ಶ್ರೀಲಂಕಾ ವಿರುದ್ಧ ಮೊದಲ ಟಿ20 ಪಂದ್ಯದಲ್ಲಿ ಟೀಂ ಇಂಡಿಯಾ 43 ರನ್‌ ಭರ್ಜರಿ ಗೆಲುವು

KannadaprabhaNewsNetwork | Updated : Jul 28 2024, 04:16 AM IST

ಸಾರಾಂಶ

ಭಾರತಕ್ಕೆ 43 ರನ್‌ ಗೆಲುವು । 3 ಪಂದ್ಯಗಳ ಸರಣಿಯಲ್ಲಿ 1-0 ಮುನ್ನಡೆ. ಸೂರ್ಯಕುಮಾರ್‌, ರಿಷಭ್‌ ಪಂತ್‌, ಜೈಸ್ವಾಲ್‌, ಗಿಲ್‌ ಆರ್ಭಟ, ಭಾರತ 213/7. ಲಂಕಾ 19.2 ಓವರ್‌ಗಳಲ್ಲಿ 170ಕ್ಕೆ ಆಲೌಟ್‌

ಪಲ್ಲೆಕೆಲೆ: ಸೂರ್ಯಕುಮಾರ್‌ ನಾಯಕತ್ವ, ಗೌತಮ್‌ ಗಂಭೀರ್‌ ಕೋಚ್‌ ಹುದ್ದೆಯ ಮೊದಲ ಅಗ್ನಿಪರೀಕ್ಷೆಯಲ್ಲಿ ಗೆದ್ದಿದ್ದಾರೆ. ಶನಿವಾರ ಶ್ರೀಲಂಕಾ ವಿರುದ್ಧ ಮೊದಲ ಟಿ20 ಪಂದ್ಯದಲ್ಲಿ ಟೀಂ ಇಂಡಿಯಾ 43 ರನ್‌ ಭರ್ಜರಿ ಗೆಲುವು ಸಾಧಿಸಿದೆ. ಇದರೊಂದಿಗೆ 3 ಪಂದ್ಯಗಳ ಸರಣಿಯಲ್ಲಿ ಪ್ರವಾಸಿ ತಂಡ 1-0 ಮುನ್ನಡೆ ಸಾಧಿಸಿದೆ.ಮೊದಲು ಬ್ಯಾಟ್‌ ಮಾಡಿದ ಭಾರತ 7 ವಿಕೆಟ್‌ಗೆ 213 ರನ್‌ ಕಲೆಹಾಕಿತು. 

ಆರಂಭಿಕರಾದ ಯಶಸ್ವಿ ಜೈಸ್ವಾಲ್‌ 21 ಎಸೆತಗಳಲ್ಲಿ 40, ಶುಭ್‌ಮನ್‌ ಗಿಲ್‌ 16 ಎಸೆತಗಳಲ್ಲಿ 34 ರನ್‌ ಸಿಡಿಸಿ ಭರ್ಜರಿ ಮುನ್ನಡೆ ಒದಗಿಸಿದರು. ಆ ಬಳಿಕ ಲಂಕಾ ಬೌಲರ್‌ಗಳನ್ನು ಮನಬಂದಂತೆ ದಂಡಿಸಿದ ನಾಯಕ ಸೂರ್ಯಕುಮಾರ್‌ 26 ಎಸೆತಗಳಲ್ಲಿ 58 ರನ್‌ ಚಚ್ಚಿದರು. ಆರಂಭದಲ್ಲಿ ರನ್‌ ಗಳಿಸಲು ಪರದಾಡಿದರೂ ಬಳಿಕ ಆರ್ಭಟಿಸಿದ ರಿಷಭ್‌ ಪಂತ್‌ 33 ಎಸೆತಗಳಲ್ಲಿ 49 ರನ್‌ ಸಿಡಿಸಿ ತಂಡದ ಮೊತ್ತವನ್ನು 210ರ ಗಡಿ ದಾಟಿಸಿದರು.ಬೃಹತ್‌ ಗುರಿಯನ್ನು ಬೆನ್ನತ್ತಿದ ಶ್ರೀಲಂಕಾ, ಉತ್ತಮ ಆರಂಭದ ಹೊರತಾಗಿಯೂ 19.2 ಓವರ್‌ಗಳಲ್ಲಿ 170 ರನ್‌ಗೆ ಸರ್ವಪತನ ಕಂಡಿತು. 

ಆರಂಭಿಕರಾದ ಪಥುಂ ನಿಸ್ಸಾಂಕ ಹಾಗೂ ಕುಸಾಲ್‌ ಮೆಂಡಿಸ್(45 ರನ್‌) 8.4 ಓವರ್‌ಗಳಲ್ಲಿ 84 ರನ್‌ ಜೊತೆಯಾಟವಾಡಿದರು. 2ನೇ ವಿಕೆಟ್‌ಗೆ ಪೆರೆರಾ ಜೊತೆಗೂಡಿ 56 ರನ್‌ ಸೇರಿಸಿದ ನಿಸ್ಸಾಂಕ, ತಂಡಕ್ಕೆ ಗೆಲುವಿನ ಕೊಡುಗೆ ನೀಡುವ ವಿಶ್ವಾಸದಲ್ಲಿದ್ದರು. ಆದರೆ 48 ಎಸೆತಗಳಲ್ಲಿ 79 ರನ್‌ ಸಿಡಿಸಿ ನಿಸ್ಸಾಂಕ ಔಟಾದ ಬಳಿಕ ತಂಡ ಸೋಲಿನತ್ತ ಮುಖಮಾಡಿತು. 140ಕ್ಕೆ 1 ವಿಕೆಟ್‌ ನಷ್ಟಕ್ಕೊಳಗಾಗಿದ್ದ ತಂಡ ಕೊನೆ 30 ರನ್‌ಗಳಿಗೆ 9 ವಿಕೆಟ್‌ ಕಳೆದುಕೊಂಡಿತು. ರಿಯಾನ್‌ ಪರಾಗ್‌ 5 ರನ್‌ಗೆ 3 ವಿಕೆಟ್‌ ಕಿತ್ತರೆ, ಅರ್ಶ್‌ದೀಪ್‌ ಸಿಂಗ್‌ ಹಾಗೂ ಅಕ್ಷರ್‌ ಪಟೇಲ್‌ ತಲಾ 2 ವಿಕೆಟ್‌ ಪಡೆದರು.

 ಸ್ಕೋರ್‌: ಭಾರತ 20 ಓವರಲ್ಲಿ 213/7 (ಸೂರ್ಯ 59, ರಿಷಭ್‌ 49, ಜೈಸ್ವಾಲ್‌ 40, ಗಿಲ್‌ 34, ಪತಿರನ 4-40), ಶ್ರೀಲಂಕಾ 19.2 ಓವರ್‌ಗಳಲ್ಲಿ 170/10 (ನಿಸ್ಸಾಂಕ 79, ಮೆಂಡಿಸ್‌ 45, ಪರಾಗ್‌ 3-5) ಪಂದ್ಯಶ್ರೇಷ್ಠ: ಸೂರ್ಯಕುಮಾರ್‌

Share this article