ತವರಿನಲ್ಲಿ ಆರ್‌ಸಿಬಿಗಿಂದು ಕೊನೆ ಲೀಗ್‌ ಪಂದ್ಯ

Published : Apr 24, 2026, 12:36 PM IST
RCB

ಸಾರಾಂಶ

ಹಾಲಿ ಚಾಂಪಿಯನ್‌ ಆರ್‌ಸಿಬಿ ತಂಡ ಈ ಬಾರಿ ಐಪಿಎಲ್‌ನಲ್ಲಿ ತನ್ನ ತವರು ಕ್ರೀಡಾಂಗಣ ಚಿನ್ನಸ್ವಾಮಿಯಲ್ಲಿ ಶುಕ್ರವಾರ ಕೊನೆ ಲೀಗ್‌ ಪಂದ್ಯವಾಡಲಿದೆ. ತಂಡಕ್ಕೆ ಗುಜರಾತ್‌ ಟೈಟಾನ್ಸ್‌ ಸವಾಲು ಎದುರಾಗಲಿದ್ದು, ಗೆಲುವಿನ ಮೂಲಕ ಚಿನ್ನಸ್ವಾಮಿಗೆ ವಿದಾಯ ಹೇಳಲು ಕಾಯುತ್ತಿದೆ.

  ಬೆಂಗಳೂರು  : ಹಾಲಿ ಚಾಂಪಿಯನ್‌ ಆರ್‌ಸಿಬಿ ತಂಡ ಈ ಬಾರಿ ಐಪಿಎಲ್‌ನಲ್ಲಿ ತನ್ನ ತವರು ಕ್ರೀಡಾಂಗಣ ಚಿನ್ನಸ್ವಾಮಿಯಲ್ಲಿ ಶುಕ್ರವಾರ ಕೊನೆ ಲೀಗ್‌ ಪಂದ್ಯವಾಡಲಿದೆ. ತಂಡಕ್ಕೆ ಗುಜರಾತ್‌ ಟೈಟಾನ್ಸ್‌ ಸವಾಲು ಎದುರಾಗಲಿದ್ದು, ಗೆಲುವಿನ ಮೂಲಕ ಚಿನ್ನಸ್ವಾಮಿಗೆ ವಿದಾಯ ಹೇಳಲು ಕಾಯುತ್ತಿದೆ. ಈ ಪಂದ್ಯದ ಬಳಿಕ ಆರ್‌ಸಿಬಿ ತನ್ನ 2ನೇ ತವರು ಕ್ರೀಡಾಂಗಣ ರಾಯ್ಪುರದಲ್ಲಿ ಮುಖ ಮಾಡಲಿದೆ.

ಆರ್‌ಸಿಬಿ ಈ ವರ್ಷ ಚಿನ್ನಸ್ವಾಮಿಯಲ್ಲಿ ಆಡಿದ 4 ಪಂದ್ಯಗಳ ಪೈಕಿ 3ರಲ್ಲಿ ಗೆದ್ದಿದೆ. ತನ್ನ ಕೊನೆ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್‌ ವಿರುದ್ಧ ಸೋತಿದ್ದ ತಂಡ ಈಗ ಗೆಲುವಿನ ಹಳಿಗೆ ಮರಳುವ ಕಾತರದಲ್ಲಿದ್ದು, ಒಟ್ಟಾರೆ 5ನೇ ಗೆಲುವಿನ ಮೂಲಕ ಅಂಕಪಟ್ಟಿಯಲ್ಲಿ ಮತ್ತೆ 2ನೇ ಸ್ಥಾನಕ್ಕೇರುವ ವಿಶ್ವಾಸದಲ್ಲಿದೆ. ಮತ್ತೊಂದೆಡೆ ಗುಜರಾತ್‌ 6 ಪಂದ್ಯಗಳ ಪೈಕಿ 3ರಲ್ಲಿ ಗೆದ್ದಿದ್ದು, ಸ್ಥಿರತೆ ಕಾಯ್ದುಕೊಂಡು ಗೆಲುವಿನ ಹಳಿಗೆ ಮರಳಲು ಕಾಯುತ್ತಿದೆ.

ಶೆಫರ್ಡ್‌ಗೆ ಮತ್ತೆ ಸ್ಥಾನ?:

ಆರ್‌ಸಿಬಿ ಈ ಬಾರಿ ಅತ್ಯಂತ ಸಮತೋಲಿತ ತಂಡ ಹೊಂದಿದ್ದು, 2 ಸೋಲಿನ ಹೊರತಾಗಿಯೂ ಎಲ್ಲಾ ವಿಭಾಗದಲ್ಲೂ ಬಲಿಷ್ಠವಾಗಿಯೇ ತೋರುತ್ತಿದೆ. ಬ್ಯಾಟಿಂಗ್‌ ವಿಭಾಗದಲ್ಲಿ ವಿರಾಟ್‌ ಕೊಹ್ಲಿ(247 ರನ್‌), ನಾಯಕ ರಜತ್‌ ಪಾಟೀದಾರ್(230), ಫಿಲ್‌ ಸಾಲ್ಟ್(202) ಅಬ್ಬರಿಸುತ್ತಿದ್ದಾರೆ. ಟಿಮ್‌ ಡೇವಿಡ್‌ ಗಳಿಸಿದ್ದು 173 ರನ್‌ ಆಗಿದ್ದರೂ, ಅವರ ಸ್ಟ್ರೈಕ್‌ರೇಟ್‌ 203.52, ಸರಾಸರಿ 86.50 ಇದೆ. 12 ಬೌಂಡರಿ, 15 ಸಿಕ್ಸರ್‌ ಸಿಡಿಸಿದ್ದಾರೆ. ಶೆಫರ್ಡ್‌ ಈ ಬಾರಿ ಸಾಧಾರಣ ಪ್ರದರ್ಶನ ನೀಡುತ್ತಿದ್ದರೂ ಅವರನ್ನು ತಂಡದಲ್ಲೇ ಉಳಿಸುವ ಸಾಧ್ಯತೆಯಿದೆ. ಅವರನ್ನು ಹೊರಗಿಟ್ಟು ಜೇಕಬ್‌ ಬೆಥೆಲ್‌ರನ್ನು ಆಡಿಸಲು ಆರ್‌ಸಿಬಿ ಮನಸ್ಸು ಮಾಡಲಿದೆಯೇ ಕಾದು ನೋಡಬೇಕು.

ಇನ್ನು, ಹೇಜಲ್‌ವುಡ್‌, ಭುವನೇಶ್ವರ್, ಕೃನಾಲ್ ಪಾಂಡ್ಯ ಎದುರಾಳಿ ಬ್ಯಾಟರ್‌ಗಳನ್ನು ಇನ್ನಿಲ್ಲದಂತೆ ಕಾಡುತ್ತಿದ್ದಾರೆ. ರಸಿಕ್‌ ದಾರ್‌, ಸುಯಶ್‌ ಶರ್ಮಾ ಕೂಡಾ ತಕ್ಕಮಟ್ಟಿಗೆ ಪ್ರದರ್ಶನ ನೀಡಿದರೆ ತಂಡಕ್ಕೆ ಗೆಲುವು ಸುಲಭವಾಗಲಿದೆ.

ಮಿಂಚ್ತಾರಾ ಪ್ರಸಿದ್ಧ್‌?:

ಆರ್‌ಸಿಬಿಯ ಸ್ಫೋಟಕ ಆಟವನ್ನು ನಿಯಂತ್ರಿಸಬಲ್ಲ ಪ್ರಮುಖ ಬೌಲರ್‌ಗಳು ಗುಜರಾತ್‌ನಲ್ಲಿದ್ದಾರೆ. ಕಗಿಸೊ ರಬಾಡ, ಮೊಹಮ್ಮದ್‌ ಸಿರಾಜ್‌, ಪ್ರಸಿದ್ಧ್‌ ಕೃಷ್ಣ ಅವರನ್ನೊಳಗೊಂಡ ವೇಗದ ಬೌಲಿಂಗ್‌ ಪಡೆ ಬಲಿಷ್ಠವಾಗಿದೆ. ಅದರಲ್ಲೂ ಪ್ರಸಿದ್ಧ್‌ ತಮ್ಮ ತವರು ಮೈದಾನದಲ್ಲಿ ಆರ್‌ಸಿಬಿ ಬ್ಯಾಟರ್‌ಗಳನ್ನು ಎಷ್ಟರ ಮಟ್ಟಿಗೆ ಕಟ್ಟಿಹಾಕಲಿದ್ದಾರೆ ಎಂಬ ಕುತೂಹಲವಿದೆ. ಪ್ರಚಂಡ ವೇಗಿ ಅಶೋಕ್‌ ಶರ್ಮಾ ತಂಡಕ್ಕೆ ಪ್ಲಸ್‌ ಪಾಯಿಂಟ್‌. ಬ್ಯಾಟಿಂಗ್‌ನಲ್ಲಿ ನಾಯಕ ಶುಭ್‌ಮನ್‌ ಗಿಲ್‌, ಸಾಯಿ ಸುದರ್ಶನ್‌, ಜೋಸ್‌ ಬಟ್ಲರ್‌ ಟ್ರಂಪ್‌ಕಾರ್ಡ್ಸ್‌. ಶಾರುಖ್‌ ಖಾನ್‌, ರಾಹುಲ್‌ ತೆವಾಟಿಯಾ ಒತ್ತಡದಲ್ಲಿದ್ದು, ಈ ಪಂದ್ಯದಲ್ಲಾದರೂ ಅಬ್ಬರಿಸಬಲ್ಲದೇ ಎಂಬುದನ್ನು ಕಾದು ನೋಡಬೇಕು.

ಸಂಭಾವ್ಯ ಆಟಗಾರರು:

ಆರ್‌ಸಿಬಿ: ಫಿಲ್‌ ಸಾಲ್ಟ್‌, ಕೊಹ್ಲಿ, ದೇವದತ್‌, ರಜತ್‌(ನಾಯಕ), ಟಿಮ್‌ ಡೇವಿಡ್‌, ಜಿತೇಶ್‌, ಶೆಫರ್ಡ್‌/ಬೆಥೆಲ್‌, ಕೃನಾಲ್‌, ಭುವನೇಶ್ವರ್‌, ಸುಯಶ್‌, ಹೇಜಲ್‌ವುಡ್‌, ರಸಿಕ್‌.

ಗುಜರಾತ್‌: ಗಿಲ್‌(ನಾಯಕ), ಸುದರ್ಶನ್‌, ಬಟ್ಲರ್‌, ಸುಂದರ್‌, ಶಾರುಖ್‌/ಕುಶಾಗ್ರ, ಫಿಲಿಪ್ಸ್‌, ತೆವಾಟಿಯಾ, ರಶೀದ್‌, ರಬಾಡ, ಸಿರಾಜ್‌, ಪ್ರಸಿದ್ಧ್‌, ಅಶೋಕ್‌ ಶರ್ಮಾ.

ಒಟ್ಟು ಮುಖಾಮುಖಿ: 06

ಆರ್‌ಸಿಬಿ: 03

ಗುಜರಾತ್: 03

(ನಂಬರ್ಸ್‌)

299 ಸಿಕ್ಸರ್‌

ಕೊಹ್ಲಿ ಐಪಿಎಲ್‌ನಲ್ಲಿ 300 ಸಿಕ್ಸರ್‌ ಮೈಲುಗಲ್ಲು ಸಾಧಿಸಲು ಒಂದು ಸಿಕ್ಸರ್ ಅಗತ್ಯವಿದೆ. ಗೇಲ್‌, ರೋಹಿತ್‌ ಮಾತ್ರ 300+ ಸಿಕ್ಸರ್ ಸಿಡಿಸಿದ್ದಾರೆ.

175 ಸ್ಟ್ರೈಕ್‌ರೇಟ್‌

ಆರ್‌ಸಿಬಿ ಮಧ್ಯಮ ಕ್ರಮಾಂಕದ ಸ್ಟ್ರೈಕ್‌ರೇಟ್‌ 175 ಇದ್ದರೆ, ಗುಜರಾತ್‌ನದ್ದು 135. ಇನ್ನು, ಆರ್‌ಸಿಬಿ ಮಧ್ಯಮ ಕ್ರಮಾಂಕ 34 ಸಿಕ್ಸರ್‌, ಗುಜರಾತ್‌ 8 ಸಿಕ್ಸರ್‌ ಸಿಡಿಸಿದೆ.

PREV
Get the latest sports news in Kannada (ಕ್ರೀಡಾ ಸುದ್ದಿ) — live cricket scores, football highlights, tennis, badminton, and updates on all major sports events. Stay ahead with Kannada Prabha’s full-coverage sports reporting.
Read more Articles on

Recommended Stories

ದಕ್ಷಿಣ ಭಾರತದ ಏಕೈಕ ಹಿಲ್ ರನ್ ''ದಿವ್ಯಶ್ರೀ ನಂದಿ ಮಾನ್ಸೂನ್ ರನ್''ಗೆ ಚಾಲನೆ
ಕಾಳಸಂತೆಯಲ್ಲಿ ಐಪಿಎಲ್ ಟಿಕೆಟ್‌ : ಕೆಎಸ್‌ಸಿಎ ಸದಸ್ಯನ ವಿಚಾರಣೆ