ಇಂದಿನಿಂದ 2ನೇ ಟೆಸ್ಟ್‌ : ಬೆಂಗಳೂರಿನ ಸೋಲಿನ ಬಳಿಕ ಪುಣೆ ಟೆಸ್ಟ್‌ನಲ್ಲಿ ಪುಟಿದೇಳುತ್ತಾ ಟೀಂ ಇಂಡಿಯಾ?

KannadaprabhaNewsNetwork |  
Published : Oct 24, 2024, 12:35 AM ISTUpdated : Oct 24, 2024, 04:10 AM IST
ರಾಹುಲ್‌ ಅಭ್ಯಾಸ | Kannada Prabha

ಸಾರಾಂಶ

ಬೆಂಗಳೂರಿನ ಮೊದಲ ಟೆಸ್ಟ್‌ನಲ್ಲಿ ಆಘಾತಕಾರಿ ಸೋಲಿಗೆ ತುತ್ತಾಗಿದ್ದ ಟೀಂ ಇಂಡಿಯಾ ಈಗ ಸರಣಿ ಉಳಿಸಿಕೊಳ್ಳಬೇಕಾದ ಒತ್ತಡದಲ್ಲಿದೆ. ರೋಹಿತ್‌ ಶರ್ಮಾ ನಾಯಕತ್ವದ ಭಾರತ ತಂಡ ಗುರುವಾರದಿಂದ ನ್ಯೂಜಿಲೆಂಡ್‌ ವಿರುದ್ಧ 2ನೇ ಟೆಸ್ಟ್‌ ಪಂದ್ಯದಲ್ಲಿ ಕಣಕ್ಕಿಳಿಯಲಿದೆ.

ಪುಣೆ: ಬೆಂಗಳೂರಿನ ಮೊದಲ ಟೆಸ್ಟ್‌ನಲ್ಲಿ ಆಘಾತಕಾರಿ ಸೋಲಿಗೆ ತುತ್ತಾಗಿದ್ದ ಟೀಂ ಇಂಡಿಯಾ ಈಗ ಸರಣಿ ಉಳಿಸಿಕೊಳ್ಳಬೇಕಾದ ಒತ್ತಡದಲ್ಲಿದೆ. ರೋಹಿತ್‌ ಶರ್ಮಾ ನಾಯಕತ್ವದ ಭಾರತ ತಂಡ ಗುರುವಾರದಿಂದ ನ್ಯೂಜಿಲೆಂಡ್‌ ವಿರುದ್ಧ 2ನೇ ಟೆಸ್ಟ್‌ ಪಂದ್ಯದಲ್ಲಿ ಕಣಕ್ಕಿಳಿಯಲಿದೆ. 

ಬೆಂಗಳೂರಿನಲ್ಲಿ ಕುಗ್ಗಿ ಹೋಗಿದ್ದ ಭಾರತ, ಪುಣೆ ಕ್ರೀಡಾಂಗಣದಲ್ಲಿ ಪುಟಿದೇಳುತ್ತಾ ಎಂಬ ಕುತೂಹಲ ಸದ್ಯ ಅಭಿಮಾನಿಗಳಲ್ಲಿದೆ.ಮೊದಲ ಇನ್ನಿಂಗ್ಸ್‌ನಲ್ಲಿ ಅಚ್ಚರಿ ರೀತಿಯಲ್ಲಿ ಕೇವಲ 46 ರನ್‌ಗೆ ಸರ್ವಪತನ ಕಂಡಿದ್ದ ರೋಹಿತ್‌ ಪಡೆ, 2ನೇ ಇನ್ನಿಂಗ್ಸ್‌ನಲ್ಲಿ ದಿಟ್ಟ ಹೋರಾಟ ಪ್ರದರ್ಶಿಸಿದ್ದರೂ ಗೆಲುವು ಸಿಕ್ಕಿರಲಿಲ್ಲ. ತಂಡ 3 ಪಂದ್ಯಗಳ ಸರಣಿಯನ್ನು 1-1ರಿಂದ ಸಮಬಲಗೊಳಿಸಬೇಕಿದ್ದರೆ ಪುಣೆ ಟೆಸ್ಟ್‌ನಲ್ಲಿ ಗೆಲ್ಲಲೇಬೇಕು. ವಿಶ್ವ ಟೆಸ್ಟ್‌ ಚಾಂಪಿಯನ್‌ಶಿಪ್‌ ಫೈನಲ್‌ ದೃಷ್ಟಿಯಲ್ಲೂ ಭಾರತಕ್ಕೆ ಈ ಪಂದ್ಯದಲ್ಲಿ ಗೆಲುವು ಅತ್ಯಗತ್ಯ.

ಪಂದ್ಯದಲ್ಲಿ ಭಾರತ ಕಮ್‌ಬ್ಯಾಕ್‌ ಮಾಡುವ ನಿರೀಕ್ಷೆ ಇದ್ದರೂ ತಂಡದಲ್ಲಿ ಆಯ್ಕೆ ಗೊಂದಲ ಎದುರಾಗುವುದು ಖಚಿತ. ಮೊದಲ ಪಂದ್ಯಕ್ಕೆ ಗಾಯದಿಂದಾಗಿ ಶುಭ್‌ಮನ್ ಗಿಲ್‌ ಗೈರಾಗಿದ್ದರು. ರಿಷಭ್‌ ಪಂತ್‌ 2ನೇ ಇನ್ನಿಂಗ್ಸ್‌ ವೇಳೆ ಗಾಯಗೊಂಡಿದ್ದರು. ಸದ್ಯ ಇವರಿಬ್ಬರೂ ಆಯ್ಕೆಗೆ ಲಭ್ಯವಿದ್ದಾರೆ. ಆದರೆ ಗಿಲ್‌ ಬದಲು ತಂಡದಲ್ಲಿ ಸ್ಥಾನ ಗಿಟ್ಟಿಸಿಕೊಂಡಿದ್ದ ಸರ್ಫರಾಜ್‌ ಖಾನ್‌ ಅಭೂತಪೂರ್ವ ಹೋರಾಟ ಪ್ರದರ್ಶಿಸಿ 150 ರನ್‌ ಸಿಡಿಸಿದ್ದರು. ಹೀಗಾಗಿ 2ನೇ ಪಂದ್ಯಕ್ಕೆ ಗಿಲ್‌ ಅಥವಾ ಸರ್ಫರಾಜ್ ಪೈಕಿ ಯಾರನ್ನು ತಂಡಕ್ಕೆ ಸೇರಿಸಿಕೊಳ್ಳುವುದು ಎಂಬ ಗೊಂದಲ ಕೋಚ್‌ ಗಂಭೀರ್‌, ನಾಯಕ ರೋಹಿತ್‌ ಮುಂದಿದೆ.

ರಾಹುಲ್‌ಗೆ ಮತ್ತೊಂದು ಚಾನ್ಸ್‌?: ಒಂದು ವೇಳೆ ಗಿಲ್‌ಗೆ ಅವಕಾಶ ಸಿಕ್ಕರೆ ಆಗ ಸರ್ಫರಾಜ್‌ ಅಥವಾ ಕೆ.ಎಲ್‌.ರಾಹುಲ್‌ ಪೈಕಿ ಒಬ್ಬರು ತಂಡದಿಂದ ಹೊರಗುಳಿಯಬೇಕಾಗುತ್ತದೆ. ಆದರೆ ಗಂಭೀರ್‌ ಹೇಳಿಕೆ ಗಮನಿಸಿದರೆ ರಾಹುಲ್‌ಗೆ ಮತ್ತೊಂದು ಅವಕಾಶ ಸಿಗುವ ಸಾಧ್ಯತೆ ಇದೆ. ಹೀಗಾದರೆ ಸರ್ಫರಾಜ್‌ ಅನಿವಾರ್ಯವಾಗಿ ಜಾಗ ಬಿಟ್ಟುಕೊಡಬೇಕಾಗಬಹುದು. 

ಮೂವರು ಸ್ಪಿನ್ನರ್ಸ್‌ ಸಾಧ್ಯತೆ: ಬೆಂಗಳೂರಿಗೆ ಹೋಲಿಸಿದರೆ ಪುಣೆ ಪಿಚ್‌ ನಿಧಾನಗತಿಯಲ್ಲಿರಲಿದ್ದು, ಸ್ಪಿನ್ನರ್‌ಗಳು ಹೆಚ್ಚಿನ ನೆರವು ಪಡೆಯಬಲ್ಲರು. ಹೀಗಾಗಿ ಭಾರತ ಈ ಪಂದ್ಯದಲ್ಲಿ 3 ತಜ್ಞ ಸ್ಪಿನ್ನರ್‌ಗಳನ್ನು ಆಡಿಸುವ ನಿರೀಕ್ಷೆಯಿದೆ. ಆರ್‌.ಅಶ್ವಿನ್‌, ಜಡೇಜಾ ಜೊತೆ 3ನೇ ಸ್ಪಿನ್ನರ್‌ ಸ್ಥಾನಕ್ಕೆ ಕುಲ್ದೀಪ್‌ ಯಾದವ್‌, ಅಕ್ಷರ್‌ ಪಟೇಲ್‌ ಹಾಗೂ ವಾಷಿಂಗ್ಟನ್‌ ಸುಂದರ್‌ ನಡುವೆ ಪೈಪೋಟಿಯಿದೆ. ಇನ್ನು, ಮೊನಚು ಕಳೆದುಕೊಂಡಿರುವ ಮೊಹಮದ್‌ ಸಿರಾಜ್‌ ಬದಲು ಆಕಾಶ್‌ದೀಪ್‌ಗೆ ಸ್ಥಾನ ಸಿಗಬಹುದು.

ಸರಣಿ ಗುರಿ: ಮೊದಲ ಪಂದ್ಯದ ಗೆಲುವಿನ ಹುಮ್ಮಸ್ಸಿನಲ್ಲಿರುವ ನ್ಯೂಜಿಲೆಂಡ್‌ ಸದ್ಯ ಸರಣಿ ಗೆಲುವಿನ ಮೇಲೆ ಕಣ್ಣಿಟ್ಟಿದೆ. ತಂಡ ಈ ಪಂದ್ಯದಲ್ಲೂ ಕೇನ್‌ ವಿಲಿಯಮ್ಸನ್‌ ಸೇವೆಯಿಂದ ವಂಚಿತವಾಗಲಿದೆ. ಕಾನ್‌ವೇ, ರಚಿನ್‌ ರವೀಂದ್ರ, ಮ್ಯಾಟ್‌ ಹೆನ್ರಿ, ವಿಲಿಯಂ ರೂರ್ಕಿ ಮೇಲೆ ತಂಡ ಹೆಚ್ಚಿನ ನಿರೀಕ್ಷೆ ಇಟ್ಟುಕೊಂಡಿದೆ.

ಒಟ್ಟು ಮುಖಾಮುಖಿ: 63ಭಾರತ: 22ನ್ಯೂಜಿಲೆಂಡ್‌: 14ಡ್ರಾ: 

27ಸಂಭವನೀಯ ಆಟಗಾರರ ಪಟ್ಟಿ

ಭಾರತ: ರೋಹಿತ್‌(ನಾಯಕ), ಜೈಸ್ವಾಲ್, ಶುಭ್‌ಮನ್‌, ವಿರಾಟ್‌, ರಿಷಭ್‌, /ಸರ್ಫರಾಜ್‌/ರಾಹುಲ್‌, ಜಡೇಜಾ, ಅಶ್ವಿನ್‌, ಕುಲ್ದೀಪ್‌, ಬೂಮ್ರಾ, ಸಿರಾಜ್‌/ಆಕಾಶ್‌ದೀಪ್‌ನ್ಯೂಜಿಲೆಂಡ್‌: ಕಾನ್‌ವೇ, ಲೇಥಮ್‌(ನಾಯಕ), ವಿಲ್‌ ಯಂಗ್‌, ರಚಿನ್‌ ರವೀಂದ್ರ, ಡ್ಯಾರಿಲ್‌ ಮಿಚೆಲ್‌, ಬ್ಲಂಡೆಲ್‌, ಗ್ಲೆನ್‌ ಫಿಲಿಪ್ಸ್‌, ಮಿಚೆಲ್‌ ಸ್ಯಾಂಟ್ನರ್‌, ಸೌಥಿ/ರೂರ್ಕೆ, ಹೆನ್ರಿ, ಅಜಾಜ್‌.ಪಂದ್ಯ ಆರಂಭ: ಬೆಳಗ್ಗೆ 9.30ಕ್ಕೆ, ನೇರಪ್ರಸಾರ: ಸ್ಪೋರ್ಟ್ಸ್‌ 18 ಚಾನೆಲ್‌, ಜಿಯೋ ಸಿನಿಮಾ ಆ್ಯಪ್‌.

19 ರನ್‌: ಟೆಸ್ಟ್‌ನಲ್ಲಿ 3000 ರನ್‌ ಮೈಲುಗಲ್ಲು ಸಾಧಿಸಲು ಕೆ.ಎಲ್‌.ರಾಹುಲ್‌ಗೆ 19 ರನ್‌ ಅಗತ್ಯವಿದೆ.

03 ಪಂದ್ಯ: ಪುಣೆ ಕ್ರೀಡಾಂಗಣದಲ್ಲಿದು 3ನೇ ಟೆಸ್ಟ್‌. ಇಲ್ಲಿ ಭಾರತ ತಲಾ 1 ಗೆಲುವು, ಸೋಲು ಕಂಡಿದೆ.

ತವರಲ್ಲಿ ಭಾರತ 18 ಸರಣಿಯಲ್ಲಿ ಅಜೇಯ

ಭಾರತ 2012ರಿಂದ ತವರಿನಲ್ಲಿ ಒಂದೂ ಟೆಸ್ಟ್‌ ಸರಣಿ ಸೋತಿಲ್ಲ. ಕಳೆದ 18 ಸರಣಿಗಳಲ್ಲೂ ಭಾರತ ಗೆಲುವು ಸಾಧಿಸಿದೆ. ನ್ಯೂಜಿಲೆಂಡ್‌ ವಿರುದ್ಧ ಕೊನೆ 2 ಟೆಸ್ಟ್‌ನಲ್ಲಿ ಗೆಲ್ಲುವ ಮೂಲಕ ತವರಿನ ಸರಣಿ ಗೆಲುವಿನ ಓಟವನ್ನು 19ಕ್ಕೆ ಹೆಚ್ಚಿಸಲು ಭಾರತ ಕಾಯುತ್ತಿದೆ.

PREV
Get the latest sports news in Kannada (ಕ್ರೀಡಾ ಸುದ್ದಿ) — live cricket scores, football highlights, tennis, badminton, and updates on all major sports events. Stay ahead with Kannada Prabha’s full-coverage sports reporting.

Recommended Stories

ದಾಖಲೆಯ ಚೇಸ್‌: 10ನೇ ಸಲ ಭಾರತ ಫೈನಲ್‌ಗೆ
2ನೇ ಕಪ್‌ ಮೇಲೆ ಆರ್‌ಸಿಬಿ ಕಣ್ಣು