ಸನ್‌ ಮೇಲೆ ಸೂರ್ಯ ಸೆಂಚುರಿ ದಾಳಿ!

KannadaprabhaNewsNetwork |  
Published : May 07, 2024, 01:02 AM ISTUpdated : May 07, 2024, 04:09 AM IST
ಆಕರ್ಷಕ ಶತಕ ಸಿಡಿಸಿ ಮುಂಬೈ ತಂಡವನ್ನು ಗೆಲ್ಲಿಸಿದ ಸೂರ್ಯಕುಮಾರ್‌ ಯಾದವ್‌.  | Kannada Prabha

ಸಾರಾಂಶ

ಸೂರ್ಯಕುಮಾರ್‌ ಶತಕದ ನೆರವಿನಿಂದ ಸನ್‌ರೈಸರ್ಸ್‌ ಹೈದರಾಬಾದ್ ವಿರುದ್ಧ 7 ವಿಕೆಟ್‌ ಭರ್ಜರಿ ಗೆಲುವು ಸಾಧಿಸಿದ ಮುಂಬೈ ಇಂಡಿಯನ್ಸ್‌. 10ನೇ ಸ್ಥಾನದಲ್ಲಿದ್ದ ಮುಂಬೈಗೆ ಈಗ 9ನೇ ಸ್ಥಾನ. 10ನೇ ಸ್ಥಾನಕ್ಕೆ ಕುಸಿದ ಗುಜರಾತ್‌. ಸನ್‌ರೈಸರ್ಸ್‌ ಪ್ಲೇ-ಆಫ್‌ ಹಾದಿ ಕಠಿಣ.

ಮುಂಬೈ: 2024ರ ಐಪಿಎಲ್‌ನಲ್ಲಿ ತನ್ನ ಅಭಿಯಾನ ಬಹುತೇಕ ಮುಕ್ತಾಯಗೊಂಡಿದ್ದರೂ ಮುಂಬೈ ಇಂಡಿಯನ್ಸ್‌ ಸೋಮವಾರ ತವರಿನ ಪ್ರೇಕ್ಷಕರಿಗೆ ನಿರಾಸೆ ಮೂಡಿಸಲಿಲ್ಲ. ಸನ್‌ರೈಸರ್ಸ್‌ ಹೈದರಾಬಾದ್‌ ವಿರುದ್ಧ 7 ವಿಕೆಟ್‌ಗಳ ಭರ್ಜರಿ ಗೆಲುವು ಸಾಧಿಸಿದ ಮುಂಬೈ, ಅಂಕಪಟ್ಟಿಯಲ್ಲಿ ಕೊನೆ ಸ್ಥಾನದಿಂದ ಮೇಲೆದ್ದಿತು.

ಪ್ಲೇ-ಆಫ್‌ ಸ್ಥಾನಕ್ಕಾಗಿ ಪೈಪೋಟಿ ತೀವ್ರಗೊಳ್ಳುತ್ತಿರುವಾಗ ಸನ್‌ರೈಸರ್ಸ್‌ ಕಳೆದ 4 ಪಂದ್ಯದಲ್ಲಿ 3ರಲ್ಲಿ ಸೋತಿದ್ದು, ತಂಡವನ್ನು ಸಂಕಷ್ಟಕ್ಕೆ ದೂಡಿದೆ. ಕಮಿನ್ಸ್‌ ಪಡೆ ಸದ್ಯಕ್ಕೆ 4ನೇ ಸ್ಥಾನದಲ್ಲೇ ಉಳಿದರೂ, ತಂಡದ ನೆಟ್‌ ರನ್‌ರೇಟ್‌ ತೀರಾ ಕಳಪೆಯಾಗಿದ್ದು, ಪ್ಲೇ-ಆಫ್‌ ಸ್ಥಾನದಿಂದ ವಂಚಿತವಾದರೂ ಅಚ್ಚರಿಯಿಲ್ಲ.

ಮೊದಲು ಬ್ಯಾಟ್‌ ಮಾಡಿದ ಸನ್‌ರೈಸರ್ಸ್‌ 20 ಓವರಲ್ಲಿ 8 ವಿಕೆಟ್‌ಗೆ 173 ರನ್‌ ಗಳಿಸಿತು. ಸಾಧಾರಣ ಗುರಿ ಬೆನ್ನತ್ತಿದ ಮುಂಬೈ 4.1 ಓವರಲ್ಲಿ 31 ರನ್‌ಗೆ 3 ವಿಕೆಟ್‌ ಕಳೆದುಕೊಂಡು ಭಾರಿ ಸಂಕಷ್ಟದಲ್ಲಿತ್ತು. ಈ ಹಂತದಲ್ಲಿ ಜೊತೆಯಾದ ಸೂರ್ಯಕುಮಾರ್‌ ಯಾದವ್‌ ಹಾಗೂ ತಿಲಕ್‌ ವರ್ಮಾ, ಮುರಿಯದ 4ನೇ ವಿಕೆಟ್‌ಗೆ 143 ರನ್‌ ಜೊತೆಯಾಟವಾಡಿ, ಇನ್ನೂ 2.4 ಓವರ್‌ ಬಾಕಿ ಇರುವಂತೆಯೇ ತಂಡವನ್ನು ಗೆಲ್ಲಿಸಿದರು. ಸೂರ್ಯ ಕೇವಲ 51 ಎಸೆತದಲ್ಲಿ 12 ಬೌಂಡರಿ, 6 ಸಿಕ್ಸರ್‌ನೊಂದಿಗೆ ಔಟಾಗದೆ 102 ರನ್‌ ಗಳಿಸಿದರೆ, ತಿಲಕ್‌ ಸಮಯೋಚಿತ ಆಟವಾಡಿ 32 ಎಸೆತದಲ್ಲಿ 37 ರನ್‌ ಗಳಿಸಿ ಔಟಾಗದೆ ಉಳಿದರು.

ಇದಕ್ಕೂ ಮುನ್ನ ಸನ್‌ರೈಸರ್ಸ್‌ಗೆ ತಕ್ಕಮಟ್ಟಿಗಿನ ಆರಂಭ ಸಿಕ್ಕಿತು. 2 ಬಾರಿ ಜೀವದಾನ ಪಡೆದ ಟ್ರ್ಯಾವಿಸ್‌ ಹೆಡ್‌ ದೊಡ್ಡ ಮೊತ್ತ ದಾಖಲಿಸುವ ನಿರೀಕ್ಷೆಯಲ್ಲಿದ್ದರು. ಆದರೆ ಪವರ್‌-ಪ್ಲೇ ಮುಗಿಯುವ ಮೊದಲೇ ಅಭಿಷೇಕ್‌ (11) ಔಟಾದರು. ಬಹಳ ದಿನಗಳ ಬಳಿಕ ಅವಕಾಶ ಪಡೆದ ಮಯಾಂಕ್‌ ಅಗರ್‌ವಾಲ್‌ (05) ನಿರಾಸೆ ಮೂಡಿಸಿದರು. 10.3ರಿಂದ 12.1 ಓವರ್‌ ನಡುವೆ ಕೇವಲ 6 ರನ್‌ ಅಂತರದಲ್ಲಿ ಹೆಡ್‌, ನಿತೀಶ್‌ ರೆಡ್ಡಿ, ಹೈನ್ರಿಕ್‌ ಕ್ಲಾಸೆನ್‌ರ ವಿಕೆಟ್‌ಗಳನ್ನು ಕಳೆದುಕೊಂಡ ಸನ್‌ರೈಸರ್ಸ್‌ ಅಲ್ಪ ಮೊತ್ತಕ್ಕೆ ಕುಸಿಯುವ ಭೀತಿಗೆ ಸಿಲುಕಿತು.

17 ಎಸೆತದಲ್ಲಿ 35 ರನ್‌ ಸಿಡಿಸಿದ ನಾಯಕ ಪ್ಯಾಟ್‌ ಕಮಿನ್ಸ್‌, ತಂಡದ ಮೊತ್ತ 170 ರನ್‌ ದಾಟಲು ನೆರವಾದರು. ಚಾವ್ಲಾ, ಹಾರ್ದಿಕ್‌ಗೆ ತಲಾ 3 ವಿಕೆಟ್‌ ದೊರೆಯಿತು. ಸ್ಕೋರ್‌: ಸನ್‌ರೈಸರ್ಸ್‌ 20 ಓವರಲ್ಲಿ 173/8 (ಹೆಡ್‌ 48, ಕಮಿನ್ಸ್‌ 35, ಹಾರ್ದಿಕ್‌ 3-31, ಚಾವ್ಲಾ 3-33), ಮುಂಬೈ 17.2 ಓವರಲ್ಲಿ 174/3 (ಸೂರ್ಯ 102*, ತಿಲಕ್‌ 37*, ಭುವನೇಶ್ವರ್‌ 1-22) ಪಂದ್ಯಶ್ರೇಷ್ಠ: ಸೂರ್ಯ.

PREV
Get the latest sports news in Kannada (ಕ್ರೀಡಾ ಸುದ್ದಿ) — live cricket scores, football highlights, tennis, badminton, and updates on all major sports events. Stay ahead with Kannada Prabha’s full-coverage sports reporting.

Recommended Stories

ಶಿಕ್ಷಕ ತಂದೆಗೆ ₹12 ಸಾವಿರ ವೇತನ, ಮಗನಿಗೆ ₹14.2 ಕೋಟಿ!
ಫಿಫಾ ವಿಶ್ವಕಪ್‌ ಗೆದ್ರೆ ₹452 ಕೋಟಿ!