ಇಂದಿನಿಂದ ಭಾರತ vs ಇಂಗ್ಲೆಂಡ್‌ ಟಿ20

KannadaprabhaNewsNetwork |  
Published : Jan 22, 2025, 12:34 AM IST
ಅಭ್ಯಾಸದ ವೇಳೆ ಕೋಚ್‌ ಗೌತಮ್‌ ಗಂಭೀರ್‌ ಜೊತೆ ನಾಯಕ ಸೂರ್ಯಕುಮಾರ್‌ ಯಾದವ್‌.  | Kannada Prabha

ಸಾರಾಂಶ

ಭಾರತ-ಇಂಗ್ಲೆಂಡ್‌ 5 ಪಂದ್ಯಗಳ ಟಿ20 ಸರಣಿ. ಕೋಲ್ಕತಾದಲ್ಲಿ ಮೊದಲ ಪಂದ್ಯ. ಸ್ಪರ್ಧಾತ್ಮಕ ಕ್ರಿಕೆಟ್‌ಗೆ ಕಮ್‌ಬ್ಯಾಕ್‌ ಮಾಡುತ್ತಿರುವ ಮೊಹಮದ್‌ ಶಮಿ ಮೇಲೆ ಎಲ್ಲರ ಕಣ್ಣು. ಉಪನಾಯಕನಾಗಿ ಕಾರ್ಯಾರಂಭ ಮಾಡಲಿರುವ ಅಕ್ಷರ್‌ ಪಟೇಲ್‌. ಸೂರ್ಯಕುಮಾರ್‌ ಯಾದವ್‌ ನೇತೃತ್ವದ ಟೀಂ ಇಂಡಿಯಾಗೆ ಶುಭಾರಂಭ ಗುರಿ. ತವರಿನಲ್ಲಿ ಸತತ 16 ಟಿ20 ಸರಣಿಗಳಲ್ಲಿ ಸೋಲದ ಭಾರತಕ್ಕೆ ಮತ್ತೊಂದು ಸರಣಿ ಜಯದ ನಿರೀಕ್ಷೆ. 16 ಸರಣಿಗಳಲ್ಲಿ 14ರಲ್ಲಿ ಗೆಲುವು. ಕೊನೆಯ ಬಾರಿಗೆ ತವರಿನಲ್ಲಿ ಟಿ20 ಸರಣಿ ಸೋತಿದ್ದು 2019-20ರಲ್ಲಿ ಆಸ್ಟ್ರೇಲಿಯಾ ವಿರುದ್ಧ.

ಕೋಲ್ಕತಾ: ದ್ವಿಪಕ್ಷೀಯ ಟಿ20 ಸರಣಿಗೆ ಸದ್ಯಕ್ಕೆ ಅಷ್ಟೊಂದು ಮಹತ್ವವಿಲ್ಲದೆ ಇದ್ದರೂ, ಕೆಲ ಪ್ರಮುಖ ಅಂಶಗಳಿಂದಾಗಿ ಬುಧವಾರದಿಂದ ಆರಂಭಗೊಳ್ಳಲಿರುವ ಭಾರತ ಹಾಗೂ ಇಂಗ್ಲೆಂಡ್‌ ನಡುವಿನ 5 ಪಂದ್ಯಗಳ ಸರಣಿ ಕುತೂಹಲ ಕೆರಳಿಸಿದೆ. ಮೊದಲ ಪಂದ್ಯಕ್ಕೆ ಇಲ್ಲಿನ ಈಡನ್ ಗಾರ್ಡನ್ಸ್‌ ಆತಿಥ್ಯ ವಹಿಸಲಿದ್ದು, ಸೂರ್ಯಕುಮಾರ್‌ ಯಾದವ್‌ ನೇತೃತ್ವದ ಭಾರತ ತಂಡ ಶುಭಾರಂಭದ ನಿರೀಕ್ಷೆಯಲ್ಲಿದೆ.

2023ರ ಏಕದಿನ ವಿಶ್ವಕಪ್‌ ಬಳಿಕ ಮೊಹಮದ್‌ ಶಮಿ ಮೊದಲ ಬಾರಿಗೆ ಅಂತಾರಾಷ್ಟ್ರೀಯ ಪಂದ್ಯವನ್ನಾಡಲಿದ್ದು, ಅವರ ಮೇಲೆ ಎಲ್ಲರ ಕಣ್ಣಿದೆ. ಶಮಿ ಮುಂದಿನ ತಿಂಗಳು ಚಾಂಪಿಯನ್ಸ್ ಟ್ರೋಫಿಯಲ್ಲೂ ಆಡಲಿರುವ ಕಾರಣ, ಅವರ ಫಾರ್ಮ್‌ ಹಾಗೂ ಫಿಟ್ನೆಸ್‌ ಅನ್ನು ಆಯ್ಕೆಗಾರರು ಗಮನಿಸಲಿದ್ದಾರೆ.

ಇನ್ನು, ಚಾಂಪಿಯನ್ಸ್‌ ಟ್ರೋಫಿ ತಂಡದಲ್ಲಿ ಸ್ಥಾನ ಪಡೆಯದ ಸೂರ್ಯ, ಟಿ20 ತಂಡದಲ್ಲಿ ಕಾಯಂ ಆಗಿ ಉಳಿಯಬೇಕಿದ್ದರೆ ಉತ್ತಮ ಆಟ ತೋರಲೇಬೇಕಿದೆ. ಇದೇ ಮೊದಲ ಬಾರಿಗೆ ಆಲ್ರೌಂಡರ್‌ ಅಕ್ಷರ್‌ ಪಟೇಲ್‌ಗೆ ಉಪನಾಯಕತ್ವದ ಜವಾಬ್ದಾರಿ ನೀಡಲಾಗಿದೆ. ಕೇವಲ ಇಬ್ಬರು ಸ್ಪಿನ್ನರ್ಸ್‌?: ಸಂಜೆ ಬಳಿಕ ಇಬ್ಬನಿ ಬೀಳಲಿರುವ ಕಾರಣ ಸ್ಪಿನ್ನರ್‌ಗಳಿಗೆ ಚೆಂಡಿನ ಮೇಲೆ ನಿಯಂತ್ರಣ ಸಾಧಿಸುವುದು ಕಷ್ಟವಾಗಲಿದೆ. ಹೀಗಾಗಿ, ಇಬ್ಬರು ಸ್ಪಿನ್ನರ್‌ಗಳನ್ನಷ್ಟೇ ಕಣಕ್ಕಿಳಿಸುವ ಸಾಧ್ಯತೆ ಹೆಚ್ಚು. ವರುಣ್‌ ಚಕ್ರವರ್ತಿ ಹಾಗೂ ಅಕ್ಷರ್‌ ಪಟೇಲ್‌ಗೆ ಅವಕಾಶ ಸಿಗಲಿದೆ. ಅಭಿಷೇಕ್‌ ಹಾಗೂ ಸ್ಯಾಮ್ಸನ್‌ ಇನ್ನಿಂಗ್ಸ್‌ ಆರಂಭಿಸಲಿದ್ದು, ಸೂರ್ಯ, ತಿಲಕ್‌, ರಿಂಕು, ಹಾರ್ದಿಕ್‌, ನಿತೀಶ್‌, ಶಮಿ ಹಾಗೂ ಅರ್ಶ್‌ದೀಪ್‌ ಆಡುವುದು ಬಹುತೇಕ ಖಚಿತ.

ಮತ್ತೊಂದೆಡೆ ಇಂಗ್ಲೆಂಡ್‌ ಈಗಾಗಲೇ ಆಡುವ ಹನ್ನೊಂದರ ಬಳಗವನ್ನು ಘೋಷಿಸಿದ್ದು, ಆದಿಲ್‌ ರಶೀದ್‌ ತಂಡದಲ್ಲಿರುವ ಏಕೈಕ ತಜ್ಞ ಸ್ಪಿನ್ನರ್‌. ಜೋಸ್‌ ಬಟ್ಲರ್‌ ಬಳಗ ಟಿ20 ತಜ್ಞ ಆಟಗಾರರ ದಂಡನ್ನೇ ಹೊಂದಿದ್ದು, ಭಾರತಕ್ಕೆ ಪ್ರಬಲ ಪೈಪೋಟಿ ನೀಡಲು ಎದುರು ನೋಡುತ್ತಿದೆ. ಒಟ್ಟು ಮುಖಾಮುಖಿ: 24

ಭಾರತ: 13

ಇಂಗ್ಲೆಂಡ್‌: 11ಆಟಗಾರರ ಪಟ್ಟಿ

ಭಾರತ (ಸಂಭವನೀಯ): ಅಭಿಷೇಕ್‌, ಸ್ಯಾಮ್ಸನ್‌, ಸೂರ್ಯ(ನಾಯಕ), ತಿಲಕ್‌, ಹಾರ್ದಿಕ್‌, ರಿಂಕು, ನಿತೀಶ್‌, ಅಕ್ಷರ್‌, ಶಮಿ, ವರುಣ್‌, ಅರ್ಶ್‌ದೀಪ್‌.

ಇಂಗ್ಲೆಂಡ್‌ (ಆಡುವ 11): ಸಾಲ್ಟ್‌, ಡಕೆಟ್‌, ಬಟ್ಲರ್‌ (ನಾಯಕ), ಬ್ರೂಕ್‌, ಲಿವಿಂಗ್‌ಸ್ಟನ್‌, ಬೆಥ್‌ಹೆಲ್‌, ಓವರ್‌ಟನ್‌, ಆ್ಯಟ್ಕಿನ್ಸನ್‌, ಆರ್ಚರ್‌, ರಶೀದ್‌, ವುಡ್‌.ಪಂದ್ಯ ಆರಂಭ: ಸಂಜೆ 7ಕ್ಕೆ, ನೇರ ಪ್ರಸಾರ: ಸ್ಟಾರ್‌ ಸ್ಪೋರ್ಟ್ಸ್‌, ಡಿಸ್ನಿ+ ಹಾಟ್‌ಸ್ಟಾರ್‌

---2019ರಲ್ಲಿ ತವರಲ್ಲಿ ಕೊನೆ

ಬಾರಿಗೆ ಸೋತಿದ್ದ ಭಾರತ

ಭಾರತ ತಂಡ ಕಳೆದ 6 ವರ್ಷದಲ್ಲಿ ತವರಿನಲ್ಲಿ ಟಿ20 ಸರಣಿ ಸೋತಿಲ್ಲ. ಈ ಅವಧಿಯಲ್ಲಿ ಆಡಿರುವ 16 ಸರಣಿಗಳಲ್ಲೂ ಅಜೇಯವಾಗಿ ಉಳಿದಿದೆ. 14 ಸರಣಿಗಳನ್ನು ಗೆದ್ದರೆ, 2 ಸರಣಿಗಳನ್ನು ಡ್ರಾ ಮಾಡಿಕೊಂಡಿದೆ. 2019ರಲ್ಲಿ ಆಸ್ಟ್ರೇಲಿಯಾ ವಿರುದ್ಧ ಸರಣಿ ಸೋತಿತ್ತು.

PREV
Get the latest sports news in Kannada (ಕ್ರೀಡಾ ಸುದ್ದಿ) — live cricket scores, football highlights, tennis, badminton, and updates on all major sports events. Stay ahead with Kannada Prabha’s full-coverage sports reporting.

Recommended Stories

ಚಿನ್ನಸ್ವಾಮಿಯಲ್ಲಿ ಪಂದ್ಯಕ್ಕೆ ಇನ್ನೂ ಸಿಗದ ಅನುಮತಿ
ಟಿ20 ವಿಶ್ವಕಪ್‌ನಿಂದ ಉಪನಾಯಕ ಗಿಲ್‌ಗೆ ಗೇಟ್‌ಪಾಸ್‌, ಕಿಶನ್ ಆಯ್ಕೆ!