ಐಸಿಸಿ ಮಹಿಳಾ ಏಕದಿನ ವಿಶ್ವಕಪ್‌ : ಅ.5ರಂದು ಭಾರತ vs ಪಾಕ್ ಮಹಿಳೆಯರ ಫೈಟ್‌

Published : Jun 17, 2025, 11:16 AM IST
Cricket, India Women Cricket Team

ಸಾರಾಂಶ

 ಐಸಿಸಿ ಮಹಿಳಾ ಏಕದಿನ ವಿಶ್ವಕಪ್‌ ವೇಳಾಪಟ್ಟಿ ಪ್ರಕಟ: ಬದ್ಧವೈರಿಗಳ ನಡುವಿನ ಪಂದ್ಯಕ್ಕೆ ಶ್ರೀಲಂಕಾ ರಾಜಧಾನಿ ಕೊಲಂಬೊ ಆತಿಥ್ಯ,  ಸೆ.30ಕ್ಕೆ ಬೆಂಗಳೂರಿನಲ್ಲಿ ಟೂರ್ನಿಗೆ ಚಾಲನೆ  

ದುಬೈ: 13ನೇ ಆವೃತ್ತಿಯ ಐಸಿಸಿ ಮಹಿಳಾ ಏಕದಿನ ವಿಶ್ವಕಪ್‌ ಟೂರ್ನಿಯ ವೇಳಾಪಟ್ಟಿ ಪ್ರಕಟಗೊಂಡಿದೆ. ಬದ್ಧವೈರಿಗಳಾದ ಭಾರತ ಹಾಗೂ ಪಾಕಿಸ್ತಾನ ನಡುವಿನ ಹೈವೋಲ್ಟೇಜ್‌ ಪಂದ್ಯ ಅಕ್ಟೋಬರ್‌ 5ರಂದು ನಡೆಯಲಿದ್ದು, ಶ್ರೀಲಂಕಾ ರಾಜಧಾನಿ ಕೊಲಂಬೊ ಆತಿಥ್ಯ ವಹಿಸಲಿದೆ.

ಟೂರ್ನಿಗೆ ಭಾರತ ಆತಿಥ್ಯ ವಹಿಸುತ್ತಿದ್ದರೂ, ಪಾಕ್‌ ತಂಡ ಭಾರತಕ್ಕೆ ಆಗಮಿಸಲು ಒಪ್ಪದ ಕಾರಣ ಉಭಯ ತಂಡಗಳ ನಡುವಿನ ಪಂದ್ಯವನ್ನು ಕೊಲಂಬೊದಲ್ಲಿ ನಡೆಸಲು ಐಸಿಸಿ ನಿರ್ಧರಿಸಿದೆ.

ಸೆ.30ರಂದು ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಟೂರ್ನಿಗೆ ಚಾಲನೆ ಲಭಿಸಲಿದೆ. ಉದ್ಘಾಟನಾ ಪಂದ್ಯದಲ್ಲಿ ಭಾರತ ಹಾಗೂ ಶ್ರೀಲಂಕಾ ತಂಡಗಳು ಸೆಣಸಾಡಲಿವೆ. ನ.2ರಂದು ಫೈನಲ್‌ ಪಂದ್ಯ ಬೆಂಗಳೂರು ಅಥವಾ ಕೊಲಂಬೊದಲ್ಲಿ ನಡೆಯಲಿದೆ. ಪಾಕಿಸ್ತಾನ ಫೈನಲ್‌ಗೇರಿದರೆ ಪಂದ್ಯ ಕೊಲಂಬೊದಲ್ಲಿ ನಡೆಯಲಿದ್ದು, ಅಲ್ಲದಿದ್ದರೆ ಬೆಂಗಳೂರು ಆತಿಥ್ಯ ವಹಿಸಲಿದೆ. ಟೂರ್ನಿ ಭಾರತದ 4 ನಗರಗಳಾದ ಬೆಂಗಳೂರು, ಇಂದೋರ್‌, ವಿಶಾಖಪಟ್ಟಣ, ಗುವಾಹಟಿಯಲ್ಲಿ ಆಯೋಜನೆಗೊಳ್ಳಲಿವೆ. ಎಲ್ಲಾ ಪಂದ್ಯಗಳು ಮಧ್ಯಾಹ್ನ 3 ಗಂಟೆಗೆ ಆರಂಭಗೊಳ್ಳಲಿವೆ.

ಟೂರ್ನಿ ಮಾದರಿ ಹೇಗೆ?: ಟೂರ್ನಿಯಲ್ಲಿ ಭಾರತ, ಪಾಕಿಸ್ತಾನ, ಆಸ್ಟ್ರೇಲಿಯಾ, ಇಂಗ್ಲೆಂಡ್‌, ಶ್ರೀಲಂಕಾ, ಬಾಂಗ್ಲಾದೇಶ, ದಕ್ಷಿಣ ಆಫ್ರಿಕಾ ಹಾಗೂ ನ್ಯೂಜಿಲೆಂಡ್‌ ತಂಡಗಳು ಪಾಲ್ಗೊಳ್ಳಲಿವೆ. ರೌಂಡ್‌ ರಾಬಿನ್‌ ಮಾದರಿಯಲ್ಲಿ ಪ್ರತಿ ತಂಡಗಳು ಲೀಗ್‌ ಹಂತದಲ್ಲಿ ಒಮ್ಮೆ ಮುಖಾಮುಖಿಯಾಗಲಿವೆ. ಅಂದರೆ ಎಲ್ಲಾ ತಂಡಕ್ಕೂ ತಲಾ 7 ಪಂದ್ಯ. ಲೀಗ್‌ ಹಂತದಲ್ಲಿ ಅಗ್ರ-4 ಸ್ಥಾನ ಪಡೆದ ತಂಡಗಳು ಸೆಮಿಫೈನಲ್‌ ಪ್ರವೇಶಿಸಲಿವೆ.

ಬೆಂಗಳೂರಲ್ಲಿ ಫೈನಲ್

ಸೇರಿ ಐದು ಪಂದ್ಯಗಳು

ಬೆಂಗಳೂರಿನ ಎಂ.ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಕನಿಷ್ಠ 4, ಗರಿಷ್ಠ 5 ಪಂದ್ಯಗಳು ನಡೆಯಲಿವೆ. ಸೆ.30ರಂದು ಭಾರತ-ಶ್ರೀಲಂಕಾ, ಅ.3ರಂದು ಇಂಗ್ಲೆಂಡ್‌-ದಕ್ಷಿಣ ಆಫ್ರಿಕಾ, ಅ.26ರಂದು ಭಾರತ-ಬಾಂಗ್ಲಾದೇಶ ಪಂದ್ಯ, ಬಳಿಕ ಅ.30ರಂದು 2ನೇ ಸೆಮಿಫೈನಲ್‌ ಆಯೋಜನೆಗೊಳ್ಳಲಿವೆ. ನ.2ರಂದು ಫೈನಲ್‌ ಪಂದ್ಯ ಬೆಂಗಳೂರು ಅಥವಾ ಕೊಲಂಬೊದಲ್ಲಿ ನಿಗದಿಯಾಗಿವೆ.

ಭಾರತದ ಪಂದ್ಯಗಳ ವೇಳಾಪಟ್ಟಿ

ದಿನಾಂಕ ಎದುರಾಳಿ ಸ್ಥಳ

ಸೆ.30 ಶ್ರೀಲಂಕಾ ಬೆಂಗಳೂರು

ಅ.5 ಪಾಕಿಸ್ತಾನ ಕೊಲಂಬೊ

ಅ.9 ದ.ಆಫ್ರಿಕಾ ವಿಶಾಖಪಟ್ಟಣ

ಅ.12 ಆಸ್ಟ್ರೇಲಿಯಾ ವಿಶಾಖಪಟ್ಟಣ

ಅ.19 ಇಂಗ್ಲೆಂಡ್‌ ಇಂದೋರ್‌

ಅ.23 ನ್ಯೂಜಿಲೆಂಡ್‌ ಗುವಾಹಟಿ

ಅ.26 ಬಾಂಗ್ಲಾದೇಶ ಬೆಂಗಳೂರು

08 ತಂಡಗಳು

ಈ ಬಾರಿ ವಿಶ್ವಕಪ್‌ನಲ್ಲಿ ಒಟ್ಟು 8 ತಂಡಗಳು ಪಾಲ್ಗೊಳ್ಳಲಿವೆ

05 ನಗರ

ಭಾರತದ 4, ಶ್ರೀಲಂಕಾದ 1 ನಗರದಲ್ಲಿ ಪಂದ್ಯಗಳು ಆಯೋಜನೆ.

31 ಪಂದ್ಯ

ಟೂರ್ನಿಯಲ್ಲಿ ಫೈನಲ್‌ ಸೇರಿದಂತೆ ಒಟ್ಟು 31 ಪಂದ್ಯಗಳು ನಡೆಯಲಿವೆ.

07 ಪಂದ್ಯ

ಪ್ರತಿ ತಂಡಗಳು ಲೀಗ್‌ ಹಂತದಲ್ಲಿ ಒಟ್ಟು 7 ಪಂದ್ಯಗಳನ್ನು ಆಡಲಿವೆ.

ಭಾರತಕ್ಕೆ ಚೊಚ್ಚಲ  ಟ್ರೋಫಿ ಗೆಲ್ಲುವ ಗುರಿ

ಭಾರತ ತಂಡ ಈ ವರೆಗೂ ಚಾಂಪಿಯನ್‌ ಆಗಿಲ್ಲ. 1973ರಿಂದಲೂ ಟೂರ್ನಿ ನಡೆಯುತ್ತಿದ್ದು, ತಂಡಕ್ಕೆ ಈ ಬಾರಿ ಟ್ರೋಫಿ ಬರ ನೀಗಿಸಿಕೊಳ್ಳುವ ಅವಕಾಶವಿದೆ. ಈ ವರೆಗೆ ನಡೆದ 12 ಆವೃತ್ತಿಗಳಲ್ಲಿ ಆಸ್ಟ್ರೇಲಿಯಾ 7 ಬಾರಿ ಚಾಂಪಿಯನ್‌ ಆಗಿದ್ದರೆ, ಇಂಗ್ಲೆಂಡ್‌ 4 ಬಾರಿ ಟ್ರೋಫಿ ಗೆದ್ದಿದೆ. ನ್ಯೂಜಿಲೆಂಡ್ ಒಮ್ಮೆ ಟ್ರೋಫಿ ತನ್ನದಾಗಿಸಿಕೊಂಡಿದೆ. ಭಾರತ 2 ಬಾರಿ(2005, 2017) ರನ್ನರ್‌-ಆಪ್ ಆಗಿದೆ.

ಭಾರತ-ಪಾಕ್ ಪಂದ್ಯ, ಚಿನ್ನಸ್ವಾಮಿತ ಆತಿಥ್ಯ  ಗೊಂದಲಗಳಿಗೆ ತೆರೆ

ಇತ್ತೀಚೆಗೆ ಪಹಲ್ಗಾಮ್‌ನಲ್ಲಿ ನಡೆದ ಭೀಕರ ಉಗ್ರ ದಾಳಿ ಬಳಿಕ ಪಾಕಿಸ್ತಾನದ ಉಗ್ರ ನೆಲೆಗಳ ಮೇಲೆ ಭಾರತ ಆಪರೇಷನ್‌ ಸಿಂದೂರ ಕಾರ್ಯಾಚರಣೆ ನಡೆಸಿತ್ತು. ಇದರ ಬೆನ್ನಲ್ಲೇ, ಪಾಕ್‌ ವಿರುದ್ಧ ಇನ್ನು ಕ್ರಿಕೆಟ್‌ ಆಡಬಾರದು ಎಂದು ಹಲವರು ಆಗ್ರಹಿಸಿದ್ದರು. ಸೌರವ್‌ ಗಂಗೂಲಿ ಸೇರಿ ಹಲವು ಕ್ರಿಕೆಟಿಗರು ಕೂಡಾ ಇದಕ್ಕೆ ಧ್ವನಿಗೂಡಿಸಿದ್ದರು. ಹೀಗಾಗಿ ಭಾರತ-ಪಾಕ್‌ ನಡುವೆ ಇನ್ನು ಕ್ರಿಕೆಟ್‌ ನಡೆಯಲಿದೆಯೇ ಎಂಬ ಪ್ರಶ್ನೆ ಎಲ್ಲರಲ್ಲಿತ್ತು. ಆ ಗೊಂದಲಕ್ಕೆ ಸದ್ಯ ತೆರೆ ಬಿದ್ದಿದೆ. ಇನ್ನು, ಆರ್‌ಸಿಬಿ ವಿಜಯೋತ್ಸವ ವೇಳೆ ನಡೆದ ಕಾಲ್ತುಳಿತದಿಂದಾಗಿ ಬೆಂಗಳೂರಿನ ಪಂದ್ಯಗಳು ಬೇರೆಡೆಗೆ ಸ್ಥಳಾಂತರಗೊಳ್ಳುವ ಬಗ್ಗೆಯೂ ಊಹಾಪೋಹಗಳು ಹರಡಿದ್ದವು. ಆದರೆ ಬೆಂಗಳೂರಿನಲ್ಲಿ ನಿಗದಿಯಂತೆ ಪಂದ್ಯಗಳು ನಡೆಯುವುದಾಗಿ ಐಸಿಸಿ, ಬಿಸಿಸಿಐ ತಿಳಿಸಿದೆ.

ಇನ್ನೂ ಆಯೋಜನಾ

ಸಮಿತಿ ರಚಿಸದ ಬಿಸಿಸಿಐ

ಮಹಿಳಾ ವಿಶ್ವಕಪ್‌ಗೆ ವೇಳಾಪಟ್ಟಿ ಪ್ರಕಟಗೊಂಡರೂ, ಟೂರ್ನಿಯನ್ನು ಸುಗಮವಾಗಿ ನಡೆಸುವ ಹೊಣೆಯನ್ನು ಹೊರುವ ಸ್ಥಳೀಯ ಸಂಘಟನಾ ಸಮಿತಿ(ಎಲ್‌ಒಸಿ)ಯನ್ನು ಬಿಸಿಸಿಐ ಇನ್ನೂ ರಚಿಸಿಲ್ಲ. ಕಳೆದ ಮಾರ್ಚ್‌ನಲ್ಲಿ ನಡೆದ ಬಿಸಿಸಿಐ ಅಪೆಕ್ಸ್‌ ಸಭೆಯಲ್ಲಿ ಎಲ್‌ಒಸಿ ರಚನೆ ಬಗ್ಗೆ ಚರ್ಚೆಯಾಗಿತ್ತು. ಆದರೆ ಈವರೆಗೂ ಬಿಸಿಸಿಐ ಯಾವುದೇ ಕ್ರಮ ಕೈಗೊಂಡಿಲ್ಲ.

PREV
Get the latest sports news in Kannada (ಕ್ರೀಡಾ ಸುದ್ದಿ) — live cricket scores, football highlights, tennis, badminton, and updates on all major sports events. Stay ahead with Kannada Prabha’s full-coverage sports reporting.
Read more Articles on

Recommended Stories

ಶಿಕ್ಷಕ ತಂದೆಗೆ ₹12 ಸಾವಿರ ವೇತನ, ಮಗನಿಗೆ ₹14.2 ಕೋಟಿ!
ಫಿಫಾ ವಿಶ್ವಕಪ್‌ ಗೆದ್ರೆ ₹452 ಕೋಟಿ!