ಡಬ್ಲ್ಯುಪಿಎಲ್‌ಗೆ ಗುಜರಾತ್‌ ಭರ್ಜರಿ ಸಿದ್ಧತೆ: ಸುಧಾರಿತ ಆಟದ ಭರವಸೆ ನೀಡಿದ ಆಟಗಾರ್ತಿಯರು

KannadaprabhaNewsNetwork | Updated : Feb 25 2024, 05:41 AM IST

ಸಾರಾಂಶ

ಗುಜರಾತ್ ಭಾನುವಾರ ಹಾಲಿ ಚಾಂಪಿಯನ್ ಮುಂಬೈ ಇಂಡಿಯನ್ಸ್ ವಿರುದ್ಧ ತನ್ನ ಅಭಿಯಾನ ಆರಂಭಿಸಲಿದೆ. ತಂಡದ ಸಿದ್ಧತೆ ಬಗ್ಗೆ ಶನಿವಾರ ಕೋಚ್ ಮೈಕೆಲ್ ಕ್ಲಿಂಗರ್, ಸಲಹೆಗಾರ್ತಿ ಮಿಥಾಲಿ ರಾಜ್, ನಾಯಕಿ ಬೆಥ್ ಮೂನಿ, ಉಪನಾಯಕಿ ಸ್ನೇಹ್ ರಾಣಾ ಮುಕ್ತವಾಗಿ ಮಾತನಾಡಿದರು.

ಬೆಂಗಳೂರು: ವುಮೆನ್ಸ್ ಪ್ರೀಮಿಯರ್ ಲೀಗ್(ಡಬ್ಲ್ಯುಪಿಎಲ್)ನ 2ನೇ ಆವೃತ್ತಿಗೆ ಗುಜರಾಜ್ ಜೈಂಟ್ಸ್ ಸಜ್ಜಾಗಿದ್ದು, ಕಳೆದ ಆವೃತ್ತಿಯ ಕಳಪೆ ಆಟವನ್ನು ಮರೆತು ಈ ಬಾರಿ ಸುಧಾರಿತ ಪ್ರದರ್ಶನ ನೀಡುವ ನಿರೀಕ್ಷೆಯೊಂದಿಗೆ ಕಣಕ್ಕಿಳಿಯಲಿದೆ. 

ಗುಜರಾತ್ ಭಾನುವಾರ ಹಾಲಿ ಚಾಂಪಿಯನ್ ಮುಂಬೈ ಇಂಡಿಯನ್ಸ್ ವಿರುದ್ಧ ತನ್ನ ಅಭಿಯಾನ ಆರಂಭಿಸಲಿದೆ. ತಂಡದ ಸಿದ್ಧತೆ ಬಗ್ಗೆ ಶನಿವಾರ ಕೋಚ್ ಮೈಕೆಲ್ ಕ್ಲಿಂಗರ್, ಸಲಹೆಗಾರ್ತಿ ಮಿಥಾಲಿ ರಾಜ್, ನಾಯಕಿ ಬೆಥ್ ಮೂನಿ, ಉಪನಾಯಕಿ ಸ್ನೇಹ್ ರಾಣಾ ಮುಕ್ತವಾಗಿ ಮಾತನಾಡಿದರು.

 ಡಬ್ಲ್ಯುಪಿಎಲ್‌ನ 2ನೇ ಆವೃತ್ತಿ ಮುಂಬೈನಿಂದ ಬೆಂಗಳೂರು ಹಾಗೂ ನವದೆಹಲಿಗೆ ಸ್ಥಳಾಂತರ ಆಗಿದೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು, ‘ನಾವು ದೇಶಾದ್ಯಂತ ಅಭಿಮಾನಿಗಳನ್ನು ಹೊಂದಿರುವುದರಿಂದ ವಿವಿಧ ನಗರಗಳಲ್ಲಿ ಡಬ್ಲ್ಯುಪಿಎಲ್ ನಡೆಯುವುದು ಒಳ್ಳೆಯ ಸಂಗತಿ'' ಎಂದು ಹೇಳಿದರು.

ಆಸ್ಟ್ರೇಲಿಯಾದ ರನ್ ಮೆಷಿನ್ ಬೆಥ್ ಮೂನಿ ನಾಯಕತ್ವದಲ್ಲಿ ಗುಜರಾತ್ ಜೈಂಟ್ಸ್ ತಂಡವು ಈ ವರ್ಷ ಅಬ್ಬರದ ಆಟವಾಡಲು ಸಿದ್ಧವಾಗಿದೆ. ''ನಮ್ಮ ತಂಡದಲ್ಲಿ ನಿಜವಾಗಿಯೂ ಉತ್ತಮ ರೀತಿಯ ಸಮ್ಮಿಳಿತ ಕಾಣುತ್ತಿದೆ. 

ಯಾಕೆಂದರೆ, ಕಳೆದ ಕೆಲ ಸಮಯದವರೆಗೂ ನಾವು ಜೊತೆಯಲ್ಲೇ ಇದ್ದೇವೆ. ಕಳೆದ ವಾರ ಕೆಲವು ವಿಚಾರಗಳಲ್ಲಿ ಕೆಲಸ ಮಾಡಿದ್ದು, ಅವುಗಳು ಈಗಾಗಲೇ ಕಾರ್ಯರೂಪಕ್ಕೂ ಬಂದಿವೆ. ಹಾಗಾಗಿ ಮೊದಲ ಪಂದ್ಯಕ್ಕಾಗಿ ನಾವು ತೀವ್ರ ನಿರೀಕ್ಷೆ ಇಟ್ಟಿದ್ದೇವೆ. 

ನಾಳೆ ರಾತ್ರಿ ಮೈದಾನಕ್ಕೆ ಕಾಲಿಡಲಿರುವ 11 ಮಂದಿ ಆಟಗಾರ್ತಿಯರು ಇದರ ಸಂಪೂರ್ಣ ಲಾಭ ಪಡೆದುಕೊಳ್ಳುವುದು ಮಾತ್ರವಲ್ಲ, ತಮ್ಮ ಅತ್ಯುತ್ತಮ ನಿರ್ವಹಣೆಯನ್ನು ತಂಡಕ್ಕಾಗಿ ನೀಡುತ್ತಾರೆ ಎನ್ನುವುದು ನನಗೆ ತಿಳಿದಿದೆ'' ಎಂದು ಬೆಥ್ ಮೂನಿ ಹೇಳಿದ್ದಾರೆ.

ಕಳೆದ ವರ್ಷ ಬೆಥ್ ಮೂನಿ ಗಾಯಗೊಂಡ ಬಳಿಕ ಗುಜರಾತ್ ಜೈಂಟ್ಸ್ ತಂಡವನ್ನು ಮುನ್ನಡೆಸಿದ್ದ ಭಾರತೀಯ ಆಲ್ರೌಂಡರ್ ಸ್ನೇಹ ರಾಣಾ, ತನ್ನ ನಾಯಕಿಯ ಆಲೋಚನೆಗಳನ್ನು ಪ್ರತಿಧ್ವನಿಸುವಂತೆ ಮಾತನಾಡಿ, ತಂಡದಲ್ಲಿ ಉತ್ತಮ ವಾತಾವರಣವಿದೆ ಎಂದು ಹೇಳಿದರು.

 ''ನಾವು ಇಲ್ಲಿಯವರೆಗೂ ಉತ್ತಮ ಅನುಭವವನ್ನು ಹೊಂದಿದ್ದೇವೆ. ಅದರೊಂದಿಗೆ ಆಟಗಾರ್ತಿಯರಿಗೆ ಅಗತ್ಯವಿರುವ ಎಲ್ಲಾ ಬೆಂಬಲವನ್ನು ಅದಾನಿ ಸ್ಪೋರ್ಟ್ಸ್ಲೈನ್ ಟೀಮ್ ನೀಡಿದೆ. 

ತಂಡದ ಆಟಗಾರ್ತಿಯರಲ್ಲಿ ಸಕಾರಾತ್ಮಕ ಮನಸ್ಥಿತಿ ಇದೆ. ನಾವು ಈಗಾಗಲೇ ಸಾಕಷ್ಟು ಉತ್ತಮ ಪ್ರದರ್ಶನ ನೀಡಿದ್ದೇವೆ ಮತ್ತು ಈ ಲೀಗ್‌ನಲ್ಲಿ ಉತ್ತಮ ಆರಂಭವನ್ನು ನಿರೀಕ್ಷೆ ಮಾಡುತ್ತಿದ್ದೇವೆ'' ಎಂದಿದ್ದಾರೆ.

ಮೆಂಟರ್ ಮಿಥಾಲಿ ರಾಜ್ ಮಾತನಾಡಿ, ‘ಡಬ್ಲ್ಯುಪಿಎಲ್ ಪ್ರತಿ ನಗರಕ್ಕೂ ಸ್ಥಳಾಂತರಗೊಂಡರೆ, ಫ್ರಾಂಚೈಸಿ ಹೊಸ ಪ್ರೇಕ್ಷಕರನ್ನು ಸೇರಿಸಿಕೊಳ್ಳುವ ಅವಕಾಶ ನೀಡುತ್ತದೆ. 

ಅವರು ಮೈದಾನಕ್ಕೆ ಬಂದು ಪಂದ್ಯಗಳನ್ನು ವೀಕ್ಷಣೆ ಮಾಡುತ್ತಾರೆ. ಇದು ಪಂದ್ಯಾವಳಿಯ ಪ್ರೊಫೈಲ್ ಮತ್ತು ಫ್ರಾಂಚೈಸಿಗಳನ್ನು ಇನ್ನಷ್ಟು ಸುಧಾರಿಸುತ್ತದೆ'' ಎಂದರು.

ಭಾರತದ ತಂಡದ ಮಾಜಿ ನಾಯಕಿ ತಂಡದಲ್ಲಿ ತಮ್ಮ ಪಾತ್ರದ ಬಗ್ಗೆಯೂ ಕೆಲ ವಿವರಣೆ ನೀಡಿದರು. ಡಬ್ಲ್ಯುಪಿಎಲ್‌ನಂತಹ ದೊಡ್ಡ ವೇದಿಕೆಯಲ್ಲಿ ಗುಜರಾತ್ ಜೈಂಟ್ಸ್‌ನೊಂದಿಗೆ ಕೆಲಸ ಮಾಡುವುದಕ್ಕೆ ಖುಷಿಯಾಗುತ್ತಿದೆ'' ಎಂದು ಹೇಳಿದರು.

''ಮೆಂಟರ್ ಆಗಿ ನನ್ನ ಪಾತ್ರವನ್ನು ನಾನು ಆನಂದಿಸುತ್ತಿದ್ದೇನೆ. ಯುವ ಆಟಗಾರ್ತಿಯರೊಂದಿಗೆ ಕೆಲಸ ಮಾಡುವ ಮೂಲಕ ನನ್ನ ಜ್ಞಾನವನ್ನು ಹಂಚಿಕೊಳ್ಳುತ್ತಿದ್ದೇನೆ. 

ಆ ಮೂಲಕ ಅವರು ಉತ್ತಮ ಸ್ಥಾನದಲ್ಲಿದ್ದು, ಸಾಮರ್ಥ್ಯಕ್ಕೆ ತಕ್ಕಂತೆ ತಮ್ಮ ಪಾತ್ರಗಳನ್ನು ನಿರ್ವಹಿಸಲು ಸಹಾಯ ಮಾಡುತ್ತಿದ್ದೇನೆ’ ಎಂದು ಅವರು ಹೇಳಿದರು.

ಅದಾನಿ ಸ್ಪೋರ್ಟ್ಸ್ಲೈನ್ ತಂಡವು ಗುಜರಾತ್‌ನಲ್ಲಿ ಮಹಿಳಾ ಕ್ರಿಕೆಟ್ ಬೆಳೆಯಲು ತನ್ನ ಕೈಲಾದಷ್ಟು ಸಹಾಯ ಮಾಡುತ್ತಿದೆ. ಕಳೆದ ವರ್ಷ ಡಬ್ಲ್ಯುಪಿಎಲ್ ಆರಂಭವಾದ ನಂತರ ಮಹಿಳಾ ಕ್ರಿಕೆಟ್ಗೆ ಸಿಕ್ಕಿರುವ ಪ್ರತಿಕ್ರಿಯೆ ಕುರಿತು ಮಾತನಾಡಿದ ಅದಾನಿ ಸ್ಪೋರ್ಟ್ಸ್ಲೈನ್ನ ಸಿಬಿಓ ಸಂಜಯ್ ಅದೇಸರ, “ಫ್ರಾಂಚೈಸಿಯ ದೃಷ್ಟಿಕೋನದಿಂದ, ನಾವು ಇಲ್ಲಿಯವರೆಗಿನ ಏರಿಳಿತಗಳು ಮತ್ತು ಪ್ರಯಾಣವನ್ನು ಆನಂದಿಸಿದ್ದೇವೆ. 

ಸೀಸನ್ 1ರಿಂದ, ಅಹಮದಾಬಾದ್‌ನಲ್ಲಿರುವ ನಮ್ಮ ಅಕಾಡೆಮಿಗಳಲ್ಲಿ ಮಹಿಳಾ ಕ್ರಿಕೆಟ್ಗೆ ಆಸಕ್ತಿ ಹೆಚ್ಚಿರುವುದನ್ನು ಗಮನಿಸಿದ್ದೇವೆ. 

ಭಾರತದಲ್ಲಿ ಮಹಿಳಾ ಕ್ರಿಕೆಟ್ನ ಸುವರ್ಣ ಯುಗವು ಇನ್ನಷ್ಟೇ ಬರಬೇಕಿದೆ ಎನ್ನುವುದು ನಮಗೆ ಖಚಿತವಾಗಿದೆ. ಅದಕ್ಕಾಗಿ ನಾವು ಯಾವುದೇ ರೀತಿಯಲ್ಲಿ ಕೊಡುಗೆ ನೀಡಲು ಉತ್ಸುಕರಾಗಿದ್ದೇವೆ'' ಎಂದು ಹೇಳಿದರು.

Share this article