ಹೀನಾಯ ಸೋಲಿನೊಂದಿಗೆ ತವರಿನ ವಿಮಾನವೇರಿದ ಇಂಗ್ಲೆಂಡ್‌ ಆಟಗಾರರು!

KannadaprabhaNewsNetwork | Updated : Mar 10 2024, 10:39 AM IST

ಸಾರಾಂಶ

ಹೈದರಾಬಾದ್‌ನ ಮೊದಲ ಟೆಸ್ಟ್‌ ಸೋತಿದ್ದ ಭಾರತ ಆ ಬಳಿಕ ಅದ್ವಿತೀಯ ಆಟ ಪ್ರದರ್ಶಿಸಿ ಸರಣಿ ಗೆದ್ದಿದೆ. ರಾಂಚಿಯಲ್ಲೇ ಸರಣಿ ಸೋತರೂ, ಸಮಾಧಾನಕರ ಗೆಲುವು ಸಾಧಿಸಿಯೇ ಮನೆಗೆ ಹಿಂದಿರುಗುವುದಾಗಿ ಎದೆಯುಬ್ಬಿಸಿಕೊಂಡು ಧರ್ಮಶಾಲಾಗೆ ಬಂದಿದ್ದ ಇಂಗ್ಲೆಂಡ್‌ 3ನೇ ದಿನದಲ್ಲೇ ಸೋಲಿಗೆ ಶರಣಾಗಿ ತಲೆ ತಗ್ಗಿಸಿತು.

ಧರ್ಮಶಾಲಾ: ಭಾರತದಲ್ಲಿ ಟೆಸ್ಟ್‌ ಸರಣಿ ಗೆಲ್ಲುವುದು ಹಿಮಾಲಯವನ್ನು ಹತ್ತಿದಷ್ಟೇ ಕಷ್ಟ ಎನ್ನುವುದು ಪ್ರವಾಸಿ ಇಂಗ್ಲೆಂಡ್‌ಗೆ ಹಿಮಾಲಯದ ತಪ್ಪಲಿನಲ್ಲಿರುವ ಧರ್ಮಶಾಲಾದಲ್ಲಿ ನಡೆದ 5ನೇ ಟೆಸ್ಟ್‌ನಲ್ಲಿ ಮತ್ತೊಮ್ಮೆ ಮನವರಿಕೆಯಾಯಿತು. 

ರಾಂಚಿಯಲ್ಲೇ ಸರಣಿ ಸೋತರೂ, ಸಮಾಧಾನಕರ ಗೆಲುವು ಸಾಧಿಸಿಯೇ ಮನೆಗೆ ಹಿಂದಿರುಗುವುದಾಗಿ ಎದೆಯುಬ್ಬಿಸಿಕೊಂಡು ಧರ್ಮಶಾಲಾಗೆ ಬಂದಿದ್ದ ಇಂಗ್ಲೆಂಡ್‌, ಎರಡೂವರೆ ದಿನಕ್ಕೇ ಇನ್ನಿಂಗ್ಸ್‌ ಹಾಗೂ 64 ರನ್‌ಗಳ ಸೋಲಿಗೆ ಶರಣಾಗಿ ತಲೆ ತಗ್ಗಿಸಿದರೆ, ‘ಬಾಜ್‌ಬಾಲ್‌’ ಚಾಲೆಂಜ್‌ಗೆ ಹೆದರದ ಭಾರತ 4-1ರಲ್ಲಿ ಸರಣಿ ವಶಪಡಿಸಿಕೊಂಡು ಸಂಭ್ರಮಿಸಿತು.

ನಿರೀಕ್ಷೆಯಂತೆಯೇ ಪಂದ್ಯ 3ನೇ ದಿನದಾಟದಲ್ಲೇ ಮುಗಿಯಿತು. 2ನೇ ದಿನಕ್ಕೆ 8 ವಿಕೆಟ್‌ಗೆ 473 ರನ್‌ ಗಳಿಸಿದ್ದ ಇಂಗ್ಲೆಂಡ್‌, ಶನಿವಾರ ಆ ಮೊತ್ತಕ್ಕೆ ಕೇವಲ 4 ರನ್‌ ಸೇರಿಸಿ ಕೊನೆಯ 2 ವಿಕೆಟ್‌ ಕಳೆದುಕೊಂಡಿತು. ಆ್ಯಂಡರ್‌ಸನ್‌ ಐತಿಹಾಸಿಕ 700ನೇ ವಿಕೆಟ್‌ ಕಿತ್ತರೆ, ಶೋಯಬ್‌ ಬಶೀರ್‌ 5 ವಿಕೆಟ್‌ ಗೊಂಚಲು ಪಡೆದರು.

ಅಶ್ವಿನ್‌ ‘ಕಾಟ’!: 259 ರನ್‌ ಹಿನ್ನಡೆಯೊಂದಿಗೆ 2ನೇ ಇನ್ನಿಂಗ್ಸ್‌ ಆರಂಭಿಸಿದ ಇಂಗ್ಲೆಂಡ್‌ಗೆ ಆರ್‌.ಅಶ್ವಿನ್‌ ಕಾಟ ತಪ್ಪಲಿಲ್ಲ. ಬೂಮ್ರಾ ಜೊತೆ ಹೊಸ ಚೆಂಡು ಹಂಚಿಕೊಂಡ ಅಶ್ವಿನ್‌, ಇಂಗ್ಲೆಂಡ್‌ನ ಆರಂಭಿಕರಾದ ಬೆನ್‌ ಡಕೆಟ್‌ ಹಾಗೂ ಜ್ಯಾಕ್‌ ಕ್ರಾಲಿಗೆ ಬಹಳ ಬೇಗ ಪೆವಿಲಿಯನ್‌ ದಾರಿ ತೋರಿಸಿದರು. 

ಓಲಿ ಪೋಪ್‌ ತಾವು ಸ್ವೀಪ್‌ ಮಾಡಲು ಯತ್ನಿಸಿದ ಮೊದಲ ಎಸೆತದಲ್ಲೇ ಕ್ಯಾಚಿತ್ತರು. ಅಶ್ವಿನ್‌ ಮೇಲೆ ‘ಬಾಜ್‌ಬಾಲ್‌’ ದಾಳಿ ನಡೆಸುತ್ತಿದ್ದ ಬೇರ್‌ಸ್ಟೋವ್‌ (31 ಎಸೆತದಲ್ಲಿ 39, 3 ಬೌಂಡರಿ, 3 ಸಿಕ್ಸರ್‌)ರನ್ನು ಕುಲ್ದೀಪ್‌ ಎಲ್‌ಬಿ ಬಲೆಗೆ ಕೆಡವಿದರೆ, ಸ್ಟೋಕ್ಸ್‌ ಹಾಗೂ ಫೋಕ್ಸ್‌ ಇಬ್ಬರನ್ನೂ ಬೌಲ್ಡ್‌ ಮಾಡಿ ಅಶ್ವಿನ್‌ ತಮ್ಮ 100ನೇ ಟೆಸ್ಟ್‌ನಲ್ಲಿ 5 ವಿಕೆಟ್‌ ಗೊಂಚಲು ಪಡೆದು ಸಂಭ್ರಮಿಸಿದರು. ಹಾರ್ಟ್ಲಿ ಹಾಗೂ ವುಡ್‌ ಇಬ್ಬರನ್ನೂ ಬೂಮ್ರಾ ಔಟ್‌ ಮಾಡಿದಾಗ ತಂಡದ ಮೊತ್ತ 8 ವಿಕೆಟ್‌ಗೆ 141.

ರೂಟ್‌ ಹೋರಾಟ: ಏಕಾಂಗಿ ಹೋರಾಟ ನಡೆಸಿದ ಜೋ ರೂಟ್‌ (84)ಗೆ ಬಶೀರ್‌(13) ಕೆಲ ಕಾಲ ಜೊತೆಯಾದರು. ಇವರಿಬ್ಬರ ನಡುವೆ 9ನೇ ವಿಕೆಟ್‌ಗೆ 48 ರನ್‌ ಜೊತೆಯಾಟ ಮೂಡಿಬಂತು. 

ಇಷ್ಟಾದರೂ ಇಂಗ್ಲೆಂಡ್‌ 50 ಓವರ್‌ ದಾಟಲು, 3ನೇ ಅವಧಿಗೆ ಆಟವನ್ನು ಕೊಂಡೊಯ್ಯಲು ಸಾಧ್ಯವಾಗಲಿಲ್ಲ. ಚಹಾ ವಿರಾಮಕ್ಕೂ ಮೊದಲೇ ಇಂಗ್ಲೆಂಡ್‌ 48.1 ಓವರಲ್ಲಿ 195 ರನ್‌ಗೆ ಆಲೌಟ್‌ ಆಯಿತು. ಅಶ್ವಿನ್‌ 5, ಕುಲ್ದೀಪ್‌ ಹಾಗೂ ಬೂಮ್ರಾ ತಲಾ 2, ಜಡೇಜಾ 1 ವಿಕೆಟ್‌ ಕಿತ್ತರು.

ಸ್ಕೋರ್‌: ಇಂಗ್ಲೆಂಡ್‌ 218 ಹಾಗೂ 195 (ರೂಟ್‌ 84, ಬೇರ್‌ಸ್ಟೋವ್ 39, ಅಶ್ವಿನ್‌ 5-77), ಭಾರತ 477 (ಗಿಲ್‌ 110, ರೋಹಿತ್‌ 103, ಬಶೀರ್‌ 5-173, ಹಾರ್ಟ್ಲಿ 2-126) ಪಂದ್ಯಶ್ರೇಷ್ಠ: ಕುಲ್ದೀಪ್‌ ಯಾದವ್‌, ಸರಣಿ ಶ್ರೇಷ್ಠ: ಯಶಸ್ವಿ ಜೈಸ್ವಾಲ್‌

Share this article