ಪ್ಯಾರಿಸ್‌ ಪ್ಯಾರಾಲಿಂಪಿಕ್ಸ್‌ಗೆ ದಿನಗಣನೆ ಆರಂಭ: ಜಾಗತಿಕ ಕ್ರೀಡಾಕೂಟಕ್ಕೆ ಆ.28ಕ್ಕೆ ಚಾಲನೆ

KannadaprabhaNewsNetwork |  
Published : Aug 24, 2024, 01:16 AM ISTUpdated : Aug 24, 2024, 05:08 AM IST
ಪ್ಯಾರಿಸ್‌ ಪ್ಯಾರಾಲಿಂಪಿಕ್ಸ್‌ | Kannada Prabha

ಸಾರಾಂಶ

ಒಲಿಂಪಿಕ್ಸ್‌ ಬಳಿಕ ಮತ್ತೊಂದು ಕ್ರೀಡಾ ಹಬ್ಬ ಆಯೋಜಿಸಲು ಸಿಟಿ ಆಫ್‌ ಲವ್‌ ಪ್ಯಾರಿಸ್‌ ಸಿದ್ಧ. 184 ದೇಶಗಳ 4400 ಕ್ರೀಡಾಪಟುಗಳು ಗೇಮ್ಸ್‌ನಲ್ಲಿ ಭಾಗಿ. ಒಟ್ಟು 22 ಕ್ರೀಡೆಗಳ 549 ಸ್ಪರ್ಧೆ ಆಯೋಜನೆ. ಸೆ.8ರಂದು ಗೇಮ್ಸ್‌ ಮುಕ್ತಾಯ

ಪ್ಯಾರಿಸ್‌: 2024ರ ಒಲಿಂಪಿಕ್ಸ್‌ ಮುಕ್ತಾಯಗೊಂಡ ಬೆನ್ನಲ್ಲೇ ಪ್ಯಾರಾಲಿಂಪಿಕ್ಸ್‌ ಆರಂಭಗೊಳ್ಳುವ ದಿನ ಹತ್ತಿರವಾಗುತ್ತಿದೆ. 17ನೇ ಆವೃತ್ತಿಯ ಪ್ಯಾರಾಲಿಂಪಿಕ್ಸ್‌ ಆಯೋಜಿಸಲು ಪ್ರಣಯದೂರು ಪ್ಯಾರಿಸ್‌ ಸಜ್ಜಾಗಿ ನಿಂತಿದೆ. 

ಆ.28ರಿಂದ ಆರಂಭಗೊಳ್ಳಲಿರುವ ಕ್ರೀಡಾಕೂಟವು ಸೆ.8ರ ವರೆಗೂ ನಡೆಯಲಿದೆ.1960ರಲ್ಲಿ ಮೊದಲ ಬಾರಿ ಪ್ಯಾರಾ ಕ್ರೀಡಾಪಟುಗಳಿಗಾಗಿ ಪ್ಯಾರಾಲಿಂಪಿಕ್ಸ್‌ ಆಯೋಜಿಸಲಾಗಿತ್ತು. ಆ ಬಳಿಕ ಪ್ರತಿ 4 ವರ್ಷಗಳಿಗೊಮ್ಮೆ ಕ್ರೀಡಾಕೂಟ ನಡೆಯುತ್ತಿವೆ. 2020ರಲ್ಲಿ ಜಪಾನ್‌ನ ಟೋಕಿಯೋ ನಗರದಲ್ಲಿ ನಡೆಯಬೇಕಿದ್ದ ಪ್ಯಾರಾಲಿಂಪಿಕ್ಸ್‌ ಕೋವಿಡ್‌ ಕಾರಣಕ್ಕೆ 1 ವರ್ಷ ಮುಂದೂಡಲಾಗಿತ್ತು. 

ಬಳಿಕ 2021ರಲ್ಲಿ ಕ್ರೀಡಾಕೂಟ ನಡೆಸಲಾಗಿತ್ತು. 3 ವರ್ಷಗಳಲ್ಲೇ ಈಗ ಮತ್ತೊಂದು ಪ್ಯಾರಾಲಿಂಪಿಕ್ಸ್‌ಗೆ ಕ್ರೀಡಾಪಟುಗಳು ಸಜ್ಜಾಗುತ್ತಿದ್ದಾರೆ.ಪ್ಯಾರಾಲಿಂಪಿಕ್ಸ್‌ನಲ್ಲಿ ಪಾಲ್ಗೊಳ್ಳಲಿರುವ ಪ್ರತಿಯೊಬ್ಬರೂ ಚಾಂಪಿಯನ್ನರೇ. ಏಕೆಂದರೆ ಅವರೆಲ್ಲಾ ಈಗಾಗಲೇ ತಮ್ಮ ಜೀವನದ ಹೋರಾಟದಲ್ಲಿ ಗೆದ್ದಾಗಿದೆ. ಜಾಗತಿಕ ಮಟ್ಟದ ಕ್ರೀಡಾಕೂಟದಲ್ಲಿ ಸಿಗುವ ಪದಕ ಅವರ ಸಾಧನೆಯ ಕಿರೀಟದ ಮೇಲೆ ಮತ್ತೊಂದು ಗರಿ. 

ಈ ಬಾರಿ ಪ್ಯಾರಾಲಿಂಪಿಕ್ಸ್‌ನಲ್ಲಿ ಅಥ್ಲೆಟಿಕ್ಸ್‌, ಬ್ಯಾಡ್ಮಿಂಟನ್‌, ಸೈಕ್ಲಿಂಗ್‌, ಆರ್ಚರಿ, ಫುಟ್ಬಾಲ್‌, ಜುಡೊ, ಟೇಬಲ್‌ ಟೆನಿಸ್‌, ಈಜು, ಪವರ್‌ಲಿಫ್ಟಿಂಗ್‌ ಸೇರಿದಂತೆ ಒಟ್ಟು 22 ಕ್ರೀಡೆಗಳನ್ನು ಆಡಿಸಲಾಗುತ್ತದೆ. ಇದರಲ್ಲಿ 549 ಸ್ಪರ್ಧೆಗಳು ನಡೆಯಲಿವೆ. ಅಥ್ಲೆಟಿಕ್ಸ್‌ನಲ್ಲಿ ಗರಿಷ್ಠ ಅಂದರೆ 164 ಸ್ಪರ್ಧೆಗಳು ನಡೆಯಲಿದ್ದು, ಈಜಿನಲ್ಲಿ ಒಟ್ಟು 141 ವಿಭಾಗಗಳಲ್ಲಿ ಸ್ಪರ್ಧೆಗಳು ಆಯೋಜನೆಗೊಳ್ಳಲಿವೆ. 184 ದೇಶಗಳ ಅಂದಾಜು 4400ಕ್ಕೂ ಹೆಚ್ಚು ಕ್ರೀಡಾಪಟುಗಳು ಗೇಮ್ಸ್‌ನಲ್ಲಿ ಪಾಲ್ಗೊಳ್ಳಲಿದ್ದಾರೆ.

ಮೊದಲ ಬಾರಿ ಪ್ಯಾರಿಸ್‌ನಲ್ಲಿ ಪ್ಯಾರಾಲಿಂಪಿಕ್ಸ್‌ ಆಯೋಜನೆ

ಪ್ಯಾರಿಸ್‌ ನಗರ ಇದೇ ಮೊದಲ ಬಾರಿಗೆ ಪ್ಯಾರಾಲಿಂಪಿಕ್ಸ್‌ಗೆ ಆತಿಥ್ಯ ವಹಿಸಲಿದೆ. ಫ್ರಾನ್ಸ್‌ನಲ್ಲಿ ನಡೆಯಲಿರುವ 2ನೇ ಪ್ಯಾರಾಲಿಂಪಿಕ್ಸ್ ಇದು. 1992ರಲ್ಲಿ ಟಿಗ್ನೆಸ್‌ ಹಾಗೂ ಆಲ್ಬರ್ಟ್‌ವಿಲ್ಲೆ ನಗರಗಳು ಚಳಿಗಾಲದ ಪ್ಯಾರಾಲಿಂಪಿಕ್ಸ್‌ಗೆ ಆತಿಥ್ಯ ವಹಿಸಿದ್ದವು. ಅಂತಾರಾಷ್ಟ್ರೀಯ ಒಲಿಂಪಿಕ್‌ ಸಂಸ್ಥೆ ಹಾಗೂ ಅಂತಾರಾಷ್ಟ್ರೀಯ ಪ್ಯಾರಾಲಿಂಪಿಕ್‌ ಸಂಸ್ಥೆಗಳ ನಡುವಿನ ಒಪ್ಪಂದದ ಪ್ರಕಾರ, ಒಲಿಂಪಿಕ್ಸ್‌ ಆಯೋಜಿಸುವ ನಗರವೇ ಪ್ಯಾರಾಲಿಂಪಿಕ್ಸ್‌ಗೂ ಆತಿಥ್ಯ ವಹಿಸಬೇಕು. ಹೀಗಾಗಿ, ಪ್ಯಾರಿಸ್‌ ನಗರಕ್ಕೆ ಒಲಿಂಪಿಕ್ಸ್‌ ಆತಿಥ್ಯ ಹಕ್ಕು ಸಿಕ್ಕಾಗಲೇ ಪ್ಯಾರಾಲಿಂಪಿಕ್ಸ್‌ನ ಆತಿಥ್ಯ ಹಕ್ಕು ಸಹ ದೊರೆತಿತ್ತು.

ಚೀನಾದಿಂದ ಗರಿಷ್ಠ 284 ಕ್ರೀಡಾಪಟುಗಳು ಭಾಗಿ

ಈ ಬಾರಿ ಪ್ಯಾರಾಲಿಂಪಿಕ್ಸ್‌ನಲ್ಲಿ ಚೀನಾದಿಂದ ಗರಿಷ್ಠ ಅಂದರೆ 284 ಅಥ್ಲೀಟ್‌ಗಳು ಪಾಲ್ಗೊಳ್ಳಲಿದ್ದಾರೆ. ಅಮೆರಿಕ ತನ್ನ 225 ಅಥ್ಲೀಟ್‌ಗಳನ್ನು ಪ್ಯಾರಿಸ್‌ಗೆ ಕಳುಹಿಸಲಿದ್ದು, ಆತಿಥೇಯ ಫ್ರಾನ್ಸ್‌ನ 237 ಮಂದಿ ಕ್ರೀಡಾಕೂಟದಲ್ಲಿ ಸ್ಪರ್ಧಿಸಲಿದ್ದಾರೆ. ಗ್ರೇಟ್‌ ಬ್ರಿಟನ್‌ನ 215 ಅಥ್ಲೀಟ್‌ಗಳು ಕಣಕ್ಕಿಳಿಯಲಿದ್ದು, ಭಾರತದ ಸಾರ್ವಕಾಲಿಕ ಶ್ರೇಷ್ಠ 84 ಅಥ್ಲೀಟ್‌ಗಳು ಪಾಲ್ಗೊಳ್ಳಲಿದ್ದಾರೆ.

22 ಕ್ರೀಡೆ: 2020ರ ಟೋಕಿಯೋ ಪ್ಯಾರಾ ಗೇಮ್ಸ್‌ನಂತೆ ಈ ಸಲವೂ 22 ಕ್ರೀಡೆಗಳ 549 ಸ್ಪರ್ಧೆಗಳು ನಡೆಯಲಿವೆ.

12 ದಿನ: 17ನೇ ಆವೃತ್ತಿಯ ಪ್ಯಾರಿಸ್‌ ಪ್ಯಾರಾಲಿಂಪಿಕ್ಸ್‌ ಒಟ್ಟು 12 ದಿನಗಳ ಕಾಲ ನಡೆಯಲಿದೆ.

PREV
Get the latest sports news in Kannada (ಕ್ರೀಡಾ ಸುದ್ದಿ) — live cricket scores, football highlights, tennis, badminton, and updates on all major sports events. Stay ahead with Kannada Prabha’s full-coverage sports reporting.

Recommended Stories

ಟಿ20 ವಿಶ್ವಕಪ್‌ನಿಂದ ಉಪನಾಯಕ ಗಿಲ್‌ಗೆ ಗೇಟ್‌ಪಾಸ್‌, ಕಿಶನ್ ಆಯ್ಕೆ!
ಶಿಕ್ಷಕ ತಂದೆಗೆ ₹12 ಸಾವಿರ ವೇತನ, ಮಗನಿಗೆ ₹14.2 ಕೋಟಿ!