ದುಬೈ: ಕ್ರಿಕೆಟ್‌ನ ಮಾರುಕಟ್ಟೆ ವಿಸ್ತರಿಸುವ ಗುರಿ ಇಟ್ಟುಕೊಂಡು ಟಿ20 ವಿಶ್ವಕಪ್‌ನ ಕೆಲ ಪಂದ್ಯಗಳನ್ನು ಅಮೆರಿಕದಲ್ಲಿ ಆಯೋಜಿಸಿದ್ದ ಅಂತಾರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್(ಐಸಿಸಿ) ಕೈ ಸುಟ್ಟುಕೊಂಡಿದೆ. ಟೂರ್ನಿಯಿಂದಾಗಿ ಐಸಿಸಿ ಕೋಟ್ಯಂತರ ರು. ನಷ್ಟ ಅನುಭವಿಸಿದ್ದು, ಈ ಬಗ್ಗೆ ಜು.19ರಂದು ಕೊಲಂಬೊದಲ್ಲಿ ನಡೆಯಲಿರುವ ಸಭೆಯಲ್ಲಿ ಈ ಬಗ್ಗೆ ಚರ್ಚೆ ನಡೆಸಲಿದೆ.
ಐಸಿಸಿ ಅಮೆರಿಕ ಚರಣದ ಪಂದ್ಯಗಳಿಗೆ 150 ಮಿಲಿಯನ್ ಡಾಲರ್(ಅಂದಾಜು 1250 ಕೋಟಿ ರು.) ಮೀಸಲಿಟ್ಟಿತ್ತು. ಆದರೆ ಕ್ರೀಡಾಭಿಮಾನಿಗಳನ್ನು ಸೆಳೆಯಲು ಟೂರ್ನಿ ವಿಫಲವಾಗಿದ್ದು, ಪ್ರೇಕ್ಷಕರ ಕೊರತೆ ಹಿನ್ನೆಲೆಯಲ್ಲಿ ನಿಗದಿತ ಮೊತ್ತಕ್ಕಿಂತ ಜಾಸ್ತಿ ಖರ್ಚಾಗಿದೆ. ಇದರ ಪ್ರಮಾಣ ಎಷ್ಟು ಎಂಬುದು ಇನ್ನೂ ಗೊತ್ತಾಗಿಲ್ಲ. ಈ ನಡುವೆ ಟೂರ್ನಿಯ ನಿರ್ದೇಶಕ ಕ್ರಿಸ್ ಟೆಟ್ಲಿ ತಮ್ಮ ಹುದ್ದೆಗ ರಾಜೀನಾಮೆ ನೀಡಿದ್ದಾರೆ ಎಂದು ಹೇಳಲಾಗುತ್ತಿದೆ. ಟೂರ್ನಿಗೆ ಅಮೆರಿಕದ 3 ಕ್ರೀಡಾಂಗಣ ಹಾಗೂ ವೆಸ್ಟ್‌ಇಂಡೀಸ್‌ನ 6 ಕ್ರೀಡಾಂಗಣಗಳು ಆತಿಥ್ಯ ವಹಿಸಿದ್ದವು.
ಚೆಸ್ ಒಲಿಂಪಿಯಾಡ್‌ನಲ್ಲಿ ಭಾರತದ 10 ಮಂದಿ ಸ್ಪರ್
ಚೆನ್ನೈ: ಸೆಪ್ಟೆಂಬರ್‌ನಲ್ಲಿ ಬುಡಾಪೆಸ್ಟ್‌ನಲ್ಲಿ ನಡೆಯಲಿರುವ 45ನೇ ಆವೃತ್ತಿಯ ಚೆಸ್ ಒಲಿಂಪಿಯಾಡ್‌ನಲ್ಲಿ ಸ್ಪರ್ಧಿಸಲಿರುವ ಭಾರತದ ತಂಡವನ್ನು ಶನಿವಾರ ಭಾರತೀಯ ಚೆಸ್ ಫೆಡರೇಷನ್ ಪ್ರಕಟಿಸಿದೆ. 10 ಮಂದಿಯ ತಂಡವನ್ನು 18 ವರ್ಷ ಡಿ.ಗುಕೇಶ್, ಆರ್.ಪ್ರಜ್ಞಾನಂದ ಮುನ್ನಡೆಸಲಿದ್ದಾರೆ. ಪುರುಷರ ತಂಡದಲ್ಲಿ ಅರ್ಜುನ್ ಎರಿಗೈಸಿ, ವಿದಿತ್ ಗುಜರಾತಿ ಹಾಗೂ ಹರಿಕೃಷ್ಣ ಕೂಡಾ ಇದ್ದಾರೆ. ಮಹಿಳಾ ತಂಡದಲ್ಲಿ ಹರಿಕಾ ದ್ರೋಣವಲ್ಲಿ, ಆರ್.ವೈಶಾಲಿ, ದಿವ್ಯಾ ದೇಶ್‌ಮುಖ್, ವಂತಿಕಾ ಅಗರ್‌ವಾಲ್ ಹಾಗೂ ತಾನಿಯಾ ಸಚ್‌ದೆವ್ ಇದ್ದಾರೆ. ಆದರೆ ಕಳೆದ ಬಾರಿ ಕಂಚು ಗೆದ್ದಿದ್ದ ಕೊನೆರು ಹಂಪಿಗೆ ತಂಡದಲ್ಲಿ ಸ್ಥಾನ ಸಿಕ್ಕಿಲ್ಲ. 2022ರಲ್ಲಿ ಒಲಿಂಪಿಯಾಡ್ ಚೆನ್ನೈನಲ್ಲಿ ನಡೆದಿತ್ತು. ಭಾರತ ಮುಕ್ತ ಹಾಗೂ ಮಹಿಳಾ ವಿಭಾಗಗಳಲ್ಲಿ ಕಂಚು ಗೆದ್ದಿದ್ದವು.