ಹಾರ್ದಿಕ್‌ ಸ್ಫೋಟಕ ಆಟಕ್ಕೆ ಬೆದರಿದ ಬಾಂಗ್ಲಾ : ಮೊದಲ ಟಿ20ಯಲ್ಲಿ ಭಾರತಕ್ಕೆ ಭರ್ಜರಿ ಜಯ

KannadaprabhaNewsNetwork | Updated : Oct 07 2024, 04:34 AM IST

ಸಾರಾಂಶ

ಮೊದಲ ಟಿ20 ಪಂದ್ಯದಲ್ಲಿ ಭಾರತಕ್ಕೆ 7 ವಿಕೆಟ್‌ ಗೆಲುವು. ಸರಣಿಯಲ್ಲಿ 1-0 ಮುನ್ನಡೆ ಬಾಂಗ್ಲಾ 127/10. ಪಾಂಡ್ಯ, ಸೂರ್‍ಯ, ಸಂಜು ಮಿಂಚು. 11.5 ಓವರಲ್ಲೇ ಗೆದ್ದ ಭಾರತ.

ಗ್ವಾಲಿಯರ್‌: ಬೌಲರ್‌ಗಳ ಮಾರಕ ದಾಳಿ, ಹಾರ್ದಿಕ್‌ ಪಾಂಡ್ಯ, ಸಂಜು ಸ್ಯಾಮ್ಸನ್‌ ಹಾಗೂ ಸೂರ್ಯಕುಮಾರ್‌ ಯಾದವ್‌ ಸ್ಫೋಟಕ ಆಟದ ನೆರವಿನಿಂದ ಬಾಂಗ್ಲಾದೇಶ ವಿರುದ್ಧ ಭಾರತ 7 ವಿಕೆಟ್‌ ಭರ್ಜರಿ ಗೆಲುವು ಸಾಧಿಸಿತು. 

ಇದರೊಂದಿಗೆ 3 ಪಂದ್ಯಗಳ ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿತು.14 ವರ್ಷ ಬಳಿಕ ಗ್ವಾಲಿಯರ್‌ ಅಂತಾರಾಷ್ಟ್ರೀಯ ಪಂದ್ಯಕ್ಕೆ ಆತಿಥ್ಯ ವಹಿಸಿತು. ಅಪಾರ ಸಂಖ್ಯೆಯಲ್ಲಿ ನೆರೆದಿದ್ದ ಅಭಿಮಾನಿಗಳಿಗೆ ಭಾರತ ಭರಪೂರ ಮನರಂಜನೆ ಒದಗಿಸಿತು.

 ಮೊದಲು ಬ್ಯಾಟ್ ಮಾಡಿದ ಬಾಂಗ್ಲಾ 19.5 ಓವರ್‌ಗಳಲ್ಲಿ 127 ರನ್‌ಗೆ ಆಲೌಟಾಯಿತು. ಮೊದಲ ಓವರ್‌ನಲ್ಲೇ ವಿಕೆಟ್‌ ಕಳೆದುಕೊಳ್ಳುತ್ತಾ ಸಾಗಿದ ತಂಡ ಯಾವ ಕ್ಷಣದಲ್ಲೂ ಚೇತರಿಸಿಕೊಳ್ಳಲಿಲ್ಲ.ಮೆಹಿದಿ ಹಸನ್‌ ಮೀರಾಜ್‌(ಔಟಾಗದೆ 35 ರನ್‌) ಹಾಗೂ ನಾಯಕ ನಜ್ಮುಲ್‌ ಹೊಸೈನ್‌(27) ಹೊರತುಪಡಿಸಿ ಇತರರು ಭಾರತೀಯ ಬೌಲರ್‌ಗಳ ದಾಳಿ ಮುಂದೆ ನಿರುತ್ತರರಾದರು. 

ಅರ್ಶ್‌ದೀಪ್‌ ಸಿಂಗ್‌ ಹಾಗೂ ದೀರ್ಘ ಕಾಲ ಬಳಿಕ ಭಾರತ ಪರ ಆಡಿದ ವರುಣ್‌ ಚಕ್ರವರ್ತಿ ತಲಾ 3 ವಿಕೆಟ್‌ ಕಿತ್ತರು. ಚೊಚ್ಚಲ ಪಂದ್ಯದಲ್ಲೇ ಮಿಂಚಿದ ಮಯಾಂಕ್‌ ಯಾದವ್‌ಗೂ ಒಂದು ವಿಕೆಟ್‌ ಲಭಿಸಿತು.ಸುಲಭ ಗುರಿ ಪಡೆದ ಭಾರತ ಕೇವಲ 11.5 ಓವರ್‌ಗಳಲ್ಲೇ ಜಯಭೇರಿ ಮೊಳಗಿಸಿತು. ಆರಂಭಿಕನಾಗಿ ಕಣಕ್ಕಿಳಿದ ಸ್ಯಾಮ್ಸನ್‌ 19 ಎಸೆತಗಳಲ್ಲಿ 29, ಅಭಿಷೇಕ್‌ ಶರ್ಮಾ 16 ರನ್‌ ಗಳಿಸಿದರು. ಬಳಿಕ ಸೂರ್ಯಕುಮಾರ್‌ 14 ಎಸೆತಗಳಲ್ಲಿ 2 ಬೌಂಡರಿ, 3 ಸಿಕ್ಸರ್‌ನೊಂದಿಗೆ 29 ರನ್‌ ಸಿಡಿಸಿದರು.

 ಹಾರ್ದಿಕ್‌ ಪಾಂಡ್ಯ 16 ಎಸೆತಗಳಲ್ಲಿ 5 ಬೌಂಡರಿ, 2 ಸಿಕ್ಸರ್‌ನೊಂದಿಗೆ ಔಟಾಗದೆ 39 ರನ್‌ ಬಾರಿಸಿ ತಂಡವನ್ನು ಗೆಲ್ಲಿಸಿದರು. ನಿತೀಶ್‌ ರೆಡ್ಡಿ 16 ರನ್‌ ಕೊಡುಗೆ ನೀಡಿದರು.ಸ್ಕೋರ್: ಬಾಂಗ್ಲಾದೇಶ 19.5 ಓವರ್‌ಗಳಲ್ಲಿ 127/10 (ಮೀರಾಜ್‌ 35, ನಜ್ಮುಲ್‌ 27, ಅರ್ಶ್‌ದೀಪ್‌ 3-14, ವರುಣ್‌ 3-31), ಭಾರತ 11.5 ಓವರ್‌ಗಳಲ್ಲಿ 132/3 (ಹಾರ್ದಿಕ್‌ ಔಟಾಗದೆ 39, ಸ್ಯಾಮ್ಸನ್‌ 29, ಸೂರ್ಯ 29, ಮೀರಾಜ್‌ 1-7)

ಪಂದ್ಯಶ್ರೇಷ್ಠ: ಅರ್ಶ್‌ದೀಪ್‌ ಸಿಂಗ್‌

ಗರಿಷ್ಠ ಸಿಕ್ಸರ್: 4ನೇ ಸ್ಥಾನಕ್ಕೇರಿದ ಸೂರ್ಯ

ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್‌ನಲ್ಲಿ ಗರಿಷ್ಠ ಸಿಕ್ಸರ್‌ ಬಾರಿಸಿದ ಆಟಗಾರರ ಪಟ್ಟಿಯಲ್ಲಿ ಸೂರ್ಯಕುಮಾರ್‌ 4ನೇ ಸ್ಥಾನಕ್ಕೇರಿದರು. ಪಂದ್ಯದಲ್ಲಿ 3 ಸಿಕ್ಸರ್‌ ಬಾರಿಸಿದ ಅವರು ಒಟ್ಟಾರೆ ಸಿಕ್ಸರ್‌ ಗಳಿಕೆಯನ್ನು 139ಕ್ಕೆ ಹೆಚ್ಚಿಸಿದರು. ಅವರು ಜೋಸ್‌ ಬಟ್ಲರ್‌(137)ರನ್ನು ಹಿಂದಿಕ್ಕಿದರು. ರೋಹಿತ್‌ ಶರ್ಮಾ 205, ನ್ಯೂಜಿಲೆಂಡ್‌ನ ಗಪ್ಟಿಲ್‌ 173, ವಿಂಡೀಸ್‌ನ ಪೂರನ್‌ 144 ಸಿಕ್ಸರ್‌ಗಳೊಂದಿಗೆ ಅಗ್ರ-3 ಸ್ಥಾನಗಳಲ್ಲಿದ್ದಾರೆ.

49 ಎಸೆತ: ಭಾರತ 49 ಎಸೆತ ಬಾಕಿ ಉಳಿಸಿ ಜಯಗಳಿಸಿತು. 100+ ಸ್ಕೋರ್‌ ಚೇಸಿಂಗ್‌ ವೇಳೆ ಇದು ಭಾರತದ ಗರಿಷ್ಠ.

12 ಗೆಲುವು: ಭಾರತ ಸತತ 12 ಟಿ20 ಪಂದ್ಯ ಗೆದ್ದಿತು. 2021-22ರಲ್ಲೂ ಭಾರತ ಸತತ 12 ಪಂದ್ಯಗಳಲ್ಲಿ ಜಯಗಳಿಸಿತ್ತು.

Share this article