ಸಿಡ್ನಿ: ಭಾರತ ಕ್ರಿಕೆಟ್ ತಂಡದ ಡ್ರೆಸ್ಸಿಂಗ್ ರೂಮ್‌ನಲ್ಲಿ ಭಿನ್ನಮತವಿದೆ, ಆಟಗಾರರ ನಡುವೆ ಸಹಮತವಿಲ್ಲ ಎಂಬ ವರದಿಗಳನ್ನು ಮುಖ್ಯ ಕೋಚ್ ಗೌತಮ್ ಗಂಭೀರ್ ತಳ್ಳಿ ಹಾಕಿದ್ದಾರೆ. ಅದೆಲ್ಲಾ ಬರೀ ವರದಿ, ಸತ್ಯಕ್ಕೆ ದೂರವಾದದ್ದು ಎಂದು ಸ್ಪಷ್ಟಪಡಿಸಿದ್ದಾರೆ.
ಆಸ್ಟ್ರೇಲಿಯಾ ವಿರುದ್ಧ 5ನೇ ಟೆಸ್ಟ್‌ಗೂ ಮುನ್ನ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಗಂಭೀರ್, ಡ್ರೆಸ್ಸಿಂಗ್ ರೂಮ್‌ನ ಮಾತುಕತೆಗಳು ಹೊರಗೆ ಬರಬಾರದು ಎಂದು ಹೇಳಿದರು.
‘ಕೋಚ್ ಮತ್ತು ಆಟಗಾರರ ನಡುವಿನ ಡ್ರೆಸ್ಸಿಂಗ್ ರೂಮ್ ಚರ್ಚೆಗಳು ಅಷ್ಟಕ್ಕೆ ಸೀಮಿತವಾಗಿರಬೇಕು. ಡ್ರೆಸ್ಸಿಂಗ್ ರೂಮ್‌ನಲ್ಲಿ ಪ್ರಾಮಾಣಿಕರು ಇರುವವರೆಗೂ ಭಾರತೀಯ ಕ್ರಿಕೆಟ್ ಸುರಕ್ಷಿತರ ಕೈಯಲ್ಲಿರದೆ’ ಎಂದು ವಿಶ್ವಾಸ ವ್ಯಕ್ತಪಡಿಸಿದ ಅವರು, ಹಿರಿಯ ಆಟಗಾರರನ್ನು ಹೊರಗಿಟ್ಟು, ಯುವ ಆಟಗಾರರನ್ನು ತರುವುದು ವಿಷಯವಲ್ಲ.
ನಿಮ್ಮನ್ನು ತಂಡದಲ್ಲಿ ಉಳಿಸಿಕೊಳ್ಳುವುದು ನಿಮ್ಮ ಪ್ರದರ್ಶನ ಮಾತ್ರ ಎಂದರು.‘ಕೆಲ ವರದಿಗಳು ನಿಜವಲ್ಲ. ಯಾವುದೇ ವರದಿಗಳಿಗೆ ನಾನು ಉತ್ತರಿಸುವ ಅಗತ್ಯವಿಲ್ಲ. ಡ್ರೆಸ್ಸಿಂಗ್ ರೂಮ್‌ನಲ್ಲಿ ಕೆಲವು ಪ್ರಾಮಾಣಿಕ ಮಾತುಗಳನ್ನಷ್ಟೇ ನಾನು ಹೇಳಿದ್ದೇನೆ. ಅಲ್ಲಿ ಚರ್ಚೆ ನಡೆದಿದ್ದ ಟೆಸ್ಟ್ ಗೆಲ್ಲುವುದು ಹೇಗೆ ಎಂಬುದರ ಬಗ್ಗೆ. ಬೇರೆ ಯಾವ ಮಾತುಕತೆಯೂ ನಡೆದಿಲ್ಲ. ಹೀಗಾಗಿ ಚರ್ಚೆ ಅನಗತ್ಯ ಎಂದು ಗಂಭೀರ್ ಹೇಳಿದ್ದಾರೆ.ಇನ್ನು, ರಿಷಭ್‌ರ ಹೊಡೆತಗಳ ಆಯ್ಕೆ ಬಗ್ಗೆ ಪತ್ರಕತ್ರರ ಪ್ರಶ್ನೆಗೆ ಉತ್ತರಿಸಿದ ಗಂಭೀರ್, ‘ವೈಯಕ್ತಿಕವಾಗಿ ಯಾರ ಬಗ್ಗೆಯೂ ಮಾತನಾಡಲ್ಲ. ಅವರ ಸ್ಥಾನ ಏನು ಎಂಬುದು ಅವರಿಗೇ ಗೊತ್ತಿದೆ’ ಎಂದಿದ್ದಾರೆ.
ರೋಹಿತ್ ಜತೆ ಚೆನ್ನಾಗಿದ್ದೇನೆ
ಪತ್ರಿಕಾಗೋಷ್ಠಿಯಲ್ಲಿ ನಾಯಕ ರೋಹಿತ್ ಶರ್ಮಾ ಪಾಲ್ಗೊಳ್ಳದಿರುವ ಬಗ್ಗೆ ಪತ್ರಕರ್ತರು ಗಂಭೀರ್‌ಗೆ ಪ್ರಶ್ನಿಸಿದ್ದಾರೆ. ಇದಕ್ಕೆ ಉತ್ತರಿಸಿದ ಗಂಭೀರ್, ‘ರೋಹಿತ್ ಅವರೊಂದಿಗೆ ಎಲ್ಲವೂ ಚೆನ್ನಾಗಿದೆ. ಪತ್ರಿಕಾಗೋಷ್ಠಿಯಲ್ಲಿ ಅವರ ಅನುಪಸ್ಥಿತಿ ಚರ್ಚೆಯ ವಿಷಯ ಅಲ್ಲ. ಮುಖ್ಯ ಕೋಚ್ ಆಗಿ ನಾನು ಆಗಮಿಸಿದ್ದೇನೆ’ ಎಂದು ಸ್ಪಷ್ಟನೆ ನೀಡಿದ್ದಾರೆ.