ದುಬೈ: 2024ರ ಟಿ20 ವಿಶ್ವಕಪ್ ಟೂರ್ನಿಯ ಸೆಮಿಫೈನಲ್ ಹಾಗೂ ಫೈನಲ್ ಪಂದ್ಯಗಳಿಗೆ ಮೀಸಲು ದಿನ ನಿಗದಿಪಡಿಸಲಾಗಿದೆ ಎಂದು ಐಸಿಸಿ ಶುಕ್ರವಾರ ತಿಳಿಸಿದೆ.
ನಿಗದಿಪಡಿಸಿದ ದಿನ ಮಳೆ ಅಡ್ಡಿಪಡಿಸಿದರೆ ಪಂದ್ಯವನ್ನು ಮುಂದಿನ ದಿನಕ್ಕೆ ಮುಂದೂಡಲು ಐಸಿಸಿ ನಿರ್ಧರಿಸಿದೆ. ಇದೇ ವೇಳೆ ಗುಂಪು, ಸೂಪರ್-8 ಹಂತದ ಪಂದ್ಯಗಳಿಗೆ ಮಳೆ ಅಡ್ಡಿಪಡಿಸಿದರೆ 2ನೇ ಇನ್ನಿಂಗ್ಸಲ್ಲಿ ಕನಿಷ್ಠ ತಲಾ 5 ಓವರ್ ಆಟ ನಡೆದರಷ್ಟೇ ಸೋಲು-ಗೆಲುವಿನ ಫಲಿತಾಂಶ ನಿರ್ಧರಿಸಲಾಗುತ್ತದೆ.
ನಾಕೌಟ್ ಪಂದ್ಯಗಳ 2ನೇ ಇನ್ನಿಂಗ್ಸಲ್ಲಿ ಕನಿಷ್ಠ 10 ಓವರ್ ಆಟ ನಡೆಯಬೇಕು ಎಂದು ಐಸಿಸಿ ಸ್ಪಷ್ಟಪಡಿಸಿದೆ.ಸಾಮಾನ್ಯವಾಗಿ ಐಸಿಸಿ ಈವೆಂಟ್ಗಳ ನಿರ್ಣಾಯಕ ಪಂದ್ಯಗಳ ದಿನದಂದು ಮಳೆ ಅಡ್ಡಿಪಡಿಸುವುದು ಇದೆ.
ಅದು ಪಂದ್ಯದ ಉತ್ಸಾಹವನ್ನು ಹಾಳುಮಾಡುವುದರ ಜೊತೆಗೆ ಫಲಿತಾಂಶದ ಮೇಲೂ ಪರಿಣಾಮ ಬೀರುತ್ತದೆ. ಇದೇ ಕಾರಣಕ್ಕೆ ಟೂರ್ನಿ ಆರಂಭಕ್ಕೆ ಎರಡೂವರೆ ತಿಂಗಳಿರುವಾಗಲೇ ಐಸಿಸಿ ಸೆಮಿಫೈನಲ್ ಮತ್ತು ಫೈನಲ್ ಪಂದ್ಯಗಳಿಗೆ ಮೀಸಲು ದಿನವನ್ನು ಘೋಷಿಸಿದೆ.
ಈ ಬಾರಿ ಟಿ20 ವಿಶ್ವಕಪ್ ಜೂನ್ 1 ರಿಂದ ಪ್ರಾರಂಭವಾಗಲಿದ್ದು, ವೆಸ್ಟ್ ಇಂಡೀಸ್ ಮತ್ತು ಅಮೆರಿಕ ಆತಿಥ್ಯ ವಹಿಸಲಿವೆ. ಮೊದಲ ಪಂದ್ಯದಲ್ಲಿ ಅಮೆರಿಕ ತಂಡ ಕೆನಡಾವನ್ನು ಎದುರಿಸಲಿದೆ.
ಭಾರತ ತಂಡ ಜೂ.5 ರಂದು ಐರ್ಲೆಂಡ್ ವಿರುದ್ಧ ಆಡುವ ಮೂಲಕ ಅಭಿಯಾನ ಆರಂಭಿಸಲಿದೆ. ಭಾರತ ಮತ್ತು ಪಾಕಿಸ್ತಾನ ನಡುವಿನ ಹೈವೋಲ್ಟೇಜ್ ಪಂದ್ಯ ಜೂ.9 ರಂದು ನ್ಯೂಯಾರ್ಕ್‌ನಲ್ಲಿ ನಡೆಯಲಿದೆ. ಟೂರ್ನಿಯ ಫೈನಲ್ ಜೂ.29 ರಂದು ಬಾರ್ಬಡೋಸ್‌ನಲ್ಲಿ ನಿಗದಿಯಾಗಿದೆ.