ವಿಜಯ್‌ ಹಜಾರೆ ರಾಷ್ಟ್ರೀಯ ಏಕದಿನ : ಇಂದು ಫೈನಲ್‌ ಪಂದ್ಯನಲ್ಲಿ ಕರ್ನಾಟಕ vs ವಿದರ್ಭ

KannadaprabhaNewsNetwork |  
Published : Jan 18, 2025, 12:48 AM ISTUpdated : Jan 18, 2025, 04:15 AM IST
ಕರ್ನಾಟಕ ಮತ್ತು ವಿದರ್ಭ | Kannada Prabha

ಸಾರಾಂಶ

ಐದನೇ ಟ್ರೋಫಿ ಮೇಲೆ ಕಣ್ಣಿಟ್ಟಿರುವ ಕರ್ನಾಟಕ. ಚೊಚ್ಚಲ ಪ್ರಶಸ್ತಿ ಗೆಲ್ಲುತ್ತಾ ವಿದರ್ಭ?. ಫೈನಲ್‌ ಪಂದ್ಯ ಕರುಣ್ ಮತ್ತು ಕರ್ನಾಟಕ ಎಂಬಂತೆ ಬಿಂಬಿತವಾಗುತ್ತಿದೆ.

ವಡೋದರಾ: 2024-25ರ ವಿಜಯ್‌ ಹಜಾರೆ ರಾಷ್ಟ್ರೀಯ ಏಕದಿನ ಟೂರ್ನಿಯ ಫೈನಲ್‌ ಹಣಾಹಣಿಗೆ ವೇದಿಕೆ ಸಜ್ಜುಗೊಂಡಿದೆ. ಪ್ರಶಸ್ತಿಗಾಗಿ ಕರ್ನಾಟಕ ಮತ್ತು ಕರ್ನಾಟಕದ ಮಾಜಿ ಆಟಗಾರ ಕರುಣ್‌ ನಾಯರ್‌ ಮುನ್ನಡೆಸುವ ವಿದರ್ಭ ತಂಡಗಳು ಸೆಣಸಾಡಲಿವೆ. 

ಪಂದ್ಯಕ್ಕೆ ವಡೋದರಾ ಕ್ರೀಡಾಂಗಣ ಆತಿಥ್ಯ ವಹಿಸಲಿದೆ. ಕರ್ನಾಟಕ ತಂಡ 2013-14, 2014-25, 2017-18 ಹಾಗೂ 2019-20ರಲ್ಲಿ ಪ್ರಶಸ್ತಿ ಗೆದ್ದಿದ್ದು, 5ನೇ ಟ್ರೋಫಿ ಮೇಲೆ ಕಣ್ಣಿಟ್ಟಿದೆ. ಅತ್ತ ಹರ್ಯಾಣ ಇದೇ ಮೊದಲ ಬಾರಿ ಫೈನಲ್‌ಗೇರಿದ್ದು, ಮೊದಲ ಪ್ರಯತ್ನದಲ್ಲೇ ಕಪ್‌ ಗೆಲ್ಲುವ ಕಾತರದಲ್ಲಿದೆ.

ಅಸಾಧಾರಣ ಪ್ರದರ್ಶನ: ಈ ಬಾರಿ ರಣಜಿ ಹಾಗೂ ಮುಕ್ತಾಕ್‌ ಅಲಿ ಟಿ20 ಟೂರ್ನಿಯಲ್ಲಿ ಸಾಧಾರಣ ಪ್ರದರ್ಶನ ತೋರಿರುವ ಕರ್ನಾಟಕ, ವಿಜಯ್‌ ಹಜಾರೆಯಲ್ಲಿ ಅಬ್ಬರಿಸುತ್ತಿದೆ. ಸ್ವತಃ ನಾಯಕ ಮಯಾಂಕ್‌ ಅಗರ್‌ವಾಲ್‌ ಮುಂದೆ ನಿಂತು ತಂಡವನ್ನು ಗೆಲುವಿನತ್ತ ಕೊಂಡೊಯ್ಯುತ್ತಿದ್ದಾರೆ. ಗುಂಪು ಹಂತದಲ್ಲಿ 7 ಪಂದ್ಯಗಳ ಪೈಕಿ 6ರಲ್ಲಿ ಗೆದ್ದು ನೇರವಾಗಿ ಕ್ವಾರ್ಟರ್‌ ಫೈನಲ್‌ಗೇರಿದ್ದ ರಾಜ್ಯ, ಅಂತಿಮ 8ರ ಘಟ್ಟದಲ್ಲಿ ಬರೋಡಾ, ಸೆಮಿಫೈನಲ್‌ನಲ್ಲಿ ಹರ್ಯಾಣ ವಿರುದ್ಧ ಗೆದ್ದಿದೆ. 

ಮಯಾಂಕ್‌ ಜೊತೆ ದೇವದತ್‌ ಪಡಿಕ್ಕಲ್, ಸ್ಮರಣ್‌, ಅನೀಶ್‌ ಕೆ.ವಿ., ಆಲ್ರೌಂಡರ್‌ ಶ್ರೇಯಸ್‌ ಗೋಪಾಲ್‌, ವೇಗಿ ವಾಸುಕಿ ಕೌಶಿಕ್‌, ಪ್ರಸಿದ್ಧ್‌ ಕೃಷ್ಣ, ಅಭಿಲಾಶ್‌ ಶೆಟ್ಟಿ ತಂಡದ ಆಧಾರಸ್ತಂಭ. ಮತ್ತೊಂದೆಡೆ ವಿದರ್ಭ ಕೂಡಾ ಈ ಬಾರಿ ಸ್ಫೋಟಕ ಆಟವಾಡುತ್ತಿದೆ. ಕರುಣ್‌ ಅಭೂತಪೂರ್ವ ಲಯದಲ್ಲಿದ್ದು, ಇತರ ಬ್ಯಾಟರ್‌ಗಳಾದ ಯಶ್‌ ರಾಥೋಡ್‌, ಧ್ರುವ್‌ ಶೋರೆ, ಜಿತೇಶ್‌ ಶರ್ಮಾ ತಂಡಕ್ಕೆ ನೆರವಾಗುತ್ತಿದ್ದಾರೆ. ತಂಡದ ಬೌಲಿಂಗ್‌ ವಿಭಾಗ ಕೂಡಾ ಬಲಿಷ್ಠವಾಗಿದ್ದು, ರಾಜ್ಯಕ್ಕೆ ಕಠಿಣ ಸ್ಪರ್ಧೆ ನೀಡುವ ವಿಶ್ವಾಸದಲ್ಲಿದೆ.

ಪಂದ್ಯ ಆರಂಭ: ಮಧ್ಯಾಹ್ನ 1.30ಕ್ಕೆ

ನೇರಪ್ರಸಾರ: ಸ್ಟಾರ್‌ಸ್ಪೋರ್ಟ್ಸ್, ಜಿಯೋ ಸಿನಿಮಾ.

ಕರುಣ್‌ vs ಕರ್ನಾಟಕ!

ಫೈನಲ್‌ ಪಂದ್ಯ ಕರುಣ್ ಮತ್ತು ಕರ್ನಾಟಕ ಎಂಬಂತೆ ಬಿಂಬಿತವಾಗುತ್ತಿದೆ. ಕರುಣ್‌ ಕರ್ನಾಟಕದ ಮಾಜಿ ಆಟಗಾರ. ಕಳೆದೆರಡು ವರ್ಷಗಳಿಂದ ವಿದರ್ಭ ಪರ ಆಡುತ್ತಿದ್ದಾರೆ. ಅವರು ಈ ಬಾರಿ ಟೂರ್ನಿಯಲ್ಲಿ 7 ಪಂದ್ಯಗಳಲ್ಲಿ 752 ರನ್‌ ಕಲೆಹಾಕಿದ್ದಾರೆ. ಕೇವಲ ಒಮ್ಮೆ ಮಾತ್ರ ಔಟಾಗಿರುವ ಅವರು, ರಾಜ್ಯ ತಂಡವನ್ನು ಫೈನಲ್‌ನಲ್ಲಿ ಕಾಡುವ ಸಾಧ್ಯತೆ ಹೆಚ್ಚು. ಇತ್ತ ಮಯಾಂಕ್‌ 9 ಪಂದ್ಯಗಳಲ್ಲಿ 619 ರನ್‌ ಗಳಿಸಿದ್ದು, ಪಡಿಕ್ಕಲ್‌ ಕಳೆದೆರಡು ಪಂದ್ಯಗಳಲ್ಲೂ ಅಬ್ಬರಿಸಿದ್ದರು. ಹೀಗಾಗಿ ಪಂದ್ಯದಲ್ಲಿ ಕರ್ನಾಟಕ ಬ್ಯಾಟರ್‌ಗಳೇ ಹೆಚ್ಚಿನ ಆಕರ್ಷಣೆ ಎನಿಸಿಕೊಂಡಿದ್ದಾರೆ.

03 ಗೆಲುವು: ಕರ್ನಾಟಕ ಹಾಗೂ ವಿದರ್ಭ ಈ ವರೆಗೂ 3 ಬಾರಿ ಮುಖಾಮುಖಿಯಾಗಿದೆ. ಮೂರರಲ್ಲೂ ರಾಜ್ಯ ತಂಡ ಗೆದ್ದಿದೆ.

21ನೇ ದೇಸಿ ಕಪ್‌ ಮೇಲೆ ರಾಜ್ಯದ ಕಣ್ಣುಕರ್ನಾಟಕ ದೇಸಿ ಕ್ರಿಕೆಟ್‌ನಲ್ಲಿ ಯಶಸ್ವಿ ತಂಡಗಳಲ್ಲಿ ಒಂದು. ಈ ವರೆಗೂ 8 ಬಾರಿ ರಣಜಿ, 6 ಬಾರಿ ಇರಾನಿ ಕಪ್‌, 4 ಬಾರಿ ವಿಜಯ್‌ ಹಜಾರೆ ಹಾಗೂ 2 ಬಾರಿ ಮುಷ್ತಾಕ್‌ ಅಲಿ ಟಿ20 ಟೂರ್ನಿಗಳಲ್ಲಿ ಗೆದ್ದಿದೆ. ತಂಡ ಒಟ್ಟಾರೆ 21ನೇ ದೇಸಿ ಕಪ್‌ ಮೇಲೆ ಕಣ್ಣಿಟ್ಟಿದೆ. ಅತ್ತ ವಿದರ್ಭ ತಲಾ 2 ಬಾರಿ ರಣಜಿ ಹಾಗೂ ಇರಾನಿ ಕಪ್‌ ಗೆದ್ದಿದ್ದು, ಸೀಮಿತ ಓವರ್‌ ಟೂರ್ನಿಯಲ್ಲಿ ಮೊದಲ ಟ್ರೋಫಿ ಗೆಲ್ಲುವ ನಿರೀಕ್ಷೆಯಲ್ಲಿದೆ.

PREV

Recommended Stories

ಇಂದಿನಿಂದ ರಣಜಿ ಟ್ರೋಫಿ - 91ನೇ ಆವೃತ್ತಿಯ ದೇಸಿ ಪ್ರ.ದರ್ಜೆ ಕ್ರಿಕೆಟ್‌ ಟೂರ್ನಿ
ಗಿಲ್‌ ನಾಯಕತ್ವದಲ್ಲಿ ಮೊದಲ ಸರಣಿ ಜಯ