ಮಹಿಳಾ ಏಷ್ಯಾಕಪ್‌ ಟಿ20: ಭಾರತದ ಅಬ್ಬರಕ್ಕೆ ಪಾಕಿಸ್ತಾನ ತತ್ತರ! 7 ವಿಕೆಟ್‌ಗಳಲ್ಲಿ ಗೆದ್ದು ಭರ್ಜರಿ ಶುಭಾರಂಭ

KannadaprabhaNewsNetwork | Updated : Jul 20 2024, 04:23 AM IST

ಸಾರಾಂಶ

ಮಹಿಳಾ ಏಷ್ಯಾಕಪ್‌ ಟಿ 20: ಪಾಕಿಸ್ತಾನ ವಿರುದ್ಧ 7 ವಿಕೆಟ್‌ಗಳಲ್ಲಿ ಗೆದ್ದು ಭಾರತ ಭರ್ಜರಿ ಶುಭಾರಂಭ. ಭಾರತ ಮಾರಕ ದಾಳಿ, ಪಾಕ್‌ 19.2 ಓವರಲ್ಲಿ 108ಕ್ಕೆ ಆಲೌಟ್‌. 11.2 ಓವರಲ್ಲೇ ಭಾರತಕ್ಕೆ ಜಯ

ದಾಂಬುಲಾ: 9ನೇ ಆವೃತ್ತಿ ಮಹಿಳಾ ಏಷ್ಯಾಕಪ್‌ ಟಿ20 ಟೂರ್ನಿಯಲ್ಲಿ ಹಾಲಿ ಹಾಗೂ 7 ಬಾರಿ ಚಾಂಪಿಯನ್‌ ಭಾರತ ಭರ್ಜರಿ ಶುಭಾರಂಭ ಮಾಡಿದೆ. ಬದ್ಧವೈರಿ ಪಾಕಿಸ್ತಾನ ವಿರುದ್ಧ ಶುಕ್ರವಾರ 7 ವಿಕೆಟ್‌ ಗೆಲುವು ಸಾಧಿಸುವ ಮೂಲಕ ಟೂರ್ನಿಯ ಅಭಿಯಾನವನ್ನು ಭರ್ಜರಿಯಾಗಿಯೇ ಆರಂಭಿಸಿತು.

ಮೊದಲು ಬ್ಯಾಟ್‌ ಮಾಡಿದ ಪಾಕ್‌ ತಂಡ, ಭಾರತದ ಮಾರಕ ದಾಳಿಗೆ ತತ್ತರಿಸಿ 19.2 ಓವರ್‌ಗಳಲ್ಲಿ 108 ರನ್‌ಗೆ ಆಲೌಟಾಯಿತು. ತಂಡದ ಯಾವ ಬ್ಯಾಟರ್‌ಗೂ ಭಾರತೀಯರ್‌ ಬೌಲರ್‌ಗಳ ದಾಳಿಯನ್ನು ಹಿಮ್ಮೆಟ್ಟಿಸಿ ಕ್ರೀಸ್‌ನಲ್ಲಿ ನೆಲೆಯೂರಲು ಸಾಧ್ಯವಾಗಲಿಲ್ಲ. 

ಸಿದ್ರಾ ಅಮೀನ್‌(25) ತಂಡದ ಪರ ಗರಿಷ್ಠ ವೈಯಕ್ತಿಕ ಮೊತ್ತ ದಾಖಲಿಸಿದರು. ಫಾತಿಮಾ ಸನಾ 16 ಎಸೆತಗಳಲ್ಲಿ ಔಟಾಗದೆ 22, ತೂಬಾ ಹಸನ್‌ 22 ರನ್‌ ಕೊಡುಗೆ ನೀಡಿದರು. ಭಾರತದ ಪರ ದೀಪ್ತಿ ಶರ್ಮಾ 3, ಶ್ರೇಯಾಂಕ ಪಾಟೀಲ್‌, ಪೂಜಾ ಹಾಗೂ ರೇಣುಕಾ ಸಿಂಗ್ ತಲಾ 2 ವಿಕೆಟ್‌ ಕಿತ್ತರು.ಸ್ಫೋಟಕ ಆಟ: ಸುಲಭ ಗುರಿಯನ್ನು ಭಾರತ ಕೇವಲ 14.2 ಓವರ್‌ಗಳಲ್ಲೇ ಬೆನ್ನತ್ತಿ ಜಯಗಳಿಸಿತು. 

ಆರಂಭಿಕ ಆಟಗಾರರಾದ ಸ್ಮೃತಿ ಮಂಧನಾ ಹಾಗೂ ಶಫಾಲಿ ವರ್ಮಾ ಮೊದಲ ವಿಕೆಟ್‌ಗೆ 9.3 ಓವರ್‌ಗಳಲ್ಲಿ 85 ರನ್‌ ಜೊತೆಯಾಟವಾಡಿದರು. ಸ್ಮೃತಿ 45, ಶಫಾಲಿ 40 ರನ್‌ ಗಳಿಸಿ ಔಟಾದರೂ, ಹೇಮಲತಾ 14 ರನ್ ಗಳಿಸಿ ತಂಡವನ್ನು ಗೆಲುವಿನ ದಡ ಸೇರಿಸಿದರು.ಸ್ಕೋರ್‌: ಪಾಕಿಸ್ತಾನ 19.2 ಓವರ್‌ಗಳಲ್ಲಿ 108/10 (ಅಮೀನ್‌ 25, ಫಾತಿಮಾ 22, ದೀಪ್ತಿ 3-20, ಶ್ರೇಯಾಂಕ 2-24, ರೇಣುಕಾ 2-14), ಭಾರತ 14.1 ಓವರ್‌ಗಳಲ್ಲಿ 109/3 (ಸ್ಮೃತಿ 45, ಶಫಾಲಿ 40, ಸೈದಾ 2-9)

ಭಾರತಕ್ಕೆ ಮುಂದಿನ ಪಂದ್ಯ ಜು.21ಕ್ಕೆ, ಯುಎಇ ವಿರುದ್ಧ

ಯುಎಇ ವಿರುದ್ಧ ನೇಪಾಳಕ್ಕೆ ಜಯ

ದಾಂಬುಲಾ: ಮಹಿಳಾ ಏಷ್ಯಾಕಪ್‌ ಟೂರ್ನಿಯ ಉದ್ಘಾಟನಾ ಪಂದ್ಯದಲ್ಲಿ ಯುಎಇ ವಿರುದ್ಧ ನೇಪಾಳ 6 ವಿಕೆಟ್‌ ಗೆಲುವು ಸಾಧಿಸಿತು. ಮೊದಲು ಬ್ಯಾಟ್ ಮಾಡಿದ ಯುಎಇ 20 ಓವರ್‌ಗಳಲ್ಲಿ 8 ವಿಕೆಟ್‌ಗೆ 115 ರನ್‌ ಕಲೆಹಾಕಿತು. ಇಂದು ಬರ್ಮಾ 3 ವಿಕೆಟ್‌ ಕಿತ್ತರು. ಸುಲಭ ಗುರಿಯನ್ನು ನೇಪಾಳ 16.1 ಓವರ್‌ಗಳಲ್ಲಿ 4 ವಿಕೆಟ್‌ ನಷ್ಟದಲ್ಲಿ ಬೆನ್ನತ್ತಿ ಜಯಗಳಿಸಿತು. ಸಮ್ಜಾನ ಖಾಡ್ಕ ಔಟಾಗದೆ 72 ರನ್‌ ಗಳಿಸಿದರು.

Share this article