ಕೇಪ್‌ಟೌನ್‌ನಲ್ಲಿ ಚೊಚ್ಚಲ ಗೆಲುವು ಸಾಧಿಸಿದ ಭಾರತ, ದ.ಆಫ್ರಿಕಾ ನೆಲದಲ್ಲಿ 2ನೇ ಬಾರಿ ಟೆಸ್ಟ್ ಸರಣಿ ಸಮಬಲದ ಜೊತೆಗೆ ವೈಯಕ್ತಿಕಯವಾಗಿಯೂ ದಾಖಲೆಗಳನ್ನು ಬರೆದುಕೊಂಡ ಕೆಲ ಆಟಗಾರರು
ಕೇಪ್‌ಟೌನ್: ಐತಿಹಾಸಿಕ ಟೆಸ್ಟ್ ಸರಣಿ ಗೆಲುವಿನ ನಿರೀಕ್ಷೆಯೊಂದಿಗೆ ದಕ್ಷಿಣ ಆಫ್ರಿಕಾ ವಿಮಾನವೇರಿದ್ದ ಭಾರತಕ್ಕೆ ಸರಣಿ ಗೆಲುವು ಸಿಗದಿದ್ದರೂ ಹಲವು ದಾಖಲೆಗಳನ್ನು ನಿರ್ಮಿಸಿದ ಹುಮ್ಮಸ್ಸಿನೊಂದಿಗೆ ತವರಿಗೆ ಮರಳಲಿದೆ. ಕೇಪ್‌ಟೌನ್‌ನಲ್ಲಿ ನಡೆದ ಮಹತ್ವದ 2ನೇ ಟೆಸ್ಟ್‌ನಲ್ಲಿ ಹರಿಣಗಳ ಪಡೆಯನ್ನು ಟೀಂ ಇಂಡಿಯಾ 2ನೇ ದಿನದಲ್ಲೇ ಬೇಟೆಯಾಡಿ, 7 ವಿಕೆಟ್ ಭರ್ಜರಿ ಜಯಭೇರಿ ಬಾರಿಸಿದೆ. ಇದರೊಂದಿಗೆ ದಶಕಗಳ ಬಳಿಕ ಮತ್ತೆ ಆಫ್ರಿಕಾ ನೆಲದಲ್ಲಿ ಟೆಸ್ಟ್ ಸರಣಿಯನ್ನು 1-1ರಲ್ಲಿ ಸಮಬಲಗೊಳಿಸಿದೆ.
ಮೊದಲ ದಿನ 23 ವಿಕೆಟ್‌ಗಳ ಪತನಕ್ಕೆ ಸಾಕ್ಷಿಯಾಗಿದ್ದ ಪಂದ್ಯದಲ್ಲಿ 2ನೇ ದಿನವೂ ಬೌಲರ್‌ಗಳೇ ಅಧಿಪತ್ಯ ಸಾಧಿಸಿದರು. ಮೊದಲ ದಿನದಂತ್ಯಕ್ಕೆ 3 ವಿಕೆಟ್‌ಗೆ 63 ರನ್ ಕಲೆಹಾಕಿದ್ದ ದ.ಆಫ್ರಿಕಾ ಗುರುವಾರ 176ಕ್ಕೆ ಆಲೌಟಾಯಿತು. ಆರಂಭಿಕ ಆಟಗಾರ ಮಾರ್ಕ್‌ರಮ್ ಹೊರತುಪಡಿಸಿ ಬೇರೆ ಯಾವ ಬ್ಯಾಟರ್‌ಗೂ ಭಾರತದ ಬೆಂಕಿ ದಾಳಿಯನ್ನು ಎದುರಿಸಿ ಕ್ರೀಸ್‌ನಲ್ಲಿ ನಿಲ್ಲಲು ಸಾಧ್ಯವಾಗಲಿಲ್ಲ.
ಒಂದೆಡೆ ವಿಕೆಟ್ ಉರುಳುತ್ತಿದ್ದರೂ ಕ್ರೀಸ್‌ನಲ್ಲಿ ಅಬ್ಬರಿಸುತ್ತಿದ್ದ ಮಾರ್ಕ್‌ರಮ್ 103 ಎಸೆತಗಳಲ್ಲಿ 17 ಬೌಂಡರಿ, 2 ಸಿಕ್ಸರ್‌ನೊಂದಿಗೆ 106 ರನ್ ಸಿಡಿಸಿದರು. ಬೇರೆಲ್ಲಾ ಬ್ಯಾಟರ್‌ಗಳು ಒಟ್ಟಾಗಿ ಸೇರಿಸಿದ್ದು ಕೇವಲ 64 ರನ್. 6 ರನ್ ಇತರೆ ರೂಪದಲ್ಲಿ ಬಂತು. ಜಸ್‌ಪ್ರೀತ್ ಬೂಮ್ರಾ 61 ರನ್‌ಗೆ 6 ವಿಕೆಟ್ ಕಬಳಿಸಿದರೆ, ಮುಕೇಶ್ ಕುಮಾರ್ 2, ಮೊಹಮದ್ ಸಿರಾಜ್, ಪ್ರಸಿದ್ಧ್ ಕೃಷ್ಣ ತಲಾ 1 ವಿಕೆಟ್ ಪಡೆದರು.
ಭಾರತಕ್ಕೂ ಆಘಾತ: 98 ರನ್‌ಗಳ ಮೊದಲ ಇನ್ನಿಂಗ್ಸ್ ಮುನ್ನಡೆ ಪಡೆದಿದ್ದರಿಂದ ಭಾರತಕ್ಕೆ 2ನೇ ಇನ್ನಿಂಗ್ಸ್‌ನಲ್ಲಿ ಗೆಲ್ಲಲು ಸುಲಭ ಗುರಿ ಲಭಿಸಿತು. ಆದರೆ ಸುಲಭದಲ್ಲಿ ಗೆಲ್ಲಲು ದ.ಆಫ್ರಿಕಾ ವೇಗಿಗಳು ಬಿಡಲಿಲ್ಲ. ಯಶಸ್ವಿ ಜೈಸ್ವಾಲ್ 23 ಎಸೆತಗಳಲ್ಲಿ 28 ರನ್ ಸಿಡಿಸಿ ಔಟಾದರೆ, ಶುಭ್‌ಮನ್ ಗಿಲ್ 10, ವಿರಾಟ್ ಕೊಹ್ಲಿ 12 ರನ್ ಗಳಿಸಿ ಪೆವಿಲಿಯನ್ ಸೇರಿದರು. ಆದರೆ ರೋಹಿತ್ ಶರ್ಮಾ (17), ಶ್ರೇಯಸ್ (04) ತಂಡವನ್ನು ಗೆಲುವಿನ ದಡ ಸೇರಿಸಿದರು.
ಇದಕ್ಕೂ ಮೊದಲು ಮೊದಲ ಇನ್ನಿಂಗ್ಸ್‌ನಲ್ಲಿ ಸಿರಾಜ್‌ರ ಮಾರಕ ದಾಳಿಗೆ ತತ್ತರಿಸಿದ್ದ ದ.ಆಫ್ರಿಕಾ ಕೇವಲ 55ಕ್ಕೆ ಸರ್ವಪತನ ಕಂಡಿತ್ತು. ಬಳಿಕ ಭಾರತ ಉತ್ತಮ ಆರಂಭದ ಹೊರತಾಗಿಯೂ ಕೊನೆಯಲ್ಲಿ ನಾಟಕೀಯ ಕುಸಿತ ಕಂಡು 153ಕ್ಕೆ ಆಲೌಟಾಗಿತ್ತು.
ಸ್ಕೋರ್: ದ.ಆಫ್ರಿಕಾ ಮೊದಲ ಇನ್ನಿಂಗ್ಸ್ 55/10 ಮತ್ತು 2ನೇ ಇನ್ನಿಂಗ್ಸ್ 176/10 (ಮಾರ್ಕ್‌ರಮ್ 106, ಬೂಮ್ರಾ 6-61, ಮುಕೇಶ್ 2-56), ಭಾರತ ಮೊದಲ ಇನ್ನಿಂಗ್ಸ್ 153/10 ಮತ್ತು 2ನೇ ಇನ್ನಿಂಗ್ಸ್ 12 ಓವರಲ್ಲಿ 80/3 (ಜೈಸ್ವಾಲ್ 28, ರೋಹಿತ್ 17*, ಯಾನ್ಸನ್ 1-15)
31 ವರ್ಷದಲ್ಲೇ ಕೇಪ್‌ಟೌನಲ್ಲಿ ಭಾರತಕ್ಕೆ ಮೊದಲ ಟೆಸ್ಟ್ ಜಯ!
ಭಾರತ ತಂಡ 31 ವರ್ಷಗಳಲ್ಲೇ ಮೊದಲ ಬಾರಿ ಕೇಪ್‌ಟೌನ್ ಕ್ರೀಡಾಂಗಣದಲ್ಲಿ ಟೆಸ್ಟ್ ಗೆಲುವು ಸಾಧಿಸಿದೆ. 1993ರಿಂದ ಈ ವರೆಗೂ ಭಾರತ ಒಟ್ಟು 7 ಪಂದ್ಯಗಳನ್ನಾಡಿದೆ. ಈ ಬಾರಿಯ ಪಂದ್ಯ ಹೊರತುಪಡಿಸಿ ಇದಕ್ಕೂ ಮೊದಲು ನಡೆದ 6 ಪಂದ್ಯಗಳಲ್ಲಿ ಭಾರತ 4ರಲ್ಲಿ ಸೋತಿದ್ದರೆ, 2 ಪಂದ್ಯ ಡ್ರಾ ಆಗಿತ್ತು.
ಇತಿಹಾಸದಲ್ಲೇ ಅತಿ ಕಡಿಮೆ ಎಸೆತಗಳಲ್ಲಿ ಮುಗಿದ ಟೆಸ್ಟ್!:
ಭಾರತ ಹಾಗೂ ದ.ಆಫ್ರಿಕಾ ನಡುವಿನ 2ನೇ ಟೆಸ್ಟ್ ಪಂದ್ಯ ಇತಿಹಾಸದಲ್ಲೇ ಎಸೆತಗಳ ಆಧಾರದಲ್ಲಿ ಅತಿ ಕಿರು ಟೆಸ್ಟ್ ಎಂದೆನಿಸಿದೆ. ಈ ಪಂದ್ಯದಲ್ಲಿ ಒಟ್ಟು 642 ಎಸೆತಗಳು ದಾಖಲಾಯಿತು. ಇದು ಈ ವರೆಗಿನ ಕನಿಷ್ಠ. ಈ ಮೊದಲು 1932ರಲ್ಲಿ ಆಸ್ಟ್ರೇಲಿಯಾ ಹಾಗೂ ದ.ಆಫ್ರಿಕಾ ನಡುವೆ ಮೆಲ್ಬರ್ನ್ ಕ್ರೀಡಾಂಗಣದಲ್ಲಿ ನಡೆದಿದ್ದ ಪಂದ್ಯದಲ್ಲಿ 656 ಬಾಲ್ ಎಸೆಯಲಾಗಿತ್ತು. ಬರೋಬ್ಬರಿ 92 ವರ್ಷದ ಬಳಿಕ ಆ ದಾಖಲೆ ಪತನಗೊಂಡಿದೆ.
ಕೇಪ್‌ಟೌನ್ ಟೆಸ್ಟ್ ಗೆದ್ದ ಏಷ್ಯಾದ ಮೊದಲ ದೇಶ: ಭಾರತ ತಂಡ ಕೇಪ್‌ಟೌನ್‌ನಲ್ಲಿ ಟೆಸ್ಟ್ ಪಂದ್ಯ ಗೆದ್ದ ಮೊದಲ ಏಷ್ಯಾದ ತಂಡ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಈ ಕ್ರೀಡಾಂಗಣದಲ್ಲಿ ಪಾಕಿಸ್ತಾನ ಹಾಗೂ ಶ್ರೀಲಂಕಾ ತಂಡಗಳು ತಲಾ 4 ಪಂದ್ಯಗಳನ್ನಾಡಿವೆ. ಆದರೆ ಒಮ್ಮೆಯೂ ಗೆದ್ದಿಲ್ಲ. ಇನ್ನು ಅಫ್ಘಾನಿಸ್ತಾನ, ಬಾಂಗ್ಲಾದೇಶ ತಂಡಗಳು ಈ ಕ್ರೀಡಾಂಗಣದಲ್ಲಿ ಟೆಸ್ಟ್ ಆಡಿಲ್ಲ.
13 ವರ್ಷದ ಬಳಿಕ ಮತ್ತೆ ಟೆಸ್ಟ್ ಸರಣಿ ಸಮಬಲ: ಭಾರತ ತಂಡ 12 ವರ್ಷಗಳ ಬಳಿಕ ಮತ್ತೆ ದ.ಆಫ್ರಿಕಾದಲ್ಲಿ ಟೆಸ್ಟ್ ಸರಣಿ ಸಮಬಲಗೊಳಿಸಿತು. ಈ ಮೊದಲು 2010-11ರಲ್ಲಿ ಇತ್ತಂಡಗಳು ಸರಣಿಯಲ್ಲಿ 1-1ರಿಂದ ಸಮಬಲ ಸಾಧಿಸಿದ್ದವು. ಒಟ್ಟಾರೆ ದ.ಆಫ್ರಿಕಾ ವಿರುದ್ಧ ಭಾರತ 4ನೇ ಬಾರಿ ಟೆಸ್ಟ್ ಸರಣಿ ಡ್ರಾಗೊಳಿಸಿತು. ಇತ್ತಂಡಗಳ ನಡುವಿನ 16 ಟೆಸ್ಟ್ ಸರಣಿಗಳಲ್ಲಿ 8ರಲ್ಲಿ ದ.ಆಫ್ರಿಕಾ, 4ರಲ್ಲಿ ಭಾರತ ಗೆದ್ದಿದೆ.
ಸರಣಿ ಸೋಲಿಲ್ಲದೇ ಭಾರತ ತವರಿಗೆ: ಭಾರತ ಈ ಬಾರಿ ಸರಣಿ ಸೋಲನುಭವಿಸದೆ ತವರಿಗೆ ಮರಳಲಿದೆ. 3 ಪಂದ್ಯಗಳ ಟಿ20 ಸರಣಿ 1-1ರಿಂದ ಸಮಬಲಗೊಂಡರೆ, ಏಕದಿನ ಸರಣಿಯಲ್ಲಿ ಭಾರತ 2-1 ಅಂತರದಲ್ಲಿ ಜಯಭೇರಿ ಬಾರಿಸಿತ್ತು.
ಟೆಸ್ಟ್ ವಿಶ್ವಕಪ್ ಅಂಕಪಟ್ಟಿಯಲ್ಲಿ ಮತ್ತೆ ಅಗ್ರಸ್ಥಾನ ಏರಿದ ಭಾರತ: ಮೊದಲ ಪಂದ್ಯದಲ್ಲಿ ಸೋಲಿನ ಬಳಿಕ ಟೆಸ್ಟ್ ವಿಶ್ವ ಚಾಂಪಿಯನ್‌ಶಿಪ್ ಅಂಕಪಟ್ಟಿಯಲ್ಲಿ 6ನೇ ಸ್ಥಾನಕ್ಕೆ ಕುಸಿದಿದ್ದ ಭಾರತ, ಕೇಪ್‌ಟೌನ್ ಟೆಸ್ಟ್ ಗೆಲುವಿನ ಬಳಿಕ ಮತ್ತೆ ಅಗ್ರಸ್ಥಾನಕ್ಕೇರಿದೆ. ಸದ್ಯ ಭಾರತ 4 ಟೆಸ್ಟ್‌ನಲ್ಲಿ 2 ಜಯ, 1 ಸೋಲು, 1 ಡ್ರಾದೊಂದಿಗೆ ಶೇ.54.16 ಗೆಲುವಿನ ಪ್ರತಿಶತ ಹೊಂದಿದೆ. ದ.ಆಫ್ರಿಕಾ, ನ್ಯೂಜಿಲೆಂಡ್, ಆಸ್ಟ್ರೇಲಿಯಾ ತಲಾ ಶೇ.50 ಗೆಲವಿನ ಪ್ರತಿಶತದೊಂದಿಗೆ ಕ್ರಮವಾಗಿ ನಂತರದ ಸ್ಥಾನಗಳಲ್ಲಿವೆ.
03ನೇ ಬಾರಿ: ದ.ಆಫ್ರಿಕಾದಲ್ಲಿ ಬೂಮ್ರಾ 3ನೇ ಬಾರಿ 5 ವಿಕೆಟ್ ಗೊಂಚಲು ಪಡೆದರು. ಜಾವಗಲ್ ಶ್ರೀನಾಥ್ ಕೂಡಾ 3 ಬಾರಿ ಈ ಸಾಧನೆ ಮಾಡಿದ್ದಾರೆ.
38 ವಿಕೆಟ್: ದ.ಆಫ್ರಿಕಾದಲ್ಲಿ ಹೆಚ್ಚು ಟೆಸ್ಟ್ ವಿಕೆಟ್ ಪಡೆದ ಭಾರತೀಯರ ಪಟ್ಟಿಯಲ್ಲಿ ಬೂಮ್ರಾ 38 ವಿಕೆಟ್‌ಗಳೊಂದಿಗೆ 3ನೇ ಸ್ಥಾನಕ್ಕೇರಿದರು. ಕುಂಬ್ಳೆ 45, ಶ್ರೀನಾಥ್ 43, ಶಮಿ 35 ವಿಕೆಟ್ ಪಡೆದಿದ್ದಾರೆ.
03ನೇ ಬಾರಿ: ಭಾರತದ ವೇಗಿಗಳು ಟೆಸ್ಟ್ ಪಂದ್ಯದ ಎಲ್ಲಾ 20 ಪಡೆದಿದ್ದು ಇದು 3ನೇ ಬಾರಿ. ದ.ಆಫ್ರಿಕಾ ವಿರುದ್ಧ 2, ಇಂಗ್ಲೆಂಡ್ ವಿರುದ್ಧ 1 ಬಾರಿ ಈ ಸಾಧನೆ ಮಾಡಿದ್ದಾರೆ.
02ನೇ ಬಾರಿ: ಒಂದೇ ಟೆಸ್ಟ್‌ನಲ್ಲಿ ಭಾರತದ ಇಬ್ಬರು ಬೌಲರ್‌ಗಳು ತಲಾ 6+ ವಿಕೆಟ್ ಪಡೆದಿದ್ದ ಇದು 2ನೇ ಬಾರಿ. 2014ರಲ್ಲಿ ಇಂಗ್ಲೆಂಡ್ ವಿರುದ್ಧ ಲಾರ್ಡ್ಸ್‌ನಲ್ಲಿ ಇಶಾಂತ್, ಭುವನೇಶ್ವರ್ ಈ ಸಾಧನೆ ಮಾಡಿದ್ದರು.
05ನೇ ಗೆಲುವು: ಭಾರತ ತಂಡ ದ.ಆಫ್ರಿಕಾದಲ್ಲಿ 5ನೇ ಬಾರಿ ಟೆಸ್ಟ್ ಗೆಲುವು ಸಾಧಿಸಿತು. ಈ ಮೊದಲು 2006, 2010, 2018 ಹಾಗೂ 2021ರ ಪ್ರವಾಸದಲ್ಲಿ ತಲಾ 1 ಗೆಲುವು ಪಡೆದಿತ್ತು.
03ನೇ ಬಾರಿ: ಭಾರತ ಪಾಲ್ಗೊಂಡ ಟೆಸ್ಟ್ ಪಂದ್ಯ ಎರಡೇ ದಿನದಲ್ಲಿ ಮುಕ್ತಾಯಗೊಂಡಿದ್ದು ಇದು 3ನೇ ಬಾರಿ. 2018ರಲ್ಲಿ ಅಫ್ಘಾನಿಸ್ತಾನ ವಿರುದ್ಧ ಬೆಂಗಳೂರು ಟೆಸ್ಟ್, 2021ರಲ್ಲಿ ಇಂಗ್ಲೆಂಡ್ ವಿರುದ್ಧ ಅಹ್ಮದಾಬಾದ್ ಟೆಸ್ಟ್ 2 ದಿನದಲ್ಲಿ ಅಂತ್ಯಗೊಂಡಿತ್ತು.