ಮಂಗೋಲಿಯಾದಲ್ಲಿ ನಡೆದ ಅಂಡರ್-16 ಏಷ್ಯಾಕಪ್ ಬಾಸ್ಕೆಟ್‌ಬಾಲ್ ಟೂರ್ನಿಯಲ್ಲಿ ಚಾಂಪಿಯನ್ ಆದ ಆಸ್ಟ್ರೇಲಿಯಾ ತಂಡಕ್ಕೆ ಫಿಬಾ ಏಷ್ಯಾ ಅಧ್ಯಕ್ಷ, ಕರ್ನಾಟಕದ ಡಾ.ಕೆ.ಗೋವಿಂದರಾಜು ಪ್ರಶಸ್ತಿ ವಿತರಿಸಿದರು. ಫೈನಲ್‌ನಲ್ಲಿ ಆಸ್ಟ್ರೇಲಿಯಾ ತಂಡ ಚೀನಾ ವಿರುದ್ಧ ಜಯಿಸಿತು.
ಹಾಂಕಾಂಗ್ ಬ್ಯಾಡ್ಮಿಂಟನ್:
ಸಾತ್ವಿಕ್-ಚಿರಾಗ್ ಶುಭಾರಂಭಹಾಂಕಾಂಗ್: ಮಂಗಳವಾರದಿಂದ ಆರಂಭವಾದ ಹಾಂಕಾಂಗ್ ಸೂಪರ್ 500 ಬ್ಯಾಡ್ಮಿಂಟನ್ ಟೂರ್ನಿಯ ಪುರುಷರ ಡಬಲ್ಸ್ ವಿಭಾಗದಲ್ಲಿ ಭಾರತದ ತಾರಾ ಜೋಡಿ ಸಾತ್ವಿಕ್ ಮತ್ತು ಚಿರಾಗ್ ಶೆಟ್ಟಿ ಶುಭಾರಂಭ ಮಾಡಿದೆ. ಸಾತ್ವಿಕ್-ಚಿರಾಗ್ 1ನೇ ಸುತ್ತಿನಲ್ಲಿ ತೈವಾನ್‌ನ ಚಿಯು ಹ್ಸಿಯಾಂಗ್ ಮತ್ತು ವಾಂಗ್ ಚಿ-ಲಿನ್‌ರನ್ನು 21-13, 18-21, 21-10 ಗೇಮ್‌ಗಳಲ್ಲಿ ಸೋಲಿಸಿದರು. ಇದೇ ವೇಳೆ ಕಿರಣ್ ಜಾರ್ಜ್ ಅರ್ಹತಾ ಸುತ್ತಿನಲ್ಲಿ ಜಯಿಸಿ ಪ್ರಧಾನ ಸುತ್ತಿಗೆ ಪ್ರವೇಶಿಸಿದ್ದಾರೆ.
ಆರ್ಚರಿ ವಿಶ್ವ ಕೂಟ:
ಕಂಚಿಗೆ ಭಾರತ ಸೆಣಸುಗ್ವಾಂಗ್ಝು (ದ.ಕೊರಿಯಾ): ಇಲ್ಲಿ ನಡೆಯುತ್ತಿರುವ ಆರ್ಚರಿ ವಿಶ್ವ ಚಾಂಪಿಯನ್‌ಶಿಪ್‌ನ ರೀಕರ್ವ್ ವಿಭಾಗದಲ್ಲಿ ಭಾರತದ ಮಹಿಳಾ ತಂಡ ಕಂಚಿನ ಪದಕದ ಪಂದ್ಯಕ್ಕೆ ಅರ್ಹತೆ ಪಡೆದಿದೆ. ಆದರೆ ಪುರುಷರ ತಂಡ ಮೊದಲ ಸುತ್ತಿನಲ್ಲೇ ಹೊರಬಿದ್ದರೆ, ಕಾಂಪೌಂಡ್ ವಿಭಾಗದಲ್ಲಿ ಭಾರತೀಯ ಆರ್ಚರ್‌ಗಳು ಪದಕ ಗೆಲ್ಲಲು ವಿಫಲರಾದರು. ದೀಪಿಕಾ ಕುಮಾರಿ, ಅಂಕಿತಾ ಭಕತ್ ಹಾಗೂ 15ರ ಗಥಾ ಖಾಡ್ಕೆ ಅವರನ್ನೊಳಗೊಂಡ ಮಹಿಳಾ ತಂಡ ಸೆಮಿಫೈನಲ್‌ನಲ್ಲಿ ಜಪಾನ್ ವಿರುದ್ಧ 2-6ರಲ್ಲಿ ಸೋಲುಂಡಿತು. ಕಂಚಿಗಾಗಿ ಭಾರತ, ದ.ಕೊರಿಯಾ ವಿರುದ್ಧ ಆಡಲಿದೆ.
ವಿಶ್ವ ಬಾಕ್ಸಿಂಗ್ ಕೂಟ:
ನಿಖತ್ ಕ್ವಾರ್ಟರ್‌ಗೆ ಲಗ್ಗೆಲಿವರ್‌ಪೂಲ್: ಎರಡು ಬಾರಿಯ ವಿಶ್ವ ಚಾಂಪಿಯನ್ ನಿಖತ್ ಜರೀನ್ ಅವರು ಇಲ್ಲಿ ನಡೆಯುತ್ತಿರುವ ವಿಶ್ವ ಬಾಕ್ಸಿಂಗ್ ಚಾಂಪಿಯನ್‌ಶಿಪ್‌ನಲ್ಲಿ ಮಹಿಳೆಯರ 51 ಕೇಜಿ ವಿಭಾಗದ ಕ್ವಾರ್ಟರ್ ಫೈನಲ್ ಪ್ರವೇಶಿಸಿದ್ದಾರೆ. ಅಂತಿಮ 16ರ ಸುತ್ತಿನಲ್ಲಿ ನಿಖತ್, ಜಪಾನ್‌ನ ಯುಮಾ ನಿಶಿನಾಕಾ ವಿರುದ್ಧ 5-0 ಅಂತರದಲ್ಲಿ ಜಯಿಸಿ, ಅಂತಿಮ-8ರ ಸುತ್ತಿಗೆ ಪ್ರವೇಶಿಸಿದರು. ನಿಖತ್ ಮುಂದಿನ ಸುತ್ತಿನಲ್ಲಿ 2 ಬಾರಿ ಒಲಿಂಪಿಕ್ ಬೆಳ್ಳಿ ವಿಜೇತೆ ಟರ್ಕಿಯ ಬುಸೆ ನಾಜ್ ಕಾಕಿರೋಗ್ಲು ಅವರನ್ನು ಎದುರಿಸಲಿದ್ದಾರೆ. ಪುರುಷರ ವಿಭಾಗದಲ್ಲಿ ಭಾರತಕ್ಕೆ ಹಿನ್ನಡೆ ಉಂಟಾಯಿತು. ಸುಮಿತ್ ಕುಂಡು(75 ಕೆ.ಜಿ.), ಸಚಿನ್ ಸಿವಾಚ್ (60 ಕೆ.ಜಿ.) ಹಾಗೂ ನರೇಂದರ್ ಬೆರ್ವಾಲ್ (90+ ಕೆ.ಜಿ.) ಪ್ರಿ ಕ್ವಾರ್ಟರ್‌ನಲ್ಲಿ ಸೋತು ಹೊರಬಿದ್ದರು.