ಕೋಲ್ಕತಾ: ಭಾರತದ ದಿಗ್ಗಜ ಫುಟ್ಬಾಲಿಗ ಸುನಿಲ್ ಚೆಟ್ರಿಗೆ ಗೆಲುವಿನ ವಿದಾಯ ಸಿಗಲಿಲ್ಲ. ಗುರುವಾರ ಕುವೈತ್ ವಿರುದ್ಧ ನಡೆದ 2026ರ ಫಿಫಾ ವಿಶ್ವಕಪ್ ಅರ್ಹತಾ ಸುತ್ತಿನ ಪಂದ್ಯದಲ್ಲಿ ಭಾರತ ಗೋಲು ರಹಿತ ಡ್ರಾಗೆ ತೃಪ್ತಿಪಟ್ಟಿತು.ಈ ಫಲಿತಾಂಶದೊಂದಿಗೆ ಭಾರತ 3ನೇ ಸುತ್ತು ಪ್ರವೇಶಿಸುವುದು ಕಷ್ಟ ಎನಿಸಿದೆ. ತಂಡಕ್ಕೆ ಇನ್ನೊಂದು ಪಂದ್ಯ ಬಾಕಿ ಇದ್ದು, ಜೂ.11ರಂದು ಏಷ್ಯಾ ಚಾಂಪಿಯನ್ ಕತಾರ್ ವಿರುದ್ಧ ಆಡಲಿದೆ. ಕುವೈತ್‌ಗೆ ಅಫ್ಘಾನಿಸ್ತಾನ ಎದುರಾಗಲಿದೆ.
39 ವರ್ಷದ ಚೆಟ್ರಿ, ತಮ್ಮ 19 ವರ್ಷಗಳ ಅಂತಾರಾಷ್ಟ್ರೀಯ ವೃತ್ತಿಬದುಕನ್ನು ಗುರುವಾರ ಕೊನೆಗೊಳಿಸಿದರು. ಭಾರತ ಪರ 151 ಪಂದ್ಯಗಳನ್ನಾಡಿರುವ ಚೆಟ್ರಿ 94 ಗೋಲುಗಳನ್ನು ಬಾರಿಸಿದ್ದು, ಜಾಗತಿಕ ಮಟ್ಟದಲ್ಲಿ ಸಾರ್ವಕಾಲಿಕ ಅಧಿಕ ಗೋಲು ಸರದಾರರ ಪಟ್ಟಿಯಲ್ಲಿ 4ನೇ ಸ್ಥಾನದಲ್ಲಿದ್ದಾರೆ.ಕುವೈತ್ ವಿರುದ್ಧದ ಪಂದ್ಯದಲ್ಲಿ ಭಾರತಕ್ಕೆ ಹಲವು ಗೋಲು ಬಾರಿಸುವ ಅವಕಾಶ ಸಿಕ್ಕರೂ, ಅದರ ಸದ್ಬಳಕೆ ಮಾಡಿಕೊಳ್ಳಲು ಭಾರತ ತಂಡಕ್ಕೆ ಸಾಧ್ಯವಾಗಲಿಲ್ಲ. ಚೆಟ್ರಿಯ ವಿದಾಯದ ಪಂದ್ಯಕ್ಕೆ ಕೋಲ್ಕತಾದ ಸಾಲ್ಟ್ ಲೇಕ್ ಕ್ರೀಡಾಂಗಣ ಬಹುತೇಕ ಭರ್ತಿಯಾಗಿತ್ತು. 68000 ಆಸನ ಸಾಮರ್ಥ್ಯವಿರುವ ಕ್ರೀಡಾಂಗಣದಲ್ಲಿ 59000 ಪ್ರೇಕ್ಷಕರಿದ್ದರು.
ಚೆಟ್ರಿ 2005ರಲ್ಲಿ ಭಾರತ ತಂಡಕ್ಕೆ ಪಾದಾರ್ಪಣೆ ಮಾಡಿದ್ದರು. ಪಾಕಿಸ್ತಾನ ವಿರುದ್ಧ ಚೊಚ್ಚಲ ಪಂದ್ಯವಾಡಿದ್ದ ಚೆಟ್ರಿ, ಅದೇ ಪಂದ್ಯದಲ್ಲಿ ತಮ್ಮ ಮೊದಲ ಗೋಲು ಬಾರಿಸಿದ್ದರು.ಚೆಟ್ರಿಗೆ ಸನ್ಮಾನಗಳ ಸುರಿಮಳೆ!
ಗುರುವಾರ ಪಂದ್ಯದ ಬಳಿಕ ಅಖಿಲ ಭಾರತ ಫುಟ್ಬಾಲ್ ಫೆಡರೇಶನ್ (ಎಐಎಫ್‌ಎಫ್), ಹಲವು ರಾಜ್ಯಗಳ ಫುಟ್ಬಾಲ್ ಸಂಸ್ಥೆಗಳು, ಮೋಹನ್ ಬಗಾನ್ ಸೇರಿ ಹಲವು ಪ್ರಸಿದ್ಧ ಕ್ಲಬ್‌ಗಳು ಚೆಟ್ರಿಗೆ ಸನ್ಮಾನ ಮಾಡಿ ಸ್ಮರಣಿಕೆ ನೀಡಿದವು. ಚೆಟ್ರಿ ಕಣ್ಣೀರಿಡುತ್ತಾ, ಅಭಿಮಾನಿಗಳಿಗೆ ಕೈಮುಗಿದು ಧನ್ಯವಾದ ಹೇಳಿದರು.ಚೆಟ್ರಿಗೆ ಶುಭ ಕೋರಿದ ಮೋಡ್ರಿಚ್!ಚೆಟ್ರಿಗೆ ಕ್ರೋವೇಷಿಯಾದ ದಿಗ್ಗಜ ಫುಟ್ಬಾಲಿಗ, ರಿಯಲ್ ಮ್ಯಾಡ್ರಿಡ್‌ನ ತಾರೆ ಲೂಕಾ ಮೊಡ್ರಿಚ್ ವಿಡಿಯೋ ಸಂದೇಶದ ಮೂಲಕ ಶುಭ ಕೋರಿದ್ದಾರೆ. ಗುರುವಾರದ ಪಂದ್ಯಕ್ಕೂ ಮುನ್ನ ಸಾಮಾಜಿಕ ತಾಣಗಳಲ್ಲಿ ವಿಡಿಯೋ ಹಂಚಿಕೊಂಡಿರುವ ಮೊಡ್ರಿಚ್, ಚೆಟ್ರಿಯ ಮುಂದಿನ ಬದುಕು ಸುಖಕರವಾಗಿರಲಿ ಎಂದು ಹಾರೈಸಿದ್ದಾರೆ.