೆಯುವುದಿಲ್ಲ!.

ಕೆಲವು ಟೂರ್ನಿಗಳೇ ಎತ್ತಂಗಡಿ 

ಕಾಲ್ತುಳಿತ ನಡೆದ ಕೆಲ ದಿನಗಳಲ್ಲೇ ಭಾರತ-ದಕ್ಷಿಣ ಆಫ್ರಿಕಾ ‘ಎ’ ತಂಡಗಳ ನಡುವಿನ 3 ಪಂದ್ಯಗಳ ಏಕದಿನ ಸರಣಿಯನ್ನು ಚಿನ್ನಸ್ವಾಮಿಯಿಂದ ರಾಜ್‌ಕೋಟ್‌ಗೆ ಸ್ಥಳಾಂತರಿಸಿ ಬಿಸಿಸಿಐ ಆದೇಶಿಸಿತ್ತು. ಚೊಚ್ಚಲ ಆವೃತ್ತಿಯ ಕೆಎಸ್‌ಸಿಎ ಮಹಾರಾಣಿ ಟ್ರೋಫಿ ಪಂದ್ಯಗಳನ್ನು ಚಿನ್ನಸ್ವಾಮಿ ಬದಲು ಆಲೂರಿನಲ್ಲಿ ನಡೆಸಲಾಗುತ್ತಿದೆ. ಅಲ್ಲದೆ, ಮಹಾರಾಜ ಟ್ರೋಫಿ ಟೂರ್ನಿಯನ್ನು ಚಿನ್ನಸ್ವಾಮಿಯಿಂದ ಮೈಸೂರಿಗೆ ಸ್ಥಳಾಂತರಿಸಲಾಗಿದೆ. ಅಚ್ಚರಿಯ ಸಂಗತಿ ಏನೆಂದರೆ, ಮಹಾರಾಜ ಟ್ರೋಫಿಯನ್ನು ಪ್ರೇಕ್ಷಕರಿಲ್ಲದೆ ಖಾಲಿ ಕ್ರೀಡಾಂಗಣದಲ್ಲಿ ನಡೆಸಲು ಕೆಎಸ್‌ಸಿಎ ನಿರ್ಧರಿಸಿತ್ತು. ಆದರೆ ಅದಕ್ಕೂ ಪೊಲೀಸ್‌ ಇಲಾಖೆ ಅನುಮತಿ ಕೊಟ್ಟಿಲ್ಲ.

ಕ್ರೀಡಾಂಗಣ ಭವಿಷ್ಯ ಬಗ್ಗೆ ಕುತೂಹಲ

ಚಿನ್ನಸ್ವಾಮಿಯಲ್ಲಿ ಸದ್ಯಕ್ಕೆ ಭಾರತ ಪುರುಷರ ಪಂದ್ಯಗಳು ನಿಗದಿಯಾಗಿಲ್ಲ. ಆದರೆ, ಐಸಿಸಿ ಮಹಿಳಾ ಏಕದಿನ ವಿಶ್ವಕಪ್‌ನ ಉದ್ಘಾಟನಾ ಪಂದ್ಯ(ಸೆ.30), ಸೆಮಿಫೈನಲ್‌, ಫೈನಲ್‌(ನ.2) ಸೇರಿ ಅತಿ ಮಹತ್ವದ ಪಂದ್ಯಗಳಿಗೆ ಇದೇ ಚಿನ್ನಸ್ವಾಮಿ ಕ್ರೀಡಾಂಗಣ ಆತಿಥ್ಯ ವಹಿಸಬೇಕಿದೆ. ಕೆಎಸ್‌ಸಿಎ ಮೂಲಗಳ ಮಾಹಿತಿ ಪ್ರಕಾರ ಮಹಿಳಾ ವಿಶ್ವಕಪ್‌ ಬೆಂಗಳೂರಿನಿಂದ ಸ್ಥಳಾಂತರಗೊಳ್ಳಲಿದೆ.ಇನ್ನು, ಇತ್ತೀಚೆಗೆ ಸರ್ಕಾರಕ್ಕೆ ನ್ಯಾ.ಕುನ್ಹಾ ಆಯೋಗ ಸಲ್ಲಿಸಿದ್ದ ವರದಿ ಪ್ರಕಾರ ಕ್ರೀಡಾಂಗಣ ದೊಡ್ಡ ಪಂದ್ಯಗಳಿಗೆ ಸೂಕ್ತವಾಗಿಲ್ಲ ಮತ್ತು ದೊಡ್ಡ ಸಂಖ್ಯೆಯ ಜನ ಸೇರಿದರೆ ಅಪಾಯ ಎದುರಾಗಬಹುದು ಎಂದಿದೆ. ಮತ್ತೊಂದೆಡೆ ಪೊಲೀಸ್ ಇಲಾಖೆ ಕೂಡಾ ಸದ್ಯಕ್ಕೆ ಚಿನ್ನಸ್ವಾಮಿಯಲ್ಲಿ ಪಂದ್ಯ ನಡೆಸಲು ಅನುಮತಿ ನೀಡುತ್ತಿಲ್ಲ. ರಾಜ್ಯ ಸರ್ಕಾರ ಕೂಡಾ ಕ್ರೀಡಾಂಗಣದಲ್ಲಿ ಪಂದ್ಯ ಆಯೋಜನೆಗೆ ಒಪ್ಪಿಗೆ ನೀಡಿಲ್ಲ. ಇದೆಲ್ಲವನ್ನೂ ಗಮನಿಸಿದರೆ ಇಲ್ಲಿ ಸದ್ಯಕ್ಕೆ ಕ್ರಿಕೆಟ್ ಟೂರ್ನಿ ಆಯೋಜನೆ ಕನಸಿನ ಮಾತು.

‘ಸದ್ಯದ ಪರಿಸ್ಥಿತಿ ಗಮನಿಸಿದರೆ ಮಹಿಳಾ ವಿಶ್ವಕಪ್‌ ಬೇರೆಡೆಗೆ ಸ್ಥಳಾಂತರಗೊಳ್ಳುವುದು ಖಚಿತ. ಕಾಲ್ತುಳಿತದ ಬಗ್ಗೆ ತನಿಖೆ ನಡೆಯುತ್ತಿದೆ. ಹೀಗಾಗಿ ಸರ್ಕಾರ, ಪೊಲೀಸ್‌ ಇಲಾಖೆ ಸದ್ಯಕ್ಕೆ ಪಂದ್ಯಗಳನ್ನು ನಡೆಸಲು ಅನುಮತಿ ನೀಡುವುದಿಲ್ಲ. ಹೀಗಾಗಿ ಮುಂದಿನ 2 ವರ್ಷ ಇಲ್ಲಿ ದೊಡ್ಡ ಪಂದ್ಯಗಳನ್ನು ನಿರೀಕ್ಷಿಸುವಂತಿಲ್ಲ’ ಎಂದು ಹೆಸರೇಳಲಿಚ್ಛಿದ ಕೆಎಸ್‌ಸಿಎ ಅಧಿಕಾರಿಯೊಬ್ಬರು ‘ಕನ್ನಡಪ್ರಭ’ಕ್ಕೆ ಮಾಹಿತಿ ನೀಡಿದ್ದಾರೆ.

ಕಾಲ್ತುಳಿತ ಬಳಿಕ ನಡೆದಿದ್ದೇನು?1. ದಕ್ಷಿಣ ಆಫ್ರಿಕಾ ವಿರುದ್ಧ ಭಾರತ ‘ಎ’ ತಂಡದ ಸರಣಿ ಚಿನ್ನಸ್ವಾಮಿ ಸ್ಟೇಡಿಯಂನಿಂದ ಸ್ಥಳಾಂತರ.

2. ದೊಡ್ಡ ಪಂದ್ಯಗಳಿಗೆ ಕ್ರೀಡಾಂಗಣ ಸೂಕ್ತವಲ್ಲ ಎಂದು ನ್ಯಾ.ಕುನ್ಹಾ ಆಯೋಗದಿಂದ ಸರ್ಕಾರಕ್ಕೆ ವರದಿ.3. ಚೊಚ್ಚಲ ಆವೃತ್ತಿಯ ಮಹಾರಾಣಿ ಟ್ರೋಫಿ ಚಿನ್ನಸ್ವಾಮಿ ಬದಲು ಆಲೂರಿನಲ್ಲಿ ಆಯೋಜನೆ.

4. ಕ್ರೀಡಾಂಗಣದಲ್ಲಿ ಟೂರ್ನಿ ಆಯೋಜನೆಗೆ ಪೊಲೀಸ್‌ ಇಲಾಖೆಯಿಂದ ಅನುಮತಿ ನಿರಾಕರಣೆ.5. ಕೆಎಸ್‌ಸಿಎ ಮಹಾರಾಜ ಟ್ರೋಫಿ ಬೆಂಗಳೂರಿನಿಂದ ಎತ್ತಂಗಡಿ. ಮೈಸೂರಲ್ಲಿ ಲೀಗ್‌ ಆಯೋಜನೆ.

ಐತಿಹಾಸಿಕ ಸ್ಟೇಡಿಯಂಗೆ ಕಾಲ್ತುಳಿತದ ಕಪ್ಪುಚುಕ್ಕೆ!

ಚಿನ್ನಸ್ವಾಮಿ ಸ್ಟೇಡಿಯಂಗೆ ಭವ್ಯ ಇತಿಹಾಸವಿದೆ. ಸಬ್‌ ಏರ್‌ ವ್ಯವಸ್ಥೆ, ಸೌರ ಪ್ಯಾನೆಲ್‌ಗಳನ್ನು ಅಳವಡಿಸಿದ ವಿಶ್ವದ ಮೊದಲ ಕ್ರೀಡಾಂಗಣ ಎಂಬ ಹೆಗ್ಗಳಿಕೆ ಜೊತೆಗೆ ಹಲವು ಐತಿಹಾಸಿಕ ಪಂದ್ಯಗಳಿಗೂ ಸಾಕ್ಷಿಯಾಗಿದೆ. ಅಭಿಮಾನಿಗಳಿಗೆ ಸಂಭ್ರಮದ ಕ್ಷಣಗಳನ್ನು ಕಟ್ಟಿಕೊಟ್ಟಿದೆ. ಆದರೆ ಆ ಕ್ರೀಡಾಂಗಣದ ಖ್ಯಾತಿ ಒಂದು ಘಟನೆಯಿಂದ ಕುಗ್ಗಿಸಲು ಸಾಧ್ಯವಿಲ್ಲ ಎಂಬುದು ಕೆಎಸ್‌ಸಿಎ ಮಾಜಿ ಖಜಾಂಚಿ, ಮಾಜಿ ವಕ್ತಾರ ವಿನಯ್‌ ಮೃತ್ಯುಂಜಯ ಅವರ ಅನಿಸಿಕೆ. ‘ಚಿನ್ನಸ್ವಾಮಿ ಒಂದು ಐಕಾನಿಕ್ ಸ್ಟೇಡಿಯಂ. ಒಂದು ಘಟನೆಯಿಂದ ಅದರ ಖ್ಯಾತಿ ಕುಗ್ಗುವುದಿಲ್ಲ. ಆದರೆ ಮುಂದೆ ಯಾವುದೇ ಸಮಸ್ಯೆ ಆಗದ ಹಾಗೆ ನೋಡಿಕೊಳ್ಳುವುದು ಕೆ‌ಎಸ್‌ಸಿ‌ಎ ಜವಾಬ್ದಾರಿ. ರಾಜ್ಯ ಸರ್ಕಾರಕ್ಕೆ ಸಲ್ಲಿಕೆಯಾದ ವರದಿಯಲ್ಲಿ ಕ್ರೀಡಾಂಗಣದ ಬಗ್ಗೆ ಹಲವು ಲೋಪ ದೋಷಗಳನ್ನು ಬೊಟ್ಟು ಮಾಡಲಾಗಿದೆ. ಇದನ್ನು ಸರಿಪಡಿಸಲು ಕೆ‌ಎ‌ಸ್‌ಸಿಎ ಕ್ರೀಡಾಂಗಣದ ಸೇಫ್ಟಿ ಆಡಿಟ್ ಮಾಡಬೇಕು’ ಎಂದು ವಿನಯ್‌ ಅವರು ಹೇಳಿದ್ದಾರೆ. 

ಕ್ರೀಡಾಂಗಣ ಅಭಿವೃದ್ಧಿ ಆಗಬೇಕು. ಮೂಲಸೌಕರ್ಯ ಕೊರತೆಯಿದೆ. ಪ್ರೇಕ್ಷಕರ ಸುರಕ್ಷತೆ ಕೆ‌ಎಸ್‌ಸಿ‌ಎ ಜವಾಬ್ದಾರಿ. ಮುಂದೆ ಪಂದ್ಯಗಳು ನಡೆಯುವ ಬಗ್ಗೆ ಗೊತ್ತಿಲ್ಲ. ಸರ್ಕಾರ-ಕೆ‌ಎಸ್‌ಸಿಎ ನಡುವೆ ಏನು ಚರ್ಚೆ ನಡೆಯುತ್ತಿದೆ ಗೊತ್ತಿಲ್ಲ. ಆದರೆ ಕ್ರೀಡಾಂಗಣದಲ್ಲಿ ಮತ್ತೆ ಪಂದ್ಯ ನಡೆಸುವುದು, ಪ್ರೇಕ್ಷಕರನ್ನು ಕರೆ ತರುವುದು, ಹಿಂದಿನಂತೆ ಹಲವು ಮಹತ್ವದ ಟೂರ್ನಿ ಆಯೋಜಿಸುವುದು ಕೆ‌ಎಸ್‌ಸಿ‌ಎ ಕೈಯಲ್ಲಿದೆ. ಕ್ರೀಡಾಂಗಣ ಸ್ಥಳಾಂತರ ಆಗುವ ಬಗ್ಗೆ ಹಿಂದಿನಿಂದಲೂ ಚರ್ಚೆ ಇದೆ. ಆದರೆ ಇದರ ಬಗ್ಗೆ ಸರ್ಕಾರ ಏನು ಕ್ರಮ ಕೈಗೊಳ್ಳುತ್ತದೆ ನೋಡಬೇಕು.

- ವಿನಯ್‌ ಮೃತ್ಯುಂಜಯ, ಕೆಎಸ್‌ಸಿಎ ಮಾಜಿ ಖಜಾಂಚಿ 

ಸ್ಟೇಡಿಯಂ ಅನ್‌ಫಿಟ್‌, ಅಸುರಕ್ಷಿತ ಎಂದು ಸರ್ಕಾರಕ್ಕೆ ವರದಿ ಸಲ್ಲಿಕೆ!

ಕಾಲ್ತುಳಿತ ಸಂಬಂಧ ಇತ್ತೀಚೆಗೆ ನ್ಯಾ.ಮೈಕೆಲ್‌ ಕುನ್ಹಾ ಆಯೋಗವು ರಾಜ್ಯ ಸರ್ಕಾರಕ್ಕೆ ವರದಿ ಸಲ್ಲಿಸಿದ್ದು, ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಹೆಚ್ಚಿನ ಜನರು ಸೇರುವ ಪಂದ್ಯಗಳನ್ನು ಆಯೋಜಿಸುವುದು ಸೂಕ್ತವಲ್ಲ ಎಂದು ಉಲ್ಲೇಖಿಸಿದೆ. ಕ್ರೀಡಾಂಗಣದ ವಿನ್ಯಾಸ ಮತ್ತು ರಚನೆ ಹೆಚ್ಚಿನ ಜನರು ಸೇರುವ ಸಮಾರಂಭಗಳಿಗೆ ಸೂಕ್ತವಲ್ಲ ಮತ್ತು ಅಸುರಕ್ಷಿತ. ದೊಡ್ಡ ಸಂಖ್ಯೆಯ ಜನರು ಸೇರಿದರೆ ಅಪಾಯ ಎದುರಾಗಬಹುದು. ಇಂತಹ ಸಮಾರಂಭಗಳನ್ನು ಸೂಕ್ತ ಸ್ಥಳಕ್ಕೆ ಸ್ಥಳಾಂತರಿಸಬೇಕು ಮತ್ತು ಅಂತಾರಾಷ್ಟ್ರೀಯ ಮಾನದಂಡಗಳನ್ನು ಪಾಲಿಸಿಯೇ ಇನ್ನು ಪಂದ್ಯಗಳನ್ನು ನಡೆಸಬೇಕು ಎಂದಿದೆ.

ಸ್ಟೇಡಿಯಂ ಸ್ಥಳಾಂತರ ಅನಿವಾರ್ಯ, ಏಕೆ?ನಗರದ ಹೃದಯ ಭಾಗದಲ್ಲಿರುವ ಚಿನ್ನಸ್ವಾಮಿ ಕ್ರೀಡಾಂಗಣಕ್ಕೆ 2024ರಲ್ಲಿ 50 ವರ್ಷ ತುಂಬಿದೆ. ಇದರ ಸಂಭ್ರಮಾಚರಣೆಯನ್ನು ಕೆಎಸ್‌ಸಿಎ ಅದ್ಧೂರಿಯಾಗಿ ನಡೆಸಬಹುದಿತ್ತಾದರೂ, ಅದಕ್ಕೆ ಮನಸ್ಸು ಮಾಡಿಲ್ಲ. ಈ ನಡುವೆ ಕ್ರೀಡಾಂಗಣವನ್ನು ಬೇರೆಡೆಗೆ ಸ್ಥಳಾಂತರಗೊಳಿಸುವ ಬಗ್ಗೆ ಹಲವು ವರ್ಷಗಳಿಂದಲೂ ಚರ್ಚೆಯಾಗುತ್ತಿದೆ. 

ಕ್ರೀಡಾಂಗಣ ಸ್ಥಳಾಂತರ ಏಕೆ ಅನಿವಾರ್ಯ ಎಂಬುದಕ್ಕೆ ಇಲ್ಲಿವೆ ಕಾರಣ.

1. ಆಸನ ಸಾಮರ್ಥ್ಯ ಕಡಿಮೆಚಿನ್ನಸ್ವಾಮಿ ಕ್ರೀಡಾಂಗಣದ ಆಸನ ಸಾಮರ್ಥ್ಯ 32000. ಮಹಿಳಾ ಟಿ20 ಪಂದ್ಯಗಳಿಗೂ ಕ್ರೀಡಾಂಗಣ ಭರ್ತಿಯಾಗಲಿದೆ. ಆ ಮಟ್ಟದ ಕ್ರಿಕೆಟ್‌ ಆಸಕ್ತರು, ಟಿಕೆಟ್‌ ದರ ಎಷ್ಟೇ ದುಬಾರಿಯಾದರೂ ಖರೀದಿಸಿ ಕ್ರೀಡಾಂಗಣಕ್ಕೆ ಬರುವ ಅಭಿಮಾನಿಗಳಿದ್ದಾರೆ. ಟಿಕೆಟ್‌ ಸಿಗದೆ ಸಾವಿರಾರು ಅಭಿಮಾನಿಗಳು ಪರದಾಡುವುದನ್ನು ಪ್ರತಿ ಬಾರಿ ನೋಡುತ್ತೇವೆ. ಐಪಿಎಲ್‌, ಡಬ್ಲ್ಯುಪಿಎಲ್‌, ಭಾರತದ ಯಾವುದೇ ಪಂದ್ಯವಿದ್ದರೂ ಹೆಚ್ಚಿನ ಸಂಖ್ಯೆಯಲ್ಲಿ ಪ್ರೇಕ್ಷಕರು ಸೇರುವ ಬೆಂಗಳೂರಿಗೆ ದೊಡ್ಡ ಕ್ರೀಡಾಂಗಣ ಬೇಕಿದೆ.

2. ಪಾರ್ಕಿಂಗ್‌ ವ್ಯವಸ್ಥೆಯೇ ಇಲ್ಲಚಿನ್ನಸ್ವಾಮಿ ಕ್ರೀಡಾಂಗಣ ಸೂಕ್ತ ಪಾರ್ಕಿಂಗ್‌ ವ್ಯವಸ್ಥೆ ಹೊಂದಿಲ್ಲ. ಆಟಗಾರರ ಬಸ್‌, ಕೆಎಸ್‌ಸಿಎ ಸದಸ್ಯರು, ಸಿಬ್ಬಂದಿಗೆ ಒಂದಷ್ಟು ವಾಹನಗಳನ್ನು ನಿಲ್ಲಿಸಲು ಕ್ರೀಡಾಂಗಣದ ಮುಖ್ಯ ಗೇಟ್‌ ಒಳಗೆ ಅಲ್ಪ ಜಾಗವಿದೆ. ಅದನ್ನು ಹೊರತುಪಡಿಸಿ ಪ್ರೇಕ್ಷಕರಿಗೆ ಯಾವುದೇ ಪಾರ್ಕಿಂಗ್‌ ವ್ಯವಸ್ಥೆ ಇಲ್ಲ. ದೊಡ್ಡ ಪಂದ್ಯಗಳ ವೇಳೆ ಕಿ.ಮೀ. ದೂರದಲ್ಲಿ, ಖಾಸಗಿ ಸ್ಥಳಗಳಲ್ಲಿ ವಾಹನ ನಿಲ್ಲಿಸಿ ಮೈದಾನಕ್ಕೆ ಬರಬೇಕಿದೆ.

3. ಜನದಟ್ಟಣೆ, ನೂಕುನುಗ್ಗಲುಯಾವುದೇ ಪಂದ್ಯವಿದ್ದರೂ ಕ್ರೀಡಾಂಗಣ ಬಳಿ ಜನದಟ್ಟಣೆ ಇರುತ್ತದೆ. ಇದರಿಂದ ನೂಕುನುಗ್ಗಲು ಕೂಡಾ ಉಂಟಾಗುವುದಿದೆ. ಗೇಟ್‌ ಬಳಿ ಕ್ಯೂ ನಿಲ್ಲಲು ಕೂಡಾ ಮುಖ್ಯ ರಸ್ತೆಯ ಪಾದಾಚಾರಿ ಮಾರ್ಗವನ್ನು ಬಳಸಬೇಕಾಗಿದೆ. ಸಮೀಪದಲ್ಲೇ ವಾಹನಗಳು ಸಂಚರಿಸುವುದರಿಂದ ಗೇಟ್‌ ಬಳಿ ಜನರ ಜಮಾವಣೆ ಅಪಾಯಕಾರಿ. ಇತ್ತೀಚೆಗೆ ನಡೆದ ಕಾಲ್ತುಳಿತ ಇದಕ್ಕೆ ಸಾಕ್ಷಿ.

4. ವಾಹನ ಸಂಚಾರಕ್ಕೆ ಅಡ್ಡಿಚಿನ್ನಸ್ವಾಮಿಯಲ್ಲಿ ಪಂದ್ಯವಿದ್ದ ದಿನ ಸಮೀಪದ ರಸ್ತೆಗಳಲ್ಲಿ ವಾಹನಗಳು ಸಂಚರಿಸಬೇಕಿದ್ದರೆ ಹರಸಾಹಸ ಪಡಬೇಕು. ಸುಗಮ ಸಂಚಾರಕ್ಕಾಗಿ ನೂರಾರು ಪೊಲೀಸರನ್ನು ನಿಯೋಜಿಸಿದರೂ ವಾಹನ ಸಂಚಾರಕ್ಕೆ ಅಡಚಣೆ ಉಂಟಾಗುತ್ತದೆ. ಅತ್ತಿಂದಿತ್ತ ಓಡಾಡುವ ಅಭಿಮಾನಿಗಳು, ಗೇಟ್‌ ಬಳಿ ಕ್ಯೂ ನಿಲ್ಲುವ ಪ್ರೇಕ್ಷಕರಿಂದಾಗಿ ರಸ್ತೆಗಳಲ್ಲೂ ಜನದಟ್ಟಣೆ ಉಂಟಾಗುತ್ತದೆ. ನಗರದ ಹೊರವಲಯದಲ್ಲಿ ಕ್ರೀಡಾಂಗಣವಿದ್ದರೆ ಈ ಸಮಸ್ಯೆಯಿಲ್ಲ.

5. ಮೂಲಸೌಕರ್ಯ ಕೊರತೆಪ್ರೇಕ್ಷಕರ ಅನುಭವ ಹಾಗೂ ಇತ್ತೀಚೆಗೆ ಸರ್ಕಾರಕ್ಕೆ ವರದಿ ಸಲ್ಲಿಸಿದ್ದ ನ್ಯಾ.ಕುನ್ಹಾ ಆಯೋಗದ ಪ್ರಕಾರ ಕ್ರೀಡಾಂಗಣದಲ್ಲಿ ಮೂಲಸೌಕರ್ಯ ಕೊರತೆಯಿದೆ. ಕ್ರೀಡಾಂಗಣದ ವಿನ್ಯಾಸ, ರಚನೆ ಹೆಚ್ಚಿನ ಜನರು ಸೇರುವ ಪಂದ್ಯಗಳಿಗೆ ಸೂಕ್ತವಲ್ಲ ಮತ್ತು ಅಸುರಕ್ಷಿತ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದ್ದು ಇಲ್ಲಿ ಗಮನಾರ್ಹ. ಭದ್ರತಾ ವ್ಯವಸ್ಥೆ, ಪಾರ್ಕಿಂಗ್‌, ನೀರು, ಶೌಚಾಲಯ, ಕಟ್ಟದ ಸ್ಥಿತಿ, ಗೇಟ್‌ಗಳ ರೂಪ ಕೂಡಾ ಕ್ರೀಡಾಂಗಣಕ್ಕೆ ಸೂಕ್ತವಲ್ಲ ಎಂಬ ಆರೋಪಗಳಿವೆ.

PREV
Read more Articles on

Recommended Stories

ರಾಜ್ಯಸಭೆಯಲ್ಲೂ ಕ್ರೀಡಾಆಡಳಿತ ಮಸೂದೆ ಪಾಸ್‌
ಕೊಹ್ಲಿ, ರೋಹಿತ್‌ ನಿವೃತ್ತಿ ವದಂತಿ : 2027ರ ಏಕದಿನ ವಿಶ್ವಕಪ್‌ ಆಡಲ್ವಾ ದಿಗ್ಗಜರು?