ಕೌಲಾಲಂಪುರ: 2ನೇ ಆವೃತ್ತಿ ಐಸಿಸಿ ಅಂಡರ್-19 ಮಹಿಳಾ ಟಿ20 ವಿಶ್ವಕಪ್‌ಗೆ ಶನಿವಾರ ಚಾಲನೆ ಸಿಗಲಿದೆ. 2023ರ ಚೊಚ್ಚಲ ಆವೃತ್ತಿಯಲ್ಲಿ ಟ್ರೋಫಿ ಗೆದ್ದಿದ್ದ ಭಾರತ ಸತತ 2ನೇ ಬಾರಿ ಚಾಂಪಿಯನ್ ಪಟ್ಟ ಅಲಂಕರಿಸುವ ನಿರೀಕ್ಷೆಯೊಂದಿಗೆ ಟೂರ್ನಿಯಲ್ಲಿ ಕಣಕ್ಕಿಳಿಯಲಿದೆ. ಟೂರ್ನಿಗೆ ಮಲೇಷ್ಯಾದ ಕೌಲಾಲಂಪುರ ಆತಿಥ್ಯ ವಹಿಸಲಿದೆ.ಈ ಬಾರಿ ಟೂರ್ನಿಯಲ್ಲಿ ಒಟ್ಟು 16 ತಂಡಗಳು ಪಾಲ್ಗೊಳ್ಳಲಿವೆ.
ಉದ್ಘಾಟನಾ ಪಂದ್ಯದಲ್ಲಿ ಶನಿವಾರ ಆಸ್ಟ್ರೇಲಿಯಾ ಹಾಗೂ ಸ್ಕಾಟ್ಲೆಂಡ್ ತಂಡಗಳು ಸೆಣಸಾಡಲಿವೆ. ಭಾರತದ ಜೊತೆ ಆಸ್ಟ್ರೇಲಿಯಾ, ಇಂಗ್ಲೆಂಡ್, ದಕ್ಷಿಣ ಆಫ್ರಿಕಾ, ನ್ಯೂಜಿಲೆಂಡ್ ತಂಡಗಳು ಪ್ರಶಸ್ತಿ ಗೆಲ್ಲುವ ರೇಸ್‌ನಲ್ಲಿ ಮುಂಚೂಣಿಯಲ್ಲಿವೆ. ಭಾರತ ‘ಎ’ ಗುಂಪಿನಲ್ಲಿ ಮಲೇಷ್ಯಾ, ಶ್ರೀಲಂಕಾ, ವೆಸ್ಟ್‌ಇಂಡೀಸ್ ಜೊತೆ ಸ್ಥಾನ ಗಿಟ್ಟಿಸಿಕೊಂಡಿವೆ. ಭಾರತ ತನ್ನ ಮೊದಲ ಪಂದ್ಯವನ್ನು ಜ.19ರಂದು ವಿಂಡೀಸ್ ವಿರುದ್ಧ ಆಡಲಿದೆ.
ಟೂರ್ನಿ ಮಾದರಿ: ಈ ಬಾರಿ ಟೂರ್ನಿಯ 16 ತಂಡಗಳನ್ನು ತಲಾ 4 ತಂಡಗಳ 4 ಗುಂಪುಗಳನ್ನಾಗಿ ವಿಂಗಡಿಸಲಾಗಿದೆ. ಪ್ರತಿ ತಂಡಗಳು ಗುಂಪಿನ ಇತರ ತಂಡಗಳ ಜೊತೆ ಒಮ್ಮೆ ಸೆಣಸಾಡಲಿವೆ. ಗುಂಪಿನಲ್ಲಿ ಅಗ್ರ-3 ಸ್ಥಾನ ಪಡೆದ ತಂಡಗಳು ಸೂಪರ್-6 ಪ್ರವೇಶಿಸಲಿವೆ. ಸೂಪರ್-6 ಹಂತದ 12 ತಂಡಗಳನ್ನು 2 ಗುಂಪುಗಳನ್ನಾಗಿ ವಿಂಗಡಿಸಲಾಗುತ್ತದೆ. ಗುಂಪಿನ ಅಗ್ರ-2 ತಂಡಗಳು ಸೆಮಿಫೈನಲ್ ಪ್ರವೇಶಿಸಲಿವೆ.
ಕನ್ನಡತಿ ನಿಕಿ ಭಾರತಕ್ಕೆ ನಾಯಕಿ
ಈ ಬಾರಿ ಟೂರ್ನಿಯಲ್ಲಿ ಭಾರತ ತಂಡಕ್ಕೆ ಕರ್ನಾಟಕದ ನಿಕಿ ಪ್ರಸಾದ್ ನಾಯಕತ್ವ ವಹಿಸಲಿದ್ದಾರೆ. ಇತ್ತೀಚೆಗಷ್ಟೇ ನಿಕಿ ಅವರ ನಾಯಕತ್ವದಲ್ಲಿ ಭಾರತ ತಂಡ ಅಂಡರ್-19 ಏಷ್ಯಾಕಪ್ ಟಿ20 ಟೂರ್ನಿಯನ್ನು ಗೆದ್ದಿತ್ತು. ಆ ತಂಡದಲ್ಲಿದ್ದ ರಾಜ್ಯದ ಮತ್ತೊಬ್ಬ ಆಟಗಾರ್ತಿ ಮಿಥಿಲಾ ವಿನೋದ್ ಸಹ ವಿಶ್ವಕಪ್ ತಂಡದಲ್ಲಿ ಸ್ಥಾನ ಗಳಿಸಿದ್ದಾರೆ.
03 ಪಂದ್ಯ: ಗುಂಪು ಹಂತದಲ್ಲಿ ಪ್ರತಿ ತಂಡಗಳು ಒಟ್ಟು 3 ಪಂದ್ಯಗಳನ್ನಾಡಲಿವೆ.
16 ದಿನ: ಟಿ20 ವಿಶ್ವಕಪ್ ಟೂರ್ನಿ ಒಟ್ಟು 16 ದಿನಗಳ ಕಾಲ ನಡೆಯಲಿದೆ.
41 ಪಂದ್ಯ: ಗುಂಪು ಹಂತ, ನಾಕೌಟ್, ಫೈನಲ್ ಸೇರಿ ಒಟ್ಟು 41 ಪಂದ್ಯಗಳು.