ಯೂಪಿಯಾ (ಅರುಣಾಚಲಪ್ರದೇಶ): 77ನೇ ಸಂತೋಷ್ ಟ್ರೋಫಿ ರಾಷ್ಟ್ರೀಯ ಫುಟ್ಬಾಲ್ ಟೂರ್ನಿಯಲ್ಲಿ ಕ್ವಾರ್ಟರ್ ಫೈನಲ್ ಪ್ರವೇಶಿಸುವ ಹಾಲಿ ಚಾಂಪಿಯನ್ ಕರ್ನಾಟಕದ ಕನಸು ಬಹುತೇಕ ಭಗ್ನಗೊಂಡಿದೆ. ಗೆಲ್ಲಲೇಬೇಕಾದ ಪಂದ್ಯದಲ್ಲಿ ರೈಲ್ವೇಸ್ ವಿರುದ್ಧ ಪರಾಭವಗೊಂಡ ಕರ್ನಾಟಕ ತಂಡ ಭಾರಿ ನಿರಾಸೆ ಅನುಭವಿಸಿದೆ.
ರಾಜ್ಯ ತಂಡಕ್ಕೆ ಸತತ 2ನೇ ಸೋಲು ಎದುರಾಗಿದ್ದು, 4 ಪಂದ್ಯಗಳಲ್ಲಿ 2 ಸೋಲು, 2 ಡ್ರಾದೊಂದಿಗೆ ರಾಜ್ಯ ತಂಡ ‘ಬಿ’ ಗುಂಪಿನಲ್ಲಿ ಕೊನೆಯ ಸ್ಥಾನದಲ್ಲೇ ಬಾಕಿಯಾಗಿದೆ.
ಫೈನಲ್ ಸುತ್ತಿನ ಗುಂಪು ಹಂತದಲ್ಲಿ ರಾಜ್ಯಕ್ಕೆ ಇನ್ನೊಂದು ಪಂದ್ಯ ಬಾಕಿ ಇದ್ದು, ಶನಿವಾರ ಮಹಾರಾಷ್ಟ್ರ ಸವಾಲು ಎದುರಾಗಲಿದೆ.ಕಳೆದ ವರ್ಷ ಚಾಂಪಿಯನ್ ಪಟ್ಟಕ್ಕೇರಿದ್ದ ಕರ್ನಾಟಕದಿಂದ ಈ ಬಾರಿ ನಿರೀಕ್ಷಿತ ಪ್ರದರ್ಶನ ಮೂಡಿಬರುತ್ತಿಲ್ಲ. ಅಟ್ಯಾಕ್ ಹಾಗೂ ಡಿಫೆನ್ಸ್ ಎರಡರಲ್ಲೂ ರಾಜ್ಯ ತಂಡದ ಆಟ ಸಪ್ಪೆ ಎನಿಸುತ್ತಿದೆ. ಕೆಲ ಪ್ರಮುಖ ಆಟಗಾರರ ಅನುಪಸ್ಥಿತಿಯೂ ರಾಜ್ಯ ತಂಡವನ್ನು ಬಲವಾಗಿ ಕಾಡುತ್ತಿದೆ.