ದುಬೈ: 2025ರ ಚಾಂಪಿಯನ್ಸ್ ಟ್ರೋಫಿಯ ತನ್ನ ಪಂದ್ಯಗಳನ್ನು ಪಾಕಿಸ್ತಾನದ ಹೊರಗಡೆ ನಡೆಸಬೇಕೆಂಬ ಭಾರತದ ಒತ್ತಾಯಕ್ಕೆ ಪಾಕ್ ಕ್ರಿಕೆಟ್ ಮಂಡಳಿ(ಪಿಸಿಬಿ) ಮಣಿದಿದೆ. ಟೂರ್ನಿಯನ್ನು ಹೈಬ್ರಿಡ್ ಮಾದರಿಯಲ್ಲಿ ನಡೆಸಲು ಕೆಲ ಷರತ್ತುಗಳೊಂದಿಗೆ ಒಪ್ಪಿಗೆ ಸೂಚಿಸಿದೆ ಎಂದು ಮಾಧ್ಯಮಗಳಲ್ಲಿ ವರದಿಯಾಗಿದೆ.
ಪಿಸಿಬಿ ಮುಖ್ಯಸ್ಥ ಮೊಹ್ಸಿನ್ ನಖ್ವಿ ಕೂಡಾ ಈ ಬಗ್ಗೆ ಸುಳಿವು ನೀಡಿದ್ದಾರೆ.ಟೂರ್ನಿ ಆತಿಥ್ಯ ಹಕ್ಕು ಪಾಕ್ ಬಳಿ ಇದ್ದರೂ, ಪಾಕ್‌ನಲ್ಲಿ ಆಡಲ್ಲ ಎಂದು ಭಾರತ ಸ್ಪಷ್ಟಪಡಿಸಿತ್ತು. ಆದರೆ ಟೂರ್ನಿ ಸಂಪೂರ್ಣವಾಗಿ ಪಾಕ್‌ನಲ್ಲೇ ನಡೆಸುತ್ತೇವೆ ಎಂದು ಪಿಸಿಬಿ ಪಟ್ಟುಹಿಡಿದಿತ್ತು.
ಹೀಗಾಗಿ ಐಸಿಸಿ ಶುಕ್ರವರಾ ವರ್ಚುವಲ್ ಸಭೆ ಕರೆದಿತ್ತು. ಸೂಕ್ತ ನಿರ್ಧಾರಕ್ಕೆ ಬರಲಾಗದೆ ಸಭೆ ಶನಿವಾರಕ್ಕೆ ಮುಂದೂಡಲಾಗಿತ್ತು.ಶನಿವಾರ ಸಭೆಯಲ್ಲಿ ಪಿಸಿಬಿ ಹೈಬ್ರಿಡ್ ಮಾದರಿಯಲ್ಲಿ ಅಂದರೆ ಭಾರತದ ಪಂದ್ಯಗಳನ್ನು ಪಾಕ್‌ನ ಹೊರಗಡೆ ನಡೆಸಲು ಸಮ್ಮತಿಸಿದೆ ಎಂದು ತಿಳಿದುಬಂದಿದೆ. ಆದರೆ ಐಸಿಸಿ ಮುಂದೆ 2 ಷರತ್ತುಗಳನ್ನಿಟ್ಟಿರುವ ಪಿಸಿಬಿ, ಇದಕ್ಕೆ ಒಪ್ಪಿದರೆ ಮಾತ್ರ ಟೂರ್ನಿಯನ್ನು ಹೈಬ್ರಿಡ್ ಮಾದರಿಯಲ್ಲಿ ನಡೆಸುತ್ತೇವೆ ಎಂದು ತಿಳಿಸಿದ್ದಾಗಿ ವರದಿಯಾಗಿದೆ.
ಕ್ರಿಕೆಟ್ ಗೆಲ್ಲಬೇಕು:
ಸಭೆ ಬಳಿಕ ಮಾತನಾಡಿದ ಪಿಸಿಬಿ ಮುಖ್ಯಸ್ಥ ನಖ್ವಿ, ‘ನಮ್ಮ ಬೇಡಿಕೆಯನ್ನು ಐಸಿಸಿಗೆ ತಿಳಿಸಿದ್ದೇವೆ. ಕ್ರಿಕೆಟ್ ಗೆಲ್ಲಬೇಕು. ಹೀಗಾಗಿ ಸೂಕ್ತ ನಿರ್ಧಾರವನ್ನೇ ಕೈಗೊಳ್ಳುತ್ತೇವೆ’ ಎಂದಿದ್ದಾರೆ. ಹೈಬ್ರಿಡ್ ಮಾದರಿಗೆ ಒಪ್ಪಿಗೆ ನೀಡಿದ್ದೀರಾ ಎಂಬ ಪತ್ರಕರ್ತರ ಪ್ರಶ್ನೆಗೆ, ‘ಏನೆಲ್ಲಾ ಆಗುತ್ತೋ ಗೊತ್ತಾಗಲಿದೆ. ನಾವು ಭಾರತಕ್ಕೆ ತೆರಳಿ, ಭಾರತ ತಂಡ ಪಾಕ್‌ಗೆ ಬರದೇ ಇರುವುದು ಸರಿಯಲ್ಲ. ಎಲ್ಲವೂ ಸಮಾನವಾಗಿ ನಿರ್ಧಾರವಾಗಬೇಕು’ ಎಂದಿದ್ದಾರೆ.
ಪಿಸಿಬಿ ಷರತ್ತುಗಳೇನು?
1. 2031ರ ವರೆಗೆ ಭಾರತದಲ್ಲಿ ನಡೆಯಲಿರುವ ಐಸಿಸಿ ಟೂರ್ನಿಯ ತನ್ನ ಪಂದ್ಯಗಳನ್ನು ಹೈಬ್ರಿಡ್ ಮಾದರಿ(ಭಾರತದ ಹೊರಗಡೆ)ಯಲ್ಲಿ ನಡೆಸಬೇಕು. (2026ರ ಟಿ20 ವಿಶ್ವಕಪ್, 2029ರ ಚಾಂಪಿಯನ್ಸ್ ಟ್ರೋಫಿ, 2031 ಏಕದಿನ ವಿಶ್ವಕಪ್)2. ಐಸಿಸಿ ವಾರ್ಷಿಕ ಆದಾಯದಲ್ಲಿ ತನಗೆ ಸಿಗುತ್ತಿರುವ ಪಾಲು ಹೆಚ್ಚಿಸಬೇಕು. (ಸದ್ಯ ಪಿಸಿಬಿಗೆ ಶೇ.5.75ರಷ್ಟು ಆದಾಯ ಬರುತ್ತಿದೆ. ಬಿಸಿಸಿಐಗೆ ಶೇ.38.5 ಆದಾಯ ಲಭಿಸುತ್ತಿದೆ.)