ಇಶಾನ್‌ ಕಿಶನ್‌ ರಣಜಿ ಆಡಿದರೆ ಮಾತ್ರ ರಾಷ್ಟ್ರೀಯ ತಂಡಕ್ಕೆ: ರಾಹುಲ್‌ ದ್ರಾವಿಡ್‌

KannadaprabhaNewsNetwork | Published : Feb 6, 2024 1:30 AM

ಸಾರಾಂಶ

ಇಶಾನ್‌ ಕಿಶನ್‌ ಯಾವಾಗ ಕ್ರಿಕೆಟ್‌ಗೆ ಮರಳುತ್ತಾರೆಂದು ಅವರೇ ನಿರ್ಧರಿಸಬೇಕು. ಅವರು ದೇಸಿ ಕ್ರಿಕೆಟ್‌ನಲ್ಲಿ ಆಡಲು ಶುರು ಮಾಡಿದ ಬಳಿಕವೇ ರಾಷ್ಟ್ರೀಯ ತಂಡದ ಅಯ್ಕೆಗೆ ಪರಿಗಣಿಸುತ್ತೇವೆ ಎಂದು ಭಾರತದ ಕೋಚ್‌ ರಾಹುಲ್‌ ದ್ರಾವಿಡ್‌ ಹೇಳಿದ್ದಾರೆ.

ವಿಶಾಖಪಟ್ಟಣಂ: ಇಶಾನ್‌ ಕಿಶನ್‌ ಯಾವಾಗ ಕ್ರಿಕೆಟ್‌ಗೆ ಮರಳುತ್ತಾರೆಂದು ಅವರೇ ನಿರ್ಧರಿಸಬೇಕು. ಅವರು ದೇಸಿ ಕ್ರಿಕೆಟ್‌ನಲ್ಲಿ ಆಡಲು ಶುರು ಮಾಡಿದ ಬಳಿಕವೇ ರಾಷ್ಟ್ರೀಯ ತಂಡದ ಅಯ್ಕೆಗೆ ಪರಿಗಣಿಸುತ್ತೇವೆ ಎಂದು ಭಾರತದ ಕೋಚ್‌ ರಾಹುಲ್‌ ದ್ರಾವಿಡ್‌ ಹೇಳಿದ್ದಾರೆ. ಈ ಬಗ್ಗೆ ಸೋಮವಾರ ಮಾತನಾಡಿರುವ ಅವರು, ಕಿಶನ್‌ರನ್ನು ಆಡುವಂತೆ ಒತ್ತಾಯಿಸುವುದಿಲ್ಲ. ಅದು ಅವರ ಆಯ್ಕೆ. ವಿಶ್ರಾಂತಿ ಬೇಕೆಂದಾಗ ಸಂತೋಷವಾಗಿ ಒಪ್ಪಿಕೊಂಡಿದ್ದೇವೆ ಎಂದಿದ್ದಾರೆ. ಡಿಸೆಂಬರ್‌ನಲ್ಲಿ ವೈಯಕ್ತಿಕ ಕಾರಣಕ್ಕಾಗಿ ವಿಶ್ರಾಂತಿ ತೆಗೆದುಕೊಂಡಿದ್ದ ಇಶಾನ್‌, ಸದ್ಯ ರಣಜಿಯಲ್ಲೂ ಆಡುತ್ತಿಲ್ಲ. ಮಾನಸಿಕ ಆರೋಗ್ಯ ಕಾರಣಕ್ಕೆ ಬಿಡುವು ಪಡೆದು, ವಿದೇಶದಲ್ಲಿ ಪಾರ್ಟಿ ಮಾಡಿ ಅಶಿಸ್ತು ತೋರಿದ್ದಕ್ಕೆ ಅವರನ್ನು ಭಾರತ ತಂಡದಿಂದ ಹೊರಗಿಡಲಾಗಿದೆ ಎಂದು ಈ ಮೊದಲು ವರದಿಯಾಗಿತ್ತು.

ಟೆಸ್ಟ್‌ ವಿಶ್ವ ಚಾಂಪಿಯನ್‌ಶಿಪ್‌:ಮತ್ತೆ 2ನೇ ಸ್ಥಾನಕ್ಕೆ ಭಾರತ

ದುಬೈ: 2023-25ರ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ ರ್‍ಯಾಂಕಿಂಗ್‌ನಲ್ಲಿ ಭಾರತ ಮತ್ತೆ 2ನೇ ಸ್ಥಾನಕ್ಕೇರಿದೆ. ಮೊದಲ ಟೆಸ್ಟ್‌ ಸೋಲಿನ ಬಳಿಕ ರೋಹಿತ್‌ ಪಡೆ 6ನೇ ಸ್ಥಾನಕ್ಕೆ ಕುಸಿದಿತ್ತು. ವಿಶಾಖಪಟ್ಟಣಂನಲ್ಲಿ ಸೋಮವಾರ ಮುಕ್ತಾಯಗೊಂಡ ಇಂಗ್ಲೆಂಡ್‌ ವಿರುದ್ಧದ 2 ನೇ ಟೆಸ್ಟ್‌ನಲ್ಲಿ 106 ರನ್‌ಗಳ ಗೆದ್ದ ಬಳಿಕ ಭಾರತ ಅಂಕಪಟ್ಟಿಯಲ್ಲಿ 4 ಸ್ಥಾನ ಪ್ರಗತಿ ಸಾಧಿಸಿದೆ.ಈ ಬಾರಿ ಟೂರ್ನಿಯಲ್ಲಿ 6 ಟೆಸ್ಟ್‌ಗಳನ್ನಾಡಿರುವ ಭಾರತ, 3 ಗೆಲುವು ಸಾಧಿಸಿದ್ದು, 1ರಲ್ಲಿ ಡ್ರಾ, 2ರಲ್ಲಿ ಸೋಲನುಭವಿಸಿದ್ದು, ಶೇ.52.77 ಗೆಲುವಿನ ಪ್ರತಿಶತದೊಂದಿಗೆ 2ನೇ ಸ್ಥಾನದಲ್ಲಿದೆ. ಶೇ.55 ಗೆಲುವಿನ ಪ್ರತಿಶತ ಹೊಂದಿರುವ ಆಸ್ಟ್ರೇಲಿಯಾ ಅಗ್ರಸ್ಥಾನದಲ್ಲಿದೆ. ಇಂಗ್ಲೆಂಡ್‌ ವಿರುದ್ಧ ಉಳಿದಿರುವ 3 ಪಂದ್ಯಗಳಲ್ಲಿ ಗೆಲ್ಲುವ ಮೂಲಕ ಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಲು ಭಾರತ ಕಾಯುತ್ತಿದೆ. ದಕ್ಷಿಣ ಆಫ್ರಿಕಾ, ನ್ಯೂಜಿಲೆಂಡ್‌, ಬಾಂಗ್ಲಾದೇಶ, ಪಾಕಿಸ್ತಾನ, ವೆಸ್ಟ್‌ಇಂಡೀಸ್‌ ತಂಡಗಳು ಕ್ರಮವಾಗಿ ನಂತರದ ಸ್ಥಾನಗಳಲ್ಲಿವೆ.

Share this article