;Resize=(412,232))
ಭಾರತ ಕ್ರಿಕೆಟ್ ಇಂದು ವಿಶ್ವದ ಅತ್ಯಂತ ಬಲಿಷ್ಠ ವ್ಯವಸ್ಥೆಯಾಗಿ ಬೆಳೆಯಲು ಕೇವಲ ಐಪಿಎಲ್ ಅಥವಾ ಪ್ರತಿಭಾವಂತ ಆಟಗಾರರೇ ಕಾರಣವಲ್ಲ. ಅದರ ಹಿಂದೆ ವೈಜ್ಞಾನಿಕ ತರಬೇತಿ, ಕ್ರೀಡಾ ತಂತ್ರಜ್ಞಾನ ಮತ್ತು ದೀರ್ಘಕಾಲೀನ ಪ್ರತಿಭೆ ಅಭಿವೃದ್ಧಿಯ ಸಮಗ್ರ ವ್ಯವಸ್ಥೆ ಇದೆ. ಅದರ ಕೇಂದ್ರಬಿಂದು ಬೆಂಗಳೂರಿನ ಬಿಸಿಸಿಐ ಸೆಂಟರ್ ಆಫ್ ಎಕ್ಸಲೆನ್ಸ್(ಸಿಒಇ) 2024ರಲ್ಲಿ ಉದ್ಘಾಟನೆಯಾದ ಈ 40 ಎಕರೆ ವಿಸ್ತಾರದ ಅತ್ಯಾಧುನಿಕ ಕ್ಯಾಂಪಸ್, ಭಾರತದ ಮುಂದಿನ ತಲೆಮಾರಿನ ಕ್ರಿಕೆಟಿಗರನ್ನು ರೂಪಿಸುವ ಕಾರ್ಖಾನೆಯಾಗಿದೆ. ಸಿಒಇ 2 ಯಶಸ್ವಿ ವರ್ಷಗಳನ್ನು ಪೂರೈಸಿದ್ದು, ಅದರ ಸುತ್ತ ಒಂದು ನೋಟ ಇಲ್ಲಿದೆ.
ಸುಮಾರು ₹500 ಕೋಟಿ ವೆಚ್ಚದಲ್ಲಿ ನಿರ್ಮಿಸಲಾದ ಈ ಕ್ಯಾಂಪಸ್‌ನಲ್ಲಿ ಮೂರು ಅಂತಾರಾಷ್ಟ್ರೀಯ ಮಟ್ಟದ ಮೈದಾನಗಳು, 86 ತರಬೇತಿ ಪಿಚ್‌ಗಳು, ಒಳಾಂಗಣ ಕ್ರಿಕೆಟ್ ಸಂಕೀರ್ಣ, ಒಲಿಂಪಿಕ್ ಗುಣಮಟ್ಟದ ಜಿಮ್, ಕ್ರೀಡಾ ವಿಜ್ಞಾನ ಲ್ಯಾಬ್, ಉತ್ಕೃಷ್ಟ ಗುಣಮಟ್ಟದ ಈಜುಕೊಳ ಹಾಗೂ ಆಟಗಾರರ ವಸತಿ ವ್ಯವಸ್ಥೆ ಇದೆ. ಹಿಂದೆ ಚಿನ್ನಸ್ವಾಮಿ ಕ್ರೀಡಾಂಗಣದ ಆವರಣದಲ್ಲಿ ಕಾರ್ಯನಿರ್ವಹಿಸುತ್ತಿದ್ದ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿ ಈಗ ಸಂಪೂರ್ಣ ಹೈ-ಪರ್ಫಾರ್ಮೆನ್ಸ್ ಸಂಸ್ಥೆಯಾಗಿ ರೂಪಾಂತರಗೊಂಡಿದೆ.
ಪಿಚ್‌ಗಳಿಗೆ 3 ಕಡೆಯಿಂದ ಮಣ್ಣು
ಸಿಒಇನಲ್ಲಿರುವ 3 ಮೈದಾನಗಳಿಗೆ ದೇಶದ ಮೂರು ಭಾಗಗಳಿಂದ ಮಣ್ಣು ತರಿಸಿ ಪಿಚ್‌ಗಳನ್ನು ಸಿದ್ಧಪಡಿಸಲಾಗಿದೆ. ‘ಎ’ ಮೈದಾನದ ಪಿಚ್‌ಗಳಿಗೆ ಮುಂಬೈನ ಕೆಂಪು ಮಣ್ಣನ್ನು ಬಳಸಲಾಗಿದೆ. ಕೆಂಪು ಮಣ್ಣು ಬೇಗ ತೇವಾಂಶವನ್ನು ಕಳೆದುಕೊಳ್ಳುತ್ತದೆ. ತೇವಾಂಶ ಇರುವಾಗ ವೇಗಿಗಳಿಗೆ ಪಿಚ್ ನೆರವಾಗಲಿದೆ. ಪಿಚ್ ಒಣಗಿದ ಮೇಲೆ ಸ್ಪಿನ್ನರ್‌ಗಳಿಗೆ ಹೆಚ್ಚಿನ ಅನುಕೂಲ ಸಿಗಲಿದೆ. ಭಾರತೀಯ ಉಪಖಂಡದಲ್ಲಿ ಆಡುವುದಕ್ಕೆ ಅಭ್ಯಾಸ ನಡೆಸಲು ಈ ಪಿಚ್‌ಗಳು ಸಹಕಾರಿ.
ಇನ್ನು, ‘ಬಿ’ ಮೈದಾನದ ಪಿಚ್‌ಗಳಿಗೆ ಕರ್ನಾಟಕದ ಮಂಡ್ಯದ ಕಪ್ಪು ಮಣ್ಣನ್ನು ಬಳಸಲಾಗಿದೆ. ಈ ಮಣ್ಣು ದೀರ್ಘಾವಧಿಗೆ ತೇವಾಂಶವನ್ನು ಹಿಡಿದಿಟ್ಟುಕೊಳ್ಳುವುದರಿಂದ ಚೆಂಡು ಹೆಚ್ಚು ಪುಟಿದೇಳುವುದಿಲ್ಲ. ಈ ಪಿಚ್‌ಗಳಲ್ಲಿ ಬ್ಯಾಟ್ ಮಾಡುವುದು ದೊಡ್ಡ ಸವಾಲಿನ ಕೆಲಸ. ಭಾರತದ ಕೆಲವೆಡೆ, ವೆಸ್ಟ್‌ಇಂಡೀಸ್, ದ.ಆಫ್ರಿಕಾ ಹಾಗೂ ಆಸ್ಟ್ರೇಲಿಯಾದ ಕೆಲ ಪಿಚ್‌ಗಳಿಗೆ ಕಪ್ಪು ಮಣ್ಣು ಬಳಸಲಾಗಿದೆ.
‘ಸಿ’ ಮೈದಾನದ ಪಿಚ್‌ಗಳಿಗೆ ಒಡಿಶಾದ ಕಾಲಾಹಂಡಿಯ ಮಣ್ಣನ್ನು ಬಳಸಲಾಗಿದೆ. ಇದು ಕೆಂಪು, ಕಪ್ಪು ಮಿಶ್ರಿತ ಮಣ್ಣು. ಈ ಪಿಚ್‌ಗಳ ವರ್ತನೆಯೂ ಬೇರೆ ರೀತಿ ಇರಲಿದೆ. ಒಟ್ಟಾರೆಯಾಗಿ ಬೇರೆ ಬೇರೆ ದೇಶಗಳಲ್ಲಿ ಸಿಗುವ ಪಿಚ್‌ಗಳನ್ನೆಲ್ಲಾ ಸಿಒಇನಲ್ಲೇ ಸಿದ್ಧಪಡಿಸಲಾಗಿದ್ದು, ಭಾರತೀಯ ಆಟಗಾರರಿಗೆ ಪ್ರತಿ ಪ್ರವಾಸಕ್ಕೂ ಮುನ್ನ ಬೇಕಿರುವ ಅಗತ್ಯ ಸಿದ್ಧತೆ ಸಿಗುತ್ತದೆ.
ಈ ಕೇಂದ್ರದ ವಿಶೇಷತೆ ಎಂದರೆ ಕೇವಲ ನೆಟ್‌ಗಳಲ್ಲಿ ಬ್ಯಾಟಿಂಗ್ ಅಥವಾ ಬೌಲಿಂಗ್ ಅಲ್ಲ. ಪ್ರತಿಯೊಬ್ಬ ಆಟಗಾರನ ದೇಹ ಮತ್ತು ಕೌಶಲ್ಯವನ್ನು ದತ್ತಾಂಶಗಳ ಮೂಲಕ ಅಳೆಯಲಾಗುತ್ತದೆ.
ಇಲ್ಲಿ ಬಳಸಲಾಗುತ್ತಿರುವ ಪ್ರಮುಖ ತಂತ್ರಜ್ಞಾನಗಳು:
1. 3ಡಿ ಮೋಷನ್ ಕ್ಯಾಪ್ಚರ್: ಬೌಲಿಂಗ್ ಆಕ್ಷನ್ ಮತ್ತು ಬ್ಯಾಟಿಂಗ್ ತಂತ್ರದ ವಿಶ್ಲೇಷಣೆ
2. ಹೈಸ್ಪೀಡ್ ವಿಡಿಯೋ ಕ್ಯಾಮೆರಾಗಳು: ಸಾವಿರಾರು ಫ್ರೇಮ್‌ಗಳಲ್ಲಿ ಚಲನೆಯ ಅಧ್ಯಯನ
3. ಜಂಪ್ ಪ್ಲೇಟ್ಸ್: ಆಟಗಾರ ನೆಗೆದಾಗ ಆತನ ಕಾಲುಗಳು ಎಷ್ಟು ಸಮತೋಲನದಿಂದ ಇರಲಿವೆ ಮತ್ತು ಕಾಲಿನ ಮೇಲೆ ಎಷ್ಟು ಒತ್ತಡ ಬೀಳುತ್ತಿದೆ ಎನ್ನುವುದನ್ನು ಅಳೆಯುವ ಸಾಧನ.
4. ಜಿಪಿಎಸ್ : ಓಟದ ವೇಗ, ಕೆಲಸದ ಒತ್ತಡ, ದಣಿವಿನ ಮಾಪನ ನಡೆಸಲು ಸಹಕಾರಿ
5. ಬೈಯೋಮೆಕಾನಿಕ್ಸ್ ಲ್ಯಾಬ್ : ಗಾಯದ ಅಪಾಯವನ್ನು ಮುಂಚಿತವಾಗಿ ಗುರುತಿಸುವ ವ್ಯವಸ್ಥೆ
ಈ ದತ್ತಾಂಶಗಳನ್ನು ಆಧರಿಸಿದ ತರಬೇತಿಯಿಂದ ಆಟಗಾರರ ಪ್ರದರ್ಶನ ಮಾತ್ರವಲ್ಲ, ಗಾಯಗಳನ್ನು ತಡೆಯುವ ಪ್ರಯತ್ನವೂ ಹೆಚ್ಚು ಪರಿಣಾಮಕಾರಿಯಾಗಿದೆ.
ವರ್ಷಪೂರ್ತಿ ಹೈ ಪರ್ಫಾರ್ಮೆನ್ಸ್ ಕ್ಯಾಂಪ್‌ಗಳು
ಪ್ರತಿ ಋತುವಿನಲ್ಲಿ ಸುಮಾರು 25–30 ರಾಷ್ಟ್ರೀಯ ಹೈ-ಪರ್ಫಾರ್ಮೆನ್ಸ್ ಕ್ಯಾಂಪ್‌ಗಳು ಇಲ್ಲಿ ನಡೆಯುತ್ತವೆ. ಪುರುಷ ಹಾಗೂ ಮಹಿಳಾ ವಿಭಾಗದ ಅಂಡರ್-16, ಅಂಡರ್-19, ಅಂಡರ್-23, ಇಂಡಿಯಾ ‘ಎ’, ಉದಯೋನ್ಮುಖ ಆಟಗಾರರು ಮತ್ತು ವೇಗದ ಬೌಲರ್, ಸ್ಪಿನ್ನರ್‌ಗಳ ವಿಶೇಷ ಕ್ಯಾಂಪ್‌ಗಳು ಇದರ ಭಾಗವಾಗಿವೆ. 2026ರಲ್ಲಿ ನಾಲ್ಕು ತಂಡಗಳ ಎಮರ್ಜಿಂಗ್ ರೆಡ್ ಬಾಲ್ ಟೂರ್ನಿಯನ್ನೂ ಇದೇ ಕೇಂದ್ರದಲ್ಲಿ ಆಯೋಜಿಸಿ ಭವಿಷ್ಯದ ಟೆಸ್ಟ್ ಆಟಗಾರರನ್ನು ಗುರುತಿಸುವ ಪ್ರಯತ್ನ ನಡೆಸಲಾಯಿತು.
ರಾಷ್ಟ್ರೀಯ ತಂಡದ ‘ಬ್ಯಾಕ್‌ರೂಮ್ ಎಂಜಿನ್’
ಕೇವಲ ಯುವ ಆಟಗಾರರಷ್ಟೇ ಅಲ್ಲ, ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ, ಜಸ್‌ಪ್ರೀತ್ ಬೂಮ್ರಾ, ಶುಭಮನ್ ಗಿಲ್ ಮೊದಲಾದ ಹಿರಿಯ ಆಟಗಾರರೂ ಫಿಟ್‌ನೆಸ್ ಪರೀಕ್ಷೆ, ಪುನಶ್ಚೇತನ ಮತ್ತು ಋತುವಿನ ಪೂರ್ವ ಸಿದ್ಧತೆಗೆ ಇಲ್ಲಿಗೆ ಆಗಮಿಸುತ್ತಾರೆ. ಆದರೆ, ಸಿಒಎ ನಿರ್ದೇಶಕ ವಿ.ವಿ.ಎಸ್. ಲಕ್ಷ್ಮಣ್ ಸ್ಪಷ್ಟವಾಗಿ ಹೇಳಿರುವಂತೆ, ‘ಸಿಒಇ ಕೇವಲ ಪುನಶ್ಚೇತನ ಕೇಂದ್ರವಲ್ಲ. ಇದು ಭಾರತೀಯ ಕ್ರಿಕೆಟ್‌ನ ಪ್ರತಿಭೆ ಅಭಿವೃದ್ಧಿ ವ್ಯವಸ್ಥೆಯ ಹೃದಯವಾಗಿದೆ.’
ಮುಂದಿನ ತಲೆಮಾರಿನ ಕನಸುಗಳಿಗೆ ಅಡಿಪಾಯ
16,000 ಚದರ ಅಡಿ ಜಿಮ್!
ಸಿಒಇನ ಅತ್ಯಂತ ಗಮನ ಸೆಳೆಯುವ ವಿಭಾಗವೆಂದರೆ ಕ್ರೀಡಾ ವಿಜ್ಞಾನ ಹಾಗೂ ಔಷಧಿ ವಿಭಾಗ. ಇಲ್ಲಿ, ಸುಮಾರು 16,000 ಚದರ ಅಡಿ ವಿಸ್ತೀರ್ಣದ ಜಿಮ್ ಇದೆ. ನಾಲ್ಕು ಅಥ್ಲೆಟಿಕ್ ಟ್ರ್ಯಾಕ್‌ಗಳು ಮತ್ತು ಉನ್ನತ ಗುಣಮಟ್ಟದ ಮೊಂಡೊ ರಬ್ಬರ್ ನೆಲಹಾಸು ಇಲ್ಲಿದೆ. ಅಂದರೆ ಇದು ಸಾಮಾನ್ಯ ಕ್ರಿಕೆಟ್ ಜಿಮ್ ಅಲ್ಲ. ವೇಗ, ಶಕ್ತಿ, ಫ್ಲೆಕ್ಸಿಬಿಲಿಟಿ, ಸಮತೋಲನ, ಚಲನೆ, ಗಾಯದಿಂದ ಮುಂಜಾಗೃತೆ ಎಲ್ಲವನ್ನೂ ಒಂದೇ ಸೂರಿನಡಿ ತರಬೇತಿ ನೀಡುವ ಉತ್ಕೃಷ್ಟ ಗುಣಮಟ್ಟದ ವ್ಯವಸ್ಥೆ ಇರುವ ಕೇಂದ್ರ.
ಜಿಮ್‌ನ ಪ್ರಮುಖ ಉದ್ದೇಶ ಆಟಗಾರನಿಂದ ಹೆಚ್ಚು ತೂಕ ಎತ್ತಿಸುವುದಲ್ಲ. ಒಬ್ಬ ಬ್ಯಾಟರ್‌ಗೆ ಬೇಕಾದ ದೈಹಿಕ ಸಾಮರ್ಥ್ಯ, ವೇಗದ ಬೌಲರ್‌ಗೆ ಬೇಕಾದ ತಾಕತ್ತು, ವಿಕೆಟ್ ಕೀಪರ್‌ಗೆ ಬೇಕಿರುವ ಚಲನಶೀಲತೆ ಹೀಗೆ ಪ್ರತಿಯೊಬ್ಬರ ಅಗತ್ಯಕ್ಕೆ ತಕ್ಕಂತೆ ತರಬೇತಿ ಶಿಬಿರಗಳನ್ನು ರೂಪಿಸುವುದು ಇದರ ಹಿಂದಿರುವ ತತ್ವ.
ಇದರ ಜೊತೆಗೆ ಫಿಸಿಯೋಥೆರಪಿ, ಪುನಶ್ಚೇತನ, ವ್ಯವಸ್ಥೆ ಕೂಡ ಇದೆ. ಹೀಗಾಗಿ ಗಾಯವಾದ ನಂತರ ಆಟಗಾರನನ್ನು ಕೇವಲ ವಿಶ್ರಾಂತಿಗೆ ಕಳುಹಿಸುವ ಬದಲು, ಹಂತ ಹಂತವಾಗಿ ಮತ್ತೆ ಮೈದಾನಕ್ಕಿಳಿಯುವಂತೆ ಮಾಡುವುದು ಇಲ್ಲಿನ ಟ್ರೈನರ್‌ಗಳ ಕೆಲಸ.
ಚೇತರಿಕೆಗೆ ಪ್ರತ್ಯೇಕ ವ್ಯವಸ್ಥೆ
ಆಟಗಾರರು ದಣಿವು, ಆಯಾಸ, ಗಾಯದಿಂದ ಚೇತರಿಸಿಕೊಳ್ಳಲು ಸಿಒಇನಲ್ಲಿ ಪ್ರತ್ಯೇಕ ವ್ಯವಸ್ಥೆ ಇದೆ. ಜಕುಜಿ, ಸೌನಾ, ಹಬೆ ಸ್ನಾನ, ಅಂಡರ್ ವಾಟರ್ ಪೂಲ್ ಸ್ಪಾ, ಸ್ಲೀಪಿಂಗ್ ಪಾಡ್ ಹೀಗೆ ಹಲವು ವ್ಯವಸ್ಥೆಗಳಿವೆ. ಜೊತೆಗೆ ವಿಜ್ಞಾನ ಹಾಗೂ ತಂತ್ರಜ್ಞಾನವನ್ನು ಬಳಸಿ ಹಲವು ವಿಶ್ವ ದರ್ಜೆಯ ಉಪಕರಣಗಳನ್ನು ಇಲ್ಲಿ ಇರಿಸಲಾಗಿದೆ.
ಭಾರತ ಕ್ರಿಕೆಟ್‌ನ ಭವಿಷ್ಯವನ್ನು ರೂಪಿಸುವ ನೈಜ ಪ್ರಯೋಗಾಲಯವೇ ಬೆಂಗಳೂರಿನ ಬಿಸಿಸಿಐ ಸಿಒಇ. ಪ್ರತಿಭೆ, ವಿಜ್ಞಾನ ಮತ್ತು ದೂರದೃಷ್ಟಿ ಒಂದೇ ಕಡೆ ಸೇರುವ ಈ ಕೇಂದ್ರ ಮುಂದಿನ ದಶಕದಲ್ಲೂ ಭಾರತವನ್ನು ವಿಶ್ವ ಕ್ರಿಕೆಟ್‌ನ ಶಿಖರದಲ್ಲೇ ಉಳಿಸುವ ಪ್ರಮುಖ ಅಸ್ತ್ರವಾಗಲಿದೆ.
ಸಿಒಇ ಬಗ್ಗೆ ಅಂಕಿ-ಅಂಶ
ವಿಸ್ತೀರ್ಣ: 40 ಎಕರೆ
ಹೂಡಿಕೆ: ಸುಮಾರು ₹500 ಕೋಟಿ
ಮೈದಾನಗಳು: 3 ಅಂತಾರಾಷ್ಟ್ರೀಯ ಮಟ್ಟದ ಮೈದಾನಗಳು
ಪಿಚ್‌ಗಳು: 86 ತರಬೇತಿ ಪಿಚ್‌ಗಳು
ಮೈದಾನ: ಸಿಬ್ಬಂದಿ 104
ಕ್ಯುರೇಟರ್‌ಗಳು: 03
ವಾರ್ಷಿಕ ಕ್ಯಾಂಪ್‌ಗಳು: ಸುಮಾರು 25–30