ಮತ್ತೆ ಶುರುವಾಗಲಿದೆ 2017ರಲ್ಲಿ ಆರ್ಥಿಕ ಸಂಕಷ್ಟದಿಂದ ನಿಂತು ಹೋಗಿದ್ದ ಹಾಕಿ ಇಂಡಿಯಾ ಲೀಗ್‌!

ಸಾರಾಂಶ

2017ರಲ್ಲಿ ಆರ್ಥಿಕ ಸಂಕಷ್ಟದಿಂದ ನಿಂತು ಹೋಗಿದ್ದ ಐಪಿಎಲ್‌ ಮಾದರಿಯ ಹಾಕಿ ಇಂಡಿಯಾ ಲೀಗ್‌ (ಎಚ್‌ಐಎಲ್‌) ಹೊಸ ರೂಪದಲ್ಲಿ ಮತ್ತೆ ಶುರುವಾಗಲಿದೆ ಎಂದು ತಿಳಿದುಬಂದಿದೆ.

ನವದೆಹಲಿ: 2017ರಲ್ಲಿ ಆರ್ಥಿಕ ಸಂಕಷ್ಟದಿಂದ ನಿಂತು ಹೋಗಿದ್ದ ಐಪಿಎಲ್‌ ಮಾದರಿಯ ಹಾಕಿ ಇಂಡಿಯಾ ಲೀಗ್‌ (ಎಚ್‌ಐಎಲ್‌) ಹೊಸ ರೂಪದಲ್ಲಿ ಮತ್ತೆ ಶುರುವಾಗಲಿದೆ ಎಂದು ತಿಳಿದುಬಂದಿದೆ. ಈ ವರ್ಷ ಡಿಸೆಂಬರ್‌ನಲ್ಲಿ ಟೂರ್ನಿಯನ್ನು ಆಯೋಜಿಸಲು ಹಾಕಿ ಇಂಡಿಯಾ ಸಿದ್ಧತೆ ಆರಂಭಿಸಿದ್ದು, ಐಪಿಎಲ್‌, ಐಎಸ್‌ಎಲ್‌ ತಂಡಗಳನ್ನು ಹೊಂದಿರುವ ಸಂಸ್ಥೆಗಳಿಂದ ತಂಡಗಳನ್ನು ಖರೀದಿಸಲು ಆಸಕ್ತಿ ವ್ಯಕ್ತವಾಗಿದೆ ಎಂದು ಗೊತ್ತಾಗಿದೆ. 

ಸುಮಾರು 30 ಸಂಸ್ಥೆಗಳು ತಂಡ ಖರೀದಿಗೆ ಮುಂದೆ ಬರಬಹುದು ಎಂದು ಅಂದಾಜಿಸಲಾಗಿದ್ದು, ಪುರುಷರ ತಂಡಕ್ಕೆ ವಾರ್ಷಿಕ 7 ಕೋಟಿ ರು., ಮಹಿಳಾ ತಂಡದ ಖರೀದಿಗೆ ವರ್ಷಕ್ಕೆ 3 ಕೋಟಿ ರು. ಶುಲ್ಕ ನಿಗದಿಪಡಿಸುವ ಸಾಧ್ಯತೆ ಇದೆ. ಆರಂಭಿಕ ಗುತ್ತಿಗೆ ಅವಧಿ 10 ವರ್ಷಗಳಿಗೆ ಇರಲಿದೆ.

1000ಕ್ಕೂ ಹೆಚ್ಚು ಭಾರತೀಯ, 500ಕ್ಕೂ ಹೆಚ್ಚು ವಿದೇಶಿ ಆಟಗಾರರು ಹರಾಜಿಗೆ ನೋಂದಾಯಿಸಿಕೊಳ್ಳುವ ನಿರೀಕ್ಷೆ ಇದೆ. ಇನ್ನು ವಿಶ್ವ ರ್‍ಯಾಂಕಿಂಗ್‌ನಲ್ಲಿ ಅಗ್ರ-15 ಸ್ಥಾನಗಳಲ್ಲಿರುವ ದೇಶಗಳ ಆಟಗಾರರಿಗಷ್ಟೇ ಅವಕಾಶ ನೀಡಲು ಹಾಕಿ ಇಂಡಿಯಾ ನಿರ್ಧರಿಸಿದೆ. ವಿಶ್ವ ನಂ.16 ಪಾಕಿಸ್ತಾನದ ಆಟಗಾರರಿಗೆ ಟೂರ್ನಿಗೆ ಪ್ರವೇಶವಿಲ್ಲ ಎಂದು ಹಾಕಿ ಇಂಡಿಯಾ ಸ್ಪಷ್ಟಪಡಿಸಿದೆ.

Share this article