ದುಬೈ: ಆಸ್ಟ್ರೇಲಿಯಾ ವಿರುದ್ಧದ 2ನೇ ಟೆಸ್ಟ್‌ನಲ್ಲಿ ಸೋಲನುಭವಿಸಿದ ಪರಿಣಾಮ, ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಅಂಕಪಟ್ಟಿಯಲ್ಲಿ ಭಾರತ 3ನೇ ಸ್ಥಾನಕ್ಕೆ ಕುಸಿದಿದೆ. ಪರ್ತ್‌ನಲ್ಲಿ ಗೆಲುವು ಸಾಧಿಸಿದ ಬಳಿಕ ಭಾರತದ ಗೆಲುವಿನ ಪ್ರತಿಶತ 61.11ಕ್ಕೆ ಏರಿಕೆಯಾಗಿತ್ತು.
ಈ ಸೋಲಿನಿಂದಾಗಿ ಅದು 57.29ಕ್ಕೆ ಇಳಿದಿದೆ. ಪ್ರಸಕ್ತ ವಿಶ್ವ ಚಾಂಪಿಯನ್‌ಶಿಪ್ ಅವಧಿಯಲ್ಲಿ 9ನೇ ಗೆಲುವು ದಾಖಲಿಸಿದ ಆಸ್ಟ್ರೇಲಿಯಾದ ಗೆಲುವಿನ ಪ್ರತಿಶತ 57.69ರಿಂದ 60.71ಕ್ಕೆ ಏರಿಕೆಯಾಗಿದ್ದು, ಅಗ್ರಸ್ಥಾನಕ್ಕೇರಿದೆ.
ಒಂದು ವೇಳೆ ಶ್ರೀಲಂಕಾ ವಿರುದ್ಧ ನಡೆಯುತ್ತಿರುವ 2ನೇ ಟೆಸ್ಟ್‌ನಲ್ಲಿ ದಕ್ಷಿಣ ಆಫ್ರಿಕಾ ಗೆದ್ದರೆ, ಆಸ್ಟ್ರೇಲಿಯಾವನ್ನು ಹಿಂದಿಕ್ಕಿ ನಂ.1 ಸ್ಥಾನಕ್ಕೇರಲಿದೆ ಸದ್ಯ ದ.ಆಫ್ರಿಕಾದ ಗೆಲುವಿನ ಪ್ರತಿಶತ 59.26 ಇದೆ. ಭಾರತಕ್ಕೆ ಆಸ್ಟ್ರೇಲಿಯಾ ವಿರುದ್ಧ 3 ಟೆಸ್ಟ್ ಬಾಕಿ ಇದ್ದು, 3ರಲ್ಲೂ ಗೆಲ್ಲದೇ ಇದ್ದರೂ ಒಂದು ಪಂದ್ಯವನ್ನೂ ಸೋಲುವಂತಿಲ್ಲ. ಇನ್ನು, ಇಂಗ್ಲೆಂಡ್ ವಿರುದ್ಧ 2ನೇ ಟೆಸ್ಟ್‌ನಲ್ಲೂ ಸೋತ ನ್ಯೂಜಿಲೆಂಡ್ 44.23ರ ಗೆಲುವಿನ ಪ್ರತಿಶತದೊಂದಿಗೆ 6ನೇ ಸ್ಥಾನಕ್ಕೆ ಕುಸಿದಿದ್ದು, ವಿಶ್ವ ಚಾಂಪಿಯನ್‌ಶಿಪ್ ಫೈನಲ್ ರೇಸ್‌ನಿಂದ ಹೊರಬಿದ್ದಿದೆ.
ರೋಹಿತ್ ನಾಯಕತ್ವ, ಬ್ಯಾಟಿಂಗ್ ಬಗ್ಗೆ ಟೀಕೆ
ರೋಹಿತ್ ಶರ್ಮಾ ನಾಯಕತ್ವ ಹಾಗೂ ಬ್ಯಾಟಿಂಗ್ ಬಗ್ಗೆ ಹಲವು ಮಾಜಿ ಕ್ರಿಕೆಟಿಗರು, ಸಾಮಾಜಿಕ ತಾಣಗಳಲ್ಲಿ ಅಭಿಮಾನಿಗಳಿಂದ ಭಾರೀ ಟೀಕೆ ವ್ಯಕ್ತವಾಗುತ್ತಿದೆ. ರೋಹಿತ್‌ರ ನಾಯಕತ್ವದಲ್ಲಿ ಭಾರತ ಸತತ 4 ಟೆಸ್ಟ್ ಸೋತಿದೆ. ನ್ಯೂಜಿಲೆಂಡ್ ವಿರುದ್ಧ ತವರಲ್ಲೇ 3 ಪಂದ್ಯ ಸೋಲುಂಡಿದ್ದ ಭಾರತ, ಅಡಿಲೇಡ್ ಟೆಸ್ಟ್‌ನಲ್ಲೂ ಪರಾಭವಗೊಂಡಿದೆ.
ಇನ್ನು, ರೋಹಿತ್ ಬ್ಯಾಟಿಂಗ್‌ನಲ್ಲೂ ಕಳಪೆ ಲಯದಲ್ಲಿದ್ದಾರೆ. ಕಳೆದ 12 ಇನ್ನಿಂಗ್ಸ್‌ಗಳಲ್ಲಿ ಅವರು ಕೇವಲ 1 ಅರ್ಧಶತಕ ಬಾರಿಸಿದ್ದಾರೆ. 8 ಇನ್ನಿಂಗ್ಸ್‌ಗಳಲ್ಲಿ ಅವರ ಸ್ಕೋರ್ ಎರಡಂಕಿ ದಾಟಿಲ್ಲ. ಕೆಲವರು ರೋಹಿತ್‌ರ ನಾಯಕತ್ವ ಕಿತ್ತು ಬೂಮ್ರಾಗೆ ನೀಡಬೇಕೆಂದು ಒತ್ತಾಯಿಸಿದರೆ, ಇನ್ನೂ ಕೆಲವರು ರೋಹಿತ್‌ರನ್ನು ತಂಡದಿಂದಲೇ ಹೊರಗಿಡಬೇಕೆಂದು ಆಗ್ರಹಿಸಿದ್ದಾರೆ.