ರಣಜಿ: ಕುತೂಹಲ ಘಟ್ಟಕ್ಕೆ ಕರ್ನಾಟಕ vs ತಮಿಳ್ನಾಡು ಪಂದ್ಯ

KannadaprabhaNewsNetwork | Published : Feb 12, 2024 1:31 AM

ಸಾರಾಂಶ

ರಣಜಿ ಟ್ರೋಫಿ ಕ್ರಿಕೆಟ್‌ ಪಂದ್ಯಾಳಿಯಲ್ಲಿ ರಾಜ್ಯಕ್ಕೆ ಮೊದಲ ಇನ್ನಿಂಗ್ಸ್‌ನಲ್ಲಿ 215 ರನ್‌ ಮುನ್ನಡೆ ಸಿಕ್ಕ ಬಳಿಕ 2ನೇ ಇನ್ನಿಂಗ್ಸ್‌ನಲ್ಲಿ 139ಕ್ಕೆ ಆಲೌಟ್‌ ಆಗಿದೆ. ಗೆಲುವಿಗೆ ತಮಿಳುನಾಡು 355 ರನ್‌ ಗುರಿ ಪಡೆದಿದೆ. 3ನೇ ದಿನಾಂತ್ಯಕ್ಕೆ 1 ವಿಕೆಟ್‌ಗೆ 36 ರನ್‌ ಗಳಿಸಿದ್ದು, ಇನ್ನೂ 319 ರನ್‌ ಅಗತ್ಯವಿದೆ.

ಚೆನ್ನೈ: ರಣಜಿ ಟ್ರೋಫಿ ಪಂದ್ಯಾವಳಿಯ ಕರ್ನಾಟಕ ಹಾಗೂ ತಮಿಳುನಾಡು ನಡುವಿನ ಮಹತ್ವದ ಪಂದ್ಯ ಕೂತೂಹಲ ಘಟ್ಟಕ್ಕೆ ತಲುಪಿದೆ. ಗೆಲುವಿಗೆ 355 ರನ್‌ಗಳ ಬೃಹತ್‌ ಗುರಿ ಪಡೆದಿರುವ ತಮಿಳುನಾಡು 3ನೇ ದಿನದಂತ್ಯಕ್ಕೆ 1 ವಿಕೆಟ್‌ ಕಳೆದುಕೊಂಡು 36 ರನ್‌ ಗಳಿಸಿದ್ದು, ಗೆಲುವಿಗೆ ಇನ್ನೂ 319 ರನ್‌ಗಳ ಅವಶ್ಯಕತೆ ಇದೆ. ಮತ್ತೊಂದೆಡೆ ಕರ್ನಾಟಕ ಪಂದ್ಯ ಗೆಲ್ಲಬೇಕಿದ್ದರೆ 9 ವಿಕೆಟ್‌ ಪಡೆಯಲೇಬೇಕಾದ ಒತ್ತಡದಲ್ಲಿ ಸಿಲುಕಿದೆ. ಸೋಮವಾರ ಪಂದ್ಯದ ಕೊನೆ ದಿನವಾಗಿದ್ದು, ಗೆಲುವು ಯಾರಿಗೆ ಒಲಿಯಲಿದೆ ಎಂದು ಕುತೂಹಲವಿದೆ.ಇದಕ್ಕೂ ಮುನ್ನ 2ನೇ ದಿನದಂತ್ಯಕ್ಕೆ 7 ವಿಕೆಟ್‌ಗೆ 129 ರನ್‌ ಗಳಿಸಿದ್ದ ತಮಿಳುನಾಡು 3ನೇ ದಿನ 151 ರನ್‌ಗೆ ಆಲೌಟಾಯಿತು. ಕರ್ನಾಟದಕ ಬೌಲರ್‌ಗಳನ್ನು ಎದುರಿಸಲಾಗದೆ ತಮಿಳುನಾಡು ಬ್ಯಾಟರ್‌ಗಳು ಪೆವಿಲಿಯನ್‌ ಪರೇಡ್‌ ನಡೆಸಿದರು. ವೇಗಿ ವಿಜಯ್‌ಕುಮಾರ್‌ ವೈಶಾಖ್‌ 4, ಆಫ್‌ ಸ್ಪಿನ್ನರ್‌ ಶಶಿಕುಮಾರ್‌ 3 ವಿಕೆಟ್‌ ಉರುಳಿಸಿ ರಾಜ್ಯಕ್ಕೆ ಬೃಹತ್‌ ಮುನ್ನಡೆ ಒದಗಿಸಿಕೊಟ್ಟರು.ತೀವ್ರ ಬ್ಯಾಟಿಂಗ್‌ ವೈಫಲ್ಯ:

215 ರನ್‌ಗಳ ದೊಡ್ಡ ಲೀಡ್‌ ಪಡೆದ ಹೊರತಾಗಿಯೂ ಫಾಲೋ ಆನ್‌ ಹೇರದ ಕರ್ನಾಟಕ 2ನೇ ಇನ್ನಿಂಗ್ಸ್‌ ಆರಂಭಿಸಿತು. ಆದರೆ ಬ್ಯಾಟರ್‌ಗಳು ತೀವ್ರ ವೈಫಲ್ಯ ಅನುಭವಿಸಿದರು. ಕರ್ನಾಟಕ 56.4 ಓವರ್‌ಗಳಲ್ಲಿ 139 ರನ್‌ಗೆ ಸರ್ವಪತನ ಕಂಡಿತು. ದೇವದತ್‌ ಪಡಿಕ್ಕಲ್‌ ಗಳಿಸಿದ 36 ರನ್‌ ತಂಡದ ಪರ ದಾಖಲಾದ ಗರಿಷ್ಠ ವೈಯಕ್ತಿಕ ಮೊತ್ತ.ಆರಂಭಿಕ ಆಟಗಾರ ಆರ್‌.ಸಮರ್ಥ್‌ ಕೇವಲ 2 ರನ್‌ ಗಳಿಸಿ ಮೊಹಮದ್‌ಗೆ ವಿಕೆಟ್‌ ಒಪ್ಪಿಸಿ ಪೆವಿಲಿಯನ್‌ ಹಾದಿ ತುಳಿದರು. ಮೊದಲ ಇನ್ನಿಂಗ್ಸ್‌ನಲ್ಲಿ ಸಾಧಾರಣ ಮೊತ್ತಕ್ಕೆ ಔಟಾಗಿದ್ದ ಮಯಾಂಕ್‌ ಅಗರ್‌ವಾಲ್‌ ಕೂಡಾ ಉತ್ತಮ ಪ್ರದರ್ಶನ ನೀಡಲು ವಿಫಲರಾದರು. ಅವರ ಕೊಡುಗೆ ಕೇವಲ 11 ರನ್‌. ಉಳಿದಂತೆ ಹಾರ್ದಿಕ್‌ ರಾಜ್‌ 20, ಅನುಭವಿ ಆಟಗಾರ ಮನೀಶ್‌ ಪಾಂಡೆ 14 ರನ್‌ ಗಳಿಸಿ ನಿರ್ಗಮಿಸಿದರು. ಕುಶಾಲ್‌ ಬೆದರೆ 9, ಎಸ್‌.ಶರತ್‌ 18 ರನ್‌ ಗಳಿಸಿ ತಮ್ಮ ಇನ್ನಿಂಗ್ಸ್‌ ಅಂತ್ಯಗೊಳಿಸಿದರು. ಉಪನಾಯಕ ನಿಕಿನ್‌ ಜೋಸ್‌ರ ವೈಫಲ್ಯ ಮತ್ತೆ ಮುಂದುವರಿಯಿತು. ಅವರು ಈ ಬಾರಿ ಸೊನ್ನೆ ಸುತ್ತಿದರು.ಕೊನೆಯಲ್ಲಿ ಮತ್ತೆ ತಂಡಕ್ಕೆ ಆಸರೆಯಾದ ವೈಶಾಕ್‌ 21 ಎಸೆತಗಳಲ್ಲಿ 22 ರನ್‌ ಸಿಡಿಸಿ ತಂಡದ ಮೊತ್ತ 130 ದಾಟಲು ನೆರವಾದರು. ತಮಿಳುನಾಡಿದ ಅಜಿತ್‌ ರಾಮ್‌ 61 ರನ್‌ ನೀಡಿ 5 ವಿಕೆಟ್‌ ಗೊಂಚಲು ಪಡೆದರು.

ಸ್ಕೋರ್‌:

ಕರ್ನಾಟಕ 366/10 ಮತ್ತು 139/10 (ಪಡಿಕ್ಕಲ್‌ 36, ವೈಶಾಕ್‌ 228, ಹಾರ್ದಿಕ್‌ 20, ಅಜಿತ್‌ 5-61), ತಮಿಳುನಾಡು 151/10 ಮತ್ತು 36/1(3ನೇ ದಿನದಂತ್ಯಕ್ಕೆ)(ವಿಮಲ್‌ 16*, ರಂಜನ್‌ 10*, ವೈಶಾಕ್‌ 1-12)--ಮಯಾಂಕ್‌ 4000ರನ್‌ ಮೈಲಿಗಲ್ಲುಮಯಾಂಕ್‌ ರಣಜಿ ಕ್ರಿಕೆಟ್‌ನಲ್ಲಿ 4000 ರನ್ ಮೈಲಿಗಲ್ಲು ಸಾಧಿಸಿದರು. ಈ ಸಾಧನೆ ಮಾಡಿದ ಕರ್ನಾಟಕ 14ನೇ ಬ್ಯಾಟರ್‌ ಎಂಬ ಹೆಗ್ಗಳಿಕೆಗೆ ಪಾತ್ರರಾದರು. ಅಲ್ಲದೆ ವೇಗವಾಗಿ 4000 ರನ್‌ ಪೂರ್ತಿಗೊಳಿಸಿದವರ ಪಟ್ಟಿಯಲ್ಲಿ 5ನೇ ಸ್ಥಾನ ಪಡೆದರು.

Share this article