ಚೆನ್ನೈ: ಎಲ್ಲರಿಗಿಂತ ಮೊದಲೇ ಪ್ಲೇ-ಆಫ್ ಪ್ರವೇಶಿಸುವ ನಿರೀಕ್ಷೆ ಮೂಡಿಸಿದ್ದ ರಾಜಸ್ಥಾನ ರಾಯಲ್ಸ್, ಪ್ಲೇ-ಆಫ್ ಹೊಸ್ತಿಲಲ್ಲಿ ಪದೇ ಪದೇ ಎಡವುತ್ತಿದ್ದು, ಹ್ಯಾಟ್ರಿಕ್ ಸೋಲು ಅನುಭವಿಸಿದೆ. ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಭಾನುವಾರ ಚೆಪಾಕ್ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ 5 ವಿಕೆಟ್‌ಗಳ ಸೋಲು ಕಂಡ ರಾಜಸ್ಥಾನ, ಅಗ್ರ-2ರಲ್ಲಿ ಸ್ಥಾನ ಪಡೆದು ಕ್ವಾಲಿಫೈಯರ್-1 ಪಂದ್ಯಕ್ಕೆ ಅರ್ಹತೆ ಪಡೆಯಬೇಕಿದ್ದರೆ, ಬಾಕಿ ಇರುವ 2 ಪಂದ್ಯಗಳನ್ನೂ ಗೆಲ್ಲಬೇಕಿದೆ.
ಸತತ 3 ಪಂದ್ಯದಲ್ಲಿ ಸೋತರೂ, 12 ಪಂದ್ಯಗಳಿಂದ 16 ಅಂಕ ಹೊಂದಿರುವ ರಾಜಸ್ಥಾನ 2ನೇ ಸ್ಥಾನದಲ್ಲೇ ಮುಂದುವರಿದಿದ್ದು, ಪ್ಲೇ-ಆಫ್‌ಗೇರಬಹುದಾದ ತಂಡಗಳಲ್ಲಿ ಒಂದೆನಿಸಿದೆ. ಚೆನ್ನೈ 13 ಪಂದ್ಯಗಳಲ್ಲಿ 14 ಅಂಕ ಗಳಿಸಿ, 3ನೇ ಸ್ಥಾನ ಪಡೆದಿದ್ದು, ಕೊನೆಯ ಪಂದ್ಯದಲ್ಲಿ ತಂಡ ಗೆಲ್ಲುವುದು ಅನಿವಾರ್ಯವಾಗಬಹುದು.
ನಿಧಾನಗತಿ ಬ್ಯಾಟಿಂಗ್: ಚೆಪಾಕ್‌ನ ಸ್ಪಿನ್ ಸ್ನೇಹಿ ಪಿಚ್ ಲೋ ಸ್ಕೋರಿಂಗ್ ಪಂದ್ಯಕ್ಕೆ ಸಾಕ್ಷಿಯಾಯಿತು. ಮೊದಲು ಬ್ಯಾಟ್ ಮಾಡಿದ ರಾಯಲ್ಸ್ 20 ಓವರಲ್ಲಿ 5 ವಿಕೆಟ್‌ಗೆ ಕೇವಲ 141 ರನ್ ಗಳಿಸಿತು. ತಂಡದ ಅಗ್ರ-3 ಬ್ಯಾಟರ್‌ಗಳಾದ ಜೋಸ್ ಬಟ್ಲರ್ (25 ಎಸೆತದಲ್ಲಿ 21 ರನ್), ಯಶಸ್ವಿ ಜೈಸ್ವಾಲ್ (21 ಎಸೆತದಲ್ಲಿ 24 ರನ್), ಸಂಜು ಸ್ಯಾಮ್ಸನ್ (19 ಎಸೆತದಲ್ಲಿ 15 ರನ್) ಆಕ್ರಮಣಕಾರಿ ಆಟವಾಡಲು ಸಾಧ್ಯವಾಗಲಿಲ್ಲ.
ಸಿಮರ್‌ಜೀತ್ ಸಿಂಗ್, ರವೀಂದ್ರ ಜಡೇಜಾ, ಮಹೀಶ್ ತೀಕ್ಷಣ ರನ್ ನೀಡಲು ಚೌಕಾಸಿ ಮಾಡಿದರು. 14 ಓವರ್ ಮುಕ್ತಾಯಕ್ಕೆ ಕೇವಲ 89 ರನ್ ಗಳಿಸಿದ್ದ ರಾಯಲ್ಸ್, ರಿಯಾನ್ ಪರಾಗ್ (35 ಎಸೆತದಲ್ಲಿ ಔಟಾಗದೆ 47), ಧೃವ್ ಜುರೆಲ್ (18 ಎಸೆತದಲ್ಲಿ 28)ರ ಹೋರಾಟದಿಂದ 140 ರನ್ ದಾಟಿತು. ಋತುರಾಜ್ ನಾಯಕನ ಆಟ: ಸುಲಭ ಗುರಿ ಬೆನ್ನತ್ತಿದ ಚೆನ್ನೈಗೆ ರಚಿನ್ ರವೀಂದ್ರ (27), ಡ್ಯಾರಿಲ್ ಮಿಚೆಲ್ (22)ರ ಆಟ ನೆರವಾಯಿತು. ಆದರೆ ಕೊನೆಯವರೆಗೂ ಕ್ರೀಸ್‌ನಲ್ಲಿ ನೆಲೆಯೂರಿದ ನಾಯಕ ಋತುರಾಜ್ ಗಾಯಕ್ವಾಡ್ (42*) ತಂಡವನ್ನು ನಿರಾಯಾಸವಾಗಿ ಜಯದ ದಡ ಸೇರಿಸಿದರು.ಸ್ಕೋರ್: ರಾಜಸ್ಥಾನ 20 ಓವರಲ್ಲಿ 141/5 (ರಿಯಾನ್ 47*, ಜುರೆಲ್ 28, ಸಿಮರ್‌ಜೀತ್ 3-26), ಚೆನ್ನೈ 18.2 ಓವರಲ್ಲಿ 145/5 (ಋತುರಾಜ್ 42*, ರಚಿನ್ 27, ಅಶ್ವಿನ್ 2-35) ಪಂದ್ಯಶ್ರೇಷ್ಠ: ಸಿಮರ್‌ಜೀತ್