ನವದೆಹಲಿ: ಐಸಿಸಿ ಟಿ20 ವಿಶ್ವಕಪ್‌ನಲ್ಲಿ ಭಾರತ ವಿರುದ್ಧದ ಪಂದ್ಯದ ಬಹಿಷ್ಕರಿಸಿರುವ ಪಾಕಿಸ್ತಾನ ತನ್ನ ನಿರ್ಧಾರದಿಂದ ಯೂ-ಟರ್ನ್ ಮಾಡುವ ಸಮಯ ಹತ್ತಿರ ಬಂದಂತೆ ಕಾಣುತ್ತಿದೆ. ಪಂದ್ಯದಲ್ಲಿ ಪಾಲ್ಗೊಳ್ಳುವಿಕೆಗೆ ಸಂಬಂಧಿಸಿ ಪಾಕಿಸ್ತಾನ ಕ್ರಿಕೆಟ್ ಮಂಡಳಿ (ಪಿಸಿಬಿ), ಅಂತಾರಾಷ್ಟ್ರೀಯ ಕ್ರಿಕೆಟ್ ಸಮಿತಿ (ಐಸಿಸಿ) ಜೊತೆ ಹೊಸದಾಗಿ ಮಾತುಕತೆ ಆರಂಭಿಸಿದೆ ಎಂದು ತಿಳಿದುಬಂದಿದೆ.
ಪಾಕಿಸ್ತಾನದ ಬಹಿಷ್ಕಾರ ನಿರ್ಧಾರವನ್ನು ಆ ದೇಶದ ಸರ್ಕಾರ ಪ್ರಕಟಿಸಿದ ಬಳಿಕ ಪಿಸಿಬಿ ಇಕ್ಕಟ್ಟಿಗೆ ಸಿಲುಕಿತ್ತು. ತನ್ನ ನಿರ್ಧಾರದ ಬಗ್ಗೆ ಐಸಿಸಿಗೆ ಸ್ಪಷ್ಟನೆ ನೀಡಬೇಕಾದ ಪರಿಸ್ಥಿತಿ ಎದುರಾದಾಗ, ಪಿಸಿಬಿಯು ‘ಅನಿವಾರ್ಯ ಸಂದರ್ಭ’ ಷರತ್ತಿನಡಿ ತನ್ನ ನಿರ್ಧಾರವನ್ನು ಪರಿಗಣಿಸುವಂತೆ ಐಸಿಸಿಗೆ ತಿಳಿಸಿತ್ತು.
ಇದರಿಂದ ಕೆರಳಿದ ಐಸಿಸಿ, ಅನಿವಾರ್ಯ ಸಂದರ್ಭ ಎದುರಾಗಿದ್ದಾದರೂ ಯಾವಾಗ? ಎಂದು ಪ್ರಶ್ನಿಸಿತ್ತು. ಐಸಿಸಿಯ ನಿಯಮದ ಪ್ರಕಾರ, ಯುದ್ಧ ಅಥವಾ ನೈಸರ್ಗಿಕ ವಿಕೋಪದಂತಹ ಸಂದರ್ಭಗಳಲ್ಲಿ ತಂಡಗಳು ಪ್ರಯಾಣಿಸಲು ಆಗದೆ ಇದ್ದಾಗ ಅದನ್ನು ‘ಅನಿವಾರ್ಯ ಸಂದರ್ಭ’ ಎಂದು ಪರಿಗಣಿಸಲಾಗುತ್ತದೆ. ಆದರೆ, ಪಾಕ್ ನೀಡುತ್ತಿರುವ ವಿವರಣೆಯಲ್ಲಿ ಯಾವುದೇ ತರ್ಕವಿಲ್ಲ ಎಂದು ತಿಳಿಸಿ, ಭಾರತ ವಿರುದ್ಧದ ಪಂದ್ಯದಲ್ಲಿ ಆಡದಿದ್ದರೆ ಪಿಸಿಬಿ ಎದುರಿಸಬೇಕಾದ ಆರ್ಥಿಕ ಸಂಕಷ್ಟದ ಬಗ್ಗೆ ಮತ್ತೊಮ್ಮೆ ಎಚ್ಚರಿಸಿದೆ ಎಂದು ಗೊತ್ತಾಗಿದೆ.
ಹೀಗಾಗಿ, ಮೆತ್ತಗಾಗಿರುವ ಪಾಕ್ ಕ್ರಿಕೆಟ್ ಮಂಡಳಿ ಐಸಿಸಿ ಜೊತೆ ಮಾತುಕತೆ ಆರಂಭಿಸಿದ್ದು, ಬಹಿಷ್ಕಾರ ನಿರ್ಧಾರವನ್ನು ಸದ್ಯದಲ್ಲೇ ಹಿಂಪಡೆಯಲಿದೆ ಎನ್ನಲಾಗುತ್ತಿದೆ.
ಈ ನಡುವೆ, ಭಾರತ ಹಾಗೂ ಪಾಕ್ ಪಂದ್ಯಕ್ಕೆ ಆತಿಥ್ಯ ವಹಿಸಲು ಆಯ್ಕೆಗೊಂಡಿರುವ ಶ್ರೀಲಂಕಾ ಕ್ರಿಕೆಟ್ ಮಂಡಳಿ ಸಹ ಆತಂಕಕ್ಕೆ ಸಿಲುಕಿದ್ದು, ಒಂದು ವೇಳೆ ಪಂದ್ಯ ನಡೆಯದೆ ಇದ್ದರೆ ತಾನು ಎದುರಿಸುವ ಆರ್ಥಿಕ ನಷ್ಟ, ತವರಿನ ಅಭಿಮಾನಿಗಳ ಮುಂದೆ ಆಗುವ ಮುಜುಗರದ ಬಗ್ಗೆ ಪಿಸಿಬಿಗೆ ಪತ್ರ ಬರೆದಿದೆ.
ಅಲ್ಲದೇ, ಲಂಕಾ ಕ್ರಿಕೆಟ್ ಮಂಡಳಿ ಅಧ್ಯಕ್ಷ ಶಮ್ಮಿ ಡಿ ಸಿಲ್ವಾ ಅವರು ಪಿಸಿಬಿ ಮುಖ್ಯಸ್ಥ ಮೊಹ್ಸಿನ್ ನಖ್ವಿ ಜೊತೆ ಖುದ್ದಾಗಿ ಮಾತನಾಡಿದ್ದು, ತಮ್ಮ ನಿಲುವನ್ನು ಬದಲಿಸುವಂತೆ ಒತ್ತಡ ಸಹ ಹೇರಿದ್ದಾರೆ, ಇದಕ್ಕೆ ಪ್ರತಿಕ್ರಿಯಿಸಿರುವ ನಖ್ವಿ, ‘ಪಾಕ್ ಸರ್ಕಾರದ ಜತೆ ಮಾತನಾಡುವೆ’ ಎಂದಿದ್ದಾರೆ ಎಂದು ತಿಳಿದುಬಂದಿದೆ.
ಶನಿವಾರ ಕೊಲಂಬೊದ ಪ್ರೇಮದಾಸ ಕ್ರೀಡಾಂಗಣದಲ್ಲಿ ನಡೆದ ಪಾಕಿಸ್ತಾನ-ನೆದರ್‌ಲೆಂಡ್ಸ್ ನಡುವಿನ ಪಂದ್ಯಕ್ಕೆ ಜನವೇ ಇರಲಿಲ್ಲ. ಉಚಿತ ಪ್ರವೇಶ ಕಲ್ಪಿಸಿದರೂ ಕ್ರೀಡಾಂಗಣ ಖಾಲಿ-ಖಾಲಿ ಆಗಿತ್ತು. ಇದರಿಂದ ಮತ್ತಷ್ಟು ಚಿಂತೆಗೀಡಾಗಿರುವ ಲಂಕಾ ಕ್ರಿಕೆಟ್ ಮಂಡಳಿ, ಭಾರತ ವಿರುದ್ಧ ಪಾಕಿಸ್ತಾನ ಆಡಲೇಬೇಕು ಎಂದು ಪಿಸಿಬಿ ಮೇಲೆ ತೀವ್ರ ಒತ್ತಡ ಹೇರುತ್ತಿದೆ ಎಂದು ಮಾಧ್ಯಮಗಳಲ್ಲಿ ವರದಿಯಾಗಿದೆ.
- ಲಂಕೆಯಲ್ಲಿ ಭಾರತದ ವಿರುದ್ಧ ಫೆ.15ಕ್ಕೆ ಪಂದ್ಯ ಆಡಲ್ಲ ಎಂದಿದ್ದ ಪಾಕಿಸ್ತಾನ
- ನಷ್ಟ ತಗ್ಗಿಸಲು ಪಂದ್ಯ ಆಡುವಂತೆ ಶ್ರೀಲಂಕಾದಿಂದ ಪಾಕ್ ಮೇಲೆ ಒತ್ತಡ
- ಅತ್ತ ಬಹಿಷ್ಕಾರಕ್ಕೆ ಐಸಿಸಿ ಕೂಡ ಗರಂ. ಆಡದ್ದಕ್ಕೆ ನಿಖರ ಕಾರಣ ಕೇಳಿದ ಐಸಿಸಿ
- ಇದರ ಬೆನ್ನಲ್ಲೇ ಮೆತ್ತಗಾದ ಪಾಕಿಸ್ತಾನ. ಐಸಿಸಿ ಜೊತೆ ಮಾತುಕತೆ ಆರಂಭ
- ಅತ್ತ ಭಾರತ ವಿರುದ್ಧ ಆಡುವ ಬಗ್ಗೆ ಪಾಕ್ ಸರ್ಕಾರದ ಜತೆಗೂ ಪಿಸಿಬಿ ಚರ್ಚೆ