;Resize=(412,232))
ಗೋಲ್ಡ್ ಕೋಸ್ಟ್: ಆಸ್ಟ್ರೇಲಿಯಾ ವಿರುದ್ಧ ಟಿ20 ಸರಣಿಯಲ್ಲಿ ಭಾರತಮ 2-1 ಮುನ್ನಡೆ ಸಾಧಿಸಿದೆ. ಆರಂಭಿಕ ಪಂದ್ಯ ಮಳೆಗಾಹುತಿಯಾದ ಬಳಿಕ 2ನೇ ಪಂದ್ಯ ಸೋತಿದ್ದ ಭಾರತ, 3 ಮತ್ತು 4ನೇ ಪಂದ್ಯದಲ್ಲಿ ಗೆಲ್ಲುವ ಮೂಲಕ ಕಮ್‌ಬ್ಯಾಕ್ ಮಾಡಿದೆ. ಗುರುವಾರ ನಡೆದ ಪಂದ್ಯದಲ್ಲಿ ಭಾರತಕ್ಕೆ 48 ರನ್ ಭರ್ಜರಿ ಗೆಲುವು ಸಾಧಿಸಿದ್ದು, ಶನಿವಾರ ನಡೆಯಲಿರುವ 5ನೇ ಹಾಗೂ ಕೊನೆ ಪಂದ್ಯ ಉಭಯ ತಂಡಗಳಿಗೂ ನಿರ್ಣಾಯಕ ಎನಿಸಿಕೊಂಡಿದೆ.
ಮತ್ತೆ ಟಾಸ್ ಸೋತ ಭಾರತ ಮೊದಲು ಬ್ಯಾಟ್ ಮಾಡಬೇಕಾಯಿತು. ಉತ್ತಮ ಆರಂಭದ ಬಳಿಕ ಕುಸಿದ ತಂಡ 20 ಓವರ್‌ಗಳಲ್ಲಿ 8 ವಿಕೆಟ್‌ಗೆ 167 ರನ್ ಕಲೆಹಾಕಿತು. ಅಭಿಷೇಕ್ ಶರ್ಮಾ 28, ಶುಭ್‌ಮನ್ ಗಿಲ್ 46(39 ಎಸೆತ), ಶಿವಂ ದುಬೆ 22, ನಾಯಕ ಸೂರ್ಯಕುಮಾರ್ ಯಾದವ್ 20 ರನ್ ಗಳಿಸಿ ತಂಡಕ್ಕೆ ಆಸರೆಯಾದರು. ತಂಡ 14 ಓವರ್‌ಗಳಲ್ಲಿ 2 ವಿಕೆಟ್‌ಗೆ 121 ರನ್ ಗಳಿಸಿದ್ದರೂ ಬಳಿಕ ದಿಢೀರ್ ಕುಸಿಯಿತು. ಕೊನೆಯಲ್ಲಿ ಅಕ್ಷರ್ ಪಟೇಲ್ 11 ಎಸೆತಕ್ಕೆ 21 ರನ್ ಗಳಿಸಿ ತಂಡವನ್ನು 160ರ ಗಡಿ ದಾಟಿಸಿದರು. ನೇಥನ್ ಎಲ್ಲಿಸ್, ಆ್ಯಡಂ ಝಾಂಪ ತಲಾ 3 ವಿಕೆಟ್ ಕಿತ್ತರು.
ಆಸೀಸ್‌ಗೆ ಸ್ಪರ್ಧಾತ್ಮಕ ಗುರಿ ಸಿಕ್ಕರೂ ಭಾರತೀಯ ಬೌಲರ್‌ಗಳು ರನ್ ಬಿಟ್ಟುಕೊಡಲು ಚೌಕಾಸಿ ಮಾಡಿದರು. ನಾಯಕ ಮಿಚೆಲ್ ಮಾರ್ಷ್(30), ಮ್ಯಾಥ್ಯೂ ಶಾರ್ಟ್(25) ಹೊರತಾಗಿ ಇತರರು ರನ್ ಗಳಿಸಲು ಪರದಾಡಿದರು. ಉತ್ತಮ ದಾಳಿ ಸಂಘಟಿಸಿದ ಅಕ್ಷರ್ ಹಾಗೂ ದುಬೆ ತಲಾ 2 ವಿಕೆಟ್ ಕಿತ್ತರು. ವಾಷಿಂಗ್ಟನ್ ಸುಂದರ್ 3 ರನ್‌ಗೆ 3 ವಿಕೆಟ್ ಕಬಳಿಸಿದರು.
ಸ್ಕೋರ್: ಭಾರತ 20 ಓವರಲ್ಲಿ 167/8 (ಗಿಲ್ 46, ಅಭಿಷೇಕ್ 28, ಎಲ್ಲಿಸ್ 3-21, ಝಾಂಪ 3-45), ಆಸ್ಟ್ರೇಲಿಯಾ 18.2 ಓವರಲ್ಲಿ 119/10 (ಮಾರ್ಷ್ 30, ಶಾರ್ಟ್ 25, ಸುಂದರ್ 3-3, ಅಕ್ಷರ್ 2-20, ದುಬೆ 2-20)
02ನೇ ಕನಿಷ್ಠ
ಆಸ್ಟ್ರೇಲಿಯಾ 119ಕ್ಕೆ ಆಲೌಟ್. ಇದು ತವರಿನ ಟಿ20ಯಲ್ಲಿ ಆಸೀಸ್ ತಂಡದ 2ನೇ ಕನಿಷ್ಠ ಸ್ಕೋರ್. 2022ರಲ್ಲಿ ಕಿವೀಸ್ ವಿರುದ್ಧ 111 ರನ್ ಗಳಿಸಿತ್ತು.
02ನೇ ಕನಿಷ್ಠ
ಭಾರತ 168 ರನ್ ರಕ್ಷಿಸಿ ಗೆದ್ದಿತು. ಇದು ಆಸ್ಟ್ರೇಲಿಯಾದಲ್ಲಿ ಆಸೀಸ್ ವಿರುದ್ಧ ಯಾವುದೇ ತಂಡ ರಕ್ಷಿಸಿದ 2ನೇ ಕನಿಷ್ಠ. 2020ರಲ್ಲಿ ಭಾರತ 162 ರನ್ ರಕ್ಷಿಸಿ ಗೆದ್ದಿತ್ತು.