ಕಾಂಗರೂ ಬೇಟೆಯಾಡಿ ಚಾಂಪಿಯನ್ಸ್‌ ಟ್ರೋಫಿ ಫೈನಲ್‌ಗೆ ಭಾರತ

KannadaprabhaNewsNetwork |  
Published : Mar 05, 2025, 12:35 AM IST
ವಿರಾಟ್‌ ಕೊಹ್ಲಿ | Kannada Prabha

ಸಾರಾಂಶ

ಆಸ್ಟ್ರೇಲಿಯಾ ವಿರುದ್ಧ ಸೆಮಿಫೈನಲ್‌ನಲ್ಲಿ 4 ವಿಕೆಟ್‌ ಗೆಲುವು. ಐಸಿಸಿ ಚಾಂಪಿಯನ್ಸ್‌ ಟ್ರೋಫಿಯಲ್ಲಿ ಸತತ 3ನೇ ಸಲ ಫೈನಲ್‌ಗೆ. ಆಸ್ಟ್ರೇಲಿಯಾ 264ಕ್ಕೆ ಆಲೌಟ್‌. ಚೇಸ್‌ ಮಾಸ್ಟರ್‌ ವಿರಾಟ್‌ 84 ರನ್‌. 48.1 ಓವರ್‌ಗಳಲ್ಲೇ ಗೆದ್ದ ಭಾರತ

ದುಬೈ: ಆಸ್ಟ್ರೇಲಿಯಾವನ್ನು ಸ್ಪಿನ್‌ ಮಂತ್ರದಿಂದ ಹಣಿದು, ಹೆಡ್ಡೇಕ್‌ನಿಂದ ಪಾರಾದ ಟೀಂ ಇಂಡಿಯಾ 9ನೇ ಆವೃತ್ತಿಯ ಐಸಿಸಿ ಚಾಂಪಿಯನ್ಸ್‌ ಟ್ರೋಫಿಯಲ್ಲಿ ಫೈನಲ್‌ಗೆ ಲಗ್ಗೆ ಇಟ್ಟಿದೆ. ಬೌಲರ್‌ಗಳ ಮೊನಚು ದಾಳಿ, ಚೇಸ್‌ ಮಾಸ್ಟರ್‌ ವಿರಾಟ್‌ ಕೊಹ್ಲಿ ಸೇರಿದಂತೆ ತಾರಾ ಬ್ಯಾಟರ್‌ಗಳ ಅಭೂತಪೂರ್ವ ಆಟದಿಂದಾಗಿ ಆಸ್ಟ್ರೇಲಿಯಾ ವಿರುದ್ಧ ಮಂಗಳವಾರ ನಡೆದ ಸೆಮಿಫೈನಲ್‌ನಲ್ಲ ಭಾರತ 4 ವಿಕೆಟ್‌ ಗೆಲುವು ಸಾಧಿಸಿತು. ಈ ಮೂಲಕ ಭಾರತ ಹ್ಯಾಟ್ರಿಕ್‌ ಫೈನಲ್‌ಗೆ ಪ್ರವೇಶಿಸಿದರೆ, ಆಸ್ಟ್ರೇಲಿಯಾದ 3ನೇ ಟ್ರೋಫಿ ಕನಸು ನುಚ್ಚುನೂರಾಯಿತು.ದುಬೈ ಕ್ರೀಡಾಂಗಣದ ಈಗ ಭಾರತದ ತವರು ಮೈದಾನ ಇದ್ದಂತೆ. ಹೀಗಾಗಿ ಬ್ಯಾಟಿಂಗ್‌ ಅಥವಾ ಬೌಲಿಂಗ್‌ ಯಾವುದೇ ಸಿಕ್ಕರೂ ಅದಕ್ಕೆ ಸಿದ್ಧವಾಗಿಯೇ ಬಂದಿತ್ತು. ಟಾಸ್‌ ಗೆದ್ದು ಬ್ಯಾಟಿಂಗ್‌ ಆಯ್ದುಕೊಂಡ ಆಸ್ಟ್ರೇಲಿಯಾಕ್ಕೆ ಭಾರತ ಹೆಚ್ಚಿನ ರನ್ ಗಳಿಸಲು ಅವಕಾಶ ನೀಡಲಿಲ್ಲ. ಆಸೀಸ್‌ 49.3 ಓವರ್‌ಗಳಲ್ಲಿ 264 ರನ್‌ಗೆ ಆಲೌಟಾಯಿತು.ಭಾರತಕ್ಕೆ ಸಿಕ್ಕ ಗುರಿ ದುಬೈನಲ್ಲಿ ಸ್ಪರ್ಧಾತ್ಮಕ ಮೊತ್ತವಾಗಿತ್ತು. ಹೀಗಾಗಿ ಅಪಾಯ ತಂದೊಡ್ಡದೆ ಜವಾಬ್ದಾರಿಯುವ ಆಟ ಪ್ರದರ್ಶಿಸಿದ ಭಾರತೀಯ ಬ್ಯಾಟರ್ಸ್‌, ಇನ್ನೂ 11 ಎಸೆತ ಬಾಕಿ ಇರುವಂತೆ ತಂಡವನ್ನು ಗೆಲ್ಲಿಸಿದರು.ಈ ಪಂದ್ಯದಲ್ಲಿ ವಿಫಲವಾಗಿದ್ದು ಶುಭ್‌ಮನ್‌ ಗಿಲ್‌ ಮಾತ್ರ. ಅವರು 8 ರನ್‌ಗೆ ವಿಕೆಟ್‌ ಒಪ್ಪಿಸಿದರು. ಉಳಿದಂತೆ ಎಲ್ಲಾ ಬ್ಯಾಟರ್‌ಗಳು ತಲಾ 25ಕ್ಕಿಂತ ಹೆಚ್ಚು ರನ್‌ ಬಾರಿಸಿ ತಂಡದ ಗೆಲುವಿನಲ್ಲಿ ಕೊಡುಗೆ ನೀಡಿದರು. ರೋಹಿತ್‌ 28 ರನ್‌ಗೆ ಔಟಾದ ಬಳಿಕ 3ನೇ ವಿಕೆಟ್‌ಗೆ ಜೊತೆಯಾದ ಶ್ರೇಯಸ್‌ ಅಯ್ಯರ್‌-ವಿರಾಟ್‌ ಕೊಹ್ಲಿ 111 ಎಸೆತಗಳಲ್ಲಿ 91 ರನ್‌ ಸೇರಿಸಿದರು. ಶ್ರೇಯಸ್‌ 45 ರನ್‌ ಗಳಿಸಿದ್ದಾಗ ಝಂಪಾ ಎಸೆತದಲ್ಲಿ ಕ್ಲೀನ್‌ ಬೌಲ್ಡ್‌ ಆದರು. ಅಕ್ಷರ್‌ ಪಟೇಲ್‌ 27 ರನ್‌ ಗಳಿಸಿ, ನೇಥನ್‌ ಎಲ್ಲಿಗೆ ವಿಕೆಟ್‌ ಒಪ್ಪಿಸಿದರು.ಈ ನಡುವೆ ಶತಕದತ್ತ ಮುನ್ನುಗ್ಗುತ್ತಿದ್ದ ವಿರಾಟ್‌ ಕೊಹ್ಲಿ ದೊಡ್ಡ ಹೊಡೆತಕ್ಕೆ ಕೈ ಹಾಕಿ ವಿಕೆಟ್ ಒಪ್ಪಿಸಬೇಕಾಯಿತು. 98 ಎಸೆತಗಳಲ್ಲಿ 5 ಬೌಂಡರಿಗಳೊಂದಿಗೆ 84 ರನ್‌ ಸಿಡಿಸಿದ ಕೊಹ್ಲಿ, ಝಂಪಾ ಎಸೆತದಲ್ಲಿ ಡ್ವಾರ್ಷಿಯಸ್‌ಗೆ ಕ್ಯಾಚ್‌ ನೀಡಿದರು. ಹಾರ್ದಿಕ್‌ ಪಾಂಡ್ಯ(28) ತಂಡವನ್ನು ಗೆಲುವಿನತ್ತ ತಂದು ನಿಲ್ಲಿಸಿದರೆ, ಕೆ.ಎಲ್‌.ರಾಹುಲ್‌ 34 ಎಸೆತಗಳಲ್ಲಿ 42 ರನ್‌ ಸಿಡಿಸಿ, ಸಿಕ್ಸರ್‌ ಮೂಲಕ ತಂಡಕ್ಕೆ ಗೆಲುವು ತಂದುಕೊಟ್ಟರು. ಎಲ್ಲಿಸ್‌, ಝಂಪಾ ತಲಾ 2 ವಿಕೆಟ್‌ ಕಿತ್ತರು.ಹೆಡ್ಡೇಕ್‌ನಿಂದ ಪಾರು: ಭಾರತಕ್ಕೆ ಈ ಪಂದ್ಯದಲ್ಲಿ ಗೆಲುವು ಸುಲಭವಾಗಿದ್ದು ಟ್ರ್ಯಾವಿಸ್‌ ಹೆಡ್‌ರ ಸಾಧಾರಣ ಆಟ. ಹೆಡ್‌ ಎಷ್ಟು ಅಪಾಯಕಾರಿ ಎಂದು ಗೊತ್ತಿದ್ದ ಭಾರತ, ಅವರನ್ನು ಕಟ್ಟಿಹಾಕಲು ಇನ್ನಿಂಗ್ಸ್‌ನ ಆರಂಭಿಕ 10 ಓವರ್‌ಗಳಲ್ಲೇ ತನ್ನ ಬತ್ತಳಿಕೆಯಲ್ಲಿದ್ದ ಐವರು ಪ್ರಮುಖ ಬೌಲರ್‌ಗಳನ್ನು ಉಪಯೋಗಿಸಿತು. 33 ಎಸೆತಗಳಲ್ಲಿ 39 ರನ್‌ ಸಿಡಿಸಿದ ಹೆಡ್‌ 9ನೇ ಓವರ್‌ನಲ್ಲಿ, ವರುಣ್‌ ಎಸೆತದಲ್ಲಿ ಗಿಲ್‌ ಕ್ಯಾಚ್‌ ನೀಡಿದರು. ಬಳಿಕ ತಂಡಕ್ಕೆ ನೆರವಾಗಿದ್ದು ಸ್ಟೀವ್‌ ಸ್ಮಿತ್‌ ಮತ್ತು ಅಲೆಕ್ಸ್‌ ಕೇರಿ. ಸ್ಮಿತ್‌ 96 ಎಸೆತಗಳಲ್ಲಿ 73 ರನ್‌ ಸಿಡಿಸಿದರೆ, ಕೊನೆಯಲ್ಲಿ ಮಿಂಚಿದ ಕೇರ 57 ಎಸೆತಗಳಲ್ಲಿ 61 ರನ್‌ ಬಾರಿಸಿ ತಂಡದ ಮೊತ್ತವನ್ನು 260ರ ಗಡಿ ದಾಟಿಸಿದರು. ಶಮಿ 3, ವರುಣ್‌, ಜಡೇಜಾ ತಲಾ 2 ವಿಕೆಟ್‌ ಕಿತ್ತರು.ಸ್ಕೋರ್: ಆಸ್ಟ್ರೇಲಿಯಾ 49.3 ಓವರಲ್ಲಿ 264/10 (ಸ್ಮಿತ್‌ 73, ಕೇರಿ 61, ಹೆಡ್‌ 39, ಶಮಿ 3-48, ಜಡೇಜಾ 2-40, ವರುಣ್‌ 2-49), ಭಾರತ 48.1 ಓವರಲ್ಲಿ 267/6 (ಕೊಹ್ಲಿ 84, ಶ್ರೇಯಸ್‌ 45, ರಾಹುಲ್‌ ಔಟಾಗದೆ 42, ಎಲ್ಲಿಸ್‌ 2-49, ಝಂಪಾ 2-60) ಪಂದ್ಯಶ್ರೇಷ್ಠ: ವಿರಾಟ್‌ ಕೊಹ್ಲಿ

5ನೇ ಬಾರಿ ಫೈನಲ್‌ ಪ್ರವೇಶಿಸಿದ ಭಾರತ

ಭಾರತ ತಂಡ ಚಾಂಪಿಯನ್ಸ್‌ ಟ್ರೋಫಿಯಲ್ಲಿ ದಾಖಲೆಯ 5ನೇ ಬಾರಿ ಫೈನಲ್‌ಗೇರಿದೆ. 2002, 2013ರಲ್ಲಿ ಟ್ರೋಫಿ ಗೆದ್ದಿರುವ ತಂಡ, 2000 ಹಾಗೂ 2017ರಲ್ಲಿ ಫೈನಲ್‌ನಲ್ಲಿ ಸೋತು ರನ್ನರ್‌-ಅಪ್‌ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿತ್ತು.

27 ವರ್ಷದಿಂದ ಭಾರತಕ್ಕೆ ಸೆಮಿಫೈನಲಲ್ಲಿ ಸೋಲಿಲ್ಲ

ಚಾಂಪಿಯನ್ಸ್‌ ಟ್ರೋಫಿಯಲ್ಲಿ ಭಾರತ ಕಳೆದ 27 ವರ್ಷಗಳಿಂದ ಅಜೇಯ ದಾಖಲೆ ಹೊಂದಿದೆ. 1998ರ ಚೊಚ್ಚಲ ಆವೃತ್ತಿಯಲ್ಲಿ ಭಾರತ ಫೈನಲ್‌ನಲ್ಲಿ ಸೋತಿತ್ತು. ಆ ಬಳಿಕ ಸೆಮಿಫೈನಲ್‌ಗೇರಿದ ಪ್ರತಿ ಬಾರಿಯೂ ತಂಡ ಫೈನಲ್‌ ಪ್ರವೇಶಿಸಿದೆ. 2004, 2006, 2009ರಲ್ಲಿ ಗುಂಪು ಹಂತದಲ್ಲೇ ಹೊರಬಿದ್ದಿತ್ತು.

ಲಾಹೋರ್‌ನಿಂದ ದುಬೈಗೆ ಫೈನಲ್‌ ಪಂದ್ಯ ಸ್ಥಳಾಂತರ

ಟೂರ್ನಿಯ ಫೈನಲ್‌ ಪಂದ್ಯಕ್ಕೆ ದುಬೈ ಅಥವಾ ಲಾಹೋರ್‌ ಕ್ರೀಡಾಂಗಣವನ್ನು ಪಟ್ಟಿ ಮಾಡಲಾಗಿತ್ತು. ಭಾರತ ಫೈನಲ್‌ಗೇರಿದರೆ ಪಂದ್ಯ ದುಬೈನಲ್ಲಿ, ಇತರ ತಂಡಗಳು ಫೈನಲ್‌ಗೇರಿದ್ದರೆ ಪಂದ್ಯ ಲಾಹೋರ್‌ನಲ್ಲಿ ನಡೆಯಬೇಕಿತ್ತು. ಸದ್ಯ ಭಾರತ ತಂಡ ಫೈನಲ್‌ಗೇರಿದ್ದರಿಂದ ಈ ಪಂದ್ಯ ದುಬೈನಲ್ಲಿ ಮಾ.9ರಂದು ನಡೆಯಲಿದೆ. ದಕ್ಷಿಣ ಆಫ್ರಿಕಾ ಅಥವಾ ನ್ಯೂಜಿಲೆಂಡ್‌ ತಂಡದ ವಿರುದ್ಧ ಭಾರತ ಫೈನಲ್‌ ಆಡಲಿದೆ.

PREV
Get the latest sports news in Kannada (ಕ್ರೀಡಾ ಸುದ್ದಿ) — live cricket scores, football highlights, tennis, badminton, and updates on all major sports events. Stay ahead with Kannada Prabha’s full-coverage sports reporting.

Recommended Stories

ವಿಶ್ವಕಪ್‌ ಪಂದ್ಯ ಬಹಿಷ್ಕಾರಕ್ಕಿದೆ ದೀರ್ಘ ಇತಿಹಾಸ
ರೋಲರ್‌ ಸ್ಕೇಟಿಂಗ್‌: ಮಂಗಳೂರು ಮೂಲದ ಅಹ್ಯಾನ್ ಅನ್ವರ್‌ಗೆ ಚಿನ್ನ