ಐಪಿಎಲ್‌ ಪ್ಲೇ-ಆಫ್‌ ರೇಸ್‌ನಲ್ಲಿ 7 ತಂಡಗಳು!

KannadaprabhaNewsNetwork |  
Published : May 15, 2025, 01:34 AM ISTUpdated : May 15, 2025, 04:37 AM IST
ಐಪಿಎಲ್  | Kannada Prabha

ಸಾರಾಂಶ

 ಐಪಿಎಲ್‌ 18ನೇ ಆವೃತ್ತಿ ಪುನಾರಂಭಗೊಳ್ಳಲು ಕೇವಲ 2 ದಿನ ಬಾಕಿ ಇದ್ದು, ಪ್ಲೇ-ಆಫ್‌ನ 4 ಸ್ಥಾನಗಳಿಗೆ 7 ತಂಡಗಳ ನಡುವೆ ಪೈಪೋಟಿ ಇದೆ. ಈಗಾಗಲೇ ಚೆನ್ನೈ, ರಾಜಸ್ಥಾನ ಹಾಗೂ ಸನ್‌ರೈಸರ್ಸ್‌ ಪ್ಲೇ-ಆಫ್‌ ರೇಸ್‌ನಿಂದ ಹೊರಬಿದ್ದಿವೆ.

ಬೆಂಗಳೂರು: ಐಪಿಎಲ್‌ 18ನೇ ಆವೃತ್ತಿ ಪುನಾರಂಭಗೊಳ್ಳಲು ಕೇವಲ 2 ದಿನ ಬಾಕಿ ಇದ್ದು, ಪ್ಲೇ-ಆಫ್‌ನ 4 ಸ್ಥಾನಗಳಿಗೆ 7 ತಂಡಗಳ ನಡುವೆ ಪೈಪೋಟಿ ಇದೆ. ಈಗಾಗಲೇ ಚೆನ್ನೈ, ರಾಜಸ್ಥಾನ ಹಾಗೂ ಸನ್‌ರೈಸರ್ಸ್‌ ಪ್ಲೇ-ಆಫ್‌ ರೇಸ್‌ನಿಂದ ಹೊರಬಿದ್ದಿವೆ. 7 ತಂಡಗಳ ಮಧ್ಯೆ ಇರುವ ಲೆಕ್ಕಾಚಾರ ಹೇಗೆ ಎನ್ನುವ ಸಂಪೂರ್ಣ ವಿವರ ಇಲ್ಲಿದೆ. 1. ಗುಜರಾತ್‌ ಟೈಟಾನ್ಸ್‌ (ಪಂದ್ಯ: 11, ಅಂಕ: 16, ನೆಟ್‌ರನ್‌ರೇಟ್‌: 0.793)

ಬಾಕಿ ಇರುವ ಪಂದ್ಯಗಳು: vs ಡೆಲ್ಲಿ, ಲಖನೌ, ಚೆನ್ನೈ

ಗುಜರಾತ್‌ ಟೈಟಾನ್ಸ್‌ ಬಾಕಿ ಇರುವ 3 ಪಂದ್ಯಗಳಲ್ಲಿ ಒಂದರಲ್ಲಿ ಗೆದ್ದರೂ ಸಾಕು ಪ್ಲೇ-ಆಫ್‌ನಲ್ಲಿ ಸ್ಥಾನ ಖಚಿತವಾಗಲಿದೆ. ಆದರೆ ಮೂರೂ ಪಂದ್ಯಗಳಲ್ಲಿ ಸೋತರೆ ತಂಡ ಹೊರಬೀಳುವ ಸಾಧ್ಯತೆಯೂ ಇರಲಿದೆ. ಏಕೆಂದರೆ, ಇನ್ನೂ 4 ತಂಡಗಳಿಗೆ ಗರಿಷ್ಠ 17 ಅಂಕ ಗಳಿಸಲು ಅವಕಾಶವಿದೆ. ಆಗ ಬೇರೆ ಫಲಿತಾಂಶಗಳ ಮೇಲೆ ಅವಲಂಬಿತಗೊಳ್ಳಬೇಕಿದೆ. ಟೈಟಾನ್ಸ್‌ಗೆ ಕೊನೆ 2 ಪಂದ್ಯ ಅಹಮದಾಬಾದ್‌ನಲ್ಲಿದ್ದು, ಈ ವರ್ಷ ತವರಿನಲ್ಲಿ 4-1 ಗೆಲುವು-ಸೋಲಿನ ದಾಖಲೆ ಹೊಂದಿದೆ. ಜೊತೆಗೆ ತಂಡದ ನೆಟ್‌ ರನ್‌ರೇಟ್‌ ಕೂಡ ಉತ್ತಮವಾಗಿದೆ.2. ಆರ್‌ಸಿಬಿ (ಪಂದ್ಯ: 11, ಅಂಕ: 16, ನೆಟ್‌ ರನ್‌ರೇಟ್‌: 0.482)

ಬಾಕಿ ಇರುವ ಪಂದ್ಯಗಳು: vs ಕೆಕೆಆರ್‌, ಸನ್‌ರೈಸರ್ಸ್‌, ಲಖನೌ

ಗುಜರಾತ್‌ನಂತೆ ಆರ್‌ಸಿಬಿಗೂ ಪ್ಲೇ-ಆಫ್‌ ಪ್ರವೇಶಿಸಲು ಒಂದು ಗೆಲುವು ಸಾಕು. ಒಂದು ವೇಳೆ ಎಲ್ಲಾ 3ರಲ್ಲಿ ಸೋತರೂ, ಉಳಿದ ಫಲಿತಾಂಶಗಳು ತನ್ನ ಪರವಾಗಿ ಬರುವಂತೆ ತಂಡ ಪ್ರಾರ್ಥಿಸಬೇಕು. 2ರಲ್ಲಿ ಗೆದ್ದರೂ ಅಗ್ರ-2ರಲ್ಲಿ ಸ್ಥಾನ ಖಚಿತವಾಗಿ ಸಿಗಲಿದೆ ಎಂದು ಹೇಳಲು ಸಾಧ್ಯವಿಲ್ಲ. ಗುಜರಾತ್‌ ಹಾಗೂ ಪಂಜಾಬ್‌ 20 ಅಥವಾ ಅದಕ್ಕಿಂತ ಹೆಚ್ಚು ಅಂಕ ಗಳಿಸಬಹುದು. ಹೀಗಾಗಿ, ಆರ್‌ಸಿಬಿ 3ರಲ್ಲೂ ಗೆದ್ದು ಅಗ್ರ-2ರಲ್ಲಿ ಸ್ಥಾನ ಪಡೆಯುವ ಮೂಲಕ ಕ್ವಾಲಿಫೈಯರ್‌-1ಗೆ ಅರ್ಹತೆ ಪಡೆಯಲು ಎದುರು ನೋಡುತ್ತಿದೆ.3. ಪಂಜಾಬ್‌ ಕಿಂಗ್ಸ್‌ (ಪಂದ್ಯ: 11, ಅಂಕ: 15, ನೆಟ್‌ ರನ್‌ರೇಟ್‌: 0.376)

ಬಾಕಿ ಇರುವ ಪಂದ್ಯಗಳು: vs ರಾಜಸ್ಥಾನ, ಡೆಲ್ಲಿ, ಮುಂಬೈ

ಪಂಜಾಬ್‌ಗೆ ಕನಿಷ್ಠ 2 ಗೆಲುವುಗಳ ಅಗತ್ಯವಿದೆ. ಒಂದು ವೇಳೆ 17 ಅಂಕಕ್ಕೆ ನಿಂತರೆ, ಪ್ಲೇ-ಆಫ್‌ ಸ್ಥಾನ ಕೈತಪ್ಪಬಹುದು. ಒಟ್ಟಾರೆ 5 ತಂಡಗಳಿಗೆ 17 ಅಂಕ ತಲುಪುವ ಅವಕಾಶವಿದೆ. ಒಂದು ವೇಳೆ ಡೆಲ್ಲಿ ವಿರುದ್ಧ ಪಂಜಾಬ್‌ ಗೆದ್ದು, ಉಳಿದೆರಡರಲ್ಲಿ ಸೋತರೆ, ಆಗ 17 ಅಂಕದೊಂದಿಗೆ ಪ್ಲೇ-ಆಫ್‌ ಪ್ರವೇಶಿಸಬಹುದು. ಪಂಜಾಬ್‌ 15 ಅಂಕದೊಂದಿಗೇ ಪ್ಲೇ-ಆಫ್‌ಗೇರಬೇಕಿದ್ದರೆ, ಡೆಲ್ಲಿ 2 ಪಂದ್ಯ ಸೋಲಬೇಕು. ಲಖನೌ 2ಕ್ಕಿಂತ ಹೆಚ್ಚು ಜಯ ಸಾಧಿಸಬಾರದು. ಆಗ ನೆಟ್‌ ರನ್‌ರೇಟ್‌ ಆಧಾರದಲ್ಲಿ ಮೇಲುಗೈ ಸಾಧಿಸಿದರೆ ಪ್ಲೇ-ಆಫ್‌ಗೇರಬಹುದು. 4. ಮುಂಬೈ ಇಂಡಿಯನ್ಸ್‌ (ಪಂದ್ಯ: 12, ಅಂಕ: 14, ನೆಟ್‌ ರನ್‌ರೇಟ್‌: 1.156)

ಬಾಕಿ ಇರುವ ಪಂದ್ಯಗಳು: vs ಡೆಲ್ಲಿ, ಪಂಜಾಬ್‌

ಮುಂಬೈ ಎರಡಕ್ಕೆ ಎರಡೂ ಪಂದ್ಯ ಗೆಲ್ಲಬೇಕು. ಒಂದರಲ್ಲಿ ಸೋತರೆ ಆಗ ತಂಡದ ಭವಿಷ್ಯ ಬೇರೆ ಫಲಿತಾಂಶಗಳ ಮೇಲೆ ಅವಲಂಬಿತಗೊಳ್ಳಲಿದೆ. ಒಂದು ವೇಳೆ ಎರಡರಲ್ಲೂ ಸೋತರೆ ತಂಡ ಹೊರಬೀಳಲಿದೆ. ಮುಂಬೈ ಅತ್ಯುತ್ತಮ ನೆಟ್‌ ರನ್‌ರೇಟ್‌ ಹೊಂದಿದ್ದು, ಇದು ತಂಡಕ್ಕೆ ಲಾಭವಾಗಬಹುದು. 5. ಡೆಲ್ಲಿ ಕ್ಯಾಪಿಟಲ್ಸ್‌ (ಪಂದ್ಯ: 11, ಅಂಕ: 13, ನೆಟ್‌ ರನ್‌ರೇಟ್‌: 0.362)

ಬಾಕಿ ಇರುವ ಪಂದ್ಯಗಳು: vs ಗುಜರಾತ್‌, ಮುಂಬೈ, ಪಂಜಾಬ್‌

ಸನ್‌ರೈಸರ್ಸ್‌ ವಿರುದ್ಧ ಪಂದ್ಯ ಮಳೆಗೆ ಬಲಿಯಾಗಿದ್ದರಿಂದ ಡೆಲ್ಲಿಗೆ 1 ಅಂಕ ಸಿಕ್ಕಿತು. ಇದು ತಂಡವನ್ನು ಪ್ಲೇ-ಆಫ್‌ ರೇಸ್‌ನಲ್ಲಿ ಉಳಿಸಿದೆ. ಇನ್ನು ಪಂಜಾಬ್‌ ವಿರುದ್ಧ ಅರ್ಧಕ್ಕೆ ನಿಂತ ಪಂದ್ಯ ಮತ್ತೆ ನಡೆಯಲಿರುವ ಕಾರಣ ತಂಡಕ್ಕೆ ಅದೃಷ್ಟದ ಅವಕಾಶ ದೊರೆತಿದೆ. ಮೂರೂ ಪಂದ್ಯ ಗೆದ್ದರೆ ಸಲೀಸಾಗಿ ಪ್ಲೇ-ಆಫ್‌ ಪ್ರವೇಶಿಸಲಿದೆಯಾದರೂ, ತಂಡ ಲಯದಲ್ಲಿಲ್ಲ. ಕಳೆದ 5 ಪಂದ್ಯಗಳಲ್ಲಿ ಕೇವಲ 1ರಲ್ಲಿ ಗೆದ್ದಿರುವ ಡೆಲ್ಲಿ, ಲಯಕ್ಕೆ ಮರಳಿದರೆ ಪ್ಲೇ-ಆಫ್‌ಗೇರಬಹುದು. 6. ಕೆಕೆಆರ್‌ (ಪಂದ್ಯ: 12, ಅಂಕ: 11, ನೆಟ್‌ ರನ್‌ರೇಟ್‌: 0.193)

ಬಾಕಿ ಇರುವ ಪಂದ್ಯಗಳು: vs ಆರ್‌ಸಿಬಿ, ಸನ್‌ರೈಸರ್ಸ್‌

ಕೆಕೆಆರ್‌ ಹೊರಬೀಳುವ ಹೊಸ್ತಿಲಲ್ಲಿದೆ. ತಂಡ ಗರಿಷ್ಠ 15 ಅಂಕ ತಲುಪಬಹುದು. ಈಗಾಗಲೇ ಗುಜರಾತ್‌, ಆರ್‌ಸಿಬಿ 15ಕ್ಕಿಂತ ಹೆಚ್ಚು ಅಂಕ ಹೊಂದಿದ್ದು, ಪಂಜಾಬ್‌ 15 ಅಂಕ ಪಡೆದಿದೆ. ಮೂರೂ ತಂಡಗಳಿಗೆ ಇನ್ನೂ 3 ಪಂದ್ಯ ಬಾಕಿ ಇದೆ. ಈ ಮೂರು ತಂಡಗಳು ಅರ್ಹತೆ ಪಡೆದು 4ನೇ ಸ್ಥಾನಕ್ಕಾಗಿ ಪೈಪೋಟಿ ಶುರುವಾದರೆ, ಆಗ ಮುಂಬೈ ತನ್ನೆರಡೂ ಪಂದ್ಯಗಳನ್ನು ಸೋಲಬೇಕು. ಡೆಲ್ಲಿಗೆ ಮುಂಬೈ ವಿರುದ್ಧ ಪಂದು ಪಂದ್ಯವಿದ್ದು, ಡೆಲ್ಲಿ ಗೆದ್ದರೆ ತಂಡ 15 ಅಂಕ ತಲುಪಲಿದೆ. ಆಗ 4ನೇ ಸ್ಥಾನ ನೆಟ್‌ ರನ್‌ರೇಟ್‌ ಆಧಾರದಲ್ಲಿ ನಿರ್ಧಾರವಾಗಲಿದೆ. ಮತ್ತೊಂದೆಡೆ ಪಂಜಾಬ್‌ ತನ್ನ ಮೂರೂ ಪಂದ್ಯಗಳನ್ನು ಸೋತರೆ, ಆಗ ಮುಂಬೈ 15 ಅಂಕ ದಾಟಲಿದ್ದು, ಡೆಲ್ಲಿ, ಪಂಜಾಬ್‌, ಕೆಕೆಆರ್‌ 15 ಅಂಕಗಳಲ್ಲಿ ಉಳಿಯಲಿವೆ. ಈ ಮೂರು ತಂಡಗಳ ನಡುವೆ ನೆಟ್‌ ರನ್‌ರೇಟ್‌ ಆಧಾರದಲ್ಲಿ 4ನೇ ಸ್ಥಾನ ನಿರ್ಧಾರವಾಗಲಿದೆ.7. ಲಖನೌ (ಪಂದ್ಯ: 11, ಅಂಕ: 10, ನೆಟ್‌ ರನ್‌ರೇಟ್‌: -0.469)

ಬಾಕಿ ಇರುವ ಪಂದ್ಯಗಳು: vs ಸನ್‌ರೈಸರ್ಸ್‌, ಗುಜರಾತ್, ಆರ್‌ಸಿಬಿ

ಲಖನೌ ಸತತ 3, ಕೊನೆಯ 5ರಲ್ಲಿ 4 ಪಂದ್ಯ ಸೋತಿದ್ದು ಲಯ ಕಂಡುಕೊಳ್ಳಲು ಪರದಾಡುತ್ತಿದೆ. ತಂಡ ಬಾಕಿ ಇರುವ 3 ಪಂದ್ಯಗಳಲ್ಲಿ ಗೆದ್ದು 16 ಅಂಕ ತಲುಪಬಹುದು. ಆಗ ಉಳಿದ ತಂಡಗಳ ಫಲಿತಾಂಶ ತನ್ನ ಪರವಾಗಿ ದಾಖಲಾಗುವಂತೆ ಪ್ರಾರ್ಥಿಸಬೇಕು. ಒಂದು ಪಂದ್ಯ ಸೋತರೂ ಲಖನೌ ಹೊರಬೀಳಲಿದೆ. ಅಲ್ಲದೇ ತಂಡದ ನೆಟ್‌ ರನ್‌ರೇಟ್‌ ಕಳಪೆ ಇರುವ ಕಾರಣ, ಪ್ಲೇ-ಆಫ್‌ ಪ್ರವೇಶ ಬಹಳ ಕಷ್ಟ ಎನಿಸಿದೆ.

PREV
Get the latest sports news in Kannada (ಕ್ರೀಡಾ ಸುದ್ದಿ) — live cricket scores, football highlights, tennis, badminton, and updates on all major sports events. Stay ahead with Kannada Prabha’s full-coverage sports reporting.

Recommended Stories

ನಾನು ಗೆಲ್ಲುವ ಬಹುಮಾನಗಳನ್ನು ನನ್ನ ತಾಯಿಗೆ ಕಳಿಸುತ್ತೇನೆ: ಕೊಹ್ಲಿ!
ಇಂದಿನಿಂದ 4ನೇ ಆವೃತ್ತಿ ಮಹಿಳಾ ಪ್ರೀಮಿಯರ್‌ ಲೀಗ್‌