ವಿಶ್ವಕಪ್‌ನ ಭಾರತ ತಂಡದಲ್ಲಿದೆ 9 ಸಮಸ್ಯೆಗಳು!

Published : Jan 29, 2026, 12:15 PM IST
TEAM INDIA T20

ಸಾರಾಂಶ

ಐಸಿಸಿ ಟಿ20 ವಿಶ್ವಕಪ್‌ಗೆ ಇನ್ನು ಕೇವಲ 9 ದಿನಗಳು ಬಾಕಿ ಇದೆ. ಫೆ.7ರಂದು ಭಾರತದ 5 ಹಾಗೂ ಶ್ರೀಲಂಕಾದ 2 ನಗರಗಳಲ್ಲಿ ಪಂದ್ಯಗಳು ಆರಂಭಗೊಳ್ಳಲಿವೆ. ಆದರೆ ತನ್ನದೇ ಆತಿಥ್ಯದಲ್ಲಿ ವಿಶ್ವಕಪ್‌ ನಡೆಯುತ್ತಿದ್ದರೂ ಭಾರತ ತಂಡ ಈಗಲೂ ಟೂರ್ನಿಗೆ ಸಂಪೂರ್ಣವಾಗಿ ಸಜ್ಜುಗೊಂಡಿಲ್ಲ

 ನವದೆಹಲಿ: ಐಸಿಸಿ ಟಿ20 ವಿಶ್ವಕಪ್‌ಗೆ ಇನ್ನು ಕೇವಲ 9 ದಿನಗಳು ಬಾಕಿ ಇದೆ. ಫೆ.7ರಂದು ಭಾರತದ 5 ಹಾಗೂ ಶ್ರೀಲಂಕಾದ 2 ನಗರಗಳಲ್ಲಿ ಪಂದ್ಯಗಳು ಆರಂಭಗೊಳ್ಳಲಿವೆ. ಆದರೆ ತನ್ನದೇ ಆತಿಥ್ಯದಲ್ಲಿ ವಿಶ್ವಕಪ್‌ ನಡೆಯುತ್ತಿದ್ದರೂ ಭಾರತ ತಂಡ ಈಗಲೂ ಟೂರ್ನಿಗೆ ಸಂಪೂರ್ಣವಾಗಿ ಸಜ್ಜುಗೊಂಡಿಲ್ಲ. ತಂಡದಲ್ಲಿ ಇನ್ನೂ 9 ಪ್ರಮುಖ ಸಮಸ್ಯೆಗಳಿವೆ. ಈ ಸಮಸ್ಯೆಗಳು ಬಗೆಹರಿಯದ ಹೊರತು ತಂಡ ಪ್ರಶಸ್ತಿಯನ್ನು ತನ್ನಲ್ಲೇ ಉಳಿಸಿಕೊಳ್ಳುವುದು ಕಷ್ಟವಿದೆ.

ಹೊರನೋಟಕ್ಕೆ ತಂಡ ಸಮರ್ಥವಾಗಿ, ಎಲ್ಲರೂ ಅಭೂತಪೂರ್ವ ಆಟವಾಡುತ್ತಿರುವುದಾಗಿ ಕಾಣಿಸಿದರೂ ತಂಡದಲ್ಲಿ ಸಮಸ್ಯೆ ಇಲ್ಲ ಎಂಬುದನ್ನು ಒಪ್ಪಲು ಸಾಧ್ಯವಿಲ್ಲ. ಗಾಯ, ಫಿಟ್ನೆಸ್‌, ಲಯ, ಕಾರ್ಯದೊತ್ತಡ, ಗೇಮ್‌ ಟೈಮ್‌ ಸೇರಿ ಹಲವು ಪ್ರಮುಖ ಸಮಸ್ಯೆಗಳು ಟೀಂ ಇಂಡಿಯಾದಲ್ಲಿದೆ. ಅವು ಯಾವುದು ಎಂಬ ವಿವರ ಇಲ್ಲಿದೆ.

1. ಸಂಜು ಸ್ಯಾಮ್ಸನ್‌ ಕಳಪೆ ಆಟ

ವಿಶ್ವಕಪ್‌ ತಂಡದಲ್ಲಿ ಸ್ಥಾನ ಪಡೆದಿರುವ ಸಂಜು ಸ್ಯಾಮ್ಸನ್‌ ಕಳಪೆ ಆಟ ಈ ವಿಶ್ವಕಪ್‌ಗೂ ಮುನ್ನ ತಂಡದ ಪ್ರಮುಖ ತಲೆಬಿಸಿ. ಒಂದು ಕಾಲದಲ್ಲಿ ಅತ್ಯಂತ ಪ್ರತಿಭಾನ್ವಿತ ಬ್ಯಾಟರ್‌ಗಳಲ್ಲಿ ಒಬ್ಬರೆಂದು ಪರಿಗಣಿಸಲ್ಪಟ್ಟಿದ್ದ ಸಂಜು ಕಳೆದ ವರ್ಷ 15 ಪಂದ್ಯಗಳಲ್ಲಿ 20.18ರ ಸರಾಸರಿಯಲ್ಲಿ 222 ರನ್‌ ಗಳಿಸಿದ್ದರು. ಈ ವರ್ಷ ನ್ಯೂಜಿಲೆಂಡ್‌ ವಿರುದ್ಧ ಸರಣಿ ಆರಂಭಿಕ 3 ಪಂದ್ಯಗಳಲ್ಲಿ ಕೇವಲ 16 ರನ್‌ ಗಳಿಸಿದ್ದಾರೆ. ಹೀಗಾಗಿ ವಿಶ್ವಕಪ್‌ಗೂ ಮುನ್ನವೇ ಅವರ ಸ್ಥಾನ ಅಪಾಯದಲ್ಲಿದೆ. ಆದರೆ ಅವರ ಮೇಲೆ ಆಯ್ಕೆ ಸಮಿತಿ ವಿಶ್ವಾಸವಿಟ್ಟು ವಿಶ್ವಕಪ್‌ನಲ್ಲೂ ಆಡಿಸಲಿದೆಯೇ ಎಂಬ ಕುತೂಹಲವಿದೆ.

2. ಇಶಾನ್‌ಗೆ ಇದೆಯೇ ಅವಕಾಶ?

ಸ್ಫೋಟಕ ಬ್ಯಾಟರ್‌ ಇಶಾನ್‌ ಕಿಶನ್‌ ಕೊನೆ ಕ್ಷಣದಲ್ಲಿ ತಂಡಕ್ಕೆ ಅಚ್ಚರಿಯ ಆಯ್ಕೆಯಾಗಿದ್ದಾರೆ. ಆದರೆ ತಂಡದಲ್ಲಿ ಅವರ ಸ್ಥಾನದ ಬಗ್ಗೆ ಇನ್ನೂ ಗೊಂದಲವಿದೆ. ತಿಲಕ್‌ ವರ್ಮಾ ಅನುಪಸ್ಥಿತಿಯಲ್ಲಿ ನ್ಯೂಜಿಲೆಂಡ್‌ ವಿರುದ್ಧ ಸರಣಿಯಲ್ಲಿ ಆಡಿರುವ ಇಶಾನ್‌ ತಮ್ಮ ಸಾಮರ್ಥ್ಯ ಸಾಬೀತುಪಡಿಸಿದ್ದಾರೆ. ಹಾಗಾದರೆ ವಿಶ್ವಕಪ್‌ ತಂಡದಲ್ಲಿ ಅವರು ಕೇವಲ ಬ್ಯಾಟರ್‌ ಆಗಿ ಆಯ್ಕೆಯಾಗುತ್ತಾರೆಯೇ? ಹೌದು ಎಂದಾದರೆ ರಿಂಕು ಸಿಂಗ್‌ ಸ್ಥಾನದ ಬಗ್ಗೆ ಪ್ರಶ್ನೆ ಮೂಡುತ್ತದೆ. ರಿಂಕುರನ್ನು ಕೈಬಿಡಲಾಗುತ್ತದೆಯೇ ಅಥವಾ ಬೇರೆ ಮಾರ್ಗ ಕಂಡುಕೊಂಡು ಇಶಾನ್‌ರನ್ನು ಆಡಿಸಲಾಗುತ್ತೆಯೇ ಎಂಬ ಪ್ರಶ್ನೆ ಉದ್ಭವಿಸುತ್ತದೆ.

3. ತಿಲಕ್‌ ಬಂದರೆ ಹೊರಗುಳಿಯುವವರಾರು?

ಗಾಯದಿಂದ ಚೇತರಿಸಿಕೊಳ್ಳುತ್ತಿರುವ ತಾರಾ ಬ್ಯಾಟರ್‌ ತಿಲಕ್ ವರ್ಮಾ ಫೆಬ್ರವರಿ 3ರಂದು ತಂಡವನ್ನು ಸೇರಿಕೊಳ್ಳಲಿದ್ದಾರೆ ಹಾಗೂ ವಿಶ್ವಕಪ್‌ನ ಆಡುವ 11ರ ಬಳಗದಲ್ಲಿ ಸ್ಥಾನ ಪಡೆಯುವುದು ಬಹುತೇಕ ಖಚಿತ. ಹೀಗಾದರೆ ಅವರಿಗೆ 3ನೇ ಕ್ರಮಾಂಕದಲ್ಲಿ ಯಾರು ಜಾಗ ಬಿಟ್ಟುಕೊಡಲಿದ್ದಾರೆ? ಇಶಾನ್‌ ಕಿಶನ್‌ರನ್ನು ಹೊರಗಿಡಲಾಗುತ್ತದೆಯೇ? ಭಾರತ ತಂಡದಲ್ಲಿ ಸ್ಥಾನ ಪಡೆಯಬಹುದಾದ ಆಟಗಾರರು ಬಹಳಷ್ಟು ಇದ್ದಾರೆ. ಆದರೆ ಎಲ್ಲರನ್ನೂ ಆಯ್ಕೆ ಮಾಡಲು ಸಾಧ್ಯವಿಲ್ಲ. ಹೀಗಾಗಿ ಆಯ್ಕೆ ಸಮಿತಿಗೆ ಈಗ ಪ್ರಮುಖ ಸವಾಲು ಎದುರಾಗುವುದು ಖಚಿತ.

4. ವಾಷಿಂಗ್ಟನ್‌ ಸುಂದರ್‌ ಗಾಯದ ಸಮಸ್ಯೆ

ವಾಶಿಂಗ್ಟನ್‌ ಸುಂದರ್‌ ಈಗ ಭಾರತದ ಪ್ರಮುಖ ಆಲ್ರೌಂಡರ್‌. ಅವರು ಯಾವುದೇ ಕ್ರಮಾಂಕದಲ್ಲಿ ಬ್ಯಾಟ್‌ ಮಾಡಬಲ್ಲ ಮತ್ತು ನಿಖರ ದಾಳಿ ನಡೆಸಬಲ್ಲ ಆಟಗಾರ. ಆದರೆ ಈಗ ಅವರು ಗಾಯದ ಸಮಸ್ಯೆಗೆ ತುತ್ತಾಗಿದ್ದಾರೆ. ವಿಶ್ವಕಪ್‌ಗೂ ಮುನ್ನ ಅವರು ಫಿಟ್‌ ಆಗಲಿದ್ದಾರೆಯೇ ಎಂಬುದು ಸದ್ಯದ ಪ್ರಶ್ನೆ. ಬಿಸಿಸಿಐ ವೈದ್ಯಕೀಯ ತಂಡ ವಾಷಿಂಗ್ಟನ್‌ರ ಫಿಟ್ನೆಸ್‌ ವಿಚಾರದಲ್ಲಿ ಪ್ರತ್ಯೇಕ ಗಮನಹರಿಸುತ್ತಿದೆ. ಒಂದು ವೇಳೆ ವಾಷಿಂಗ್ಟನ್‌ ಸುಂದರ್‌ ಸಂಪೂರ್ಣ ಫಿಟ್‌ ಆಗದಿದ್ದರೆ ತಂಡದಲ್ಲಿ ಅವರ ಸ್ಥಾನವನ್ನು ತುಂಬುವವರು ಯಾರು?

5. ಕುಲ್ದೀಪ್‌-ವರುಣ್‌ ಒಟ್ಟಿಗೇ ಕಣಕ್ಕೆ?

ಈ ಬಾರಿ ವಿಶ್ವಕಪ್‌ನಲ್ಲಿ ಗಮನಿಸಬೇಕಾದ ಪ್ರಮುಖ ಅಂಶವೇನೆಂದರೆ ಭಾರತದ ಸ್ಪಿನ್ ಜೋಡಿ ಕುಲ್ದೀಪ್‌ ಯಾದವ್‌ ಹಾಗೂ ವರುಣ್‌ ಚಕ್ರವರ್ತಿ ಒಟ್ಟಿಗೇ ಆಡಲಿದ್ದಾರೆಯೇ ಎಂಬುದು. ಇಬ್ಬರೂ ತಂಡದ ಸ್ಪಿನ್‌ ಅಸ್ತ್ರ. ವಿಕೆಟ್‌ ಕೀಳುವುದರಲ್ಲಿ ಇವರಿಬ್ಬರ ಪಾತ್ರ ಪ್ರಮುಖವಾದದ್ದು. ಆದರೆ ಇಬ್ಬರನ್ನೂ ಒಟ್ಟಿಗೇ ಆಡಿಸುವ ಸಾಧ್ಯತೆ ಕಡಿಮೆ. ಯಾಕೆಂದರೆ ನಾಯಕ, ಕೋಚ್‌, ಆಯ್ಕೆ ಸಮಿತಿಯು ಈ ಇಬ್ಬರಲ್ಲಿ ಒಬ್ಬರನ್ನು ಮಾತ್ರ ಆಡಿಸಿ, ಮತ್ತೊಂದು ಸ್ಥಾನಕ್ಕೆ ಆಲ್ರೌಂಡರ್‌ನ ಆಯ್ಕೆ ಮಾಡುವ ಸಾಧ್ಯತೆ ಇದೆ. ಈ ಗೊಂದಲಕ್ಕೆ ತಂಡ ಶೀಘ್ರದಲ್ಲೇ ಪರಿಹಾರ ಕಂಡುಕೊಳ್ಳಬೇಕಿದೆ.

6. ವೇಗಿ ಬೂಮ್ರಾರ ಫಿಟ್ನೆಸ್‌, ಕಾರ್ಯದೊತ್ತಡ

ಜಸ್‌ಪ್ರೀತ್‌ ಬುಮ್ರಾ ವಿಶ್ವದ ಅತ್ಯುತ್ತಮ ಬೌಲರ್. ಯಾವುದೇ ಕ್ಷಣದಲ್ಲೂ ತಂಡಕ್ಕೆ ಅಸ್ತ್ರವಾಗಬಲ್ಲ ವೇಗಿ. ಹೀಗಾಗಿಯೇ ಅವರು ಸದಾ ಫಿಟ್‌ ಆಗಿಯೇ ಇರಬೇಕೆಂಬುದು ತಂಡದ ಬಯಕೆ. ಆದರೆ ಅದು ಕಷ್ಟಸಾಧ್ಯ. ಅವರು ಪದೇ ಪದೇ ಗಾಯಕ್ಕೆ ತುತ್ತಾಗುತ್ತಿದ್ದಾರೆ. ಒಂದು ವೇಳೆ ಅವರು ಗಾಯಗೊಳ್ಳದೆ ಸಂಪೂರ್ಣ ಫಿಟ್‌ ಇದ್ದರೂ, ವೈದ್ಯಕೀಯ ತಂಡವು ಕಾರ್ಯದೊತ್ತಡ ತಗ್ಗಿಸಲು ಕೆಲ ಪಂದ್ಯಗಳಲ್ಲಿ ಮಾತ್ರ ಆಡಿಸಿ ಎಂದು ಸೂಚನೆ ನೀಡಬಹುದು. ಇದು ಭಾರತಕ್ಕೆ ಮುಳುವಾಗುವ ಸಾಧ್ಯತೆಯಿದೆ. ಅವರನ್ನು ಎಲ್ಲಾ ಪಂದ್ಯದಲ್ಲಿ ಆಡಿಸಲು ತಂಡ ಸಿದ್ಧವಿದೆಯೇ ಕಾದು ನೋಡಬೇಕಿದೆ.

7. ಅರ್ಶ್‌ದೀಪ್‌ಗೆ ಬೇಕಿದೆ ಗೇಮ್‌ ಟೈಮ್

ಅರ್ಶ್‌ದೀಪ್‌ ಸಿಂಗ್‌ ಭಾರತದ ಅತ್ಯಂತ ಯಶಸ್ವಿ ಟಿ20 ಬೌಲರ್‌. ಅವರು ಆಡುವ 11ರ ಬಳಗದಲ್ಲಿ ಇದ್ದರೆ ತಂಡಕ್ಕೆ ಲಾಭ. ಆದರೆ ಅವರಿಗೆ ಎಲ್ಲಾ ಪಂದ್ಯಗಳಲ್ಲೂ ಅವಕಾಶ ಸಿಗುವ ಭರವಸೆ ಇಲ್ಲ. ಯಾಕೆಂದರೆ ಮತ್ತೋರ್ವ ವೇಗಿ ಹರ್ಷಿತ್‌ ರಾಣಾ ಸ್ಪರ್ಧೆಯಲ್ಲಿದ್ದಾರೆ. ಇದು ತಂಡದ ಆಡುವ 11ರ ಬಳಗದ ಆಯ್ಕೆಯನ್ನು ಇನ್ನಷ್ಟು ಕಷ್ಟಕರವಾಗಿಸುತ್ತದೆ. ಸದ್ಯ ನಡೆಯುತ್ತಿರುವ ನ್ಯೂಜಿಲೆಂಡ್‌ ವಿರುದ್ಧ ಸರಣಿಯಲ್ಲಿ ಅರ್ಶ್‌ದೀಪ್‌ರನ್ನು ಆಡಿಸಲಾಗುತ್ತಿದೆ. ಹೀಗಾಗಿ ಅವರಿಗೆ ಗೇಮ್‌ ಟೈಮ್ ಸಿಗುತ್ತಿದೆ. ಆದರೆ ವಿಶ್ವಕಪ್‌ ತಂಡದಲ್ಲಿ ಅವರ ಸ್ಥಾನದ ಬಗ್ಗೆ ಯಾವುದೇ ಖಚಿತತೆ ಇಲ್ಲ.

8. ಟೀಂ ಇಂಡಿಯಾದಲ್ಲಿ ಕಳಪೆ ಫೀಲ್ಡಿಂಗ್‌

ನ್ಯೂಜಿಲೆಂಡ್‌ ವಿರುದ್ಧ ನಡೆಯುತ್ತಿರುವ ಟಿ20 ಸರಣಿಯ ಆರಂಭಿಕ 3 ಪಂದ್ಯಗಳಲ್ಲಿ ಭಾರತೀಯ ಆಟಗಾರರು ಕೆಲ ಪ್ರಮುಖ ಕ್ಯಾಚ್‌ ಕೈಚೆಲ್ಲಿದ್ದಾರೆ. ಕಳೆದ ಏಷ್ಯಾಕಪ್‌ನಲ್ಲಿ ತಂಡದ ಕ್ಯಾಚಿಂಗ್‌ ಅತ್ಯಂಶ ಶೋಚನೀಯವಾಗಿತ್ತು. ಬರೋಬ್ಬರಿ 10ಕ್ಕೂ ಹೆಚ್ಚು ಕ್ಯಾಚ್‌ ಕೈಚೆಲ್ಲಿದ್ದರು. ಮಹತ್ವದ ಸರಣಿ, ಟೂರ್ನಿಗಳಲ್ಲಿ ಆಟಗಾರರು ಒತ್ತಡಕ್ಕೆ ಒಳಗಾಗಿ ಕಳಪೆ ಫೀಲ್ಡಿಂಗ್‌ ಮಾಡುವುದು ಆಗಾಗ ಕಂಡುಬರುತ್ತಿದೆ. ಇದು ಟಿ20 ವಿಶ್ವಕಪ್‌ನಲ್ಲೂ ಮರುಕಳಿಸಲಿದೆಯೇ ಎಂಬ ಆತಂಕವಿದೆ. ಕ್ಯಾಚ್‌ ಬಿಟ್ಟರೆ ಮ್ಯಾಚ್‌ ಬಿಟ್ಟಂತೆ ಎಂಬುದನ್ನು ಭಾರತೀಯ ಆಟಗಾರರು ಅರ್ಥೈಸಿಕೊಳ್ಳಬೇಕಾದ ಅಗತ್ಯ ಹಿಂದೆಂದಿಗಿಂತ ಈಗ ಹೆಚ್ಚಿದೆ.

9. ಕೋಚ್‌ ಗಂಭೀರ್‌ ಮೇಲಿದೆ ಹೆಚ್ಚಿನ ಒತ್ತಡ

ಭಾರತ ತಂಡ ಇತ್ತೀಚೆಗೆ ತವರಿನಲ್ಲೇ 2 ಟೆಸ್ಟ್‌ ಸೋತಿತ್ತು. ಈಗ ಟಿ20 ವಿಶ್ವಕಪ್‌ನ ಮಾದರಿ ಸಂಪೂರ್ಣವಾಗಿ ಭಿನ್ನವಾಗಿದ್ದರೂ, ಗಂಭೀರ್‌ ಮೇಲೆ ಒತ್ತಡ ಇರುವುದು ಸುಳ್ಳಲ್ಲ. ಅವರ ಸ್ಥಾನ ಈಗ ಮೊದಲಿನಷ್ಟು ಭದ್ರವಾಗಿಲ್ಲ. ಬಿಸಿಸಿಐ ಈಗಾಗಲೇ ಗಂಭೀರ್‌ಗೆ ಖಡಕ್‌ ಸೂಚನೆ ನೀಡಿದೆ. ಹೀಗಾಗಿ ಟಿ20 ವಿಶ್ವಕಪ್‌ ತನ್ನಲ್ಲೇ ಉಳಿಸಿಕೊಳ್ಳುವುದು ಭಾರತದ ಪ್ರಮುಖ ಗುರಿ. ಹೀಗಾದರೆ ಮಾತ್ರ ಕೋಚ್‌ ಗಂಭೀರ್‌ ಹುದ್ದೆಯಲ್ಲಿ ಮುಂದುವರಿಯಬಹುದು. ಸೋತರೆ ಅವರ ಸ್ಥಾನಕ್ಕೆ ಕುತ್ತು ಬರಲೂಬಹುದು. ಹೀಗಾಗಿ ಅವರು ಒತ್ತಡದಲ್ಲೇ ತಂಡವನ್ನು ನಿಭಾಯಿಸಬೇಕಾಗುತ್ತದೆ.

PREV
Get the latest sports news in Kannada (ಕ್ರೀಡಾ ಸುದ್ದಿ) — live cricket scores, football highlights, tennis, badminton, and updates on all major sports events. Stay ahead with Kannada Prabha’s full-coverage sports reporting.
Read more Articles on

Recommended Stories

ಪೆನ್‌ ಪಾಯಿಂಟ್‌ ಕ್ರಿಕೆಟ್‌: ಎಮಾರ್‌ ಸ್ಟ್ರೈಕರ್ಸ್‌ ಚಾಂಪಿಯನ್‌, ಅಟ್ಯಾಕರ್ಸ್‌ ರನ್ನರ್‌-ಅಪ್‌
ಬಾಂಗ್ಲಾ ಬೆಂಬಲಿಸಲು ಹೋಗಿ ಹಳ್ಳಕ್ಕೆ ಬೀಳುತ್ತಾ ಪಾಕಿಸ್ತಾನ?