ನ್ಯೂಯಾರ್ಕ್: ‘ಮಿನಿ ಇಂಡಿಯಾ’ ಖ್ಯಾತಿಯ ಅಮೆರಿಕ ವಿರುದ್ಧ ಸೋಲಿನ ಭೀತಿಗೆ ಒಳಗಾಗಿದ್ದರೂ ಎದ್ದು ಬಿದ್ದು ಗೆದ್ದ ಟೀಂ ಇಂಡಿಯಾ ಈ ಬಾರಿ ಟಿ20 ವಿಶ್ವಕಪ್‌ನಲ್ಲಿ ಸೂಪರ್-8 ಹಂತಕ್ಕೆ ಅಧಿಕೃತ ಪ್ರವೇಶ ಪಡೆದಿದೆ.
ಮತ್ತೊಮ್ಮೆ ಕಡಿಮೆ ಮೊತ್ತದ ಥ್ರಿಲ್ಲರ್‌ಗೆ ಸಾಕ್ಷಿಯಾದ ಪಂದ್ಯದಲ್ಲಿ ಭಾರತ 7 ವಿಕೆಟ್ ಜಯಭೇರಿ ಬಾರಿಸಿ, ಹ್ಯಾಟ್ರಿಕ್ ಗೆಲುವಿನೊಂದಿಗೆ ‘ಎ’ ಗುಂಪಿನಿಂದ ಮೊದಲ ತಂಡವಾಗಿ ಮುಂದಿನ ಸುತ್ತಿಗೇರಿತು. ಸೋಲಿನ ಹೊರತಾಗಿಯೂ ಅಮೆರಿಕ ಕೂಡಾ ಸೂಪರ್-8 ರೇಸ್‌ನಲ್ಲಿ ಉಳಿದುಕೊಂಡಿದೆ.ನ್ಯೂಯಾರ್ಕ್‌ನ ನಾಸೌ ಕ್ರೀಡಾಂಗಣದ ನಿಧಾನಗತಿ ಪಿಚ್‌ನಲ್ಲಿ ಮೊದಲು ಬ್ಯಾಟ್ ಮಾಡಿದ ಅಮೆರಿಕ 8 ವಿಕೆಟ್‌ಗೆ 110 ರನ್ ಕಲೆಹಾಕಿತು. ಸುಲಭ ಮೊತ್ತವಾದರೂ ಮತ್ತೊಮ್ಮೆ ಬ್ಯಾಟಿಂಗ್ ವೈಫಲ್ಯ ಕಂಡ ಭಾರತ ಗೆಲುವಿನ ದಡ ಸೇರಲು 18.2 ಓವರ್‌ಗಳನ್ನು ತೆಗೆದುಕೊಂಡಿತು.
ತಾವೆದುರಿಸಿದ ಮೊದಲ ಎಸೆತದಲ್ಲೇ ವಿರಾಟ್ ಕೊಹ್ಲಿಯನ್ನು ಪೆವಿಲಿಯನ್‌ಗೆ ಅಟ್ಟಿದ ಸೌರಭ್ ನೇತ್ರವಾಲ್ಕರ್, ಮುಂದಿನ ಓವರಲ್ಲಿ ರೋಹಿತ್ ಶರ್ಮಾ(03)ರನ್ನೂ ಔಟ್ ಮಾಡಿದರು. 10ಕ್ಕೆ 2 ವಿಕೆಟ್ ಕಳೆದುಕೊಂಡ ಬಳಿಕ ರಿಷಭ್ ಪಂತ್(18) ತಂಡವನ್ನು ಮೇಲೆತ್ತುವ ಮುನ್ಸೂಚನೆ ನೀಡಿದರೂ, 8ನೇ ಓವರಲ್ಲಿ ಔಟಾಗಿ ಡಗೌಟ್ ಸೇರಿದರು.
4ನೇ ವಿಕೆಟ್ ಜೊತೆಯಾದ ಸೂರ್ಯಕುಮಾರ್-ಶಿವಂ ದುಬೆ ರನ್ ಗಳಿಸಲು ಪೇಚಾಡುವಂತೆ ಕಂಡುಬಂದರೂ, ವಿಕೆಟ್ ಒಪ್ಪಿಸದೆ ಕೊನೆವರೆಗೂ ಕ್ರೀಸ್‌ನಲ್ಲಿ ನಿಂತು ತಂಡವನ್ನು ಗೆಲ್ಲಿಸಿದರು. ಈ ಜೋಡಿ ಮುರಿಯದ 4ನೇ ವಿಕೆಟ್‌ಗೆ 72 ರನ್ ಸೇರಿಸಿತು. ಸೂರ್ಯಕುಮಾರ್ 49 ಎಸೆತಗಳಲ್ಲಿ 50 ರನ್ ಸಿಡಿಸಿದರೆ, ದುಬೆ 35 ಎಸೆತಗಳಳ್ಲಿ 31 ರನ್ ಗಳಿಸಿ ತಂಡಕ್ಕೆ ಆಸರೆಯಾದರು. ಸೌರಭ್ 2 ವಿಕೆಟ್ ಕಿತ್ತರು.
ಅರ್ಶ್‌ದೀಪ್ ಕಮಾಲ್: ಮೊದಲ ಎಸೆತದಲ್ಲೇ ಶಾಯನ್ ಜಹಾಂಗೀರ್, ಓವರ್‌ನ ಕೊನೆ ಎಸೆತದಲ್ಲಿ ಆಂಡ್ರೀಸ್ ಗೌಸ್‌ರನ್ನು ಔಟ್ ಮಾಡಿದ ಅರ್ಶ್‌ದೀಪ್ ಆ ಬಳಿಕವೂ ಯುಎಸ್‌ಎ ಬ್ಯಾಟರ್‌ಗಳನ್ನು ಇನ್ನಿಲ್ಲದಂತೆ ಕಾಡಿದರು. ಭಾರತದ ವೇಗಿಗಳ ದಾಳಿ ಎಷ್ಟು ಪರಿಣಾಮಕಾರಿಯಾಗಿತ್ತೆಂದರೆ ಪವರ್-ಪ್ಲೇನಲ್ಲಿ ಯುಎಸ್‌ಎ ಕೇವಲ 1 ಸಿಕ್ಸರ್ ಮಾತ್ರ ಸಿಡಿಸಿತು.
ಈ ಹಂತದಲ್ಲಿ ಕೇವಲ 18 ರನ್ ಗಳಿಸಿದ್ದ ತಂಡ ಬಳಿಕ ಪುಟಿದೆದ್ದಿತು. ಸ್ಟೀವನ್ ಟೇಲರ್(24), ನಿತೀಶ್ ಕುಮಾರ್(27) ಭಾರತೀಯರ ದಾಳಿ ಹಿಮ್ಮೆಟ್ಟಿಸಿ ತಂಡಕ್ಕೆ ಅಲ್ಪ ಆಸರೆಯಾದರು. ಕೊನೆಯಲ್ಲಿ ಕೋರೆ ಆ್ಯಂಡರ್‌ಸನ್ 15, ಹರ್ಮೀತ್ ಸಿಂಗ್ 10, ಶಾಡ್ಲೆ ವ್ಯಾನ್ ಔಟಾಗದೆ 10 ರನ್ ಗಳಿಸಿ ತಂಡವನ್ನು 100ರ ಗಡಿ ದಾಟಿಸಿದರು. ಮೊನಚು ದಾಳಿ ಸಂಘಟಿಸಿದ ಅರ್ಶ್‌ದೀಪ್ 4 ಓವರಲ್ಲಿ 9 ರನ್‌ಗೆ 4 ವಿಕೆಟ್ ಕಿತ್ತರು. ಹಾರ್ದಿಕ್ 4 ಓವರಲ್ಲಿ 1 ಮೇಡಿನ್ ಸಹಿತ 2 ವಿಕೆಟ್ ಪಡೆದರು.ಸ್ಕೋರ್: ಯುಎಸ್‌ಎ 20 ಓವರಲ್ಲಿ 110/8 (ನಿತೀಶ್ 27, ಟೇಲರ್ 24, ಅರ್ಶ್‌ದೀಪ್ 4-9, ಹಾರ್ದಿಕ್ 2-14), ಭಾರತ 18.2 ಓವರಲ್ಲಿ 111/3 (ಸೂರ್ಯ 50*, ದುಬೆ 31*, ಸೌರಭ್ 1-18)
01ನೇ ಬಾರಿ: ವಿರಾಟ್ ಕೊಹ್ಲಿ ಟಿ20 ವಿಶ್ವಕಪ್‌ನಲ್ಲಿ ಮೊದಲ ಬಾರಿ ಸೊನ್ನೆಗೆ ಔಟಾದರು.
01ನೇ ಬೌಲರ್: ಟಿ20 ಇನ್ನಿಂಗ್ಸ್‌ನ ಮೊದಲ ಎಸೆತದಲ್ಲೇ ವಿಕೆಟ್ ಕಿತ್ತ ಮೊದಲ ಭಾರತೀಯ ಬೌಲರ್ ಅರ್ಶ್‌ದೀಪ್.
49 ಎಸೆತ: ಸೂರ್ಯಕುಮಾರ್ ಅರ್ಧಶತಕ ಬಾರಿಸಲು 49 ಎಸೆತ ತೆಗೆದುಕೊಂಡರು. ಇದು ಟಿ20 ವಿಶ್ವಕಪ್‌ನಲ್ಲಿ ಜಂಟಿ 3ನೇ ನಿಧಾನಗತಿ ಫಿಫ್ಟಿ. ಇತ್ತೀಚೆಗಷ್ಟೇ ರಿಜ್ವಾನ್ 52, ಮಿಲ್ಲರ್ 50 ಎಸೆತದಲ್ಲಿ ಫಿಫ್ಟಿ ಬಾರಿಸಿದ್ದರು.
17 ಓವರ್: ಯುಎಸ್‌ಎ ವಿರುದ್ಧ ಭಾರತದ ವೇಗಿಗಳು 17 ಓವರ್ ಬೌಲ್ ಮಾಡಿದರು. ಇದು ಟಿ20 ಕ್ರಿಕೆಟ್‌ನಲ್ಲೇ ಭಾರತದ ಗರಿಷ್ಠ.
ಅರ್ಶ್‌ದೀಪ್ 9 ರನ್ ನೀಡಿ 4 ವಿಕೆಟ್: ಹೊಸ ದಾಖಲೆ
ಬುಧವಾರ ಯುಎಸ್‌ಎ ವಿರುದ್ಧದ ಪಂದ್ಯದಲ್ಲಿ ಅರ್ಶ್‌ದೀಪ್ ಸಿಂಗ್ ಹೊಸ ದಾಖಲೆ ಬರೆದರು. ಮೊದಲ ಎಸೆತದಲ್ಲೇ ವಿಕೆಟ್ ಬೇಟೆ ಆರಂಭಿಸಿದ ಅರ್ಶ್‌ದೀಪ್ ಪಂದ್ಯದಲ್ಲಿ ಕೇವಲ 9 ರನ್ ನೀಡಿ 4 ವಿಕೆಟ್ ಕಬಳಿಸಿದರು. ಇದು ಟಿ20 ವಿಶ್ವಕಪ್‌ನಲ್ಲಿ ಭಾರತೀಯ ಬೌಲರ್‌ನ ಶ್ರೇಷ್ಠ ಪ್ರದರ್ಶನ. ಈ ಮೊದಲು 2014ರಲ್ಲಿ ಆರ್.ಆಶ್ವಿನ್ ಆಸ್ಟ್ರೇಲಿಯಾ ವಿರುದ್ಧ 11 ರನ್‌ಗೆ 4 ವಿಕೆಟ್, 2012ರಲ್ಲಿ ಇಂಗ್ಲೆಂಡ್ ವಿರುದ್ಧ ಹರ್ಭಜನ್ ಸಿಂಗ್ 12 ರನ್‌ಗೆ 4 ವಿಕೆಟ್, 2007ರಲ್ಲಿ ದ.ಆಫ್ರಿಕಾ ವಿರುದ್ಧ ಆರ್.ಪಿ.ಸಿಂಗ್ 19 ರನ್ ನೀಡಿ 4 ವಿಕೆಟ್ ಕಬಳಿಸಿದ್ದರು.
18: ಪವರ್‌ಪ್ಲೇನಲ್ಲಿ ಭಾರತ ವಿರುದ್ಧ ಅತಿ ಕನಿಷ್ಠ ಮೊತ್ತ
ಪಂದ್ಯದಲ್ಲಿ ಭಾರತ ವಿರುದ್ಧ ಯುಎಸ್‌ಎ ಪವರ್-ಪ್ಲೇ ಓವರ್‌ಗಳಲ್ಲಿ 2 ವಿಕೆಟ್ ಕಳೆದುಕೊಂಡು ಕೇವಲ 18 ರನ್ ಗಳಿಸಿತು. ಇದು ಟಿ20 ವಿಶ್ವಕಪ್‌ನಲ್ಲಿ ಭಾರತದ ವಿರುದ್ಧ ತಂಡವೊಂದು ಗಳಿಸಿದ ಅತಿ ಕನಿಷ್ಠ ಮೊತ್ತ. 2014ರಲ್ಲಿ ವೆಸ್ಟ್‌ಇಂಡೀಸ್ ತಂಡ ಪವರ್-ಪ್ಲೇನಲ್ಲಿ ಕೇವಲ 24 ರನ್ ಗಳಿಸಿತ್ತು.