ನವದೆಹಲಿ: ಭಾರತದ ತಾರಾ ಕ್ರಿಕೆಟಿಗ ಕೆ.ಎಲ್.ರಾಹುಲ್ ಐಪಿಎಲ್‌ನಲ್ಲಿ 5ನೇ ಶತಕ ಸಿಡಿಸಿದ್ದಾರೆ. ಭಾನುವಾರ ಇಲ್ಲಿನ ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ಗುಜರಾತ್ ಟೈಟಾನ್ಸ್ ವಿರುದ್ಧ ನಡೆದ ಪಂದ್ಯದಲ್ಲಿ ರಾಹುಲ್, ಕೇವಲ 65 ಎಸೆತದಲ್ಲಿ 112 ರನ್ ಸಿಡಿಸಿದರು. 60 ಎಸೆತಗಳಲ್ಲಿ ಶತಕ ಪೂರೈಸಿದ ರಾಹುಲ್, ಐಪಿಎಲ್ ಇತಿಹಾಸದಲ್ಲೇ ಮೂರು ತಂಡಗಳ ಪರ ಶತಕ ಸಿಡಿಸಿದ ಮೊದಲ ಬ್ಯಾಟರ್ ಎನ್ನುವ ದಾಖಲೆ ಬರೆದರು.
ಈ ಮೊದಲು 2019, 2020ರಲ್ಲಿ ಪಂಜಾಬ್ ಕಿಂಗ್ಸ್ ಪರ 2 ಶತಕ ಸಿಡಿಸಿದ್ದ ರಾಹುಲ್, 2022ರ ಐಪಿಎಲ್‌ನಲ್ಲಿ ಲಖನೌ ಸೂಪರ್ ಜೈಂಟ್ಸ್ ವಿರುದ್ಧ ಸೆಂಚುರಿ ಬಾರಿಸಿದ್ದರು. ಅವರ 5 ಶತಕಗಳ ಪೈಕಿ 3 ಮುಂಬೈ ಇಂಡಿಯನ್ಸ್, ತಲಾ 1 ಆರ್‌ಸಿಬಿ ಹಾಗೂ ಗುಜರಾತ್ ವಿರುದ್ಧ ದಾಖಲಾಗಿದೆ.
ಆರಂಭಿಕನಾಗಿ ಆಡಿದ ರಾಹುಲ್‌ರ ಇನ್ನಿಂಗ್ಸ್‌ನಲ್ಲಿ 14 ಬೌಂಡರಿ ಹಾಗೂ 4 ಸಿಕ್ಸರ್‌ಗಳಿದ್ದವು. ಮನಮೋಹಕ ಬ್ಯಾಟಿಂಗ್ ನಡೆಸಿದ ರಾಹುಲ್, ಅಭಿಮಾನಿಗಳ ಮನ ಸೆಳೆದರು. ಐಪಿಎಲ್‌ನಲ್ಲಿ ಗರಿಷ್ಠ ಶತಕ:
4ನೇ ಸ್ಥಾನಕ್ಕೆ ರಾಹುಲ್
ಐಪಿಎಲ್‌ನಲ್ಲಿ ಅತಿಹೆಚ್ಚು ಶತಕ ಬಾರಿಸಿದ ಬ್ಯಾಟರ್‌ಗಳ ಪಟ್ಟಿಯಲ್ಲಿ ಕೆ.ಎಲ್.ರಾಹುಲ್ 4ನೇ ಸ್ಥಾನಕ್ಕೇರಿದ್ದಾರೆ. ಅವರು 5 ಶತಕ ಬಾರಿಸಿದ್ದಾರೆ. 8 ಶತಕ ಬಾರಿಸಿರುವ ವಿರಾಟ್ ಕೊಹ್ಲಿ ಮೊದಲ ಸ್ಥಾನದಲ್ಲಿದ್ದರೆ, 7 ಶತಕ ಬಾರಿಸಿದ ಜೋಸ್ ಬಟ್ಲರ್ 2ನೇ ಸ್ಥಾನದಲ್ಲಿದ್ದಾರೆ. 6 ಶತಕ ಸಿಡಿಸಿರುವ ಕ್ರಿಸ್ ಗೇಲ್ 3ನೇ ಸ್ಥಾನ ಪಡೆದಿದ್ದಾರೆ.ಟಿ20: ರಾಹುಲ್ ವೇಗದ
8000 ರನ್ ದಾಖಲೆ
ನವದೆಹಲಿ: ಕೆ.ಎಲ್.ರಾಹುಲ್, ಟಿ20 ಕ್ರಿಕೆಟ್‌ನಲ್ಲಿ ವೇಗದ 8000 ರನ್ ಗಳಿಸಿದ ಭಾರತೀಯ ಬ್ಯಾಟರ್ ಎನ್ನುವ ದಾಖಲೆ ಬರೆದಿದ್ದಾರೆ. ಕೇವಲ 224 ಇನ್ನಿಂಗ್ಸಲ್ಲಿ ಈ ಮೈಲುಗಲ್ಲು ತಲುಪಿದ ರಾಹುಲ್, 243 ಇನ್ನಿಂಗ್ಸಲ್ಲಿ 8000 ರನ್ ಗಳಿಸಿದ್ದ ವಿರಾಟ್ ಕೊಹ್ಲಿಯ ದಾಖಲೆಯನ್ನು ಮುರಿದರು. ವೇಗದ 8000 ರನ್‌ಗಳ ವಿಶ್ವ ದಾಖಲೆ ವಿಂಡೀಸ್‌ನ ಕ್ರಿಸ್ ಗೇಲ್ ಹೆಸರಿನಲ್ಲಿದೆ. ಅವರು 213 ಇನ್ನಿಂಗ್ಸ್ ತೆಗೆದುಕೊಂಡಿದ್ದರು. ಪಾಕಿಸ್ತಾನದ ಬಾಬರ್ ಆಜಂ 218 ಇನ್ನಿಂಗ್ಸ್‌ಗಳೊಂದಿಗೆ 2ನೇ ಸ್ಥಾನದಲ್ಲಿದ್ದು, ರಾಹುಲ್ 3, ಕೊಹ್ಲಿ 4 ಹಾಗೂ 244 ಇನ್ನಿಂಗ್ಸ್‌ನಲ್ಲಿ 8000 ರನ್ ಗಳಿಸಿದ ಪಾಕ್‌ನ ರಿಜ್ವಾನ್ 5ನೇ ಸ್ಥಾನದಲ್ಲಿದ್ದಾರೆ.