ಪಾರ್ಲ್: 2018ರ ಬಳಿಕ ಮತ್ತೊಮ್ಮೆ ಹರಿಣಗಳ ತವರಿನಲ್ಲಿ ಏಕದಿನ ಸರಣಿ ಗೆಲ್ಲಲು ಎದುರು ನೋಡುತ್ತಿರುವ ಟೀಂ ಇಂಡಿಯಾ, ಗುರುವಾರ ದ.ಆಫ್ರಿಕಾ ವಿರುದ್ಧದ 3ನೇ ಹಾಗೂ ಕೊನೆ ಏಕದಿನ ಪಂದ್ಯದಲ್ಲಿ ಕಣಕ್ಕಿಳಿಯಲಿದೆ. ಸರಣಿಯ ಮೊದಲೆರಡು ಪಂದ್ಯಗಳಲ್ಲಿ ಉಭಯ ತಂಡಗಳು ತಲಾ 1 ಗೆಲುವು ಸಾಧಿಸಿದ್ದು, ಪಾರ್ಲ್ ಕ್ರೀಡಾಂಗಣದಲ್ಲಿ ನಡೆಯಲಿರುವ ಪಂದ್ಯ ‘ಫೈನಲ್’ ಎನಿಸಿಕೊಂಡಿದೆ.
ಕೆ.ಎಲ್.ರಾಹುಲ್ ನಾಯಕತ್ವದ ಭಾರತ ಸರಣಿಯಲ್ಲಿ ಹೇಳಿಕೊಳ್ಳುವ ಪ್ರದರ್ಶನ ನೀಡಿಲ್ಲ. ಆರಂಭಿಕ ಪಂದ್ಯದಲ್ಲಿ ಮೊನಚು ದಾಳಿ ಸಂಘಟಿಸಿದ್ದ ಭಾರತ, 2ನೇ ಪಂದ್ಯದಲ್ಲಿ ಹರಿಣ ಪಡೆಯ ಮಾರಕ ದಾಳಿ ಮುಂದೆ ತತ್ತರಿಸಿತ್ತು. ಭಾರತ ಪರ ಮೊದಲ ಬಾರಿ ಆಡುತ್ತಿದ್ದರೂ ಸಾಯಿ ಸುದರ್ಶನ್ 2 ಅರ್ಧಶತಕಗಳೊಂದಿಗೆ ಗಮನ ಸೆಳೆದಿದ್ದಾರೆ. ಆದರೆ ಋತುರಾಜ್ ಗಾಯಕ್ವಾಡ್, ತಿಲಕ್ ವರ್ಮಾ, ಸಂಜು ಸ್ಯಾಮ್ಸನ್ ಸಿಕ್ಕ ಅವಕಾಶ ಬಳಸಿಕೊಳ್ಳಬೇಕಿದ್ದು, ರಾಹುಲ್ ಮೇಲೂ ಭಾರೀ ನಿರೀಕ್ಷೆ ಇಡಲಾಗಿದೆ. ರಜತ್ ಪಾಟೀದಾರ್ ಪಾದಾರ್ಪಣೆ ನಿರೀಕ್ಷೆಯಲ್ಲಿದ್ದು, ಅವಕಾಶ ಸಿಕ್ಕರೆ ಅವರಿಗೆ ತಿಲಕ್ ಜಾಗ ಬಿಟ್ಟುಕೊಡಬೇಕಾಗಬಹುದು. ರಿಂಕು ಸಿಂಗ್‌ರ ಟಿ20 ಆಟ ನೋಡಿರುವ ಅಭಿಮಾನಿಗಳು ಅವರಿಂದ ಏಕದಿನದಲ್ಲೂ ಸ್ಫೋಟಕ ಆಟ ನಿರೀಕ್ಷಿಸುತ್ತಿದ್ದಾರೆ.ಮತ್ತೊಂದೆಡೆ ಮೊದಲ ಪಂದ್ಯದ ಆಘಾತದ ಬಳಿಕ ದ.ಆಫ್ರಿಕಾ 2ನೇ ಪಂದ್ಯದಲ್ಲಿ ಸುಧಾರಿತ ಪ್ರದರ್ಶನದೊಂದಿಗೆ ಭಾರತಕ್ಕೆ ತಿರುಗೇಟು ನೀಡಿದೆ. ಈ ಪಂದ್ಯದಲ್ಲೂ ಅಬ್ಬರಿಸುವ ಮೂಲಕ ತವರಿನಲ್ಲಿ ಸರಣಿ ಸೋಲಿನ ಮುಖಭಂಗದಿಂದಾ ಪಾರಾಗಲು ಎದುರು ನೋಡುತ್ತಿದೆ.
-ಒಟ್ಟು ಮುಖಾಮುಖಿ: 93ಭಾರತ: 39ದ.ಆಫ್ರಿಕಾ: 51
ಫಲಿತಾಂಶವಿಲ್ಲ: 03ಸಂಭವನೀಯ ಆಟಗಾರರ ಪಟ್ಟಿಭಾರತ: ಋತುರಾಜ್, ಸಾಯಿ ಸುದರ್ಶನ್, ತಿಲಕ್/ರಜತ್, ರಿಂಕು, ರಾಹುಲ್(ನಾಯಕ), ಸ್ಯಾಮ್ಸನ್, ಅಕ್ಷರ್, ಅರ್ಶ್‌ದೀಪ್, ಆವೇಶ್, ಕುಲ್ದೀಪ್, ಮುಕೇಶ್.
ದ.ಆಫ್ರಿಕಾ: ಹೆಂಡ್ರಿಕ್ಸ್, ಡೆ ಜೊರ್ಜಿ, ಡುಸ್ಸೆನ್, ಮಾರ್ಕ್‌ರಮ್(ನಾಯಕ), ಕ್ಲಾಸೆನ್, ಮಿಲ್ಲರ್, ಮುಲ್ಡರ್, ಬರ್ಗರ್, ವಿಲಿಯಮ್ಸ್, ಕೇಶವ್, ಬ್ಯೂರನ್ ಹೆಂಡ್ರಿಕ್ಸ್.ಪಂದ್ಯ ಆರಂಭ: ಮಧ್ಯಾಹ್ನ 4.30ಕ್ಕೆ, ನೇರ ಪ್ರಸಾರ: ಸ್ಟಾರ್ ಸ್ಪೋರ್ಟ್ಸ್/ಡಿಸ್ನಿ+ ಹಾಟ್‌ಸ್ಟಾರ್
-ಪಿಚ್ ರಿಪೋರ್ಟ್
ಬೊಲಾಂಡ್ ಪಾರ್ಕ್ ಕ್ರೀಡಾಂಗಣದ ಪಿಚ್ ಬ್ಯಾಟಿಂಗ್ ಸ್ನೇಹಿಯಾಗಿದ್ದು, ದೊಡ್ಡ ಮೊತ್ತ ನಿರೀಕ್ಷಿಸಲಾಗಿದೆ. ಇಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ತಂಡಕ್ಕೆ ಹೆಚ್ಚಿನ ಲಾಭವಾದ ಉದಾಹರಣೆಯಿದೆ. ಪಂದ್ಯಕ್ಕೆ ಮಳೆ ಭೀತಿ ಇಲ್ಲ.