ರಣಜಿ ಟ್ರೋಫಿ: ಪಂಜಾಬ್‌ ವಿರುದ್ಧ ಕರ್ನಾಟಕ ಬೃಹತ್‌ ಮೊತ್ತ!

KannadaprabhaNewsNetwork | Published : Jan 7, 2024 1:30 AM

ಸಾರಾಂಶ

ಇತ್ತೀಚೆಗಷ್ಟೇ ವಿಜಯ್‌ ಹಜಾರೆ ಟೂರ್ನಿಯಲ್ಲಿ ದೇವದತ್‌ ಪಡಿಕ್ಕಲ್‌ ಅಬ್ಬರಿಸಿದ್ದರು. ಈಗ ರಣಜಿಯಲ್ಲೂ ತಮ್ಮ ಅತ್ಯಾಕರ್ಷಕ ಆಟ ಮುಂದುವರಿಸಿದ್ದಾರೆ. ಜೊತೆಗೆ ಮನೀಶ್‌ ಪಾಂಡೆ ಕೂಡಾ ತಾವೇನು ಎಂಬುದನ್ನು ಮತ್ತೊಮ್ಮೆ ಸಾಬೀತುಪಡಿಸಿದ್ದಾರೆ.

ಕನ್ನಡಪ್ರಭ ವಾರ್ತೆ ಹುಬ್ಬಳ್ಳಿವಿಜಯ್‌ ಹಜಾರೆ ಬಳಿಕ ರಣಜಿಯಲ್ಲೂ ತಮ್ಮ ಅತ್ಯಾಕರ್ಷಕ ಆಟ ಮುಂದುವರಿಸಿರುವ ದೇವದತ್‌ ಪಡಿಕ್ಕಲ್‌ ಹಾಗೂ ತಮ್ಮ ಅನುಭವಕ್ಕೆ ತಕ್ಕಂತೆ ಅಬ್ಬರಿಸಿದ ಮನೀಶ್‌ ಪಾಂಡೆ ಈ ಬಾರಿ ರಣಜಿ ಕ್ರಿಕೆಟ್‌ನ ಮೊದಲ ಪಂದ್ಯದಲ್ಲೆ ಕರ್ನಾಟಕಕ್ಕೆ ಇನ್ನಿಂಗ್ಸ್‌ ಗೆಲುವಿನ ನಿರೀಕ್ಷೆ ಮೂಡಿಸಿದ್ದಾರೆ. ರಾಜ್ಯ ತಂಡ 2ನೇ ದಿನದಂತ್ಯಕ್ಕೆ 6 ವಿಕೆಟ್‌ಗೆ 461 ರನ್‌ಗಳ ಬೃಹತ್‌ ಮೊತ್ತ ದಾಖಲಿಸಿದೆ. ಈ ಮೂಲಕ ಇನ್ನಿಂಗ್ಸ್‌ ಜಯದೊಂದಿಗೆ ಟೂರ್ನಿಗೆ ಕಾಲಿಡಲು ಕಾಯುತ್ತಿದೆ. ಇನ್ನಿಂಗ್ಸ್‌ ಗೆಲುವಿಗೆ ರಣಜಿಯಲ್ಲಿ ಬೋನಸ್‌ ಅಂಕ ಸಿಗಲಿದೆ.

ಪಂಜಾಬನ್ನು ರಾಜ್ಯದ ವೇಗಿಗಳು ಮೊದಲ ದಿನವೇ 152ಕ್ಕೆ ಆಲೌಟ್‌ ಮಾಡಿದ ಬಳಿಕ, ದಿನದಂತ್ಯಕ್ಕೆ ಕರ್ನಾಟಕ 3 ವಿಕೆಟ್‌ಗೆ 142 ರನ್‌ ಗಳಿಸಿತ್ತು. ಶನಿವಾರವೂ ಪಂಜಾಬ್‌ ಬೌಲರ್‌ಗಳನ್ನು ಪಡಿಕ್ಕಲ್‌ ಹಾಗೂ ಮನೀಶ್‌ ಮನಬಂದಂತೆ ದಂಡಿಸಿದರು. ಈ ಜೋಡಿ 5ನೇ ವಿಕೆಟ್‌ಗೆ 295 ಎಸೆತಗಳಲ್ಲಿ 234 ರನ್‌ ಕಲೆಹಾಕಿತು.

ವೇಗವಾಗಿಯೇ ಬ್ಯಾಟ್‌ ಬೀಸಿದ ಪಡಿಕ್ಕಲ್‌ ಚೊಚ್ಚಲ ದ್ವಿಶತಕ ಅಂಚಿನಲ್ಲಿ ಎಡವಿದರು. ಅವರು 216 ಎಸೆತಗಳಲ್ಲಿ 24 ಬೌಂಡರಿ, 4 ಸಿಕ್ಸರ್‌ನೊಂದಿಗೆ 193 ರನ್‌ ಚಚ್ಚಿದರು. ಅವರಿಗೆ ಪ್ರೇರಿತ್‌ ದತ್ತ ಪೆವಿಲಿಯನ್‌ ಹಾರಿ ತೋರಿದರು. 165 ಎಸೆತಗಳಲ್ಲಿ 118 ರನ್‌ ಸಿಡಿಸಿದ್ದ ಪಾಂಡೆಯನ್ನು ಅರ್ಶ್‌ದೀಪ್‌ ಸಿಂಗ್‌ ಔಟ್‌ ಮಾಡಿದರು. ಬಳಿಕ ಕ್ರೀಸ್‌ಗೆ ಬಂದ ಎಸ್.ಶರತ್‌ ಕೂಡಾ ಪಂಜಾಬ್‌ ಬೌಲರ್‌ಗಳನ್ನು ಇನ್ನಿಲ್ಲದಂತೆ ಕಾಡಿದರು. 55 ರನ್‌ ಗಳಿಸಿರುವ ಅವರು ವೈಶಾಕ್(15) ಜೊತೆ 3ನೇ ದಿನಕ್ಕೆ ಕ್ರೀಸ್‌ ಕಾಯ್ದುಕೊಂಡಿದ್ದಾರೆ.

ಸ್ಕೋರ್‌: ಪಂಜಾಬ್‌ ಮೊದಲ ಇನ್ನಿಂಗ್ಸ್‌ 152/10, ಕರ್ನಾಟಕ ಮೊದಲ ಇನ್ನಿಂಗ್ಸ್‌ 461/6(2ನೇ ದಿನದಂತ್ಯಕ್ಕೆ)(ಪಡಿಕ್ಕಲ್‌ 193, ಮನೀಶ್‌ 118, ಶರತ್‌ 55*, ನಮನ್‌ 2-46)--

ಪೂಜಾರ ಶತಕ,

ರಿಂಕು ಸಿಂಗ್‌ 92

ಭಾರತ ತಂಡದಲ್ಲಿ ಮರಳಿ ಸ್ಥಾನ ಗಿಟ್ಟಿಸಿಕೊಳ್ಳಲು ಎದುರು ನೋಡುತ್ತಿರುವ ಚೇತೇಶ್ವರ ಪೂಜಾರ ರಣಜಿಯಲ್ಲಿ ಮತ್ತೊಂದು ಶತಕ ಬಾರಿಸಿದ್ದಾರೆ. ಅವರು ಜಾರ್ಖಂಡ್‌ ವಿರುದ್ಧದ ಪಂದ್ಯದಲ್ಲಿ ಸೌರಾಷ್ಟ್ರ ಪರ 239 ಎಸೆತಗಳಲ್ಲಿ ಔಟಾಗದೆ 157 ಗಳಿಸಿದ್ದು, ಬ್ಯಾಟಿಂಗ್‌ ಕಾಯ್ದುಕೊಂಡಿದ್ದಾರೆ. ಇನ್ನು ಯುವ ಬ್ಯಾಟರ್‌ ರಿಂಕು ಸಿಂಗ್‌ ಕೇರಳ ವಿರುದ್ಧದ ಪಂದ್ಯದಲ್ಲಿ ನಿರ್ಣಾಯಕ ಘಟ್ಟದಲ್ಲಿ 92 ರನ್‌ ಸಿಡಿಸಿ ತಂಡಕ್ಕೆ ಆಸರೆಯಾದರು.

Share this article