ಅಹಮದಾಬಾದ್: ಕಳೆದೆರಡು ಆವೃತ್ತಿಗಳಲ್ಲಿ ಫೈನಲ್‌ಗೇರಿದ್ದರೂ ಈ ಬಾರಿ ಐಪಿಎಲ್‌ನಲ್ಲಿ ಅಸ್ಥಿರ ಆಟವಾಡುತ್ತಿರುವ ಮಾಜಿ ಚಾಂಪಿಯನ್ ಗುಜರಾತ್ ಮತ್ತೊಮ್ಮೆ ಹೀನಾಯವಾಗಿ ಸೋತು ಸುಣ್ಣವಾಗಿದೆ. ಡೆಲ್ಲಿ ಕ್ಯಾಪಿಟಲ್ಸ್ ಬೌಲರ್‌ಗಳ ಮಾರಕ ದಾಳಿ ಮುಂದೆ ಅಕ್ಷರಶಃ ತತ್ತರಿಸಿದ ಗುಜರಾತ್, ಬುಧವಾರದ ಪಂದ್ಯದಲ್ಲಿ 6 ವಿಕೆಟ್ ಸೋಲನುಭವಿಸಿತು.
ಡೆಲ್ಲಿ ತಾನಾಡಿದ 7 ಪಂದ್ಯಗಳಲ್ಲಿ 3ನೇ ಗೆಲುವು ದಾಖಲಿಸಿದರೆ, ಗುಜರಾತ್ 7ರಲ್ಲಿ 4ನೇ ಸೋಲನುಭವಿಸಿತು.ಟಾಸ್ ಗೆದ್ದು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡ ಡೆಲ್ಲಿ ಪವರ್-ಪ್ಲೇ ವೇಳೆಗಾಗಲೇ ಪಂದ್ಯದ ಮೇಲೆ ಸಂಪೂರ್ಣ ಹಿಡಿತ ಸಾಧಿಸಿತ್ತು. ತೀವ್ರ ಬ್ಯಾಟಿಂಗ್ ವೈಫಲ್ಯಕ್ಕೆ ಒಳಗಾದ ತಂಡ 17.3 ಓವರಲ್ಲಿ 89 ರನ್‌ಗೆ ಸರ್ವಪತನ ಕಂಡಿತು. ಸುಲಭ ಗುರಿಯನ್ನು ಬೆನ್ನತ್ತುವಾಗ ಡೆಲ್ಲಿ ಸತತ ವಿಕೆಟ್ ಕಳೆದುಕೊಂಡರೂ ಯಾವುದೇ ಆತಂಕಕ್ಕೆ ಒಳಗಾಗಲಿಲ್ಲ.
ಜೇಕ್ ಫ್ರೇಸರ್ 10 ಎಸೆತಗಳಲ್ಲಿ 20 ರನ್ ಸಿಡಿಸಿ ಔಟಾದ ಬಳಿಕ, ಪೃಥ್ವಿ ಶಾ(7), ಅಭಿಷೇಕ್ ಪೊರೆಲ್(15) ಹಾಗೂ ಶಾಯ್ ಹೋಪ್(19) ಬಂದಷ್ಟೇ ವೇಗದಲ್ಲಿ ಪೆವಿಲಿಯನ್‌ಗೆ ಮರಳಿದರು.
ಆದರೆ ರಿಷಭ್ ಪಂತ್(11 ಎಸೆತಗಳಲ್ಲಿ 16) ತಂಡವನ್ನು 8.5 ಓವರಲ್ಲಿ ಗೆಲುವಿನ ದಡ ಸೇರಿಸಿದರು.ಮಹಾಪತನ: 2ನೇ ಓವರ್‌ನ 5ನೇ ಎಸೆತದಲ್ಲಿ ಶುಭ್‌ಮನ್ ಗಿಲ್(08) ವಿಕೆಟ್ ಬಿದ್ದ ಬಳಿಕ ಗುಜರಾತ್ ಚೇತರಿಸಿಕೊಳ್ಳಲೇ ಇಲ್ಲ. ಪವರ್-ಪ್ಲೇ ಮುಕ್ತಾಯಕ್ಕೂ ಮುನ್ನ ಸಾಹ(02), ಸಾಯಿ ಸುದರ್ಶನ್(12) ಹಾಗೂ ಡೇವಿಡ್ ಮಿಲ್ಲರ್(02) ವಿಕೆಟ್ ಕಳೆದುಕೊಂಡ ತಂಡ ಅದಾಗಲೇ ಸೋಲಿನ ಸುಳಿಗೆ ಸಿಲುಕಿತ್ತು. ಬಳಿಕ ರಶೀದ್ ಖಾನ್ 24 ಎಸೆತಗಳಲ್ಲಿ 31 ರನ್ ಸಿಡಿಸಿದ್ದರಿಂದ ತಂಡ 80ರ ಗಡಿ ದಾಟಿತು.
ಮುಕೇಶ್ ಕುಮಾರ್ 14 ರನ್‌ಗೆ 3, ಇಶಾಂತ್ ಶರ್ಮಾ ಹಾಗೂ ಟ್ರಿಸ್ಟನ್ ಸ್ಟಬ್ಸ್ ತಲಾ 2 ವಿಕೆಟ್ ಕಿತ್ತರು.ಸ್ಕೋರ್: ಗುಜರಾತ್ 17.3 ಓವರಲ್ಲಿ 89/10 (ರಶೀದ್ 31, ಮುಕೇಶ್ 3-14, ಇಶಾಂತ್ 2-8, ಸ್ಟಬ್ಸ್ 2-11), ಡೆಲ್ಲಿ 8.5 ಓವರಲ್ಲಿ 92/4 (ಫ್ರೇಸರ್ 20, ಹೋಪ್ 19, ಸಂದೀಪ್ 2-40) ಪಂದ್ಯಶ್ರೇಷ್ಠ: ರಿಷಭ್ ಪಂತ್
01ನೇ ಬಾರಿ: ಗುಜರಾತ್ ತಂಡ ಐಪಿಎಲ್‌ನಲ್ಲಿ 100ಕ್ಕಿಂತ ಕಡಿಮೆ ಮೊತ್ತಕ್ಕೆ ಆಲೌಟಾಗಿದ್ದು ಇದೇ ಮೊದಲು