ಇಂದಿನಿಂದ ಖೋ ಖೋ ವಿಶ್ವಕಪ್‌: ಭಾರತದ 2 ತಂಡಗಳಿಗೆ ಚೊಚ್ಚಲ ಆವೃತ್ತಿಯ ಟ್ರೋಫಿ ಗುರಿ

KannadaprabhaNewsNetwork | Updated : Jan 13 2025, 04:17 AM IST

ಸಾರಾಂಶ

ಚೊಚ್ಚಲ ಆವೃತ್ತಿಯ ಟೂರ್ನಿಗೆ ನವದೆಹಲಿ ಆತಿಥ್ಯ. ಜ.19ರ ವರೆಗೆ ನಡೆಯಲಿರುವ ಟೂರ್ನಿ. 20 ಪುರುಷ, 19 ಮಹಿಳಾ ತಂಡಗಳು ಭಾಗಿ. ಭಾರತ ಪುರುಷರಿಗಿಂದು ನೇಪಾಳ ಸವಾಲು

ನವದೆಹಲಿ: ಬಹುನಿರೀಕ್ಷಿತ ಚೊಚ್ಚಲ ಆವೃತ್ತಿಯ ಖೋ ಖೋ ವಿಶ್ವಕಪ್‌ಗೆ ಕ್ಷಣಗಣನೆ ಆರಂಭವಾಗಿದೆ. ಸೋಮವಾರದಿಂದ ನವದೆಹಲಿಯಲ್ಲಿ ಭಾರತ ಸೇರಿದಂತೆ ಜಾಗತಿಕ ಮಟ್ಟದ ಹಲವು ತಂಡಗಳ ನಡುವೆ ವಿಶ್ವಕಪ್‌ಗಾಗಿ ಸೆಣಸಾಟ ಶುರುವಾಗಲಿದೆ. 

ಜ.19ರ ವರೆಗೂ ಇಲ್ಲಿನ ಟೂರ್ನಿ ನಡೆಯಲಿದ್ದು, ಕ್ರೀಡಾ ಪ್ರೇಮಿಗಳ ಕಣ್ಣು ಈಗ ನವದೆಹಲಿಯ ಇಂಧಿರಾ ಗಾಂಧಿ ಅರೆನಾ ಒಳಾಂಗಣದ ಕ್ರೀಡಾಂಗಣದತ್ತ ನೆಟ್ಟಿದೆ.ಟೂರ್ನಿಯಲ್ಲಿ 20 ಪುರುಷ, 19 ಮಹಿಳಾ ತಂಡಗಳು ಪಾಲ್ಗೊಳ್ಳಲಿವೆ. 

ವೀಸಾ ಸಿಗದ ಕಾರಣ ಪಾಕಿಸ್ತಾನದ ತಂಡಗಳು ಟೂರ್ನಿಯಿಂದ ಹೊರಬಿದ್ದಿವೆ. ಇಂಗ್ಲೆಂಡ್‌, ಬಾಂಗ್ಲಾದೇಶ, ನೇಪಾಳ, ದಕ್ಷಿಣ ಆಫ್ರಿಕಾ, ಅರ್ಜೆಂಟೀನಾ, ಅಮೆರಿಕ, ಮಲೇಷ್ಯಾ ಸೇರಿದಂತೆ ಒಟ್ಟು 23 ದೇಶಗಳು ಟೂರ್ನಿಯಲ್ಲಿ ಆಡಲಿವೆ.ಆತಿಥೇಯ ಭಾರತದ ಪುರುಷರ ತಂಡ ‘ಎ’ ಗುಂಪಿನಲ್ಲಿ ನೇಪಾಳ, ಪೆರು, ಬ್ರೆಜಿಲ್‌ ಹಾಗೂ ಭೂತಾನ್‌ ಜೊತೆ ಸ್ಥಾನ ಗಿಟ್ಟಿಸಿಕೊಂಡಿದ್ದು, ಸೋಮವಾರ ನೇಪಾಳ ವಿರುದ್ಧ ಆಡುವ ಮೂಲಕ ಟೂರ್ನಿಯಲ್ಲಿ ಅಭಿಯಾನ ಆರಂಭಿಸಲಿದೆ.

 ಮಹಿಳಾ ತಂಡ ಇರಾನ್‌, ಮಲೇಷ್ಯಾ, ದ.ಕೊರಿಯಾ ಜೊತೆ ‘ಎ’ ಗುಂಪಿನಲ್ಲಿದೆ. ಬುಧವಾರ ದಕ್ಷಿಣ ಕೊರಿಯಾ ವಿರುದ್ಧ ಮೊದಲ ಪಂದ್ಯವಾಡಲಿದೆ.ಟೂರ್ನಿಯ ಕ್ವಾರ್ಟರ್‌ ಫೈನಲ್‌ ಜ.17ರಂದು ನಿಗದಿಯಾಗಿದ್ದು, 18ಕ್ಕೆ ಸೆಮಿಫೈನಲ್‌ ಹಾಗೂ 19ರಂದು ಫೈನಲ್‌ ಪಂದ್ಯಗಳು ನಡೆಯಲಿವೆ. 

ಟೂರ್ನಿ ಮಾದರಿ ಹೇಗೆ?

ಪುರುಷ, ಮಹಿಳಾ ವಿಭಾಗದ ತಂಡಗಳನ್ನು 4 ಗುಂಪುಗಳನ್ನಾಗಿ ವಿಂಗಡಿಸಲಾಗಿದೆ. ಮಹಿಳೆಯರ ‘ಎ’ ಗುಂಪು(4 ತಂಡ) ಹೊರತುಪಡಿಸಿ ಇತರೆಲ್ಲಾ ಗುಂಪುಗಳಲ್ಲಿ ತಲಾ 5 ತಂಡಗಳಿವೆ. ಪ್ರತಿ ತಂಡಗಳು ಗುಂಪಿನಲ್ಲಿ ರೌಂಡ್ ರಾಬಿನ್‌ ಮಾದರಿಯಲ್ಲಿ ಒಂದು ಬಾರಿ ಪರಸ್ಪರ ಸೆಣಸಾಡಲಿವೆ. ಗುಂಪು ಹಂತದ ಮುಕ್ತಾಯಕ್ಕೆ ಅಗ್ರ-2 ಸ್ಥಾನ ಪಡೆಯುವ ತಂಡಗಳು ಕ್ವಾರ್ಟರ್‌ ಫೈನಲ್‌ ಪ್ರವೇಶಿಸಲಿವೆ.

ಹೇಗೆ ಆಡ್ತಾರೆ ಖೋ ಖೋ?

ಪ್ರತಿ ತಂಡದಲ್ಲಿ 9 ಆಟಗಾರರು ಇರುತ್ತಾರೆ. ತಂಡಕ್ಕೆ ಪಂದ್ಯವೊಂದರಲ್ಲಿ ತಲಾ 9 ನಿಮಿಷಗಳ 2 ಇನ್ನಿಂಗ್ಸ್‌ ನಿಗದಿಪಡಿಸಲಾಗುತ್ತದೆ. ಒಂದು ತಂಡ ಡಿಫೆಂಡಿಂಗ್‌, ಮತ್ತೊಂದು ತಂಡ ಚೇಸ್‌ ಮಾಡುತ್ತದೆ. ಅಂಕಣಕ್ಕೆ ಆಗಮಿಸುವ ಡಿಫೆಂಡಿಂಗ್‌ ತಂಡದ ಮೂವರು ಆಟಗಾರರನ್ನು ಚೇಸಿಂಗ್‌ ತಂಡದ ಒಂಬತ್ತು ಮಂದಿ ಬೆನ್ನಟ್ಟಿ ಮುಟ್ಟಬೇಕು. ಇದರಲ್ಲಿ 8 ಮಂದಿ ಕುಳಿತಿದ್ದರೆ ಇನ್ನೊಬ್ಬ ಎದುರಾಳಿ ತಂಡದ ಡಿಫೆಂಡರ್‌ಗಳನ್ನು ಬೆನ್ನಟ್ಟುತ್ತಾನೆ. ಮೊದಲ ಇನ್ನಿಂಗ್ಸ್‌ ಮುಕ್ತಾಯದ ಬಳಿಕ ಡಿಫೆಂಡಿಂಗ್‌ ತಂಡ ಚೇಸ್‌ ಮಾಡಬೇಕು. ಪಂದ್ಯದ ಕೊನೆಗೆ ಗರಿಷ್ಠ ಅಂಕ ಗಳಿಸಿರುವ ತಂಡವನ್ನು ವಿಜೇತ ಎಂದು ಘೋಷಿಸಲಾಗುತ್ತದೆ.

ಖೋ ಖೋ ವಿಶ್ವಕಪ್‌ ಪಂದ್ಯಗಳು ಸ್ಟಾರ್‌ಸ್ಪೋರ್ಟ್ಸ್‌, ಡಿಡಿ ಸ್ಪೋರ್ಟ್ಸ್‌, ಡಿಸ್ನಿ ಹಾಟ್‌ಸ್ಟಾರ್‌ನಲ್ಲಿ ನೇರ ಪ್ರಸಾರ.

Share this article