ಜೈಸ್ವಾಲ್, ಗಿಲ್‌ ಸೆಂಚುರಿಗೆ ನಲುಗಿದ ಇಂಗ್ಲೆಂಡ್‌

Sujatha NRPublished : Jun 21, 2025 11:07 AM

ಹಲವು ದಿಗ್ಗಜ ಕ್ರಿಕೆಟಿಗರ ಅನುಪಸ್ಥಿತಿಯಲ್ಲಿ ಇಂಗ್ಲೆಂಡ್‌ ಟೆಸ್ಟ್‌ ಅಗ್ನಿಪರೀಕ್ಷೆಗೆ ಇಳಿದಿರುವ ಯುವ ಟೀಂ ಇಂಡಿಯಾ, ಮೊದಲ ದಿನ ಭರ್ಜರಿ ಯಶಸ್ಸು ಪಡೆದಿದೆ.

ಲೀಡ್ಸ್: ಹಲವು ದಿಗ್ಗಜ ಕ್ರಿಕೆಟಿಗರ ಅನುಪಸ್ಥಿತಿಯಲ್ಲಿ ಇಂಗ್ಲೆಂಡ್‌ ಟೆಸ್ಟ್‌ ಅಗ್ನಿಪರೀಕ್ಷೆಗೆ ಇಳಿದಿರುವ ಯುವ ಟೀಂ ಇಂಡಿಯಾ, ಮೊದಲ ದಿನ ಭರ್ಜರಿ ಯಶಸ್ಸು ಪಡೆದಿದೆ. ಇಂಗ್ಲೆಂಡ್‌ನಲ್ಲಿ ಟೆಸ್ಟ್‌ ಆಡಿ ಅನುಭವವೇ ಇಲ್ಲದ ಕೆಲ ಆಟಗಾರರೊಂದಿಗೆ ಕಣಕ್ಕಿಳಿದರೂ ತಂಡ ಆತಿಥೇಯರನ್ನು ಕಟ್ಟಿಹಾಕಲು ಯಶಸ್ವಿಯಾಗಿದೆ. 5 ಪಂದ್ಯಗಳ ಸರಣಿಯ ಮೊದಲ ಟೆಸ್ಟ್‌ನ ಮೊದಲ ದಿನ ಟೀಂ ಇಂಡಿಯಾ 00 ವಿಕೆಟ್‌ಗೆ 00 ರನ್‌ ಕಲೆಹಾಕಿದೆ.

ಟಾಸ್‌ ಗೆದ್ದ ಇಂಗ್ಲೆಂಡ್‌ ಆಯ್ಕೆ ಮಾಡಿಕೊಂಡಿದ್ದು ಫೀಲ್ಡಿಂಗ್‌. ಇದರಿಂದ ಭಾರತಕ್ಕೆ ಹಿನ್ನಡೆಯೇನೂ ಆಗಲಿಲ್ಲ. ಆರಂಭಿಕ ಜೋಡಿಯ ಅತ್ಯಾಕರ್ಷಕ ಜೊತೆಯಾಟ, ಯಶಸ್ವಿ ಜೈಸ್ವಾಲ್‌ ಹಾಗೂ ನಾಯಕ ಶುಭ್‌ಮನ್‌ ಗಿಲ್‌ರ ಮನಮೋಹಕ ಶತಕ, ಕೆ.ಎಲ್‌.ರಾಹುಲ್‌, ರಿಷಭ್‌ ಪಂತ್‌ರ ಮಿಂಚಿನ ಆಟ ತಂಡವನ್ನು ಮೊದಲ ದಿನ ಪ್ರಾಬಲ್ಯ ಸಾಧಿಸುವಂತೆ ಮಾಡಿತು.

ಇಂಗ್ಲೆಂಡ್‌ ವೇಗಿಗಳ ಆರಂಭಿಕ ಸ್ಪೆಲ್ಅನ್ನು ಸಮರ್ಥವಾಗಿ ಎದುರಿಸಿದ ರಾಹುಲ್‌-ಜೈಸ್ವಾಲ್‌ ಜೋಡಿ 24.5 ಓವರ್‌ಗಳಲ್ಲಿ 91 ರನ್‌ ಜೊತೆಯಾಟವಾಡಿತು. ಆದರೆ ಊಟದ ವಿರಾಮಕ್ಕೆ ಅಲ್ಪ ಮೊದಲು ಭಾರತಕ್ಕೆ ಆಘಾತ ಕಾದಿತ್ತು. ಬ್ರೈಡನ್‌ ಕಾರ್ಸ್‌ ಎಸೆತದಲ್ಲಿ ಕವರ್‌ ಡ್ರೈವ್‌ ಹೊಡೆತಕ್ಕೆ ಮುಂದಾದ ರಾಹುಲ್‌, ಸ್ಲಿಪ್‌ನಲ್ಲಿ ಜೋ ರೂಟ್‌ಗೆ ಕ್ಯಾಚ್‌ ನೀಡಿ ನಿರ್ಗಮಿಸಿದರು. ಅವರು 78 ಎಸೆತಕ್ಕೆ 42 ರನ್‌ ಸಿಡಿಸಿದರು. ಪಾದಾರ್ಪಣಾ ಪಂದ್ಯವಾಡಿದ ಸಾಯಿ ಸುದರ್ಶನ್‌ ಮೇಲೆ ನಿರೀಕ್ಷೆ ಇತ್ತಾದರೂ, ಅದನ್ನು ಅವರು ಉಳಿಸಿಕೊಳ್ಳಲಿಲ್ಲ. 4 ಎಸೆತ ಎದುರಿಸಿದರೂ ಸೊನ್ನೆಗೆ ಔಟಾದರು.

ಜೈಸ್ವಾಲ್‌ ಕಮಾಲ್: ಟೆಸ್ಟ್‌ನಲ್ಲಿ ಇಂಗ್ಲೆಂಡ್‌ ವಿರುದ್ಧ ಉತ್ತಮ ದಾಖಲೆ ಹೊಂದಿರುವ 23 ವರ್ಷದ ಯಶಸ್ವಿ ಜೈಸ್ವಾಲ್‌, ಚೊಚ್ಚಲ ಇಂಗ್ಲೆಂಡ್‌ ಸರಣಿಯಲ್ಲೂ ಅಬ್ಬರಿಸಿದರು. ವೃತ್ತಿಬದುಕಿನ 5ನೇ ಶತಕ ಹೊಡೆದ ಅವರು, ವಿದೇಶದಲ್ಲಿ 3ನೇ ಶತಕ ದಾಖಲಿಸಿದರು. 3ನೇ ವಿಕೆಟ್‌ಗೆ ಗಿಲ್‌ ಜೊತೆಗೂಡಿ 129 ರನ್‌ ಸೇರಿಸಿದರು. 2ನೇ ಅವಧಿಯಲ್ಲಿ ತಂಡ ಯಾವುದೇ ವಿಕೆಟ್‌ ಕಳೆದುಕೊಳ್ಳಲಿಲ್ಲ. ಆದರೆ 3ನೇ ಅವಧಿಯ ಆರಂಭದಲ್ಲಿ ಈ ಜೋಡಿ ಬೇರ್ಪಟ್ಟಿತು. ಜೈಸ್ವಾಲ್‌ 159 ಎಸೆತಗಳಲ್ಲಿ 101 ರನ್‌ ಗಳಿಸಿದ್ದಾಗ ಬೆನ್‌ ಸ್ಟೋಕ್ಸ್‌ರ ಮ್ಯಾಜಿಕ್‌ ದಾಳಿಗೆ ಬೌಲ್ಡ್‌ ಆಗಿ ನಿರ್ಗಮಿಸಿದರು.

ನಾಯಕ-ಉಪನಾಯಕ ಮಿಂಚು: 221 ರನ್‌ಗೆ 3 ವಿಕೆಟ್‌ ಬಿದ್ದ ಬಳಿಕ ತಂಡಕ್ಕೆ ಮತ್ತಷ್ಟು ಆಸರೆಯಾಗಿದ್ದು ನಾಯಕ ಗಿಲ್‌ ಹಾಗೂ ಉಪನಾಯಕ ರಿಷಭ್‌ ಪಂತ್‌. 3ನೇ ಅವಧಿಯಲ್ಲಿ ಈ ಜೋಡಿ ಇಂಗ್ಲೆಂಡ್‌ ಬೌಲರ್‌ಗಳ ಬೆವರಿಳಿಸಿತು. ವೇಗವಾಗಿಯೇ ಬ್ಯಾಟ್‌ ಬೀಸಿದ ಯುವ ಬ್ಯಾಟರ್‌ಗಳು ಶತಕದ ಜೊತೆಯಾಟವನ್ನೂ ನೀಡಿದರು. ಗಿಲ್‌ 140 ಎಸೆತಗಳಲ್ಲಿ ಶತಕ ಪೂರ್ಣಗೊಳಿಸಿದರು. ಅವರಿಗೆ ಉತ್ತಮ ಸಾಥ್‌ ನೀಡಿದ ರಿಷಭ್‌, ಅರ್ಧಶತಕ ಬಾರಿಸಿ ಮಿಂಚಿದರು.

ಮೊದಲ ಟೆಸ್ಟ್‌: ಮೊದಲ ದಿನವೇ ಇಂಗ್ಲೆಂಡ್ ಬೌಲರ್‌ಗಳ ಚೆಂಡಾಡಿದ ಭಾರತೀಯ ಬ್ಯಾಟರ್ಸ್‌ । ದಿನದಂತ್ಯಕ್ಕೆ 3 ವಿಕೆಟ್‌ಗೆ 000ಜೈಸ್ವಾಲ್‌ 101, ನಾಯಕ ಗಿಲ್‌ 120 । ರಾಹುಲ್, ರಿಷಭ್‌ ಮಿಂಚಿನ ಆಟ । ಪಾದಾರ್ಪಣೆಯಲ್ಲಿ ಸುದರ್ಶನ್‌ ಫೇಲ್‌, ಸೊನ್ನೆಗೆ ಔಟ್‌

ವಿಜಯ್‌ ಹಜಾರೆ, ಸುನಿಲ್,

ಕೊಹ್ಲಿ ಸಾಲಿಗೆ ಸೇರಿ ಗಿಲ್‌

ಭಾರತದ ನಾಯಕರಾಗಿ ಚೊಚ್ಚಲ ಪಂದ್ಯದಲ್ಲೇ ಶತಕ ಬಾರಿಸಿದ 4ನೇ ಆಟಗಾರ ಎಂಬ ಖ್ಯಾತಿಗೆ ಗಿಲ್‌ ಪಾತ್ರರಾಗಿದ್ದಾರೆ. ಈ ಮೊದಲು 1951ರಲ್ಲಿ ವಿಜಯ್‌ ಹಜಾರೆ ಇಂಗ್ಲೆಂಡ್ ವಿರುದ್ಧ, 1976ರಲ್ಲಿ ಸುನಿಲ್‌ ಗವಾಸ್ಕರ್‌ ನ್ಯೂಜಿಲೆಂಡ್‌ ವಿರುದ್ಧ, 2014ರಲ್ಲಿ ವಿರಾಟ್‌ ಕೊಹ್ಲಿ ಆಸ್ಟ್ರೇಲಿಯಾ ವಿರುದ್ಧ ತಮ್ಮ ಚೊಚ್ಚಲ ನಾಯಕತ್ವದ ಪಂದ್ಯದಲ್ಲೇ ಶತಕ ಬಾರಿಸಿದ್ದರು.

8 ವರ್ಷ ಬಳಿಕ ಕರುಣ್‌

ಭಾರತಕ್ಕೆ ಕಮ್‌ಬ್ಯಾಕ್

ಕರ್ನಾಟಕದ ಕರುಣ್‌ ನಾಯರ್‌ 8 ವರ್ಷಗಳ ಬಳಿಕ ಭಾರತ ತಂಡಕ್ಕೆ ಹಿಂದಿರುಗಿದರು. 2016ರಲ್ಲಿ ಇಂಗ್ಲೆಂಡ್‌ ವಿರುದ್ಧ ಟೆಸ್ಟ್‌ ಪಾದಾರ್ಪಣೆ ಮಾಡಿದ್ದ ಕರುಣ್‌, ಅದೇ ಸರಣಿಯಲ್ಲಿ ಚೆನ್ನೈನಲ್ಲಿ ತ್ರಿಶತಕ(ಔಟಾಗದೆ 3030 ರನ್‌) ಬಾರಿಸಿದ್ದರು. 2017ರಲ್ಲಿ ಆಸ್ಟ್ರೇಲಿಯಾ ವಿರುದ್ಧ ಸರಣಿಯಲ್ಲಿ ವಿಫಲವಾಗಿದ್ದರಿಂದ ಕರುಣ್‌ ತಂಡದಿಂದ ಹೊರಬಿದ್ದಿದ್ದರು. ಕಳೆದ ಋತುವಿನಲ್ಲಿ ದೇಸಿ ಕ್ರಿಕೆಟ್‌ನಲ್ಲಿ ಅಬ್ಬರಿಸಿ ಈಗ ಮತ್ತೆ ಭಾರತ ತಂಡಕ್ಕೆ ಆಯ್ಕೆಯಾಗಿದ್ದಾರೆ.

ತಂಡದಲ್ಲಿ ಕರ್ನಾಟಕದ

ಮೂವರು ಆಟಗಾರರು

ಭಾರತ ತಂಡದಲ್ಲಿ ಹಲವು ವರ್ಷಗಳ ಬಳಿಕ ಕರ್ನಾಟಕದ ಮೂವರು ಆಟಗಾರರು ಒಟ್ಟಿಗೇ ಕಣಕ್ಕಿಳಿದರು. ಬ್ಯಾಟರ್‌ ಕೆ.ಎಲ್‌.ರಾಹುಲ್‌, ಕರುಣ್ ನಾಯರ್‌ ಜೊತೆ ವೇಗದ ಬೌಲರ್‌ ಪ್ರಸಿದ್ಧ್‌ ಕೃಷ್ಣ ಆಡುವ 11ರ ಬಳಗದಲ್ಲಿ ಸ್ಥಾನ ಗಿಟ್ಟಿಸಿಕೊಂಡರು.

ಲೀಡ್ಸ್‌ನಲ್ಲಿ ಸೆಂಚುರಿ:

ಜೈಸ್ವಾಲ್‌ ಭಾರತದ

ಏಳನೇ ಆಟಗಾರ

ಲೀಡ್ಸ್‌ನ ಹೆಡಿಂಗ್ಲೆ ಕ್ರೀಡಾಂಗಣದಲ್ಲಿ ಟೆಸ್ಟ್‌ ಕ್ರಿಕೆಟ್‌ನಲ್ಲಿ ಶತಕ ಬಾರಿಸಿದ 7ನೇ ಭಾರತೀಯ ಆಟಗಾರ ಯಶಸ್ವಿ ಜೈಸ್ವಾಲ್‌. ಈ ಮೊದಲು ವಿಜಯ್‌ ಮಂಜ್ರೇಕರ್‌(1952), ಮನ್ಸೂರ್ ಅಲಿ ಖಾನ್‌ ಪಟೌಡಿ(1967), ದಿಲೀಪ್‌ ವೆಂಕ್‌ಸರ್ಕಾರ್‌(1986), ರಾಹುಲ್‌ ದ್ರಾವಿಡ್‌(2022), ಸೌರವ್‌ ಗಂಗೂಲಿ(2002), ಸಚಿನ್ ತೆಂಡುಲ್ಕರ್(2002) ಶತಕ ಬಾರಿಸಿದ್ದರು.

01ನೇ ಬ್ಯಾಟರ್‌

ಲೀಡ್ಸ್‌ ಕ್ರೀಡಾಂಗಣದಲ್ಲಿ ಶತಕ ಬಾರಿಸಿದ ಭಾರತದ ಮೊದಲ ಆರಂಭಿಕ ಆಟಗಾರ ಜೈಸ್ವಾಲ್‌.

ಜೂ.20ರಂದು ಚೊಚ್ಚಲ

ಟೆಸ್ಟ್‌: ದಿಗ್ಗಜರ ಸಾಲಿಗೆ

ಸೇರಿದ ಸುದರ್ಶನ್‌!

ಭಾರತದ 317ನೇ ಟೆಸ್ಟ್‌ ಆಟಗಾರನಾಗಿ ಸಾಯಿ ಸುದರ್ಶನ್‌ ಪಾದಾರ್ಪಣೆ ಮಾಡಿದರು. ಅವರು ಪಾದಾರ್ಪಣೆ ಮಾಡಿದ ಜೂ.20ಕ್ಕೆ ಭಾರತೀಯ ಕ್ರಿಕೆಟ್‌ನಲ್ಲಿ ವಿಶೇಷ ಸ್ಥಾನವಿದೆ. ಇದೇ ದಿನ ಹಲವು ದಿಗ್ಗಜರು ಟೆಸ್ಟ್‌ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಿದ್ದಾರೆ. 1996ರ ಜೂ.20ಕ್ಕೆ ಲಾರ್ಡ್ಸ್‌ನಲ್ಲಿ ಇಂಗ್ಲೆಂಡ್‌ ವಿರುದ್ಧ ರಾಹುಲ್‌ ದ್ರಾವಿಡ್‌, ಸೌರವ್‌ ಗಂಗೂಲಿ, 2011ರ ಜೂ.20ಕ್ಕೆ ಕಿಂಗ್‌ಸ್ಟನ್‌ನಲ್ಲಿ ವೆಸ್ಟ್‌ಇಂಡೀಸ್‌ ವಿರುದ್ಧ ವಿರಾಟ್‌ ಕೊಹ್ಲಿ ಮೊದಲ ಬಾರಿ ಟೆಸ್ಟ್‌ನಲ್ಲಿ ಕಣಕ್ಕಿಳಿದಿದ್ದರು.

ರಾಹುಲ್‌-ಜೈಸ್ವಾಲ್‌

ದಾಖಲೆಯ ಆರಂಭ

ರಾಹುಲ್‌-ಜೈಸ್ವಾಲ್‌ ಜೋಡಿ ಮೊದಲ ವಿಕೆಟ್‌ಗೆ 24.5 ಓವರ್‌ಗಳಲ್ಲಿ 91 ರನ್‌ ಜೊತೆಯಾಟವಾಡಿತು. ಇದು ಭಾರತೀಯ ಜೋಡಿ ಲೀಡ್ಸ್‌ನಲ್ಲಿ ಮೊದಲ ವಿಕೆಟ್‌ಗೆ ಗಳಿಸಿದ ಗರಿಷ್ಠ ರನ್‌. ಈ ಹಿಂದೆ 1986ರಲ್ಲಿ ಸುನಿಲ್ ಗವಾಸ್ಕರ್‌ ಹಾಗೂ ಕೆ.ಶ್ರೀಕಾಂತ್‌ ಮೊದಲ ವಿಕೆಟ್‌ಗೆ 64 ರನ್‌ ಸೇರಿಸಿದ್ದರು. ಇನ್ನು, 2012ರ ಬಳಿಕ ಲೀಡ್ಸ್‌ನಲ್ಲಿ ಮೊದಲ ದಿನದಾಟದ ಮೊದಲ 20 ಓವರ್‌ ವಿಕೆಟ್‌ ನಷ್ಟವಿಲ್ಲದೆ ಆಡಿದ ಮೊದಲ ಪ್ರವಾಸಿ ತಂಡ ಎಂಬ ಖ್ಯಾತಿಗೂ ಪಾತ್ರವಾಯಿತು. ಈ ಮೊದಲು ದ.ಆಫ್ರಿಕಾದ ಗ್ರೇಮ್‌ ಸ್ಮಿತ್‌-ಆಲ್ವಿರೊ ಪೀಟರ್ಸನ್‌ ಈ ಸಾಧನೆ ಮಾಡಿದ್ದರು.

Read more Articles on