ಶ್ರೀಲಂಕಾ ವಿರುದ್ಧ ಟೆಸ್ಟ್‌ ಸರಣಿಯ ಮೊದಲ ದಿನ ಕರ್ನಾಟಕದ ಜೋಡಿ ಮೋಡಿ ಮಾಡಿದೆ. ಅನುಭವಿ ಕೆ.ಎಲ್‌.ರಾಹುಲ್‌ ಹಾಗೂ ಯುವ ಬ್ಯಾಟರ್‌ ದೇವದತ್‌ ಪಡಿಕ್ಕಲ್‌ ಭರ್ಜರಿ ಆಟದಿಂದಾಗಿ ಒಂದನೇ ದಿನದಾಟದ ಅಂತ್ಯಕ್ಕೆ ಟೀಂ ಇಂಡಿಯಾ 2 ವಿಕೆಟ್ ನಷ್ಟದಲ್ಲಿ 288 ರನ್‌ ಕಲೆಹಾಕಿದೆ.

ಗಾಲೆ: ಶ್ರೀಲಂಕಾ ವಿರುದ್ಧ ಟೆಸ್ಟ್‌ ಸರಣಿಯ ಮೊದಲ ದಿನ ಕರ್ನಾಟಕದ ಜೋಡಿ ಮೋಡಿ ಮಾಡಿದೆ. ಅನುಭವಿ ಕೆ.ಎಲ್‌.ರಾಹುಲ್‌ ಹಾಗೂ ಯುವ ಬ್ಯಾಟರ್‌ ದೇವದತ್‌ ಪಡಿಕ್ಕಲ್‌ ಭರ್ಜರಿ ಆಟದಿಂದಾಗಿ ಒಂದನೇ ದಿನದಾಟದ ಅಂತ್ಯಕ್ಕೆ ಟೀಂ ಇಂಡಿಯಾ 2 ವಿಕೆಟ್ ನಷ್ಟದಲ್ಲಿ 288 ರನ್‌ ಕಲೆಹಾಕಿದೆ. 2 ವರ್ಷ ಬಳಿಕ ಟೆಸ್ಟ್‌ ತಂಡಕ್ಕೆ ಮರಳಿದ ಪಡಿಕ್ಕಲ್‌, ಚೊಚ್ಚಲ ಶತಕದ ಮೂಲಕ ತಂಡಕ್ಕೆ ಆಸರೆಯಾದರು.

ಭಾರತ ಈ ಪಂದ್ಯದಲ್ಲಿ ಟಾಸ್‌ ಗೆದ್ದು ಬ್ಯಾಟಿಂಗ್‌ ಆಯ್ಕೆ ಮಾಡಿಕೊಂಡಿತು. ಯಶಸ್ವಿ ಜೈಸ್ವಾಲ್‌ ಅಬ್ಬರದ ಆಟದ ಮೂಲಕ ತಂಡಕ್ಕೆ ಭರ್ಜರಿ ಮುನ್ನಡೆ ಒದಗಿಸಿಕೊಟ್ಟರು. ಆದರೆ 37 ಎಸೆತಗಳಲ್ಲಿ 32 ರನ್‌ ಗಳಿಸಿದ್ದಾಗ ದುರದೃಷ್ಟರ ರನ್‌ಔಟ್‌ಗೆ ಬಲಿಯಾದರು. ಬಳಿಕ ರಾಹುಲ್‌ ಜೊತೆಗೂಡಿದ ದೇವದತ್‌, ಶ್ರೀಲಂಕಾ ಬೌಲರ್‌ಗಳ ಬೆವರಿಳಿಸಿದರು. ಈ ಜೋಡಿ ಬರೋಬ್ಬರಿ 42 ಓವರ್‌ ಒಟ್ಟಿಗೇ ಬ್ಯಾಟಿಂಗ್‌ ನಡೆಸಿ, 150 ರನ್‌ ಸೇರಿಸಿತು.

ಟೀ ವಿರಾಮಕ್ಕೂ ಮುನ್ನ ರಾಹುಲ್‌ ಸ್ನಾಯುಸೆಳೆತಕ್ಕೆ ತುತ್ತಾದರು. ಹೀಗಾಗಿ ಟೀ ವಿರಾಮದ ಬಳಿಕ ಅವರು ಬ್ಯಾಟಿಂಗ್‌ಗೆ ಆಗಮಿಸಲಿಲ್ಲ. 77 ರನ್ ಗಳಿಸಿದ್ದ ಅವರು ರಿಟೈರ್ಡ್‌ ಹರ್ಟ್‌ ಆಗಿ, ಪೆವಿಲಿಯನ್‌ ಸೇರಿದರು. ಆದರೆ ಅವರು ಮತ್ತೆ ಬ್ಯಾಟಿಂಗ್‌ ಆಗಮಿಸುವ ಸಾಧ್ಯತೆಯಿದೆ. ಇನ್ನು, ರಾಹುಲ್‌ಗಿಂತ ವೇಗವಾಗಿ ಬ್ಯಾಟ್‌ ಬೀಸಿದ ದೇವದತ್‌, 134 ಎಸೆತಗಳಲ್ಲಿ ಶತಕ ಪೂರೈಸಿದರು. 3ನೇ ಟೆಸ್ಟ್‌ ಆಡುತ್ತಿರುವ ದೇವದತ್‌ ತಮ್ಮ ಚೊಚ್ಚಲ ಶತಕ ಪೂರೈಸಿದರು.

ರಾಹುಲ್‌ ಬಳಿಕ ಕ್ರೀಸ್‌ಗೆ ಬಂದ ನಾಯಕ ಶುಭ್‌ಮನ್‌ ಗಿಲ್‌ 16ಕ್ಕೆ ಇನ್ನಿಂಗ್ಸ್‌ ಕೊನೆಗೊಳಿಸಿದರು. ರಿಷಭ್‌ ಪಂತ್‌ ಔಟಾಗದೆ 27 ರನ್‌ ಸಿಡಿಸಿದ್ದು, ದೇವದತ್(ಔಟಾಗದೆ 131 ರನ್‌) ಜೊತೆ 2ನೇ ದಿನಕ್ಕೆ ಕ್ರೀಸ್‌ ಕಾಯ್ದುಕೊಂಡಿದ್ದಾರೆ.

ಸ್ಕೋರ್‌: ಭಾರತ 73 ಓವರಲ್ಲಿ 288/2 (ಮೊದಲ ದಿನದಂತ್ಯಕ್ಕೆ) (ದೇವದತ್‌ ಔಟಾಗದೆ 131, ರಾಹುಲ್‌ ರಿಟೈರ್ಡ್‌ ಹರ್ಟ್‌ 77, ಜೈಸ್ವಾಲ್‌ 32, ರಿಷಭ್‌ ಔಟಾಗದೆ 27, ಪ್ರಭಾತ್‌ 1-77)

ಪಂದ್ಯಕ್ಕೆ ಮಳೆ ಅಡ್ಡಿ: ಹಲವು ಓವರ್‌ ನಷ್ಟ

ಈ ಪಂದ್ಯಕ್ಕೆ ಮಳೆ ಅಡ್ಡಿಪಡಿಸಿತು. ಊಟದ ವಿರಾಮದ ವೇಳೆ ಸುರಿದ ಮಳೆಯಿಂದಾಗಿ ಪಂದ್ಯ ವಿಳಂಬವಾಗಿ ಪುನಾರಂಭಗೊಂಡಿತು. ದಿನದ ಕೊನೆ ಅವಧಿಯಲ್ಲೂ ಕೆಲ ಕಾಲ ಮಳೆ ಸುರಿಯಿತು. ಹೀಗಾಗಿ ಮೊದಲ ದಿನ ನಿಗದಿತ 90 ಓವರ್‌ ಬದಲು 73 ಆಟ ನಡೆಯಿತು.

2 ವರ್ಷದಲ್ಲಿ 19 ಟೆಸ್ಟ್‌, 7 ಬ್ಯಾಟರ್‌ಗಳು: 3ನೇ

ದೇವದತ್‌ 3ನೇ ಕ್ರಮಾಂಕದಲ್ಲಿ ಆಡಿ ಶತಕ ಪೂರೈಸಿದರು. ಇದು ಕಳೆದ 2 ವರ್ಷಗಳಲ್ಲೇ ಭಾರತ ಟೆಸ್ಟ್‌ ತಂಡದ ಪರ 3ನೇ ಕ್ರಮಾಂಕದಲ್ಲಿ ದಾಖಲಾದ ಮೊದಲ ಸೆಂಚುರಿ. 2024ರ ಸೆಪ್ಟೆಂಬರ್‌ನಿಂದ ಈವರೆಗಿನ ಅವಧಿಯಲ್ಲಿ ನಡೆದ 19 ಟೆಸ್ಟ್‌ಗಳಲ್ಲಿ ಭಾರತ ತಂಡ ಬೇರೆ ಬೇರೆ 7 ಬ್ಯಾಟರ್‌ಗಳನ್ನು 3ನೇ ಕ್ರಮಾಂಕದಲ್ಲಿ ಆಡಿಸಿತ್ತು. ಆದರೆ 35 ಇನ್ನಿಂಗ್ಸ್‌ಗಳಲ್ಲಿ ಕೇವಲ 27.28ರ ಸರಾಸರಿಯಲ್ಲಿ ರನ್‌ ಕಲೆಹಾಕಿದ್ದರು. ಈಗ ದೇವದತ್‌ ಆಗಮನದೊಂದಿಗೆ ಭಾರತ ಕೊನೆಗೂ 3ನೇ ಕ್ರಮಾಂಕದಲ್ಲಿ ಯಶಸ್ಸು ಸಾಧಿಸಿದೆ.

ಟೆಸ್ಟ್‌ ಶತಕ ಸಿಡಿಸಿದ 9ನೇ ಕನ್ನಡಿಗ ದೇವ್: ಒಟ್ಟಾರೆ 72 ಸೆಂಚುರಿ

ಭಾರತ ಪರ ಟೆಸ್ಟ್‌ ಕ್ರಿಕೆಟ್‌ನಲ್ಲಿ ಶತಕ ಸಿಡಿಸಿದ ಕರ್ನಾಟಕದ 9ನೇ ಬ್ಯಾಟರ್‌ ಎಂಬ ಹೆಗ್ಗಳಿಗೆ ದೇವದತ್‌ ಪಡಿಕ್ಕಲ್‌ ಪಾತ್ರರಾದರು. ಒಟ್ಟಾರೆ ರಾಜ್ಯದ ಬ್ಯಾಟರ್‌ಗಳಿಂದ ಭಾರತ ಟೆಸ್ಟ್‌ ತಂಡದ ಪರ 72 ಶತಕ ದಾಖಲಾಗಿವೆ. ರಾಹುಲ್‌ ದ್ರಾವಿಡ್‌ 36, ಜಿ.ಆರ್‌.ವಿಶ್ವನಾಥ್‌ 14, ಕೆ.ಎಲ್‌.ರಾಹುಲ್‌ 12, ಮಯಾಂಕ್‌ ಅಗರ್‌ವಾಲ್‌ 4, ಸಯ್ಯದ್‌ ಕಿರ್ಮಾನಿ 2, ಬ್ರಿಜೇಶ್‌ ಪಟೇಲ್‌ 1, ಅನಿಲ್‌ ಕುಂಬ್ಳೆ 1, ಕರುಣ್‌ ನಾಯರ್‌ 1, ಪಡಿಕ್ಕಲ್‌ 1 ಶತಕ ಸಿಡಿಸಿದ್ದಾರೆ.

702 ರನ್‌

ದೇವದತ್‌ ಪಡಿಕ್ಕಲ್‌ ತಮ್ಮ ಕೊನೆ 10 ಪ್ರಥಮ ದರ್ಜೆ ಇನ್ನಿಂಗ್ಸ್‌ಗಳಲ್ಲಿ ಒಟ್ಟು 702 ರನ್‌ ಕಲೆಹಾಕಿದ್ದಾರೆ.

30 ಟೆಸ್ಟ್‌ಗಳನ್ನೂ 30

ಭಿನ್ನ ಸ್ಟೇಡಿಯಂಗಳಲ್ಲಿ

ಆಡಿದ ಜೈಸ್ವಾಲ್‌!

ಯಶಸ್ವಿ ಜೈಸ್ವಾಲ್‌ ಭಾರತದ ಪರ 30 ಟೆಸ್ಟ್‌ ಪಂದ್ಯಗಳನ್ನಾಡಿದ್ದಾರೆ. ಆದರೆ ಈ ಎಲ್ಲಾ ಪಂದ್ಯಗಳನ್ನೂ ಅವರು ಬೇರೆ ಬೇರೆ ಕ್ರೀಡಾಂಗಣಗಳಲ್ಲಿ ಆಡಿದ್ದಾರೆ. ಅಂದರೆ, ಅವರು ಯಾವುದೇ ಕ್ರೀಡಾಂಗಣದಲ್ಲೂ ಒಂದಕ್ಕಿಂತ ಹೆಚ್ಚು ಟೆಸ್ಟ್ ಪಂದ್ಯವಾಡಿಲ್ಲ. ಆರಂಭಿಕ 33 ಟೆಸ್ಟ್‌ ಪಂದ್ಯಗಳನ್ನು ಬೇರೆ ಬೇರೆ ಕ್ರೀಡಾಂಗಣಗಳಲ್ಲಿ ಆಡಿರುವ ಸಂಜಯ್‌ ಮಾಂಜ್ರೇಕರ್‌ ಈ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದು, ಸಚಿನ್‌ ತೆಂಡುಲ್ಕರ್‌(32 ಟೆಸ್ಟ್‌) 2ನೇ ಸ್ಥಾನದಲ್ಲಿದ್ದಾರೆ.