ಬೆನೋನಿ: ಐಸಿಸಿ ಟೂರ್ನಿಯಲ್ಲಿ ಮತ್ತೊಮ್ಮೆ ಭಾರತ ಹಾಗೂ ಆಸ್ಟ್ರೇಲಿಯಾ ನಡುವಿನ ಹಣಾಹಣಿಗೆ ವೇದಿಕೆ ಸಜ್ಜುಗೊಂಡಿದೆ. ಕಳೆದ ವರ್ಷ ಹಿರಿಯರ ಐಸಿಸಿ ಏಕದಿನ ವಿಶ್ವಕಪ್ ಫೈನಲ್‌ನಲ್ಲಿ ಇತ್ತಂಡಗಳು ಮುಖಾಮುಖಿಗಿದ್ದರೆ, ಈ ಬಾರಿ ಅಂಡರ್-19 ವಿಶ್ವಕಪ್‌ನಲ್ಲಿ ಭಾನುವಾರ ಪ್ರಶಸ್ತಿಗಾಗಿ ಇವೆರಡು ತಂಡಗಳೇ ಸೆಣಸಾಡಲಿವೆ.ಗುರುವಾರ ಅತಿ ರೋಚಕ ಸೆಮಿಫೈನಲ್‌ನಲ್ಲಿ ಪಾಕಿಸ್ತಾನ ವಿರುದ್ಧ 1 ವಿಕೆಟ್ ಜಯಗಳಿಸಿದ ಆಸ್ಟ್ರೇಲಿಯಾ ಫೈನಲ್‌ಗೇರಿತು.
ಮೊದಲು ಬ್ಯಾಟ್ ಮಾಡಿದ ಪಾಕಿಸ್ತಾನ, ಆಸೀಸ್‌ನ ಮಾರಕ ದಾಳಿ ಮುಂದೆ ಗಳಿಸಲು ಸಾಧ್ಯವಾಗಿದ್ದು ಕೇವಲ 179 ರನ್. ಅಜಾನ್ ಅವೈಸ್(52), ಅರಾಫತ್ ಮಿನ್ಹಾಸ್(52) ಹೋರಾಟದ ಹೊರತಾಗಿಯೂ ತಂಡ 48.5 ಓವರ್‌ಗಳಲ್ಲಿ ಆಲೌಟಾಯಿತು.
ಟಾಮ್ ಸ್ಟ್ರಾಕರ್ 24ಕ್ಕೆ 6 ವಿಕೆಟ್ ಕಿತ್ತರು.ಗುರಿ ಬೆನ್ನತ್ತಿದ ಆಸೀಸ್ ಪಾಕ್ ವೇಗಿಗಳನ್ನು ಸಮರ್ಥವಾಗಿ ಎದುರಿಸಿ ಎದ್ದುಬಿದ್ದು ಗೆಲುವಿನ ದಡ ಸೇರಿತು. ಆರಂಭಿಕ ಆಟಗಾರ ಹ್ಯಾರಿ ಡಿಕ್ಸನ್ 50 ರನ್‌ಗೆ ಔಟಾದ ಬಳಿಕ, ತಂಡ ಸತತ ವಿಕೆಟ್ ಕಳೆದುಕೊಂಡಿತು.
ಆದರೆ ಓಲಿವರ್ ಪೀಕ್ ಹೋರಾಟದ 49 ರನ್ ಪಾಕ್ ಪಾಲಿಗೆ ನುಂಗಲಾರದ ತುತ್ತಾಗಿ ಪರಿಣಮಿಸಿತು. ಅವರ ನಿರ್ಗಮನದ ಬಳಿಕ ಟಾಮ್ ಕ್ಯಾಂಪ್ಬೆಲ್ 25 ರನ್ ಸಿಡಿಸಿ ತಂಡವನ್ನು ಗೆಲುವಿನತ್ತ ಕೊಂಡೊಯ್ದರು.
ಆದರೆ ಹೋರಾಟ ಬಿಡದ ಪಾಕ್ ಮತ್ತೆ ಪಂದ್ಯವನ್ನು ತನ್ನತ್ತ ಸೆಳೆದುಕೊಂಡರೂ, ಕೊನೆ ವಿಕೆಟ್‌ಗೆ ರಾಫ್ ಮ್ಯಾಕ್‌ಮಿಲನ್(19) ಮತ್ತು ಕಾಲಮ್ ವಿಡ್ಲರ್ ಜಾಣ್ಮೆಯ ಆಟವಾಡಿ ಆಸ್ಟ್ರೇಲಿಯಾಗೆ ಗೆಲುವು ತಂದು ಕೊಟ್ಟರು.
ಸ್ಕೋರ್: ಪಾಕಿಸ್ತಾನ 48.5 ಓವರಲ್ಲಿ 179/10 (ಅವೈಸ್ 52, ಮಿನ್ಹಾಸ್ 52, ಸ್ಟ್ರಾಕರ್ 6-24), ಆಸ್ಟ್ರೇಲಿಯಾ 49.1 ಓವರಲ್ಲಿ 181/9(ಡಿಕ್ಸನ್ 50, ಪೀಕ್ 49, ಅಲಿ 4-34)
ಫೆ.11ರಂದು ಪ್ರಶಸ್ತಿ ಫೈಟ್: ಭಾರತ ಹಾಗೂ ಆಸ್ಟ್ರೇಲಿಯಾ ಫೆ.11ರಂದು ಫೈನಲ್‌ನಲ್ಲಿ ಮುಖಾಮುಖಿಯಾಗಲಿವೆ. 9ನೇ ಬಾರಿ ಫೈನಲ್‌ಗೇರಿರುವ ಭಾರತ 6ನೇ ಪ್ರಶಸ್ತಿ ಮೇಲೆ ಕಣ್ಣಿಟ್ಟಿದ್ದು, 6ನೇ ಬಾರಿ ಫೈನಲ್ ತಲುಪಿರುವ ಆಸ್ಟ್ರೇಲಿಯಾ 4ನೇ ಬಾರಿ ಚಾಂಪಿಯನ್ ಆಗುವ ನಿರೀಕ್ಷೆಯಲ್ಲಿದೆ.
3ನೇ ಬಾರಿ: ಅಂಡರ್-19 ವಿಶ್ವಕಪ್ ಫೈನಲ್‌ನಲ್ಲಿ ಭಾರತ ಮತ್ತು ಆಸ್ಟ್ರೇಲಿಯಾ ಮುಖಾಮುಖಿಯಾಗುತ್ತಿರುವುದು ಇದು 3ನೇ ಬಾರಿ