ಐಪಿಎಲ್‌: ಡೆಲ್ಲಿ ವಿರುದ್ಧ ಆರ್‌ಸಿಬಿ ಜಯಭೇರಿ, ಪ್ಲೇ-ಆಫ್‌ ಆಸೆ ಜೀವಂತ!

KannadaprabhaNewsNetwork |  
Published : May 13, 2024, 01:04 AM ISTUpdated : May 13, 2024, 04:14 AM IST
ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಡೆಲ್ಲಿ ಕ್ಯಾಪಿಟಲ್ಸ್‌ ವಿರುದ್ಧ ಅಮೋಘ ಗೆಲುವು ಸಾಧಿಸಿದ ಆರ್‌ಸಿಬಿ (ಚಿತ್ರ: ಕೆ.ವೀರಮಣಿ) | Kannada Prabha

ಸಾರಾಂಶ

ಆರ್‌ಸಿಬಿಗೆ ಇದ್ಯಾ ಪ್ಲೇ-ಆಫ್‌ ಅದೃಷ್ಟ? ಸತತ 5ನೇ ಜಯದೊಂದಿಗೆ ಪ್ಲೇ-ಆಫ್‌ ರೇಸ್‌ನಲ್ಲಿ ಉಳಿದ ರಾಯಲ್‌ ಚಾಲೆಂಜರ್ಸ್‌. ಡೆಲ್ಲಿ ಕ್ಯಾಪಿಟಲ್ಸ್‌ ವಿರುದ್ಧ 47 ರನ್‌ ಅಮೋಘ ಗೆಲುವು. ಕಪ್‌ ನಮ್ದೆ ಅಂತಿದ್ದಾರೆ ಫ್ಯಾನ್ಸ್.

ನಾಸಿರ್‌ ಸಜಿಪ

 ಬೆಂಗಳೂರು :  ಆರಂಭದಲ್ಲಿ ಸತತ ಸೋಲುಗಳಿಂದ ಕಂಗೆಟ್ಟಿದ್ದ ಆರ್‌ಸಿಬಿ ಈಗ ಗೇರ್‌ ಬದಲಿಸಿ ಹೈಸ್ಪೀಡ್‌ನಲ್ಲಿ ಓಡಲು ಶುರುವಿಟ್ಟಿದೆ. ಮತ್ತೊಮ್ಮೆ ಅಭೂತಪೂರ್ವ ಆಟ ಪ್ರದರ್ಶಿಸಿದ ಆರ್‌ಸಿಬಿ ಚಿನ್ನಸ್ವಾಮಿಯ ಸೂಪರ್‌ ಸಂಡೇ ಕದನದಲ್ಲಿ ಡೆಲ್ಲಿ ಕ್ಯಾಪಿಟಲ್ಸ್‌ ವಿರುದ್ಧ 47 ರನ್‌ ಜಯಭೇರಿ ಬಾರಿಸಿದೆ.ಸತತ 5, ಒಟ್ಟಾರೆ 6 ಗೆಲುವಿನೊಂದಿಗೆ ತಂಡ ಅಂಕಪಟ್ಟಿಯಲ್ಲಿ 5ನೇ ಸ್ಥಾನಕ್ಕೇರಿದ್ದು, ನೆಟ್‌ ರನ್‌ರೇಟನ್ನೂ ಸಾಕಷ್ಟು ಹೆಚ್ಚಿಸಿಕೊಂಡು ಪ್ಲೇ-ಆಫ್‌ ಆಸೆಯನ್ನು ಜೀವಂತವಾಗಿರಿಸಿಕೊಂಡಿದೆ. ಅತ್ತ ಡೆಲ್ಲಿ 13ರಲ್ಲಿ 7ನೇ ಸೋಲು ಕಂಡಿದ್ದು, ಪ್ಲೇ-ಆಫ್‌ ರೇಸ್‌ನಲ್ಲಿ ಹಿಂದಕ್ಕೆ ಬಿದ್ದಿದೆ.

ಮೊದಲು ಬ್ಯಾಟ್‌ ಮಾಡಿದ ಆರ್‌ಸಿಬಿ ಉತ್ತಮ ಆರಂಭದ ಹೊರತಾಗಿಯೂ ಕಲೆಹಾಕಿದ್ದು 9 ವಿಕೆಟ್‌ಗೆ 187 ರನ್‌. ಚಿನ್ನಸ್ವಾಮಿಯಲ್ಲಿ ಈ ಮೊತ್ತ ಯಾವುದೇ ತಂಡಕ್ಕೂ ಚೇಸ್‌ ಮಾಡಬಹುದಾದ ಮೊತ್ತ. ಆದರೆ ಆರ್‌ಸಿಬಿಯ ಅನಿರೀಕ್ಷಿತ ಬೆಂಕಿ ಬೌಲಿಂಗ್‌ ದಾಳಿ ಡೆಲ್ಲಿಯನ್ನು ಕಂಗೆಟ್ಟಿಸಿತು. ಫೀಲ್ಡಿಂಗ್‌ ಕೂಡ ಅಮೋಘವಾಗಿದ್ದ ಕಾರಣ ಡೆಲ್ಲಿ 19.1 ಓವರಲ್ಲಿ ಆಲೌಟ್‌ ಆಯಿತು.ಡೆಲ್ಲಿ 3.3 ಓವರಲ್ಲಿ 33 ರನ್‌ಗೆ ಪ್ರಮುಖ 4 ವಿಕೆಟ್‌ ಕಳೆದುಕೊಂಡಿತು. ಅಪಾಯಕಾರಿ ಜೇಕ್‌ ಫ್ರೇಸರ್‌ (8 ಎಸೆತಗಳಲ್ಲಿ 21) ರನೌಟ್‌ ಆರ್‌ಸಿಬಿ ಪಾಲಿಗೆ ಬೋನಸ್‌. ಆದರೆ 5ನೇ ವಿಕೆಟ್‌ಗೆ ಜೊತೆಯಾದ ಶಾಯ್‌ ಹೋಪ್‌(29) ಹಾಗೂ ಹಂಗಾಮಿ ನಾಯಕ ಅಕ್ಷರ್‌ ಪಟೇಲ್‌ ಆರ್‌ಸಿಬಿ ಪಾಳಯದಲ್ಲಿ ಭೀತಿ ಹುಟ್ಟಿಸಿದರು. ಹೋಪ್‌ ನಿರ್ಗಮನದ ಬಳಿಕ ಅಕ್ಷರ್‌ (39 ಎಸೆತಗಳಲ್ಲಿ 57) ಹೋರಾಡಿದರೂ ತಂಡವನ್ನು ಗೆಲ್ಲಿಸಲು ಸಾಧ್ಯವಾಗಲಿಲ್ಲ. ತಂಡ 140ಕ್ಕೆ ಸರ್ವಪತನ ಕಂಡಿತು. ಯಶ್‌ ದಯಾಳ್‌ 3, ಫರ್ಗ್ಯೂಸನ್‌ 2 ವಿಕೆಟ್‌ ಕಿತ್ತರು.

ಅಬ್ಬರಿಸಿ ಕುಸಿದ ಆರ್‌ಸಿಬಿ: ಇದಕ್ಕೂ ಮುನ್ನ ಕೊಹ್ಲಿ ಆರಂಭದಲ್ಲೇ ಅಬ್ಬರಿಸಲು ಶುರುವಿಟ್ಟರೂ, ಡು ಪ್ಲೆಸಿ(06) 3ನೇ ಓವರಲ್ಲಿ ಪೆವಿಲಿಯನ್‌ ಮರಳಿದರು. 13 ಎಸೆತಗಳಲ್ಲಿ 27 ರನ್‌ ಚಚ್ಚಿದ ಕೊಹ್ಲಿ ದೊಡ್ಡ ಇನ್ನಿಂಗ್ಸ್‌ ನಿರೀಕ್ಷೆ ಹುಟ್ಟಿಸಿದರೂ, ಅವರಿಗೆ ಇಶಾಂತ್‌ ಪೆವಿಲಿಯನ್‌ ಹಾದಿ ತೋರಿದರು. ಈ ಹಂತದಲ್ಲಿ ಜೊತೆಯಾದ ರಜತ್‌ (32 ಎಸೆತದಲ್ಲಿ 52) ಹಾಗೂ ವಿಲ್‌ ಜ್ಯಾಕ್ಸ್‌(41) 88 ರನ್‌ ಜೊತೆಯಾಟವಾಡಿ ತಂಡವನ್ನು ಮೇಲೆತ್ತಿದರು. 10 ಓವರಲ್ಲಿ 110 ರನ್‌ ಗಳಿಸಿದ್ದ ಆರ್‌ಸಿಬಿ 220+ ಮೊತ್ತದ ನಿರೀಕ್ಷೆಯಲ್ಲಿತ್ತು. ಆದರೆ ರಜತ್‌ ಔಟಾದ ಬಳಿಕ ಡೆಲ್ಲಿ ನಿಯಂತ್ರಣ ಸಾಧಿಸಿತು. ಗ್ರೀನ್‌ 32 ರನ್‌ ಗಳಿಸಿದರೂ ತಂಡ 200ರ ಗಡಿ ದಾಟಲಿಲ್ಲ. ಕೊನೆಯ 10 ಓವರಲ್ಲಿ ಆರ್‌ಸಿಬಿ 77 ರನ್‌ ಗಳಿಸಿ 5 ವಿಕೆಟ್‌ ಕಳೆದುಕೊಂಡಿತು.ಸ್ಕೋರ್: ಆರ್‌ಸಿಬಿ 20 ಓವರಲ್ಲಿ187/9 (ರಜತ್‌ 52, ಜ್ಯಾಕ್ಸ್‌ 41, ರಸಿಕ್‌ 2-23), ಡೆಲ್ಲಿ 19.1 ಓವರಲ್ಲಿ 140/10 (ಅಕ್ಷರ್‌ 57, ಹೋಪ್‌ 29, ಯಶ್‌ 3-20)

ಪ್ಲೇಆಫ್‌ಗೇರುತ್ತಾ ಆರ್‌ಸಿಬಿ?ಸದ್ಯ 12 ಅಂಕ ಹೊಂದಿರುವ ಆರ್‌ಸಿಬಿಗೆ ಇನ್ನೊಂದೇ ಪಂದ್ಯ ಬಾಕಿ ಇದೆ. ಮೇ 18ಕ್ಕೆ ಚೆನ್ನೈ(14 ಅಂಕ) ವಿರುದ್ಧ ತವರಿನಲ್ಲಿ ಆಡಲಿದೆ. ಆ ಪಂದ್ಯದಲ್ಲಿ ಆರ್‌ಸಿಬಿ ಗೆದ್ದರೆ ಆಗ ಇತ್ತಂಡಗಳ ಅಂಕ 14 ಆಗಲಿದೆ. ಚೆನ್ನೈ ಅನ್ನು ನೆಟ್‌ ರನ್‌ರೇಟ್‌ನಲ್ಲಿ ಹಿಂದಿಕ್ಕಬೇಕಿದ್ದರೆ, ಆರ್‌ಸಿಬಿ ಕನಿಷ್ಠ 18 ರನ್‌ ಅಂತರದಲ್ಲಿ (200 ಗಳಿಸಿ) ಗೆಲ್ಲಬೇಕು. ಇನ್ನು ಲಖನೌ ಎರಡೂ ಪಂದ್ಯಗಳನ್ನು ಗೆದ್ದರೆ ಆರ್‌ಸಿಬಿಗೆ ಅಪಾಯ. ಒಂದರಲ್ಲಿ ಗೆದ್ದು ಒಂದನ್ನು ಸೋತರೆ, ನೆಟ್‌ ರನ್‌ರೇಟ್‌ನಲ್ಲಿ ಆರ್‌ಸಿಬಿ ಮುಂದಕ್ಕೆ ಹೋಗಬಹುದು.

-04ನೇ ಆಟಗಾರ

ಐಪಿಎಲ್‌ನಲ್ಲಿ 250+ ಪಂದ್ಯವಾಡಿದ 4ನೇ ಆಟಗಾರ ಕೊಹ್ಲಿ. ಧೋನಿ(263), ರೋಹಿತ್‌(256), ದಿನೇಶ್‌ ಕಾರ್ತಿಕ್‌(255) ಇತರ ಸಾಧಕರು.-

04ನೇ ಬಾರಿಆರ್‌ಸಿಬಿ ಐಪಿಎಲ್‌ನಲ್ಲಿ ಸತತ 5 ಪಂದ್ಯಗಳನ್ನು ಗೆದ್ದಿದ್ದು 4ನೇ ಬಾರಿ. 2011ರಲ್ಲಿ ಸತತ 7, 2009 ಹಾಗೂ 2016ರಲ್ಲೂ ಸತತ 5 ಪಂದ್ಯಗಳನ್ನು ಗೆದ್ದಿತ್ತು. ಆ 3 ಆವೃತ್ತಿಗಳಲ್ಲೂ ತಂಡ ರನ್ನರ್‌-ಅಪ್‌ ಆಗಿತ್ತು.

PREV

Recommended Stories

5ನೇ ಟೆಸ್ಟ್‌ನಲ್ಲಿ ಟೀಂ ಇಂಡಿಯಾಗೆ 6 ರನ್‌ ಅತಿ ರೋಚಕ ಗೆಲುವು
ಭಾರತ-ಇಂಗ್ಲೆಂಡ್‌ ಸರಣಿ ಕ್ಲೈಮ್ಯಾಕ್ಸ್‌ ಇಂದು !