ಸೆ.5ರಿಂದ ಬೆಂಗ್ಳೂರಲ್ಲಿ ದುಲೀಪ್‌ ಟ್ರೋಫಿ ಕ್ರಿಕೆಟ್‌: ಸ್ಟಾರ್‌ ಆಟಗಾರರು ಕಣಕ್ಕೆ

KannadaprabhaNewsNetwork |  
Published : Aug 13, 2024, 12:52 AM ISTUpdated : Aug 13, 2024, 04:14 AM IST
ಕಳೆದ ವರ್ಷ ಚಾಂಪಿಯನ್‌ ದಕ್ಷಿಣ ವಲಯ ತಂಡ | Kannada Prabha

ಸಾರಾಂಶ

ಒಂದು ಪಂದ್ಯಕ್ಕೆ ಬೆಂಗ್ಳೂರು, ಇನ್ನುಳಿದ ಪಂದ್ಯಗಳಿಗೆ ಆಂಧ್ರ ಆತಿಥ್ಯ. ರಾಹುಲ್‌, ಪಂತ್‌, ಸೂರ್ಯ, ಶುಭ್‌ಮನ್‌ ಸೇರಿ ಪ್ರಮುಖರು ಕಣಕ್ಕೆ. ಕೊಹ್ಲಿ, ರೋಹಿತ್‌ಗೆ ವಿಶ್ರಾಂತಿ. ವೇಗಿ ಶಮಿ, ಇಶಾನ್‌ ಕಿಶನ್‌ ಕಮ್‌ಬ್ಯಾಕ್ ನಿರೀಕ್ಷೆ. 6 ತಂಡಗಳ ಬದಲು ಈ ಬಾರಿ 4 ತಂಡಗಳ ಹಣಾಹಣಿ

ಬೆಂಗಳೂರು: ಈ ಬಾರಿ ದುಲೀಪ್‌ ಟ್ರೋಫಿ ದೇಸಿ ಕ್ರಿಕೆಟ್‌ ಟೂರ್ನಿಗೆ ಸೆ.5ರಂದು ಬೆಂಗಳೂರಿನಲ್ಲಿ ಚಾಲನೆ ಸಿಗಲಿದೆ. 4 ತಂಡಗಳ ನಡುವಿನ ಟೂರ್ನಿ ಈ ಮೊದಲು ಆಂಧ್ರಪ್ರದೇಶದ ಅನಂತಪುರದಲ್ಲಿ ನಿಗದಿಯಾಗಿತ್ತು. 

ಆದರೆ ಮೊದಲ ಪಂದ್ಯದಲ್ಲಿ ತಾರಾ ಆಟಗಾರರು ಪಾಲ್ಗೊಳ್ಳುವ ಕಾರಣ ಪಂದ್ಯವನ್ನು ನಗರದ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಸಲು ಬಿಸಿಸಿಐ ನಿರ್ಧರಿಸಿದೆ.ಈ ಬಾರಿ ಟೂರ್ನಿಯಲ್ಲಿ ಹಲವು ತಾರಾ ಆಟಗಾರರು ಕಣಕ್ಕಿಳಿಯುವ ನಿರೀಕ್ಷೆಯಿದ್ದರೂ, ವಿರಾಟ್‌ ಕೊಹ್ಲಿ ಹಾಗೂ ರೋಹಿತ್‌ ಶರ್ಮಾ ಗೈರಾಗಲಿದ್ದಾರೆ. 

ವೇಗಿ ಜಸ್‌ಪ್ರೀತ್‌ ಬೂಮ್ರಾ, ಸ್ಪಿನ್ನರ್‌ ಆರ್‌.ಅಶ್ವಿನ್‌ ಕೂಡಾ ಟೂರ್ನಿಗೆ ಅಲಭ್ಯರಾಗಲಿದ್ದಾರೆ. ಇವರೆಲ್ಲರೂ ಸೆ.19ರಿಂದ ಬಾಂಗ್ಲಾದೇಶ ವಿರುದ್ಧ ಆರಂಭಗೊಳ್ಳಲಿರುವ 2 ಪಂದ್ಯಗಳ ಟೆಸ್ಟ್‌ ಸರಣಿಯಲ್ಲಿ ಪಾಲ್ಗೊಳ್ಳಲಿರುವ ಕಾರಣ ದೇಸಿ ಟೂರ್ನಿಯಿಂದ ವಿನಾಯಿತಿ ನೀಡಲಾಗಿದೆ.ಉಳಿದಂತೆ ಕೆ.ಎಲ್‌.ರಾಹುಲ್‌, ರಿಷಭ್‌ ಪಂತ್‌, ಸೂರ್ಯಕುಮಾರ್‌ ಯಾದವ್‌, ರವೀಂದ್ರ ಜಡೇಜಾ, ಶುಭ್‌ಮನ್‌ ಗಿಲ್‌, ಶ್ರೇಯಸ್‌ ಅಯ್ಯರ್‌, ಕುಲ್ದೀಪ್‌ ಯಾದವ್‌ ಸೇರಿ ಹಲವು ಆಟಗಾರರು ದುಲೀಪ್‌ ಟ್ರೋಫಿಯಲ್ಲಿ ಆಡಲಿದ್ದಾರೆ ಎಂದು ತಿಳಿದುಬಂದಿದೆ. 

ಶಮಿ ಕಮ್‌ಬ್ಯಾಕ್‌?: ಕಳೆದ ವರ್ಷ ಏಕದಿನ ವಿಶ್ವಕಪ್‌ನಲ್ಲಿ ಕೊನೆ ಬಾರಿ ಭಾರತವನ್ನು ಪ್ರತಿನಿಧಿಸಿದ್ದ ವೇಗಿ ಮೊಹಮದ್‌ ಶಮಿ ಟೂರ್ನಿ ಮೂಲಕ ಮತ್ತೆ ಕಮ್‌ಬ್ಯಾಕ್‌ ಮಾಡುವ ನಿರೀಕ್ಷೆಯಿದೆ. ದೀರ್ಘ ಕಾಲದಿಂದ ಭಾರತ ತಂಡ ಹಾಗೂ ದೇಸಿ ಕ್ರಿಕೆಟ್‌ನಿಂದ ದೂರ ಉಳಿದಿರುವ ವಿಕೆಟ್‌ ಕೀಪರ್‌ ಬ್ಯಾಟ್ಸ್‌ಮನ್‌ ಇಶಾನ್‌ ಕಿಶನ್‌ ಕೂಡಾ ಆಯ್ಕೆಗೆ ಲಭ್ಯವಿರುವ ಬಗ್ಗೆ ವರದಿಯಾಗಿದೆ.

ಈ ಸಲ ವಲಯಗಳ ಬದಲು ಭಾರತದ 4 ತಂಡದ ಸ್ಪರ್ಧೆ

ಸಾಮಾನ್ಯವಾಗಿ ದುಲೀಪ್‌ ಟ್ರೋಫಿ 6 ವಲಯಗಳ ನಡುವೆ ನಡೆಯುತ್ತವೆ. ಉತ್ತರ, ದಕ್ಷಿಣ, ಪೂರ್ವ, ಪಶ್ಚಿಮ, ಕೇಂದ್ರ ಹಾಗೂ ಈಶಾನ್ಯ ತಂಡಗಳು ಕಣಕ್ಕಿಳಿಯುತ್ತವೆ. ಆದರೆ ಈ ಬಾರಿ ತಂಡಗಳ ಸಂಖ್ಯೆ 4ಕ್ಕೆ ಇಳಿಸಲಾಗಿದೆ. ಭಾರತ ‘ಎ’, ಭಾರತ ‘ಬಿ’, ಭಾರತ ‘ಸಿ’ ಹಾಗೂ ಭಾರತ ‘ಡಿ’ ಎಂದು ವಿಂಗಡಿಸಲಾಗಿದೆ. ಆಟಗಾರರನ್ನು ಬಿಸಿಸಿಐ ಆಯ್ಕೆ ಸಮಿತಿಯೇ ಆಯ್ಕೆ ಮಾಡಲಿದೆ. ಕಳೆದ ಬಾರಿ ನಡೆದಿದ್ದ ಟೂರ್ನಿಯಲ್ಲಿ ದಕ್ಷಿಣ ವಲಯ ತಂಡ ಚಾಂಪಿಯನ್‌ ಆಗಿತ್ತು. ಫೈನಲ್‌ ಪಂದ್ಯಕ್ಕೆ ಚಿನ್ನಸ್ವಾಮಿ ಕ್ರೀಡಾಂಗಣ ಆತಿಥ್ಯ ವಹಿಸಿತ್ತು.

ಟೂರ್ನಿ ಮಾದರಿ ಹೇಗೆ?

ಟೂರ್ನಿಯ 4 ತಂಡಗಳು ರೌಂಡ್‌ ರಾಬಿನ್‌ ಮಾದರಿಯಲ್ಲಿ 1 ಬಾರಿ ಪರಸ್ಪರ ಮುಖಾಮುಖಿಯಾಗಲಿವೆ. ಲೀಗ್‌ ಹಂತದ ಮುಕ್ತಾಯಕ್ಕೆ ಅಗ್ರಸ್ಥಾನ ಪಡೆದ ತಂಡವನ್ನು ಚಾಂಪಿಯನ್ ಎಂದು ಘೋಷಿಸಲಾಗುತ್ತದೆ. ಟೂರ್ನಿಯಲ್ಲಿ ಒಟ್ಟು 6 ಪಂದ್ಯಗಳು ನಡೆಯಲಿವೆ.

ಟೂರ್ನಿ ನೋಡಿ ಬಾಂಗ್ಲಾ ಸರಣಿಗೆ ತಂಡದ ಆಯ್ಕೆ

ದುಲೀಪ್‌ ಟ್ರೋಫಿ ಸೆ.22ಕ್ಕೆ ಮುಕ್ತಾಯಗೊಳ್ಳಲಿದೆ. ಇದಕ್ಕೂ ಮುನ್ನವೇ ಅಂದರೆ ವಿರುದ್ಧ ಸೆ.19ರಿಂದ ಬಾಂಗ್ಲಾ ಸರಣಿ ಆರಂಭಗೊಳ್ಳಲಿದೆ. ದುಲೀಪ್‌ ಟ್ರೋಫಿಯ ಮೊದಲ 2 ಹಂತದ ಪಂದ್ಯಗಳಲ್ಲಿ ನೀಡಿದ ಪ್ರದರ್ಶನ ನೋಡಿ ಬಾಂಗ್ಲಾ ಸರಣಿಗೆ ತಂಡ ಆಯ್ಕೆ ಮಾಡಿಕೊಳ್ಳಲು ಬಿಸಿಸಿಐ ನಿರ್ಧರಿಸಿದೆ ಎಂದು ತಿಳಿದುಬಂದಿದೆ.

PREV

Recommended Stories

ಸದ್ಯಕ್ಕೆ ನಿಲ್ಲಲ್ಲ ‘ನೋ ಶೇಕ್‌ ಹ್ಯಾಂಡ್‌’ ವಾರ್‌! ಪಾಕಿಸ್ತಾನ ಆಕ್ಷೇಪ
ಕ್ರಿಕೆಟ್‌ ವಾರ್‌ನಲ್ಲೂ ಭಾರತಕ್ಕೆ ಶರಣಾದ ಪಾಕ್‌