ದುಬೈ: ಕ್ರಿಕೆಟ್ ಮೈದಾನದಲ್ಲಿ ರಾಜಕೀಯ ಪ್ರೇರಿತ ಹೇಳಿಕೆಗಳನ್ನು ನೀಡದಂತೆ ಭಾರತ ತಂಡದ ನಾಯಕ ಸೂರ್ಯಕುಮಾರ್ ಯಾದವ್‌ಗೆ ಅಂತಾರಾಷ್ಟ್ರೀಯ ಕ್ರಿಕೆಟ್ ಸಮಿತಿ(ಐಸಿಸಿ) ತಾಕೀತು ಮಾಡಿದೆ. ಪಹಲ್ಗಾಂ ಬಗ್ಗೆ ಉಲ್ಲೇಖಿಸಿದ್ದಕ್ಕೆ ಸೂರ್ಯ ವಿರುದ್ಧ ಪಾಕಿಸ್ತಾನ ಕ್ರಿಕೆಟ್ ಮಂಡಳಿ ಐಸಿಸಿಗೆ ದೂರು ಸಲ್ಲಿಸಿತ್ತು. ಈ ಹಿನ್ನೆಲೆಯಲ್ಲಿ ಗುರುವಾರ ಸೂರ್ಯರನ್ನು ಕರೆಸಿ ವಿಚಾರಣೆ ನಡೆಸಿದ ಐಸಿಸಿ ಮ್ಯಾಚ್ ರೆಫ್ರಿ ರಿಚಿ ರಿಚರ್ಡ್‌ಸನ್, ಕ್ರಿಕೆಟ್‌ನೊಂದಿಗೆ ರಾಜಕೀಯ ಬೆರೆಸದಂತೆ ಸೂಚನೆ ನೀಡಿದ್ದಾರೆ.
ಪಾಕಿಸ್ತಾನ ವಿರುದ್ಧ ಏಷ್ಯಾಕಪ್ ಗುಂಪು ಹಂತದ ಪಂದ್ಯವನ್ನು ಗೆದ್ದ ಬಳಿಕ, ಆ ಗೆಲುವನ್ನು ಪಹಲ್ಗಾಂ ಉಗ್ರ ದಾಳಿಯಲ್ಲಿ ಪ್ರಾಣ ಕಳೆದುಕೊಂಡ ಅಮಾಯಕ ಭಾರತೀಯರು, ಆಪರೇಷನ್ ಸಿಂದೂರ ಮೂಲಕ ಪಾಕಿಸ್ತಾನಕ್ಕೆ ತಕ್ಕ ಉತ್ತರ ನೀಡಿದ ಭಾರತೀಯ ಸೇನೆಗೆ ಅರ್ಪಿಸುವುದಾಗಿ ಸೂರ್ಯಕುಮಾರ್ ಹೇಳಿದ್ದರು. ಈ ಹೇಳಿಕೆಗೆ ಪಾಕಿಸ್ತಾನ ವಿರೋಧ ವ್ಯಕ್ತಪಡಿಸಿ, ದೂರು ಸಲ್ಲಿಸಿತ್ತು.
ಇಂದು ಫರ್ಹಾನ್, ರೌಫ್ ವಿಚಾರಣೆ: ಅರ್ಧಶತಕ ಗಳಿಸಿದ ಬಳಿಕ ಗನ್‌ಶಾಟ್ ರೀತಿ ಸಂಭ್ರಮಿಸಿದ್ದ ಪಾಕಿಸ್ತಾನದ ಬ್ಯಾಟರ್ ಸಾಹಿಬ್‌ಝಾದಾ ಫರ್ಹಾನ್ ಹಾಗೂ ಬೌಂಡರಿ ಗೆರೆ ಬಳಿ ಭಾರತೀಯ ಅಭಿಮಾನಿಗಳತ್ತ ಕೈ ತೋರಿಸಿ ವಿಮಾನವನ್ನು ಹೊಡೆದುರುಳಿಸಿದಂತೆ ಕೈ ಸನ್ನೆ ಮಾಡಿದ್ದ ವೇಗಿ ಹ್ಯಾರಿಸ್ ರೌಫ್ ವಿರುದ್ಧ ಬಿಸಿಸಿಐ, ಐಸಿಸಿಗೆ ದೂರಿದೆ. ಈ ವಿಚಾರವಾಗಿ ಶುಕ್ರವಾರ ಐಸಿಸಿ ಪಾಕ್‌ನ ಈ ಇಬ್ಬರು ಆಟಗಾರರನ್ನು ವಿಚಾರಣೆಗೆ ಕರೆದಿದೆ.