;Resize=(412,232))
ಹರಾರೆ: ಕ್ರಿಕೆಟ್ ಲೋಕದ ‘ವಂಡರ್‌ಕಿಡ್’ ಎಂದೇ ಪ್ರಸಿದ್ಧಿ ಪಡೆದಿರುವ ವೈಭವ್ ಸೂರ್ಯವಂಶಿ ಅವರ ನಂಬಲಸಾಧ್ಯವಾದ ಬ್ಯಾಟಿಂಗ್‌ನ ನೆರವಿನಿಂದ ಭಾರತ ದಾಖಲೆಯ 6ನೇ ಬಾರಿಗೆ ಅಂಡರ್-19 ವಿಶ್ವಕಪ್ ಗೆದ್ದಿದೆ. ಶನಿವಾರ ನಡೆದ ಫೈನಲ್‌ನಲ್ಲಿ ಇಂಗ್ಲೆಂಡ್ ವಿರುದ್ಧ ಭಾರತ 100 ರನ್‌ಗಳ ಅಮೋಘ ಗೆಲುವು ಸಾಧಿಸಿ, ಪ್ರಶಸ್ತಿಗೆ ಮುತ್ತಿಟ್ಟಿತು.
ವೈಭವ್ 80 ಎಸೆತದಲ್ಲಿ ತಲಾ 15 ಬೌಂಡರಿ, ಸಿಕ್ಸರ್‌ಗಳೊಂದಿಗೆ 175 ರನ್ ಚಚ್ಚಿದ ಪರಿಣಾಮ ಭಾರತ 50 ಓವರಲ್ಲಿ 9 ವಿಕೆಟ್‌ಗೆ 411 ರನ್ ಪೇರಿಸಿತು. ವೈಭವ್ ಕ್ರೀಸ್‌ನಲ್ಲಿದ್ದಾಗ ತಂಡದ ಸಂಭವನೀಯ ಮೊತ್ತ 600ಕ್ಕೂ ಹೆಚ್ಚಿತ್ತು. ಆದರೆ ಅವರು 26ನೇ ಓವರಲ್ಲಿ ಔಟಾದ ಬಳಿಕ ತಂಡದ ರನ್ ರೇಟ್ ಇಳಿಯಿತು. ಆದರೂ ಅಭಿಗ್ಯಾನ್ ಹಾಗೂ ಕನಿಷ್ಕ್‌ರ ಆಕರ್ಷಕ ಆಟದ ನೆರವಿನಿಂದ ತಂಡದ ಮೊತ್ತ 400 ರನ್ ದಾಟಿತು.
412 ರನ್ ಗುರಿ ನೋಡಿದಾಗಲೇ ಇಂಗ್ಲೆಂಡ್‌ನ ಜಂಘಾಬಲ ಕುಸಿದಿತ್ತು. ಮೊದಲ ವಿಕೆಟ್ ಬೇಗ ಪತನಗೊಂಡರೂ, ಆ ಬಳಿಕ ಚೇತರಿಕೆ ಕಂಡಿದ್ದ ತಂಡ, 20.4ರಿಂದ 21.6 ಓವರ್ ನಡುವೆ ಕೇವಲ 8 ಎಸೆತದಲ್ಲಿ 4 ವಿಕೆಟ್ ಕಳೆದುಕೊಂಡು ಕುಸಿಯಿತು. ಹೀನಾಯ ಸೋಲಿನತ್ತ ಮುಖ ಮಾಡಿದ್ದ ತಂಡದ ಪರ ಕಾಲೆಬ್ ಫಾಲ್ಕೊನರ್ ಹೋರಾಟ ಮುಂದುವರಿಸಿದರು. 67 ಎಸೆತದಲ್ಲಿ 115 ರನ್ ಸಿಡಿಸಿ, ತಂಡದ ಮೊತ್ತವನ್ನು 300 ದಾಟಿಸಿದರು. 41ನೇ ಓವರಲ್ಲಿ ಕಾಲೆಬ್ ಔಟಾಗುತ್ತಿದ್ದಂತೆ, ಭಾರತ ಚಾಂಪಿಯನ್ ಪಟ್ಟ ಅಲಂಕರಿಸಿತು.
ಸ್ಕೋರ್: ಭಾರತ 50 ಓವರಲ್ಲಿ 411/9 (ವೈಭವ್ 175, ಆಯುಷ್ 53, ಅಭಿಗ್ಯಾನ್ 40, ಕನಿಷ್ಕ್ 37*, ಮಿಂಟೊ 3-63), ಇಂಗ್ಲೆಂಡ್ 40.2 ಓವರಲ್ಲಿ 311/10 (ಫಾಲ್ಕೊನರ್ 115, ಡಾಕಿನ್ಸ್ 66, ಅಂಬರೀಶ್ 3-56) ಪಂದ್ಯಶ್ರೇಷ್ಠ/ಸರಣಿಶ್ರೇಷ್ಠ: ವೈಭವ್
ಈ ಪಂದ್ಯದಲ್ಲಿ ವೈಭವ್ ಕೇವಲ ಬೌಂಡರಿ, ಸಿಕ್ಸರ್‌ಗಳಿಂದಲೇ 150 ರನ್ ಸಿಡಿಸಿದರು. ಅವರ 175 ರನ್, ಅಂಡರ್-19 ವಿಶ್ವಕಪ್‌ನ ಫೈನಲ್‌ನಲ್ಲಿ ಗರಿಷ್ಠ ವೈಯಕ್ತಿಕ ಮೊತ್ತ ಎನಿಸಿತು. ಟೂರ್ನಿಯಲ್ಲಿ 30 ಸಿಕ್ಸರ್ ಸಿಡಿಸಿದ ವೈಭವ್, ಒಂದು ಆವೃತ್ತಿಯಲ್ಲಿ ಅತಿಹೆಚ್ಚು ಸಿಕ್ಸರ್ ಸಿಡಿಸಿದ ಆಟಗಾರ ಎನ್ನುವ ದಾಖಲೆಯನ್ನೂ ಬರೆದರು.