ಮಹಿಳಾ ಟಿ20 ವಿಶ್ವಕಪ್‌: ಹರ್ಮನ್‌ಪ್ರೀತ್‌ ಕೌರ್‌ ನಾಯಕತ್ವ- ಇಂದು ಭಾರತ vs ಪಾಕಿಸ್ತಾನ ಡು ಆರ್‌ ಡೈ ಕದನ

KannadaprabhaNewsNetwork | Updated : Oct 06 2024, 04:18 AM IST

ಸಾರಾಂಶ

ಕಿವೀಸ್‌ ವಿರುದ್ಧ ಮೊದಲ ಪಂದ್ಯ ಸೋತಿರುವ ಭಾರತಕ್ಕೆ ಬದ್ಧವೈರಿ ಪಾಕಿಸ್ತಾನ ವಿರುದ್ಧ ನಿರ್ಣಾಯಕ ಪಂದ್ಯ. ಸೋತರೆ ಹರ್ಮನ್‌ ಪಡೆ ಗುಂಪು ಹಂತದಲ್ಲೇ ಹೊರಬೀಳುವುದು ಬಹುತೇಕ ಖಚಿತ. ಪಾಕ್‌ಗೆ ಸತತ 2ನೇ ಜಯ ಗುರಿ

ದುಬೈ: ಚೊಚ್ಚಲ ಟಿ20 ವಿಶ್ವಕಪ್‌ ಗೆಲುವಿನ ಕನಸಿನೊಂದಿಗೆ ಯುಎಇ ವಿಮಾನವೇರಿದ್ದ ಭಾರತ ಮಹಿಳಾ ತಂಡ, ಟೂರ್ನಿ ಶುರುವಾದ ಮೂರೇ ದಿನಕ್ಕೆ ‘ನಿರ್ಣಾಯಕ’ ಘಟ್ಟ ತಲುಪಿದೆ. ಆರಂಭಿಕ ಪಂದ್ಯದಲ್ಲಿ ನ್ಯೂಜಿಲೆಂಡ್‌ ವಿರುದ್ಧ ಹೀನಾಯ ಸೋಲನುಭವಿಸಿರುವ ಹರ್ಮನ್‌ಪ್ರೀತ್‌ ಕೌರ್‌ ನಾಯಕತ್ವದ ಟೀಂ ಇಂಡಿಯಾ, ಭಾನುವಾರ ಮಾಡು ಇಲ್ಲವೇ ಮಡಿ ಪಂದ್ಯದಲ್ಲಿ ಬದ್ಧವೈರಿ ಪಾಕಿಸ್ತಾನ ವಿರುದ್ಧ ಸೆಣಸಾಡಲಿದೆ. 

ಪಂದ್ಯಕ್ಕೆ ದುಬೈ ಕ್ರೀಡಾಂಗಣ ಆತಿಥ್ಯ ವಹಿಸಲಿದೆ.ಶುಕ್ರವಾರ ಕಿವೀಸ್‌ ವಿರುದ್ಧ ಭಾರತ ಬೌಲಿಂಗ್‌ ಹಾಗೂ ಬ್ಯಾಟಿಂಗ್‌ನಲ್ಲಿ ಕಳಪೆ ಪ್ರದರ್ಶನ ತೋರಿ, 58 ರನ್‌ಗಳಿಂದ ಸೋಲಿನ ಆಘಾತಕ್ಕೊಳಗಾಗಿತ್ತು. ತಂಡ ಸದ್ಯ ಕಳಪೆ ನೆಟ್‌ ರನ್‌ರೇಟ್‌(-2.99) ಹೊಂದಿದ್ದು, 5 ತಂಡಗಳಿರುವ ‘ಎ’ ಗುಂಪಿನಲ್ಲಿ ಕೊನೆ ಸ್ಥಾನದಲ್ಲಿದೆ. ತಂಡ ಇನ್ನು ಪಾಕ್‌ ವಿರುದ್ಧ ಪಂದ್ಯ ಸೇರಿ ಒಟ್ಟು 3 ಪಂದ್ಯಗಳನ್ನಾಡಲಿದ್ದು, ಎಲ್ಲ ಪಂದ್ಯಗಳಲ್ಲಿ ಗೆಲ್ಲುವ ಅಗತ್ಯವಿದೆ. 

ಒಂದು ವೇಳೆ ಪಾಕಿಸ್ತಾನ ವಿರುದ್ಧ ಸೋತರೆ ಭಾರತ ಸೆಮಿಫೈನಲ್‌ ರೇಸ್‌ನಿಂದ ಬಹುತೇಕ ಹೊರಗುಳಿಯಲಿದೆ. ಭಾರತಕ್ಕೆ ಪಾಕ್‌ ಪಂದ್ಯಕ್ಕೂ ಮುನ್ನ ಪ್ರಮುಖ ತಲೆನೋವಾಗಿರುವುದು ತಂಡದ ಆಯ್ಕೆ. ಕಿವೀಸ್‌ ವಿರುದ್ಧ ಪಂದ್ಯದಲ್ಲಿ ಭಾರತ ಹೆಚ್ಚುವರಿ ವೇಗಿ ಅರುಂಧತಿ ರೆಡ್ಡಿಯನ್ನು ಆಡಿಸಿತ್ತು. ಹೀಗಾಗಿ ನಾಯಕಿ ಹರ್ಮನ್‌ಪ್ರೀತ್‌ ತಮ್ಮ ಎಂದಿನ 4ನೇ ಕ್ರಮಾಂಕದ ಬದಲು 3ನೇ ಕ್ರಮಾಂಕದಲ್ಲಿ ಆಡಿದ್ದರು. 

ಆದರೆ 3ನೇ ಕ್ರಮಾಂಕದಲ್ಲಿ ಆಡಿರುವ ಕಳೆದ 19 ಇನ್ನಿಂಗ್ಸ್‌ಗಳಲ್ಲಿ ಒಮ್ಮೆಯೂ ಹರ್ಮನ್‌ ಅರ್ಧಶತಕ ಬಾರಿಸಿಲ್ಲ. ಹೀಗಾಗಿ ಪಾಕ್‌ ವಿರುದ್ಧ ಪಂದ್ಯಕ್ಕೆ ಯಾವ ರೀತಿ ತಂಡವನ್ನು ಸಜ್ಜುಗೊಳಿಸಲಿದ್ದಾರೆ ಎಂಬ ಕುತೂಹಲವಿದೆ.ಉಳಿದಂತೆ ಸ್ಮೃತಿ ಮಂಧನಾ, ಶಫಾಲಿ ವರ್ಮಾ, ಜೆಮಿಮಾ ರೋಡ್ರಿಗ್ಸ್‌ ಹಾಗೂ ರಿಚಾ ಘೋಷ್‌ ಮೇಲೆ ತಂಡ ಹೆಚ್ಚಿನ ನಿರೀಕ್ಷೆ ಇಟ್ಟುಕೊಂಡಿದ್ದು, ಬೌಲರ್‌ಗಳು ಸುಧಾರಿತ ಪ್ರದರ್ಶನ ನೀಡುವ ಅಗತ್ಯವಿದೆ. ಕಳೆದ ಪಂದ್ಯದಲ್ಲಿ 4 ಓವರಲ್ಲಿ 45 ರನ್‌ ನೀಡಿ ದುಬಾರಿ ಎನಿಸಿಕೊಂಡಿದ್ದ ಆಲ್ರೌಂಡರ್‌ ದೀಪ್ತಿ ಶರ್ಮಾ ಪಾಕ್ ವಿರುದ್ಧ ತಮ್ಮ ಎಂದಿನ ಆಟವಾಡಬೇಕಿದೆ.

ಪಾಕ್‌ಗೆ 2ನೇ ಜಯ ಗುರಿ: ಪಾಕಿಸ್ತಾನ ಆರಂಭಿಕ ಪಂದ್ಯದಲ್ಲಿ ಶ್ರೀಲಂಕಾ ವಿರುದ್ಧ ಗೆದ್ದಿದ್ದು, ಸತತ 2ನೇ ಗೆಲುವಿನ ನಿರೀಕ್ಷೆಯಲ್ಲಿದೆ. ಅನುಭವಿ ನಿದಾ ಧಾರ್‌, ನಾಯಕಿ ಫಾತಿಮಾ ಸನಾ, ಸಾದಿಯಾ ಇಕ್ಬಾಲ್‌ ತಂಡದ ಪ್ರಮುಖ ಆಧಾರಸ್ತಂಭಗಳು. ಆದರೆ ಪಾಕ್‌ ವಿರುದ್ಧ ಭಾರತವೇ ಗೆಲ್ಲುವ ಫೇವರಿಟ್‌. ಅಂತಾರಾಷ್ಟ್ರೀಯ ಟಿ20ಯ ಈ ವರೆಗಿನ 15 ಮುಖಾಮುಖಿಗಳಲ್ಲಿ ಭಾರತ 12ರಲ್ಲಿ ಗೆದ್ದಿದೆ.

ಒಟ್ಟು ಮುಖಾಮುಖಿ: 15ಭಾರತ: 12ಪಾಕಿಸ್ತಾನ: 03

ಸಂಭವನೀಯ ಆಟಗಾರರ ಪಟ್ಟಿ

ಭಾರತ: ಮಂಧನಾ, ಶಫಾಲಿ, ಹರ್ಮನ್‌(ನಾಯಕಿ), ಜೆಮಿಮಾ, ರಿಚಾ, ದೀಪ್ತಿ ಶರ್ಮಾ, ಪೂಜಾ, ಅರುಂಧತಿ/ರಾಧಾ, ಶ್ರೇಯಾಂಕ, ಆಶಾ, ರೇಣುಕಾ.ಪಾಕಿಸ್ತಾನ: ಮುನೀಬಾ, ಫಿರೋಜಾ, ಸಿದ್ರಾ, ನಿದಾ ದಾರ್‌, ಆಲಿಯಾ, ಒಮೈಮಾ, ಫಾತಿಮಾ(ನಾಯಕಿ), ತೂಬಾ, ನಶ್ರಾ, ಡಯಾನಾ, ಸಾದಿಯಾ.

ಪಂದ್ಯ: ಮಧ್ಯಾಹ್ನ 3.30ಕ್ಕೆ, ನೇರಪ್ರಸಾರ: ಸ್ಟಾರ್‌ಸ್ಪೋರ್ಟ್ಸ್‌, ಹಾಟ್‌ಸ್ಟಾರ್‌

08ನೇ ಪಂದ್ಯ: ಭಾರತ-ಪಾಕಿಸ್ತಾನ ನಡುವೆ ಮಹಿಳಾ ಟಿ20 ವಿಶ್ವಕಪ್‌ನಲ್ಲಿದು 8ನೇ ಪಂದ್ಯ. ಈ ಹಿಂದಿನ 7 ಮುಖಾಮುಖಿಗಳಲ್ಲಿ ಭಾರತ 5ರಲ್ಲಿ ಗೆದ್ದಿದ್ದು, 2ರಲ್ಲಿ ಸೋಲನುಭವಿಸಿದೆ.

Share this article